ಭಾನುವಾರ, ಜೂಲೈ 5, 2020
23 °C

ಫುಕುಶಿಮಾ: 20 ಕಿ.ಮೀ. ದೂರದಲ್ಲೂ ಅಧಿಕ ವಿಕಿರಣ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಫುಕುಶಿಮಾ: 20 ಕಿ.ಮೀ. ದೂರದಲ್ಲೂ ಅಧಿಕ ವಿಕಿರಣ

ಟೋಕಿಯೊ, ವಿಯೆನ್ನಾ (ಪಿಟಿಐ, ಡಿಪಿಎ): ಫುಕುಶಿಮಾ ಅಣು ಸ್ಥಾವರಕ್ಕೆ ವಿದ್ಯುತ್ ಸಂಪರ್ಕ ಕಲ್ಪಿಸಲು ಶತಪ್ರಯತ್ನ ನಡೆದಿರುವಂತೆಯೇ, ಈ ಸ್ಥಾವರದ 20 ಕಿ.ಮೀ. ಸುತ್ತಳತೆಯ ಆಚೆಯೂ ಅಧಿಕ ಪ್ರಮಾಣದ ವಿಕಿರಣ ಅಂಶ ಪತ್ತೆಯಾಗಿರುವುದನ್ನು ಅಂತರರಾಷ್ಟ್ರೀಯ ಆಣು ಶಕ್ತಿ ಸಂಸ್ಥೆ (ಐಎಇಎ) ದೃಢಪಡಿಸಿದೆ. ಫುಕುಶಿಮಾ ಸ್ಥಾವರದಿಂದ 20 ಕಿ.ಮೀ. ವ್ಯಾಪ್ತಿಯಲ್ಲಿ ಜನರನ್ನು ತೆರವುಗೊಳಿಸಲಾಗಿದೆ ನಿಜ. ಆದರೆ ಅದಕ್ಕಿಂತ ಹೊರಭಾಗದಲ್ಲೂ ಅಧಿಕ ಪ್ರಮಾಣದ ವಿಕಿರಣ ಅಂಶ ಪತ್ತೆಯಾಗಿದೆ. ಜಪಾನ್ ಈ ಬಗ್ಗೆ ತುರ್ತು ಗಮನ ಹರಿಸಬೇಕು ಎಂದು ಐಎಇಎ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.ಫುಕುಶಿಮಾದಿಂದ 58 ಕಿ.ಮೀ.ದೂರದಲ್ಲಿ  ಗಂಟೆಗೆ 5.7 ಮೈಕ್ರೊಸೈವರ್ಟ್ಸ್‌ನಷ್ಟು ವಿಕಿರಣ ಅಂಶ ಪತ್ತೆಯಾಗಿದೆ. ಇದೇ ರೀತಿಯಲ್ಲಿ ಮನುಷ್ಯರು ವಿಕಿರಣಕ್ಕೆ ಒಡ್ಡಿಕೊಂಡರೆ ಒಂದು ವಾರದಲ್ಲೇ ಅವರ ದೇಹದಲ್ಲಿ ಒಂದು ಮಿಲಿಸೈವರ್ಟ್ ವಿಕಿರಣ ಅಂಶ ಸೇರಿಕೊಳ್ಳುತ್ತದೆ. ಐಎಇಎ ಶಿಫಾರಸಿನ ಪ್ರಕಾರ ವರ್ಷಕ್ಕೆ ಒಂದು ಮಿಲಿಸೈವರ್ಟ್ ವಿಕಿರಣ ದೇಹಕ್ಕೆ ಸೇರಿದರೆ ತೊಂರೆ ಇಲ್ಲ, ಅದಕ್ಕಿಂತ ಅಧಿಕ ವಿಕಿರಣದಿಂದ ದೀರ್ಘಾವಧಿಯ ಕ್ಯಾನ್ಸರ್‌ನಂತಹ ಕಾಯಿಲೆಗಳಿಗೆ ತುತ್ತಾಗಬೇಕಾಗುತ್ತದೆ ಎಂದು ಎಚ್ಚರಿಸಲಾಗಿದೆ.ಫುಕುಶಿಮಾದಿಂದ 30 ಕಿ.ಮೀ. ದೂರದಲ್ಲಿ ಗಂಟೆಗೆ 100 ಮೈಕ್ರೊಸೈವರ್ಟ್ಸ್ ವಿಕಿರಣ ಅಂಶ ಪತ್ತೆಯಾಗಿದೆ. ಈ ಲೆಕ್ಕಾಚಾರ ನೊಡಿದರೆ ಫುಕುಶಿಮಾ ಘಟನೆಯಿಂದ ಭಾರಿ ಪ್ರಮಾಣದಲ್ಲಿ ವಿಕಿರಣ ಅಂಶ 20 ಕಿ.ಮೀ. ಆಚೆಗೂ ಪಸರಿಸಿರುವುದು ಸ್ಪಷ್ಟವಾಗಿದೆ. ಶತಪ್ರಯತ್ನ:  ಫುಕುಶಿಮಾದ 2ನೇ ಮತ್ತು 3ನೇ ರಿಯಾಕ್ಟರ್‌ಗಳು ಕೂಲಂಟ್ ಕೊರತೆಯಿಂದ ಕುದಿಯುತ್ತಿದ್ದು, ಅವುಗಳನ್ನು ತಂಪುಗೊಳಿಸುವ ಕೂಲಂಟ್ ಪೂರೈಕೆಗಾಗಿ ವಿದ್ಯುತ್ ಸಂಪರ್ಕ ಕಲ್ಪಿಸುವುದು ಸದ್ಯದ ಆದ್ಯತೆಯಾಗಿದ್ದು, ಅದಕ್ಕಾಗಿ ಶತಪ್ರಯತ್ನ ನಡೆಸಲಾಗುತ್ತಿದೆ. ಜಪಾನ್ ಈ ಕಾರ್ಯದಲ್ಲಿ ಅಮೆರಿಕದ ನೆರವನ್ನೂ ಕೇಳಿದೆ.2 ಮತ್ತು 3ನೇ ರಿಯಾಕ್ಟರ್‌ಗಳಿಂದ ಈಗಲೂ ಹೊಗೆ ಹೊರಬರುತ್ತಿದೆ. ಆದರೆ ಇದರಿಂದ ವಿದ್ಯುತ್ ಪೂರೈಕೆ ಕಾರ್ಯಕ್ಕೆ ಅಡ್ಡಿಯಾಗಿಲ್ಲ ಎಂದು ಸ್ಥಾವರದ ನಿರ್ವಾಹಕರಾದ ಟೋಕಿಯೊ ಎಲೆಟ್ರಿಕ್ ಪವರ್ ಕಂಪೆನಿ (ಟಿಇಪಿಸಿಒ) ಹೇಳಿದೆ.  4ನೇ ರಿಯಾಕ್ಟರ್‌ಗೆ ಹೊರಗಿನಿಂದ ವಿದ್ಯುತ್ ಸಂಪರ್ಕ ಕಲ್ಪಿಸುವಲ್ಲಿ ತಂತ್ರಜ್ಞರು ಸಫಲರಾಗಿದ್ದರೂ, ಈ ನಾಲ್ಕೂ ರಿಯಾಕ್ಟರ್‌ಗಳಿಗೆ ಇನ್ನೂ ಪೂರ್ಣ ಪ್ರಮಾಣದಲ್ಲಿ ವಿದ್ಯುತ್ ಸಂಪರ್ಕ ಸಾಧ್ಯವಾಗಿಲ್ಲ.ಫುಕುಶಿಮಾ ಸ್ಥಾವರದಲ್ಲಿನ ಉಷ್ಣಾಂಶವನ್ನು ಇನ್ನು ಮುಂದೆ ಪ್ರತಿದಿನ ಎಸ್‌ಡಿಎಫ್ ಹೆಲಿಕಾಪ್ಟರ್‌ಗಳ ಸಹಾಯದಿಂದ ಅಂದಾಜಿಸಲು ನಿರ್ಧರಿಸಲಾಗಿದೆ. ಜನರಲ್ಲಿ ಧೈರ್ಯ ತುಂಬಲು ಈ ಕಾರ್ಯ ನಡೆಸಲಾಗುತ್ತದೆ. ಈ ಮೊದಲು ವಾರಕ್ಕೆ ಎರಡು ದಿನ ಇಂತಹ ಪರೀಕ್ಷೆ ಮಾಡಲು ನಿರ್ಧರಿಸಲಾಗಿತ್ತು. ಈ ಮಧ್ಯೆ, ಜಪಾನ್‌ನಿಂದ ತರಿಸಿಕೊಂಡಿರುವ ಆಹಾರವನ್ನು ಸೇವಿಸುವುದಕ್ಕೆ ಯಾವುದೇ ಭಯ ಬೇಡ, ಅಲ್ಲಿಂದ ಬಂದ ಆಹಾರದಲ್ಲಿ ಇರಬಹುದಾದ ವಿಕಿರಣ ಅಂಶ ‘ನಗಣ್ಯ’ ಎಂದು ಆಸ್ಟ್ರೇಲಿಯಾದ ಆಹಾರ ಗುಣಮಟ್ಟ ಇಲಾಖೆ ತಿಳಿಸಿದೆ.ಫುಕುಶಿಮಾ ಸುತ್ತಮುತ್ತಲಿನ ಪ್ರಾಂತ್ಯಗಳ ಆಹಾರ ಉತ್ಪನ್ನಗಳ ರಫ್ತಿಗೆ ಜಪಾನ್ ನಿಷೇಧ ವಿಧಿಸಿದೆ. ಇಲ್ಲಿಯ ತನಕ ದೇಶಕ್ಕೆ ಆಗಮಿಸಿರುವ ಆಹಾರದಲ್ಲಿ ವಿಕಿರಣ ಅಂಶ ಇರುವ ಬಗ್ಗೆ ಭಯ ಬೇಡ ಎಂದು ಅದು ಹೇಳಿದ್ದರೂ, ಭವಿಷ್ಯದ ಆಮದಿನ ಬಗ್ಗೆ ಯಾವುದೇ ಭರವಸೆ ನೀಡಿಲ್ಲ. ಅಮೆರಿಕ ಬೆಂಬಲ: ಭೂಕಂಪ, ಸುನಾಮಿ ಮತ್ತು ಅಣು ಸ್ಥಾವರ ಸ್ಫೋಟಗಳಂತಹ ಸಂಕಷ್ಟಕ್ಕೆ ಸಿಲುಕಿರುವ ಜಪಾನ್‌ಗೆ ನೆರವು ನೀಡುವುದಕ್ಕೆ ಅಮೆರಿಕ ತನ್ನ ಜಾರ್ಜ್ ವಾಷಿಂಗ್ಟನ್ ಯುದ್ಧನೌಕೆಯನ್ನು ಜಪಾನ್ ಕಡಲ ತೀರದಲ್ಲಿ ಸನ್ನದ್ಧ ಸ್ಥಿತಿಯಲ್ಲಿ ಇಟ್ಟಿದೆ. ದುರಸ್ತಿ ಕಾರಣ ಯೊಕೊಸುಕಾ ನೌಕಾನೆಲೆಯಲ್ಲಿ ತಂಗಿದ್ದ ಅದು ಇದೀಗ ಅಲ್ಲಿಂದ ಹೊರಟಿದ್ದರೂ, ಜಪಾನ್ ಕಡಲ ತೀರದಲ್ಲೇ ಇರಲಿದೆ, ಅಗತ್ಯ ಬಿದ್ದಾಗ ಅದು ತಕ್ಷಣ ನೆರವಿಗೆ ಸಿಗಲಿದೆ’ ಎಂದು ಅಮೆರಿಕದ ರಕ್ಷಣಾ ಇಲಾಖೆಯ ವಕ್ತಾರ ಕಮಾಡೋರ್ ಲೆಸ್ಲಿ ಹಲ್‌ರೈಡ್ ತಿಳಿಸಿದ್ದಾರೆ. ಡಬ್ಲ್ಯುಎಚ್‌ಒ ಎಚ್ಚರಿಕೆ (ಜಿನೀವಾ ವರದಿ): ಫುಕುಶಿಮಾ ಸುತ್ತಮುತ್ತಲಿನ ಆಹಾರ ಉತ್ಪನ್ನಗಳಲ್ಲಿ ಅಧಿಕ ವಿಕಿರಣ ಅಂಶ ಇರುವುದಾದರೆ ಅಲ್ಲಿನ ಆಹಾರ ಪದಾರ್ಥಗಳ ಮಾರಾಟದ ಮೇಲೆ ತಕ್ಷಣ ನಿಷೇಧ ವಿಧಿಸಬೇಕು ಎಂದು ವಿಶ್ವ ಆರೋಗ್ಯ ಸಂಘಟನೆ (ಡಬ್ಲ್ಯುಎಚ್‌ಒ) ಎಚ್ಚರಿಕೆ ನೀಡಿದೆ.ಬ್ರೆಜಿಲ್ ಪರಿಹಾರ: ಜಪಾನ್‌ನಲ್ಲಿ ಭೂಕಂಪ ಮತ್ತು ಸುನಾಮಿಯಿಂದ ಸಂತ್ರಸ್ತರಾದವರಿಗೆ ಪರಿಹಾರ ಕಾರ್ಯಗಳಿಗಾಗಿ 5 ಲಕ್ಷ ಡಾಲರ್ ನೆರವು ನೀಡುವುದಾಗಿ ಬ್ರೆಜಿಲ್ ಪ್ರಕಟಿಸಿದೆ.ಫುಕುಶಿಮಾ ಸುತ್ತಮುತ್ತ ಅಧಿಕ ವಿಕಿರಣ ಅಂಶ ಇರುವುದನ್ನು ಐಎಇಎ ದೃಢಪಡಿಸಿದೆ. ಹೀಗಾಗಿ ಜಪಾನ್ ಸರ್ಕಾರ ಈ ಭಾಗದ ಆಹಾರ ಪದಾರ್ಥಗಳು ಯಾವುದೇ ಕಾರಣಕ್ಕೂ ಹೊರ ದೇಶಗಳಿಗೆ ತೆರಳದಂತೆ ನಿಗಾ ವಹಿಸಬೇಕು ಎಂದು ಸಂಘಟನೆ ತಿಳಿಸಿದೆ.ಈ ಮೂಲಕ ದುರಂತ ಸಂಭವಿಸಿದ ಬಳಿಕ ಇದೇ ಪ್ರಥಮ ಬಾರಿಗೆ ವಿಶ್ವ ಸಂಘಟನೆಯೊಂದು ಜಪಾನ್‌ಗೆ ಎಚ್ಚರಿಕೆ ನೀಡಿದಂತಾಗಿದೆ. ಬ್ರೆಜಿಲ್ ಪರಿಹಾರ: ಜಪಾನ್‌ನಲ್ಲಿ ಭೂಕಂಪ ಮತ್ತು ಸುನಾಮಿಯಿಂದ ಸಂತ್ರಸ್ತರಾದವರಿಗೆ ಪರಿಹಾರ ಕಾರ್ಯಗಳಿಗಾಗಿ 5 ಲಕ್ಷ ಡಾಲರ್ ನೆರವು ನೀಡುವುದಾಗಿ ಬ್ರೆಜಿಲ್ ಪ್ರಕಟಿಸಿದೆ. ಅಗತ್ಯ ಇರುವ ಜನರಿಗೆ ಆಹಾರ, ನೀರು, ಬಟ್ಟೆ, ಮತ್ತು ಔಷಧ ಒದಗಿಸಲು ಜಪಾನ್ ರೆಡ್‌ಕ್ರಾಸ್‌ಗೆ ಈ ಹಣ ನೀಡಲಾಗುವುದು ಎಂದು ಬ್ರೆಜಿಲ್‌ನ ವಿದೇಶಾಂಗ ಸಚಿವ ಆಂಟೋನಿಯೊ ಪೇಟ್ರಿಯಾಟಾ ತಿಳಿಸಿದ್ದಾರೆ.ಈ ಮಧ್ಯೆ, ಜಪಾನ್‌ನ ಅಣು ಸ್ಥಾವರ ಸ್ಫೋಟದಿಂದ ತಲೆದೋರಿದ ವಿಕಿರಣದಿಂದ ಚೀನಾದ ಕರಾವಳಿ ಭಾಗದಲ್ಲಿ ವಿಕಿರಣ ಮಾಲಿನ್ಯ ಸಂಭವಿಸಿದೆ ಎಂಬ ಸುಳ್ಳು ವದಂತಿ ಹಬ್ಬಿಸಿ ಜನರಲ್ಲಿ ಭಯ ಬಿತ್ತುತ್ತಿರುವವರನ್ನು ಹತ್ತಿಕ್ಕುವ ಕಾರ್ಯದಲ್ಲಿ ಚೀನಾ ಪೊಲೀಸರು ನಿರತರಾಗಿದ್ದಾರೆ.

 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.