ಫುಟ್‌ಪಾತ್ ವ್ಯಾಪಾರಿಗಳಿಗೆ ಮಳಿಗೆ: ನಿರ್ಧಾರ

7

ಫುಟ್‌ಪಾತ್ ವ್ಯಾಪಾರಿಗಳಿಗೆ ಮಳಿಗೆ: ನಿರ್ಧಾರ

Published:
Updated:

ಬೇಲೂರು: ಶೇ. 22.75 ಮತ್ತು 7.25 ಯೋಜನೆಯಡಿ ಫಲಾನುಭವಿಗಳನ್ನು ಆಯ್ಕೆ ಮಾಡುವ ಸಂದರ್ಭದಲ್ಲಿ ಪುರಸಭೆಯಿಂದ ತರಬೇತಿ ಪಡೆದವರಿಗೆ ಮೊದಲ ಆದ್ಯತೆ ನೀಡಬೇಕೆಂದು ಸೋಮವಾರ ನಡೆದ ಪುರಸಭೆಯ ವಿಶೇಷ ಸಭೆಯಲ್ಲಿ ಸದಸ್ಯ ಜಿ.ಶಾಂತಕುಮಾರ್ ಒತ್ತಾಯಿಸಿದರು.



ಪುರಸಭಾಧ್ಯಕ್ಷ ತೊ.ಚ.ಅನಂತಸುಬ್ಬರಾಯ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಮಾತನಾಡಿದ ಅವರು ಕೆಲ ವರ್ಷಗಳಿಂದ ಕಂಪ್ಯೂಟರ್ ಮತ್ತು ಹೊಲಿಗೆ ತರಬೇತಿಗೆ ಪುರಸಭೆಯಿಂದ ಅರ್ಜಿ ಆಹ್ವಾನಿಸಿದ್ದರೂ ಕಲಿಯಲು ಯಾರೂ ಮುಂದೆ ಬಂದಿಲ್ಲ. ಆದರೆ ಕಂಪ್ಯೂಟರ್ ಮತ್ತು ಹೊಲಿಗೆ ಯಂತ್ರಗಳನ್ನು ಪಡೆದು ಕೊಳ್ಳುತ್ತಿದ್ದಾರೆ.



ಪುರಸಭೆಯಿಂದ ತರಬೇತಿ ಪಡೆದ ವರಿಗೆ ಮೊದಲ ಆದ್ಯತೆಯ ಮೇಲೆ ಸ್ವತ್ತುಗಳನ್ನು ವಿತರಿಸಬೇಕು ಸೋಲಾರ್ ದೀಪಗಳನ್ನು ಎಲ್ಲಾ ವಾರ್ಡ್‌ಗಳಿಗೂ ಸಮಾನಾಗಿ ವಿತರಿಸುವಂತೆ ಸಲಹೆ ಮಾಡಿದರು. ನಂತರ  2008-09 ರಿಂದ 2010-11ನೇ ಸಾಲಿನವರೆಗೆ ಎಸ್.ಎಫ್.ಸಿ. ಹಾಗೂ ಪುರಸಭಾ ನಿಧಿಯ ಶೇ. 22.75 ಯೋಜನೆಯಲ್ಲಿ ಉಳಿದಿರುವ 17.60 ಲಕ್ಷ ರೂ.ಗೆ ಮರು ಕ್ರಿಯಾ ಯೋಜನೆ ತಯಾರಿಸಲು ಸಭೆ ಅನುಮೋದನೆ ನೀಡಿತು.



ಪಟ್ಟಣ ವ್ಯಾಪ್ತಿಯ ಫುಟ್‌ಪಾತ್‌ನಲ್ಲಿ ವ್ಯಾಪಾರ ನಡೆಸುತ್ತಿ ರುವ ಹೂವು, ಹಣ್ಣು, ತರಕಾರಿ ಮಾರುತ್ತಿರುವವರಿಗೆ ಐ.ಡಿ.ಎಸ್.ಎಂ.ಟಿ. ವಾಣಿಜ್ಯ ಸಂಕೀರ್ಣದ ಒಳಭಾಗ 5*5 ಅಳತೆಯಲ್ಲಿ ಮಳಿಗೆ ನಿರ್ಮಿಸಿ ಕೊಡಲು ಉದ್ದೇಶಿಸಲಾಗಿದೆ ಈ ರೀತಿ ವ್ಯಾಪಾರ ಮಾಡುತ್ತಿರುವ 59 ಜನರನ್ನು ಗುರು ತಿಸಲಾಗಿದೆ. ವ್ಯಾಪಾರಿಗಳಿಂದ ಮುಂಗಡ  ರೂ. 25 ಸಾವಿರ ಪಡೆಯಲಾಗುವುದು ಎಂದು ಅಧ್ಯಕ್ಷರೂ ಹೇಳಿದರು.



ಇದಕ್ಕೆ ಸದಸ್ಯ ಬಿ.ಸಿ.ಮಂಜುನಾಥ್ ಫುಟ್‌ಪಾತ್ ತೆರವು ನಂತರವೂ ಮತ್ತೆ ಅಂಗಡಿ ಇಟ್ಟುಕೊಂಡರೆ ಏನು ಕ್ರಮ ಕೈಗೊಳ್ಳುತ್ತೀರಾ ಎಂದು ಪ್ರಶ್ನಿಸಿದರು. ಈ ಬಗ್ಗೆ ಜಿಲ್ಲಾಧಿಕಾರಿಗಳೊಂದಿಗೆ ಮಾತುಕತೆ ನಡೆಸಲಾಗಿದೆ. ಒಮ್ಮೆ ಫುಟ್‌ಪಾತ್ ತೆರವುಗೊಳಿಸಿದ ನಂತರ ನಿಷೇಧಿತ ಸ್ಥಳ ಎಂದು ಜಿಲ್ಲಾಧಿಕಾರಿಗಳು ಘೋಷಿಸಲಿದ್ದಾರೆ ಎಂದು ತೊ.ಚ. ಅನಂತಸುಬ್ಬರಾಯ ಸ್ಪಷ್ಟನೆ ನೀಡಿದರು. ಬಳಿಕ ಸಭೆ ಫುಟ್‌ಪಾತ್ ವ್ಯಾಪಾರಿಗಳ ಪಟ್ಟಿಗೆ ಒಪ್ಪಿಗೆ ಸೂಚಿಸಿತು.



ಆಶ್ರಯ ಮನೆ ಫಲಾನುಭವಿಗಳಿಂದ ಎರಡೂವರೆ ಸಾವಿರ ರೂ. ಹಣ ಪಡೆದು ರಸೀದಿ ನೀಡಲಾಗುತ್ತಿದೆ.  ಈ ಹಣವನ್ನು ಯಾವ ಕಾರಣಕ್ಕೆ ಸಂಗ್ರಹಿಸಲಾಗುತ್ತಿದೆ ಎಂಬ ಬಗ್ಗೆ ಮಾಹಿತಿ ನೀಡುವಂತೆ ಸದಸ್ಯ ಬಿ.ಎ.ಜಮಾಲುದ್ದೀನ್ ಆಗ್ರಹಿಸಿದರು. ದಾಖಲೆಗಳನ್ನು ತಯಾರಿಸುವ ಸಲುವಾಗಿ ರಾಜೀವ್‌ಗಾಂಧಿ ವಸತಿ ನಿಗಮವೇ ಹಣ ಪಡೆಯಲು ಸೂಚಿಸಿ ಏಜೆನ್ಸಿ ನೇಮಕ ಮಾಡಿದೆ ಎಂದು ಅಧ್ಯಕ್ಷರು ತಿಳಿಸಿದರು.



ಆಸ್ತಿಯ ಸಮರ್ಪಕ ದಾಖಲೆ ಪರಿಶೀಲಿಸುವ ಸಲುವಾಗಿ ಪಟ್ಟಣದ ಜನರಿಗೆ ವಿತರಿಸಿರುವ ಸಿ.ಫಾರಂ ಹಲವು ಗೊಂದಲಗಳಿಗೆ ಕಾರಣವಾಗಿದೆ. ಸ್ವತ್ತುಗಳ ಅಳತೆಯಲ್ಲಿ ಭಾರಿ ವ್ಯತ್ಯಾಸ ಕಂಡು ಬಂದಿದೆ ಎಂದು ಸದಸ್ಯರಾದ ಜಿ.ಶಾಂತ ಕುಮಾರ್ ಮತ್ತು ಬಿ.ಸಿ.ಮಂಜುನಾಥ್ ಆರೋಪಿಸಿದರು.



ಸಿ.ಫಾರಂನಲ್ಲಿರುವ ಅಳತೆಯನ್ನು ಪುರಸಭೆಯವರು ಮಾಡಿಲ್ಲ. ಸರ್ವೆ ಆಫ್ ಇಂಡಿಯಾದವರು ತಯಾರಿಸಿದ್ದಾಗಿದೆ. ಅದರಲ್ಲಿನ ಲೋಪ ಸರಿಪಡಿಸುವ ಸಲುವಾಗಿ ಕ್ರಮ ಕೈಗೊಳ್ಳಲಾಗಿದೆ ಎಂದು ಮುಖ್ಯಾಧಿಕಾರಿ ಆರ್.ಕೃಷ್ಣಮೂರ್ತಿ ತಿಳಿಸಿದರು. ಲೋಪವೆಸಗಿರುವ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಲು ನಿರ್ಣಯ ಕೈಗೊಂಡು ಶಿಫಾರಸ್ಸು ಮಾಡಿ ಎಂದು ಸದಸ್ಯ ಜಿ.ಶಾಂತಕುಮಾರ್ ಸೂಚಿಸಿದರು.



ಪಟ್ಟಣದ ಹೊಳೇಬೀದಿಯಲ್ಲಿನ ವಿದ್ಯುತ್ ಕಂಬವೊಂದು ಶಿಥಿಲಾವಸ್ಥೆ ತಲುಪಿದ್ದು, ಕಳೆದ 2 ವರ್ಷದಿಂದ ಬದಲಾಯಿಸುವಂತೆ ಕೋರುತ್ತಿದ್ದರೂ ಸೆಸ್ಕ್ ಅಧಿಕಾರಿಗಳು ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ. ಪುರಸಭೆ ವ್ಯಾಪ್ತಿಯಲ್ಲಿನ ಸಮಸ್ಯೆಗಳನ್ನು ಸರಿಪಡಿಸಲು ಈ ಇಲಾಖೆ ಅಸಹಾಕಾರ ತೋರುತ್ತಿದೆ. ಇವರ ವರ್ತನೆ ಇದೇ ರೀತಿ ಮುಂದುವರೆದರೆ ಸೆಸ್ಕ್ ಕಚೇರಿ ಮುಂದೆ ಪುರಸಭೆ ಸದಸ್ಯರು ಧರಣಿ ಮಾಡಬೇಕಾಗುತ್ತದೆ ಎಂದು ಸದಸ್ಯ ಜಿ.ಶಾಂತಕುಮಾರ್ ಎಚ್ಚರಿಸಿದರು. ಇದಕ್ಕೆ ಸದಸ್ಯೆ ನಾಗಮ್ಮ ಧನಿಗೂಡಿಸಿದರು.



ಅಧ್ಯಕ್ಷ ಅನಂತಸುಬ್ಬರಾಯ ಮಂಗಳವಾರ ಅಧಿಕಾರಿ ಗಳೊಂದಿಗೆ ಮಾತುಕತೆ ನಡೆಸುವ ಭರವಸೆ ನೀಡಿದರು. ಉಪಾಧ್ಯಕ್ಷೆ ಅಮೀನಾ ಹಾಜರಿದ್ದರು.

ಬರಹ ಇಷ್ಟವಾಯಿತೆ?

  • 0

    Happy
  • 0

    Amused
  • 0

    Sad
  • 0

    Frustrated
  • 0

    Angry