ಮಂಗಳವಾರ, ಮೇ 17, 2022
24 °C

ಫುಟ್‌ಬಾಲ್: ಏರೋನಾಟಿಕ್ಸ್- ಚಿರಾಗ್ ಪಂದ್ಯ ಇಂದು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಫುಟ್‌ಬಾಲ್: ಏರೋನಾಟಿಕ್ಸ್- ಚಿರಾಗ್ ಪಂದ್ಯ ಇಂದು

ಬೆಂಗಳೂರು: ಅಂಗಳದಲ್ಲಿ ಅಪರಿಚಿತ ಮುಖಗಳು. ಹೌದು; ಹಿಂದೂಸ್ತಾನ್ ಏರೋನಾಟಿಕ್ಸ್ ಕ್ರೀಡಾ ಕ್ಲಬ್ (ಎಚ್‌ಎಎಲ್) ತಂಡವು ಐ-ಲೀಗ್ ಪಂದ್ಯಕ್ಕಾಗಿ ಶುಕ್ರವಾರ ಇಲ್ಲಿ ಅಭ್ಯಾಸ ನಡೆಸಿದಾಗ ಹಾಗೆ ಅನಿಸಿದ್ದು ಸಹಜ.

ಯುವ ಆಟಗಾರರ ದೊಡ್ಡ ಪಡೆಯೇ ಅಲ್ಲಿ ಕಾಣಿಸಿತು. ಇದೇ ಕ್ಲಬ್‌ಗಾಗಿ ಆಡಿ ಖ್ಯಾತಿ ಪಡೆದ ಹಿಂದಿನ ಅನೇಕ ಫುಟ್‌ಬಾಲ್ ತಾರೆಗಳ ಚಿತ್ರಗಳು ಮನದಲ್ಲಿ ಮೂಡಿ ಮರೆಯಾದವು. ಹಿಂದೆ ತಂಡದಲ್ಲಿದ್ದವರ ಜೊತೆಗೆ ಈಗಿನ ಆಟಗಾರರ ಸಾಮರ್ಥ್ಯವನ್ನು ತೂಗಿ ನೋಡುವ ಪ್ರಯತ್ನವೂ ನಡೆಯಿತು. ಈ ಯುವ ಪಡೆಯಲ್ಲಿ ಅದೇನೋ ಅಪಾರ ವಿಶ್ವಾಸ ಕಾಣಿಸಿದ್ದಂತೂ ನಿಜ.

ಶನಿವಾರ ಬೆಂಗಳೂರು ಜಿಲ್ಲಾ ಫುಟ್‌ಬಾಲ್ ಸಂಸ್ಥೆ (ಬಿಡಿಎಫ್‌ಎ) ಕ್ರೀಡಾಂಗಣದಲ್ಲಿ ಚಿರಾಗ್ ಯುನೈಟೆಡ್ ಕೇರಳ  ತಂಡದ ವಿರುದ್ಧ ನಡೆಯುವ ಪಂದ್ಯದಕ್ಕಾಗಿ ತಾಲೀಮು ನಡೆಸಿದ ಏರೋನಾ ಟಿಕ್ಸ್ ಆಟಗಾರರು ಸಾಕಷ್ಟು ಹೊತ್ತು ಬೆವರು ಹರಿಸಿದರು. ಪ್ರತಿಯೊಂದು ಪಂದ್ಯದಲ್ಲಿ ಪೂರ್ಣ ಪಾಯಿಂಟ್ಸ್ ಗಿಟ್ಟಿಸುವ ಆಶಯದ ಜ್ಯೋತಿಯನ್ನು ಮನದಲ್ಲಿ ಹೊತ್ತಿಸಿಕೊಂಡ ಇವರದ್ದು ಸುದೀರ್ಘ ವ್ಯಾಯಾಮ. ತೊಂಬತ್ತು ನಿಮಿಷಗಳಲ್ಲಿ ದಣಿವಿಲ್ಲದ ಆಟವಾಡುವ ಉತ್ಸಾಹ.

`ಯುವಕರ ಪಡೆಯ ಮೇಲೆ ವಿಶ್ವಾಸವಿದೆ. ಈ ಸಾಲಿನಲ್ಲಿ ಸತ್ವ ಹೆಚ್ಚಿಸುವ ಪ್ರಯತ್ನ~ ಎಂದು ಏರೋನಾಟಿಕ್ಸ್ ಕೋಚ್ ಆರ್.ತ್ಯಾಗರಾಜನ್ ಅವರು ಅಭ್ಯಾಸದ ನಂತರ ಸುದ್ದಿಗಾರರಿಗೆ ತಿಳಿಸಿದರು. ಅವರ ಈ ಮಾತಿಗೆ ಧ್ವನಿಗೂಡಿಸಿದ ಮ್ಯಾನೇಜರ್ ಎಂ.ಮುರಳೀಧರನ್ ಅವರು `ಶೇಕಡಾ ತೊಂಬತ್ತರಷ್ಟು ಯುವಕರಿದ್ದಾರೆ. ಹಾಗೆಂದು ಸಾಮರ್ಥ್ಯದ ಬಗ್ಗೆ ಅನುಮಾನವಿಲ್ಲ. ಅನುಭವ ಮಾತ್ರ ಸ್ವಲ್ಪ ಕಡಿಮೆ. ಆದರೆ ಸತ್ವಯುತವಾದ ಆಟ ಆಡಬಲ್ಲರು. ಅದೇ ನಮ್ಮ ನಂಬಿಕೆ~ ಎಂದು ಹೇಳಿದರು.

ಚಿರಾಗ್ ಯುನೈಟೆಡ್ ಕೇರಳ ಎದುರು ಹೋರಾಡುವುದರೊಂದಿಗೆ ಐ-ಲೀಗ್‌ನಲ್ಲಿ ತನ್ನ ಕಾರ್ಯಾಚರಣೆ ಆರಂಭಿಸಲಿರುವ ಏರೋನಾಟಿಕ್ಸ್ ತಂಡದವರು ಕಳೆದ ಬಾರಿ ಅನುಭವಿಸಿದ್ದ ಕೊರತೆಗಳನ್ನು ನಿಗಿಸಿಕೊಂಡಿದ್ದಾರೆ. ಅಗತ್ಯ ಸಂದರ್ಭದಲ್ಲಿ ಪ್ರಯೋಗಿಸುವುದಕ್ಕೆ ಸಾಕಷ್ಟು ಆಯ್ಕೆಯ ಅವಕಾಶವೂ ಇದೆ. ಯುವಕರೇ ಹೆಚ್ಚಿರುವ ಕಾರಣ ಗಾಯದ ಸಮಸ್ಯೆಯೂ ಇಲ್ಲ.

ಆದರೂ ಅನುಭವಿಗಳಾದ ಕ್ಷೇವಿಯರ್ ವಿಜಯ್ ಕುಮಾರ್ ಹಾಗೂ ಜೆ. ಮುರಳಿ ಅನುಪಸ್ಥಿತಿಯ ಕೊರತೆಯನ್ನು ನೀಗಿಸಿಕೊಳ್ಳುವ ಬಗ್ಗೆ ಪ್ರಶ್ನೆ ಕಾಡುತ್ತಿರುವುದಂತೂ ಸಹಜ. `ಜೆಸಿಟಿ~ಯಿಂದ ಕರೆತಂದಿರುವ ಆಟಗಾರರು ಎಷ್ಟರ ಮಟ್ಟಿಗೆ ಹಸಿರು ಪಡೆ ಎಚ್‌ಎಎಸ್‌ಸಿಗೆ ನೆರವಾಗುತ್ತಾರೆಂದು ಕಾಯ್ದು ನೋಡಬೇಕು.

ಮರ್ಫಿ ಟೌನ್ ಹುಡುಗ ದೀಪಕ್ ಪ್ರಕಾಶ್ ಹಾಗೂ ಸತೀಶ್ ಕುಮಾರ್ ಜೂನಿಯರ್ ಅವರ ಸಹೋದರ ಜೆ. ಕಾರ್ತಿಕೇಯನ್ ಅವರು ಏರೋನಾಟಿಕ್ಸ್ ತಂಡವನ್ನು ಬಲಗೊಳಿಸಲು ಬಂದಿದ್ದಾರೆ. 

ಟಿಕೆಟ್ ಮಾರಾಟ: ಐ-ಲೀಗ್ ಪಂದ್ಯಗಳಿಗೆ 10, 20 ಹಾಗೂ 30 ರೂಪಾಯಿ ಬೆಲೆಯ ಟಿಕೆಟ್‌ಗಳನ್ನು ಮಾರಾಟ ಮಾಡಲಾಗುತ್ತಿದೆ. ಇಲ್ಲಿ ನಡೆಯುವ ಎಲ್ಲ ಲೀಗ್ ಪಂದ್ಯಗಳು ಮಧ್ಯಾಹ್ನ 3.30 ಆರಂಭವಾಗಲಿವೆ. ಅದಕ್ಕೆ ಮುನ್ನ ಟಿಕೆಟ್ ನೀಡಲಾಗುತ್ತದೆ. ಶಾಲಾ ಮಕ್ಕಳು ಸಮವಸ್ತ್ರದಲ್ಲಿ ಬಂದರೆ ಅವರಿಗೆ ಉಚಿತ ಪ್ರವೇಶ ನೀಡಲಾಗುತ್ತದೆ ಎಂದು ಬಿಡಿಎಫ್‌ಎ ಅಧಿಕಾರಿಗಳು ತಿಳಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.