ಸೋಮವಾರ, ಏಪ್ರಿಲ್ 19, 2021
32 °C

ಫುಕುಶಿಮಾ: ಪ್ರವೇಶ ನಿಷೇಧಕ್ಕೆ ಚಿಂತನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಟೋಕಿಯೊ/ ಫುಕುಶಿಮಾ (ಪಿಟಿಐ): ವಿಕಿರಣ ಸೋರಿಕೆಯಿಂದ ತತ್ತರಿಸಿರುವ ಫುಕುಶಿಮಾ ಸ್ಥಾವರದ ಸುತ್ತಮುತ್ತಲಿನ 20 ಕಿ.ಮೀ ಪ್ರದೇಶವನ್ನು ‘ಪ್ರವೇಶ ನಿಷಿದ್ಧ’ ವಲಯವನ್ನಾಗಿ ಘೋಷಿಸಲು ಜಪಾನ್ ಚಿಂತನೆ ನಡೆಸಿದೆ.60 ಸಾವಿರಕ್ಕೂ ಹೆಚ್ಚು ಜನರನ್ನು ಈಗಾಗಲೇ ಈ ಪ್ರದೇಶದಿಂದ ಸ್ಥಳಾಂತರಿಸಲಾಗಿದೆ. ಆದರೂ  ಈ  ನಿವಾಸಿಗಳು ತಮ್ಮ ವಸ್ತುಗಳನ್ನು ಕೊಂಡೊಯ್ಯಲು ಪದೇ ಪದೇ ಮನೆಗಳಿಗೆ ಭೇಟಿ ನೀಡುತ್ತಿದ್ದಾರೆ. ಇದರಿಂದ ಅವರು ವಿಕಿರಣದ ಪ್ರಭಾವಕ್ಕೆ ಒಳಗಾಗುವ ಆತಂಕ ಎದುರಾಗಿರುವ ಹಿನ್ನೆಲೆಯಲ್ಲಿ ಇಡೀ ಪ್ರದೇಶವನ್ನು ಸರ್ಕಾರ ತನ್ನ ನಿಯಂತ್ರಣಕ್ಕೆ ಒಳಪಡಿಸಿಕೊಳ್ಳಲು ಮುಂದಾಗಿದೆ ಎಂದು ಮುಖ್ಯ ಸಂಪುಟ ಕಾರ್ಯದರ್ಶಿ ಯುಕಿಯೊ ಎಡನೊ ತಿಳಿಸಿದ್ದಾರೆ.ಈ ನಡುವೆ, ವಿಕಿರಣ ಸೋರಿಕೆ ತಡೆಗೆ ನಿರಂತರವಾಗಿ ಶ್ರಮಿಸುತ್ತಿರುವ ನೌಕರರು ತೀವ್ರ ಒತ್ತಡಕ್ಕೆ ಒಳಗಾಗಿದ್ದಾರೆ. ಇವರಲ್ಲಿ ಕೆಲವರಿಗೆ ಹೃದಯಾಘಾತವಾಗುವ ಮತ್ತು ಪ್ರಾಣ ಕಳೆದುಕೊಳ್ಳುವ ಭೀತಿ ಸಹ ಎದುರಾಗಿದೆ ಎಂದು ಇತ್ತೀಚೆಗೆ ಅವರನ್ನು ಭೇಟಿ ಮಾಡಿ ಚಿಕಿತ್ಸೆ ನೀಡಿರುವ ವೈದ್ಯರೊಬ್ಬರು ಬಹಿರಂಗಪಡಿಸಿದ್ದಾರೆ. ಸ್ಥಾವರದ ಗಂಭೀರ ಪರಿಸ್ಥಿತಿಯಲ್ಲಿ ಯಾವುದೇ ಸಕಾರಾತ್ಮಕ ಬದಲಾವಣೆ ಕಂಡುಬರುತ್ತಿಲ್ಲ. ಇದು ಹೀಗೇ ಮುಂದುವರಿದರೆ ತೀವ್ರ ಆರೋಗ್ಯದ ಸಮಸ್ಯೆಗಳು ಎದುರಾಗಬಹುದು ಎಂದು ಸಾರ್ವಜನಿಕ ಆರೋಗ್ಯ ಇಲಾಖೆಯ ಮುಖ್ಯಸ್ಥ ತನಿಗಾವ ತಿಳಿಸಿದ್ದಾರೆ.ಘಟಕದ ನಿರ್ವಾಹಕ ಸಂಸ್ಥೆಯಾದ ಟೋಕಿಯೊ ಎಲೆಕ್ಟ್ರಿಕ್ ಪವರ್ ಕಂಪೆನಿ ಮತ್ತು ಅದರ ಅಂಗಸಂಸ್ಥೆಗಳ 245 ಕಾರ್ಮಿಕರು ಸ್ಥಾವರ ಸ್ಥಳದಲ್ಲಿ ಬೀಡು ಬಿಟ್ಟಿದ್ದಾರೆ. ಇವರಲ್ಲದೆ ಅಗ್ನಿಶಾಮಕ ದಳ, ಸೈನಿಕರು, ಪೊಲೀಸ್ ಅಧಿಕಾರಿಗಳು ಸಹ ನೂರಾರು ಸಂಖ್ಯೆಯಲ್ಲಿದ್ದಾರೆ.

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.