ಸೋಮವಾರ, ಮೇ 17, 2021
22 °C

ಫುಟ್‌ಬಾಲ್ ಆಟಗಾರರ ಬೆಲೆ ಹೆಚ್ಚುತ್ತಿದೆ...

ಮಹಮ್ಮದ್ ನೂಮಾನ್ Updated:

ಅಕ್ಷರ ಗಾತ್ರ : | |

ಐ-ಲೀಗ್ ಫುಟ್‌ಬಾಲ್ ಟೂರ್ನಿ ಇದೀಗ ಅಂತಿಮ ಹಂತಕ್ಕೆ ತಲುಪಿವೆ. ಕೆಲವು ಸುತ್ತುಗಳ ಪಂದ್ಯಗಳು ಇನ್ನೂ ಬಾಕಿಯುಳಿದಿವೆ. ಆದರೆ ಕ್ಲಬ್‌ಗಳು 2012-13ರ ಋತುವಿಗಾಗಿ ಈಗಲೇ ಯೋಜನೆಗಳನ್ನು ರೂಪಿಸುತ್ತಿವೆ. ಆಟಗಾರರ `ವರ್ಗಾವಣೆ ಅವಧಿ~ಯ ಕಾವು ಹೆಚ್ಚಿದೆ. ಕ್ಲಬ್‌ಗಳು ಪ್ರಮುಖ ಆಟಗಾರರನ್ನು ತನ್ನತ್ತ ಸೆಳೆದುಕೊಳ್ಳಲು ಪೈಪೋಟಿಗೆ ಇಳಿದಿವೆ. ಅದರಲ್ಲೂ ಕೋಲ್ಕತ್ತದ ಕ್ಲಬ್‌ಗಳು ಹಣದ ಹೊಳೆಯನ್ನೇ ಹರಿಸಲು ಸಿದ್ಧವಾಗಿವೆ.

ಮುಂದಿನ ಋತುವಿನ ಟೂರ್ನಿಗೆ ತಂಡವನ್ನು ಮತ್ತಷ್ಟು ಬಲಗೊಳಿಸುವುದು ಎಲ್ಲರ ಉದ್ದೇಶ. ಇದಕ್ಕಾಗಿ ಪ್ರಮುಖ ಆಟಗಾರರಿಗೆ ಬಲೆ ಬೀಸಿದೆ. ಕ್ಲಬ್‌ಗಳ ನಡುವಿನ ಸ್ಪರ್ಧೆಯಿಂದಾಗಿ ಭಾರತದ ಫುಟ್‌ಬಾಲ್ ಆಟಗಾರರ ಬೆಲೆಯೂ ಹೆಚ್ಚುತ್ತಿದೆ. ರಾಷ್ಟ್ರೀಯ ತಂಡದ ನಾಯಕ ಸುನಿಲ್ ಚೆಟ್ರಿ ಈ ಬಾರಿ `ಅತ್ಯಧಿಕ ಬೆಲೆಯುಳ್ಳ~ ಭಾರತದ ಆಟಗಾರ ಎನಿಸಿಕೊಳ್ಳುವ ಸಾಧ್ಯತೆಯಿದೆ.

ಕೋಲ್ಕತ್ತದ ಮೋಹನ್ ಬಾಗನ್‌ಗೆ ಆಡುತ್ತಿರುವ ಚೆಟ್ರಿ ಈಗ ವರ್ಷಕ್ಕೆ ಒಂದು ಕೋಟಿ ರೂ. ಪಡೆಯುತ್ತಿದ್ದಾರೆ. ಮುಂದಿನ ಋತುವಿಗೆ ಅವರು ಒಂದೂವರೆ ಕೋಟಿ ರೂ.ಗೆ ಬೇಡಿಕೆಯಿಟ್ಟಿದ್ದಾರೆ. ಬಾಗನ್ ಅವರನ್ನು ಉಳಿಸಿಕೊಳ್ಳುವ ಆಸಕ್ತಿ ತೋರದಿದ್ದರೆ, ಗೋವಾದ ಚರ್ಚಿಲ್ ಬ್ರದರ್ಸ್ ಈ ಮೊತ್ತ ನೀಡಿ ಚೆಟ್ರಿ ಅವರನ್ನು ತಮ್ಮದಾಗಿಸಿಕೊಳ್ಳಲು ಮುಂದಾಗಿದೆ.

ಭಾರತದ ತಂಡದ ಗೋಲ್‌ಕೀಪರ್ ಸುಬ್ರತೊ ಪಾಲ್ ಅವರಿಗೆ ಬಾಗನ್ ಒಂದು ಕೋಟಿ ರೂ. ಮೊತ್ತದ `ಆಫರ್~ ನೀಡಿದೆ. ಪುಣೆ ಎಫ್‌ಸಿ ಕ್ಲಬ್‌ನ ಆಟಗಾರ ಪಾಲ್ ಗಾಯದ ಸಮಸ್ಯೆಯಿಂದ ಪ್ರಸಕ್ತ ಋತುವಿನಲ್ಲಿ ಆಡಿಲ್ಲ. ಈಸ್ಟ್ ಬೆಂಗಾಲ್ ಕೂಡಾ ಈ ಗೋಲ್‌ಕೀಪರ್ ಮೇಲೆ ಕಣ್ಣಿಟ್ಟಿದೆ. ಚೆಟ್ರಿ ಮತ್ತು ಪಾಲ್ ಅಲ್ಲದೆ, ಇತರ ಕೆಲವು ಆಟಗಾರರು 75 ಲಕ್ಷದಿಂದ ಒಂದು ಕೋಟಿ ರೂ. ಮೊತ್ತಕ್ಕೆ ವಿವಿಧ ಕ್ಲಬ್‌ಗಳ ಜೊತೆ ಒಪ್ಪಂದ ಮಾಡಿಕೊಳ್ಳಲು ವೇದಿಕೆ ಸಿದ್ಧವಾಗಿದೆ.

ಭಾರತ ತಂಡದ ಡಿಫೆಂಡರ್ ಗೌರಮಾಂಗಿ ಸಿಂಗ್ ಈಗಾಗಲೇ ಪ್ರಯಾಗ್ ಯುನೈಟೆಡ್ ಜೊತೆ ಒಪ್ಪಂದ ಮಾಡಿಕೊಂಡಿದ್ದಾರೆ. ಒಪ್ಪಂದದ ಮೊತ್ತ ಒಂದು ಕೋಟಿ. ಇಷ್ಟು ಮಾತ್ರವಲ್ಲದೆ, ಕೋಲ್ಕತ್ತದಲ್ಲಿ ಒಂದು ಮನೆ ಮತ್ತು ಸ್ಪೋರ್ಟ್ಸ್ ಕಾರು ನೀಡಲು ಕ್ಲಬ್ ಮುಂದಾಗಿದೆ. ಡೆಂಪೊಗೆ ಆಡುತ್ತಿರುವ ರಾಷ್ಟ್ರೀಯ ತಂಡದ ಆಟಗಾರ ಜೋಕಿಮ್ ಅಬ್ರಾಂಚೆಸ್ 70 ಲಕ್ಷ ರೂ ಮೊತ್ತಕ್ಕೆ      ಈಸ್ಟ್ ಬೆಂಗಾಲ್ ಸೇರಲಿದ್ದಾರೆ. ಭಾರತ ತಂಡದ ಇನ್ನೊಬ್ಬ ಆಟಗಾರ ಲಾಲ್‌ರಿಂದಿಕಾ ಅವರಿಗೆ ಬಾಗನ್ ಮತ್ತು ಈಸ್ಟ್ ಬೆಂಗಾಲ್ ಬಲೆಬೀಸಿವೆ. ಯಾವ ಕ್ಲಬ್ ಪಾಲಾದರೂ ಅವರು 60-70 ಲಕ್ಷ ರೂ. ಪಡೆಯುವುದು ಖಚಿತ.

ಮೋಹನ್ ಬಾಗನ್ ಹಾಗೂ ರಾಷ್ಟ್ರೀಯ ತಂಡದ ಡಿಫೆಂಡರ್ ಅನ್ವರ್ ಅಲಿ ಮತ್ತು ಕಿಂಗ್‌ಶುಕ್ ಅವರು ಸಲಗಾಂವ್ಕರ್ ತಂಡ ಸೇರಲು ಉತ್ಸುಕರಾಗಿದ್ದಾರೆ. ಇಬ್ಬರಿಗೂ 60 ಲಕ್ಷ ರೂ. ನೀಡಲು ಕ್ಲಬ್ ಒಪ್ಪಿಕೊಂಡಿದೆ. ಬಾಗನ್ ಕ್ಲಬ್‌ನಲ್ಲಿ ಈಗ ಪಡೆಯುತ್ತಿರುವ ಮೊತ್ತಕ್ಕೆ ಹೋಲಿಸಿದರೆ ಇಬ್ಬರ ಮೌಲ್ಯ ಹೆಚ್ಚಿರುವುದು ಕಂಡುಬರುತ್ತದೆ.

ವಿದೇಶಿ ಆಟಗಾರರಲ್ಲಿ ಒಡಾಫ ಮುಂದು: ಆದರೆ ಐ-ಲೀಗ್‌ನಲ್ಲಿ ಅತ್ಯಂತ ಬೆಲೆಯುಳ್ಳ ಆಟಗಾರ ಎಂಬ ಗೌರವವನ್ನು ನೈಜೀರಿಯದ ಆಟಗಾರ ಒಡಾಫ ಒಕೊಲಿ ಈ ಬಾರಿಯೂ ತಮ್ಮದಾಗಿಸಿಕೊಂಡಿದ್ದಾರೆ. ಕಳೆದ ಋತುವಿನ ಆರಂಭದಲ್ಲಿ ಬಾಗನ್ ಎರಡು ಕೋಟಿ ನೀಡಿ ಒಡಾಫ ಅವರನ್ನು ಚರ್ಚಿಲ್ ಬ್ರದರ್ಸ್ ತಂಡದಿಂದ ತನ್ನದಾಗಿಸಿಕೊಂಡಿತ್ತು. ಭಾರತದ ಫುಟ್‌ಬಾಲ್ ಇತಿಹಾಸದಲ್ಲಿ ನಡೆದ ಅತಿದೊಡ್ಡ ಒಪ್ಪಂದ ಇದಾಗಿತ್ತು.

ಒಡಾಫ ಈ ಬಾರಿ 3.25 ಕೋಟಿ ರೂ. ಬೇಡಿಕೆ ಮುಂದಿಟ್ಟಿದ್ದು, ಕೋಲ್ಕತ್ತ ಕ್ಲಬ್ ಅದಕ್ಕೆ ಒಪ್ಪಿಕೊಂಡಿದೆ. `ಗೋಲು ಮಳೆ~ ಸುರಿಸುವ ಒಡಾಫ ಅವರನ್ನು ಇನ್ನೊಂದು ಕ್ಲಬ್‌ಗೆ ಬಿಟ್ಟುಕೊಡಲು ಬಾಗನ್‌ಗೆ ಮನಸ್ಸಿಲ್ಲ. ಈ ಆಟಗಾರ ಭಾರತದ ಮೂರು ಕ್ಲಬ್‌ಗಳಿಗೆ ಈಗಾಗಲೇ 100ಕ್ಕೂ ಅಧಿಕ ಗೋಲುಗಳನ್ನು ಗಳಿಸಿದ್ದಾರೆ.

ಡೆಂಪೊ ತಂಡಕ್ಕೆ ಆಡುತ್ತಿರುವ ನೈಜೀರಿಯದ ರಾಂತಿ    ಮಾರ್ಟಿನ್ಸ್ ಪ್ರಯಾಗ್ ಯುನೈಟೆಡ್ ಜೊತೆ ಒಪ್ಪಂದ ಮಾಡಿಕೊಂಡಿರುವುದು ರಹಸ್ಯವಾಗಿ ಉಳಿದಿಲ್ಲ. ಒಪ್ಪಂದದ ಮೌಲ್ಯ 1.88 ಕೋಟಿ ರೂ. ಜೊತೆಗೆ ಒಂದು ಸ್ಪೋರ್ಟ್ಸ್ ಕಾರು ಹಾಗೂ ದಕ್ಷಿಣ ಕೋಲ್ಕತದಲ್ಲಿ ಮನೆಯೊಂದನ್ನು ನೀಡುವುದಾಗಿ ಕ್ಲಬ್ ಹೇಳಿದೆ. ರಾಂತಿ ತಮ್ಮ ಕ್ಲಬ್ ತೊರೆಯುತ್ತಿದ್ದಾರೆ ಎಂಬುದರ ಬಗ್ಗೆ ಡೆಂಪೊ ಅಧಿಕೃತರು ಇನ್ನೂ ಏನೂ ಹೇಳಿಲ್ಲ.

ದೇಶದಲ್ಲಿ ಅತ್ಯಂತ ವೃತ್ತಿಪರ ರೀತಿಯಲ್ಲಿ ಆಡಳಿತ ನಡೆಸುತ್ತಿರುವ ಕ್ಲಬ್‌ಗಳಲ್ಲಿ ಒಂದಾದ ಶಿಲ್ಲಾಂಗ್ ಲಜಾಂಗ್ ವಿದೇಶದ ಆಟಗಾರರ ಮೇಲೆ ಕಣ್ಣಿಟ್ಟಿದೆ. ಕೆನಡಾದ ರಾಷ್ಟ್ರೀಯ ತಂಡದ ಡ್ವೇಯ್ನ ಡಿ ರೊಸಾರಿಯೊ ಮತ್ತು ಡೆನ್ಮಾರ್ಕ್‌ನ ಆಟಗಾರನೊಬ್ಬನನ್ನು ತಂಡಕ್ಕೆ ಸೇರಿಸಿಕೊಳ್ಳುವ ಪ್ರಯತ್ನ ಆರಂಭಿಸಿದೆ. ತಂಡದ ಕೋಚ್ ಪ್ರದ್ಯುಮ್ ರೆಡ್ಡಿ ಇತ್ತೀಚಿಗೆ ಈ ವಿಷಯವನ್ನು ಬಹಿರಂಗಪಡಿಸಿದ್ದರು. ರೊಸಾರಿಯೊ ಅವರಿಗೆ ಒಂದು ವರ್ಷಕ್ಕೆ 1.10 ಕೋಟಿ ರೂ. ನೀಡುವುದಾಗಿ ತಂಡ ಹೇಳಿದೆ.

ಐ-ಲೀಗ್‌ನಲ್ಲಿ ಸ್ಟಾರ್ ಆಟಗಾರರು ಅಧಿಕ ಸಂಖ್ಯೆಯಲ್ಲಿಲ್ಲದ ಕಾರಣ `ವರ್ಗಾವಣೆ ಅವಧಿ~ ಹೆಚ್ಚಿನ ಕಾವು ಪಡೆದುಕೊಂಡಿದೆ. 20 ರಿಂದ 25 ರಷ್ಟು ಆಟಗಾರರು ವಿವಿಧ ಕ್ಲಬ್‌ಗಳಿಂದ ದೊಡ್ಡ ಮೊತ್ತದ `ಆಫರ್~ ಪಡೆಯುತ್ತಿದ್ದಾರೆ. ಡೆಂಪೊ, ಚರ್ಚಿಲ್, ಬಾಗನ್ ಮತ್ತು ಈಸ್ಟ್ ಬೆಂಗಾಲ್ ಕ್ಲಬ್‌ಗಳು ಆಟಗಾರರನ್ನು ಸೇರಿಸಿಕೊಳ್ಳಲು ಪ್ರತಿವರ್ಷ 13 ಕೋಟಿ ರೂಪಾಯಿಗೂ ಅಧಿಕ ಮೊತ್ತ ವ್ಯಯಿಸುತ್ತಿವೆ. ಇದೀಗ ಪ್ರಯಾಗ್ ಯುನೈಟೆಡ್ ಮತ್ತು ಶಿಲ್ಲಾಂಗ್ ಲಜಾಂಗ್ ಕೂಡಾ ಇವುಗಳ ಸಾಲಿಗೆ ಸೇರಿವೆ.

ಪಾರದರ್ಶಕತೆ ಇಲ್ಲ

ಐ-ಲೀಗ್‌ನಲ್ಲಿ ನಡೆಯುವ ಆಟಗಾರರ ವರ್ಗಾವಣೆಯಲ್ಲಿ ಪಾರದರ್ಶಕತೆ ಕಾಣಲು ಸಾಧ್ಯವಿಲ್ಲ. ಆಟಗಾರನ ಜೊತೆ ಮಾಡಿರುವ ಒಪ್ಪಂದದ ಮೊತ್ತವನ್ನು ಕ್ಲಬ್‌ಗಳು ಬಹಿರಂಗಗೊಳಿಸುವುದಿಲ್ಲ. ಎಲ್ಲವೂ ಒಳಗೊಳಗೆಯೇ ನಡೆದು ಬಿಡುತ್ತವೆ. ಒಂದು ರೀತಿಯಲ್ಲಿ ಇದು ಕ್ಲಬ್ ಮತ್ತು ನಿರ್ದಿಷ್ಟ ಆಟಗಾರನ ನಡುವಿನ `ರಹಸ್ಯ~ ಒಪ್ಪಂದವಾಗಿ ಬದಲಾಗಿದೆ. ಈ ಕುರಿತ ಖಚಿತ ಮಾಹಿತಿ ಯಾರಿಗೂ ದೊರೆಯುವುದಿಲ್ಲ. ಯೂರೋಪಿಯನ್ ಲೀಗ್‌ನಲ್ಲಿರುವಂತಹ ಪಾರದರ್ಶಕತೆ ಐ-ಲೀಗ್‌ನಲ್ಲೂ ಕಂಡುಬಂದರೆ ಒಳ್ಳೆಯದು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.