ಭಾನುವಾರ, ಜೂಲೈ 12, 2020
29 °C

ಫಿರಂಗಿ ಖರೀದಿಗೆ ಜಾಗತಿಕ ಟೆಂಡರ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ (ಪಿಟಿಐ): ಬೊಫೋರ್ಸ್ ಹಗರಣ ನಡೆದ ಬಳಿಕ ಸೇನಾಪಡೆಯ ಫಿರಂಗಿದಳಕ್ಕೆ (ಆರ್ಟಿಲರಿ) ಕಳೆದ 25 ವರ್ಷಗಳಿಂದ ಹೊಸ ಫಿರಂಗಿಗಳನ್ನು ಖರೀದಿಸುವ ನಾಲ್ಕು ಯತ್ನಗಳು ವಿಫಲವಾಗಿರುವಂತೆಯೇ ಸೇನೆ ಮತ್ತೊಮ್ಮೆ 400 ಫಿರಂಗಿಗಳಿಗಾಗಿ ಇದೀಗ ಜಾಗತಿಕ ಟೆಂಡರ್ ಕರೆದಿದೆ.ಕಾಲು ಶತಮಾನದಿಂದ ಬೊಫೋರ್ಸ್ ‘ಗುಮ್ಮ’ ಸೇನೆಯನ್ನು ಕಾಡುತ್ತಲೇ ಬಂದಿದೆ. ಹೀಗಾಗಿ 1980ರ ದಶಕದ ಮಧ್ಯಭಾಗದಿಂದ ಒಂದೇ ಒಂದು ಹೊಸ ಫಿರಂಗಿಯೂ ಸೇನಾಪಡೆಯನ್ನು ಸೇರಿಕೊಂಡಿಲ್ಲ. ವಿದೇಶಿ ಮಾರಾಟಗಾರರಿಂದ 400ಕ್ಕೂ ಅಧಿಕ ಫಿರಂಗಿಗಳನ್ನು ಖರೀದಿಸುವ ಹಾಗೂ ಆಯ್ದ ತಯಾರಕರ ಜತೆಗೆ ಸಹಭಾಗಿತ್ವದಲ್ಲಿ 1000ಕ್ಕೂ ಅಧಿಕ ಫಿರಂಗಿಗಳನ್ನು ದೇಶೀಯವಾಗಿ ತಯಾರಿಸುವ ನಿಟ್ಟಿನಲ್ಲಿ ಸೇನೆ ಜನವರಿ 3ನೇ ವಾರದಲ್ಲಿ ಜಾಗತಿಕ ಟೆಂಡರ್ ಕರೆದಿದೆ.ಆರ್ಡನೆನ್ಸ್ ಫ್ಯಾಕ್ಟರಿ ಹಗರಣದಲ್ಲಿ ಸಿಬಿಐನಿಂದ ಕಪ್ಪುಪಟ್ಟಿಗೆ ಸಿಲುಕಿರುವ ಸಿಂಗಪುರ ಟೆಕ್ನಾಲಜೀಸ್ ಕಂಪೆನಿ ಅನರ್ಹಗೊಂಡಿರುವುದರಿಂದ ಇದೀಗ ಫಿರಂಗಿಗಳ ಖರೀದಿಗೆ ಮರು ಟೆಂಡರ್ ಕರೆಯಲಾಗಿದೆ.ಸಿಂಗಪುರ ಕಂಪೆನಿ ಹೊರಗುಳಿದ ಬಳಿಕ ಕಣದಲ್ಲಿ ಇದ್ದುದು ಬಿಎಇ ಸಿಸ್ಟಮ್ಸ್ ಕಂಪೆನಿ ಮಾತ್ರ. ರಕ್ಷಣಾ ಸಾಮಗ್ರಿ ಖರೀದಿಯ ನಿಯಮಗಳ ಪ್ರಕಾರ ಕಣದಲ್ಲಿರುವ ಕೇವಲ ಒಂದು ಕಂಪೆನಿಯಿಂದ ಸಾಮಗ್ರಿಗಳನ್ನು ಖರೀದಿಸಬಾರದು. ಸ್ಪರ್ಧೆಯಲ್ಲಿರುವ ಇತರ ಕಂಪೆನಿಗಳು ಯಾವುವು ಎಂಬುದು ಸ್ಪಷ್ಟವಾಗಿಲ್ಲ.ಸೇನೆಯು ತನ್ನ ಫಿರಂಗಿದಳವನ್ನು ಸುಧಾರಿಸುವ ನಿಟ್ಟಿನಲ್ಲಿ ವಿದೇಶಿ ಸೇನಾ ಮಾರಾಟ ಹಾದಿಯ ಮೂಲಕ ಅಮೆರಿಕದ ಸುಧಾರಿತ ಫಿರಂಗಿಗಳನ್ನು ಖರೀದಿಸುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಗುಡ್ಡಗಾಡು ಪ್ರದೇಶಗಳಲ್ಲಿ ನಿಯೋಜನೆಗಾಗಿ ಸೇನೆ ಈ ಖರೀದಿ ಮಾಡಲಿದ್ದು, ಅಮೆರಿಕದೊಂದಿಗೆ ಈಗಾಲೇ ಮಾತುಕತೆ ನಡೆಸುತ್ತಿದೆ.ಫಿರಂಗಿದಳವನ್ನು 20 ಸಾವಿರ ಕೋಟಿ ರೂಪಾಯಿಗಳ ವೆಚ್ಚದಲ್ಲಿ ಸುಧಾರಿಸುವುದು ಸರ್ಕಾರದ ಉದ್ದೇಶವಾಗಿದ್ದು, ಇದಕ್ಕಾಗಿ ಹಲವು ದೇಶಗಳ ಜತೆಗೆ ಒಪ್ಪಂದ ಮತ್ತು ಜಾಗತಿಕ ಟೆಂಡರ್ ಮೂಲಕ ಫಿರಂಗಿಗಳನ್ನು ಖರೀದಿಸುವುದಕ್ಕೆ ಸರ್ಕಾರ ಇದೀಗ ಪ್ರಯತ್ನ ನಡೆಸಿದೆ.ಮುಂದಿನ ಬೇಸಿಗೆ ವೇಳೆ ವಿವಿಧ ಫಿರಂಗಿಗಳ ಪರೀಕ್ಷೆ ನಡೆಯುವ ಸಾಧ್ಯತೆ ಇದ್ದು, ಮುಂದಿನ ವರ್ಷದ ಅಂತ್ಯದ ವೇಳೆಗೆ ಅವುಗಳನ್ನು ಸೇನೆಗೆ ನಿಯೋಜಿಸುವ ಕಾರ್ಯ ನಡೆಯಲಿದೆ ಎಂದು ಸೇನಾಪಡೆ ಮುಖ್ಯಸ್ಥರು ಈಚೆಗೆ ತಿಳಿಸಿದ್ದರು. ಸೇನೆ ಸದ್ಯ 105 ಎಂ.ಎಂ. ಫೀಲ್ಡ್ ಗನ್ ಹಾಗೂ 130 ಎಂ.ಎಂ. ಮತ್ತು 155 ಎಂ.ಎಂ. ಫಿರಂಗಿಗಳನ್ನು ಬಳಸುತ್ತಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.