ಫುಕುಶಿಮಾ: ಉಕ್ಕಿನಗೋಡೆ ನಿರ್ಮಾಣ ಆರಂಭ

7

ಫುಕುಶಿಮಾ: ಉಕ್ಕಿನಗೋಡೆ ನಿರ್ಮಾಣ ಆರಂಭ

Published:
Updated:
ಫುಕುಶಿಮಾ: ಉಕ್ಕಿನಗೋಡೆ ನಿರ್ಮಾಣ ಆರಂಭ

ಟೋಕಿಯೊ/ ಫುಕುಶಿಮಾ (ಪಿಟಿಐ): ಫುಕುಶಿಮಾ ಅಣುಸ್ಥಾವರದ ರಿಯಾಕ್ಟರುಗಳು ಅಂಕೆಯಿಲ್ಲದೆ ವಿಕಿರಣ ಕಾರುತ್ತಿದ್ದು, ವಿಕಿರಣಯುಕ್ತ ನೀರು ಸಮುದ್ರ ಸೇರದಂತೆ ತಡೆಯಲು ಶನಿವಾರ ಉಕ್ಕಿನಗೋಡೆ ನಿರ್ಮಾಣ ಕಾರ್ಯಕ್ಕೆ ಚಾಲನೆ ನೀಡಲಾಯಿತು.ವಿಕಿರಣ ಕಲುಷಿತ ನೀರು ಶಾಂತಸಾಗರ ಸೇರದಂತೆ ಮಾಡುವ ಉದ್ದೇಶದಿಂದ 120 ಮೀಟರ್ ಅಗಲದ ಉಕ್ಕಿನ ತಡೆಗೋಡೆ ನಿರ್ಮಿಸುವ ಉದ್ದೇಶವನ್ನು ಎಂಜಿನಿಯರುಗಳು ಹೊಂದಿದ್ದಾರೆ. ಈ ಮಧ್ಯೆ ಸ್ಥಾವರದ ರಿಯಾಕ್ಟರುಗಳನ್ನು ನಿರ್ಮಿಸಿದ್ದ ತೋಷಿಬಾ ಕಂಪೆನಿ ಸರ್ಕಾರಕ್ಕೆ ಈ ರಿಯಾಕ್ಟರುಗಳನ್ನು ಸ್ಥಗಿತಗೊಳಿಸಲು ಕೋರಿ ಸರ್ಕಾರಕ್ಕೆ ಮನವಿ ಸಲ್ಲಿಸಿದೆ.ವಿಕಿರಣ ಸೋರಿಕೆ ತಡೆಯಲು ಜಪಾನ್ ಆಡಳಿತ ದಿನಕ್ಕೊಂದು ಹೊಸ ಪ್ರಯತ್ನ ಕೈಗೊಂಡು ಹರಸಾಹಸ ಮಾಡುತ್ತಿದ್ದರೂ ಈ ಪ್ರಯತ್ನಗಳು ಈತನಕ ನಿರೀಕ್ಷಿತ ಫಲ ನೀಡಿಲ್ಲ. ಇದೇ ವೇಳೆ ತಮ್ಮ ಮನೆ, ಮಠ ತೆರವು ಮಾಡಿದ್ದ ಸ್ಥಾವರದ ಸುತ್ತಲ ನಿವಾಸಿಗಳು, ಸರ್ಕಾರದ ಎಚ್ಚರಿಕೆ ನಡುವೆಯೂ ತಮ್ಮ ನೆಲೆಗಳಿಗೆ ವಾಪಸಾಗುತ್ತಿರುವುದು ಸರ್ಕಾರಕ್ಕೆ ತಲೆನೋವಾಗಿ ಪರಿಣಮಿಸಿದೆ.ಎರಡನೇ ರಿಯಾಕ್ಟರಿನ ಭೂಗತ ಟ್ಯಾಂಕಿನಲ್ಲಿ ಶೇಖರಗೊಂಡಿರುವ ವಿಕಿರಣ ಕಲುಷಿತ ನೀರನ್ನು ಹೊರತೆಗೆಯುವ ತೀವ್ರ ಪ್ರಯತ್ನದಲ್ಲಿ ಸಿಬ್ಬಂದಿ ತೊಡಗಿದ್ದಾರೆ. ಈ ರಿಯಾಕ್ಟರಿನ ಇಂಧನ ಸರಳನ್ನು ತಂಪುಗೊಳಿಸಿ, ವಿಕಿರಣ ಸೋರಿಕೆ ಸಮುದ್ರ ಸೇರದಂತೆ ತಡೆಗಟ್ಟಲು ಕೂಡ ಪ್ರಯತ್ನ ಮುಂದುವರಿದಿದೆ. ಆದರೆ ಇದೇ ವೇಳೆ ಭೂಗತ ಟ್ಯಾಂಕಿನಲ್ಲಿ ವಿಕಿರಣಯುಕ್ತ ನೀರು ಸಂಗ್ರಹವಾಗುತ್ತಿದ್ದು, ಇದರ ಮಟ್ಟ 10 ಸೆಂ.ಮೀ.ಗಳಿಗೆ ಏರಿದೆ. ಈ ರಿಯಾಕ್ಟರಿನ ಬಳಿ ಸಮುದ್ರದ ನೀರಿನಲ್ಲಿ ವಿಕಿರಣಯುಕ್ತ ಅಯೋಡಿನ್ ಪ್ರಮಾಣ ನಿಗದಿತ ಮಟ್ಟಕ್ಕಿಂತ 63,000 ಪಟ್ಟುಗಳಷ್ಟು ಹೆಚ್ಚಾಗಿದೆ ಎಂದು ಟೋಕಿಯೊ ಎಲೆಕ್ಟ್ರಿಕ್ ಪವರ್ ಕಂಪೆನಿ (ಟೆಪ್ಕೊ) ಹೇಳಿದೆ. ಟೆಪ್ಕೊ ಕಂಪೆನಿಯು ಒಂದನೇ ರಿಯಾಕ್ಟರಿನಲ್ಲಿ ಜಲಜನಕ ಸ್ಫೋಟ ತಡೆಯುವ ಸಲುವಾಗಿ ಅದಕ್ಕೆ ಜಡ ಅನಿಲ ನೈಟ್ರೋಜನ್ನನ್ನು ಪಂಪ್ ಮಾಡುತ್ತಿದೆ. ಇದರ ಜತೆಗೆ ಭಾನುವಾರದಿಂದ ಚಾಲಕ ರಹಿತ ಹೆಲಿಕಾಪ್ಟರುಗಳನ್ನು ಕಳುಹಿಸಿ ಹಾನಿಗೀಡಾದ ರಿಯಾಕ್ಟರುಗಳ ಚಿತ್ರಗಳನ್ನು ತೆಗೆಯುವ ಉದ್ದೇಶ ಹೊಂದಿದೆ.ರಾಷ್ಟ್ರದ ಆರ್ಥಿಕ, ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಬಾನ್ರಿ ಕೈಈದಾ ಅವರು ಫುಕುಷಿಮಾ ಗವರ್ನರ್ ಯುಹಿ ಸ್ಯಾಟೊ ಅವರನ್ನು ಭೇಟಿಯಾಗಿದ್ದು, ಅಣುಸ್ಥಾವರಕ್ಕೆ ಭೇಟಿ ನೀಡುವ ಉದ್ದೇಶ ಹೊಂದಿದ್ದಾರೆ.ರಾಷ್ಟ್ರದ ಪರಮಾಣು ನೀತಿಯ ಬಗ್ಗೆ ಈ ಸಂಕಷ್ಟದ ಸಮಯದಲ್ಲಿ ಏನನ್ನೂ ಹೇಳಲಾಗದು ಎಂದಿರುವ ಬಾನ್ರಿ, ‘ಅಣುಸ್ಥಾವರಗಳ ಸುರಕ್ಷತೆ ಹೆಚ್ಚಿಸುವ ದಿಸೆಯಲ್ಲಿ ಪರಾಮರ್ಶೆ ಅಗತ್ಯ’ ಎಂದಿದ್ದಾರೆ. ಮತ್ತಷ್ಟು ಭೂಕಂಪನ: ವಿಜ್ಞಾನಿಯ ಊಹೆ

ಕೊಲಂಬೊ (ಪಿಟಿಐ): ಜಪಾನ್ ಮತ್ತು ಭಾರತ ಗಡಿಗೆ ಹೊಂದಿಕೊಂಡಿರುವ ಚೀನಾ ಪ್ರದೇಶದಲ್ಲಿ ಸದ್ಯದಲ್ಲೇ ಪುನಃ ಭೂಕಂಪನಗಳು ಸಂಭವಿಸುವ ಸಾಧ್ಯತೆ ಇದೆ ಎಂದು ಶ್ರೀಲಂಕಾ ತಜ್ಞರೊಬ್ಬರು ಊಹಿಸಿದ್ದಾರೆ.ಜಪಾನಿನಲ್ಲಿ ಏಪ್ರಿಲ್ 16ರಿಂದ 20ರ ನಡುವಿನ ಅವಧಿಯಲ್ಲಿ ಹಾಗೂ ಚೀನಾದಲ್ಲಿ ಏಪ್ರಿಲ್ 14ರಿಂದ 16ರೊಳಗೆ ಭೂಕಂಪನಗಳು ಸಂಭವಿಸಬಹುದು. ಅದೇ ರೀತಿ ಇಂಡೋನೇಷ್ಯಾದ ಸುಮಾತ್ರ ವಲಯದಲ್ಲಿ ಏ.10ರಿಂದ 17ರೊಳಗಿನ ಅವಧಿಯಲ್ಲಿ ಭೂಕಂಪನ ಸಂಭವಿಸಬಹುದು ಎಂದು ಭೂಭೂತ ವಿಜ್ಞಾನಿ ಅತುಲ ಸೇನರತ್ನೆ ಹೇಳಿದ್ದಾರೆ.

ಕಳೆದ 100 ವರ್ಷಗಳಲ್ಲಿ ಸಂಭವಿಸಿದ 6ಕ್ಕೂ ಅಧಿಕ ರಿಕ್ಟರ್ ತೀವ್ರತೆಯ ಭೂಕಂಪನಗಳ ಅಧ್ಯಯನವನ್ನು ಆಧರಿಸಿ ಈ ಊಹೆ ಮಾಡಿರುವುದಾಗಿ ಅವರು ತಿಳಿಸಿದ್ದಾರೆ. ಜಪಾನಿನಲ್ಲಿ ಸುನಾಮಿ ತಂದಿತ್ತ ಭೂಕಂಪನದ ಬಗ್ಗೆ ತಾವು ಮುಂಚೆಯೇ  ನಿಖರವಾಗಿ ಊಹೆ ಮಾಡಿದ್ದಾಗಿ ಅವರು ಹೇಳಿದ್ದಾರೆ.ಅವಶೇಷಗಳಡಿಯಲ್ಲಿ ಅಪಾರ ನಗದು ಹಣ ಪತ್ತೆ

ಟೋಕಿಯೊ (ಪಿಟಿಐ): ನಿರಂತರ ಅವಘಡಗಳಿಂದ ನಲುಗಿ ಹೋಗಿರುವ ಜಪಾನಿನಲ್ಲಿ ರಕ್ಷಣಾ ಕಾರ್ಯಾಚರಣೆ ನಡೆಸುತ್ತಿರುವ ಕಾರ್ಯಕರ್ತರು ಅವಶೇಷಗಳಡಿಯಲ್ಲಿ ದೊರಕುತ್ತಿರುವ ಅಪಾರ ಮೊತ್ತದ ಹಣವನ್ನು ಅಧಿಕಾರಿಗಳಿಗೆ ಒಪ್ಪಿಸುವ ಮೂಲಕ ಪ್ರಾಮಾಣಿಕತೆ ಮೆರೆದಿದ್ದಾರೆ.ದೇಶದ ಈಶಾನ್ಯ ಭಾಗದಲ್ಲಿನ ಕರಾವಳಿಯಲ್ಲಿ ಪರಿಹಾರ ಕಾರ್ಯಾಚರಣೆ ನಡೆಸುತ್ತಿರುವ ರಕ್ಷಣಾ ಕಾರ್ಯಕರ್ತರು ಮತ್ತು ಸ್ವಯಂಸೇವಕರಿಗೆ ಪ್ರತಿನಿತ್ಯ ಕಟ್ಟಡಗಳ ಅವಶೇಷಗಳಡಿಯಲ್ಲಿ ಚೆಲ್ಲಾಪಿಲ್ಲಿಯಾಗಿ ಹರಡಿ ಮಣ್ಣಿನೊಳಗೆ ಸೇರಿಕೊಂಡಿರುವ ಕೋಟ್ಯಂತರ ಡಾಲರ್ ಹಣ ದೊರಕುತ್ತಿದ್ದು, ಅವುಗಳನ್ನು ಜನರು ತಮ್ಮ ಸುಪರ್ದಿಗೆ ಒಪ್ಪಿಸುತ್ತಿದ್ದಾರೆ ಎಂದು ಇವಾಟೆ ಮತ್ತು ಮಿಯಾಗಿ ಪ್ರಿಫೆಕ್ಟರರ್ಸ್ ಪೊಲೀಸರು ತಿಳಿಸಿದ್ದಾರೆ.ತಮಗೆ ಸಿಕ್ಕ ಹಣವನ್ನು ತಾವೇ ಇರಿಸಿಕೊಳ್ಳಲು ಜಪಾನಿನ ಕಾನೂನಿನಲ್ಲಿ ಅವಕಾಶವಿದೆ. ಆದರೆ ಭೂಕಂಪ ಮತ್ತು ಸುನಾಮಿಯ ಹೊಡೆತಕ್ಕೆ ಸಿಲುಕಿ ತಮ್ಮ ಸಂಪಾದನೆಯ ಹಣವನ್ನೆಲ್ಲಾ ಕಳೆದುಕೊಂಡಿದ್ದರೂ ಪ್ರಾಮಾಣಿಕತೆ ಮರೆತಿಲ್ಲ. ಹೀಗೆ ದೊರೆತ ಹಣವನ್ನು ಅದರ ಮಾಲೀಕ ದೊರೆಯುವವರೆಗೂ ಪುನರ್‌ನಿರ್ಮಾಣ ಕಾರ್ಯಗಳಿಗೆ ಬಳಸಬೇಕೆಂದು ಜನರು ಸರ್ಕಾರವನ್ನು ಒತ್ತಾಯಿಸಿದ್ದಾರೆ.ಇದುವರೆಗೆ ಅಪಾರ ಪ್ರಮಾಣದಲ್ಲಿ ಹಣ ದೊರೆತಿದ್ದರೂ ಕೇವಲ ಶೇ.10ರಷ್ಟು ಹಣವನ್ನು ಮಾತ್ರ ಅವುಗಳ ಮಾಲೀಕರಿಗೆ ಒಪ್ಪಿಸಲು ಸಾಧ್ಯವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry