ಫುಟ್‌ಬಾಲ್: ಚೆಲ್ಸಿ ಬಗಲಿಗೆ ಕಿರೀಟ

7

ಫುಟ್‌ಬಾಲ್: ಚೆಲ್ಸಿ ಬಗಲಿಗೆ ಕಿರೀಟ

Published:
Updated:
ಫುಟ್‌ಬಾಲ್: ಚೆಲ್ಸಿ ಬಗಲಿಗೆ ಕಿರೀಟ

ಮ್ಯೂನಿಕ್ (ರಾಯಿಟರ್ಸ್): ಪ್ರಬಲ ಪೈಪೋಟಿ ಕಂಡುಬಂದ ಫೈನಲ್ ಪಂದ್ಯದಲ್ಲಿ ಬಯೇನ್ ಮ್ಯೂನಿಕ್ ತಂಡವನ್ನು ಪೆನಾಲ್ಟಿ ಶೂಟೌಟ್‌ನಲ್ಲಿ ಮಣಿಸಿದ ಚೆಲ್ಸಿ ತಂಡ ಚಾಂಪಿಯನ್ಸ್ ಲೀಗ್ ಫುಟ್‌ಬಾಲ್ ಕಿರೀಟ ಮುಡಿಗೇರಿಸಿ ಕೊಂಡಿತು.ಅಲಯನ್ಸ್ ಅರೆನಾ ಕ್ರೀಡಾಂಗಣದಲ್ಲಿ ಶನಿವಾರ ರಾತ್ರಿ ನಡೆದ ಹೋರಾಟದಲ್ಲಿ ಚೆಲ್ಸಿ 4-3 ರಲ್ಲಿ ಆತಿಥೇಯ ತಂಡವನ್ನು ಮಣಿಸಿತು. ಲಂಡನ್‌ನ ಚೆಲ್ಸಿ ತಂಡ ಚಾಂಪಿಯನ್ಸ್ ಲೀಗ್‌ನಲ್ಲಿ ಟ್ರೋಫಿ ಜಯಿಸಿದ್ದು ಇದೇ ಮೊದಲು.

ನಿಗದಿತ 90 ನಿಮಿಷ ಹಾಗೂ ಹೆಚ್ಚುವರಿ ಅವಧಿಯ ಬಳಿಕ ಉಭಯ ತಂಡಗಳು 1-1 ಗೋಲಿನಿಂದ ಡ್ರಾ ಸಾಧಿಸಿದ್ದವು. ಥಾಮಸ್ ಮುಲ್ಲರ್ 83ನೇ ನಿಮಿಷದಲ್ಲಿ ಗೋಲು ಗಳಿಸಿ ಮ್ಯೂನಿಕ್‌ನ ಮುನ್ನಡೆಗೆ ಕಾರಣರಾದರು.ಆದರೆ ಚೆಲ್ಸಿ ತಂಡದ ದಿದಿಯರ್ ದ್ರೋಗ್ಬಾ 88ನೇ ನಿಮಿಷದಲ್ಲಿ ಚೆಂಡನ್ನು ಗುರಿ ಸೇರಿಸಿ ಸಮಬಲ ತಂದಿತ್ತರು.

ಹೆಚ್ಚುವರಿ ಅವಧಿಯಲ್ಲಿ ಬಯೇನ್‌ಗೆ ಗೆಲ್ಲುವ ಚಿನ್ನದಂತಹ ಅವಕಾಶ ಒದಗಿಬಂದಿತ್ತು. ದ್ರೋಗ್ಬಾ ಎದುರಾಳಿ ತಂಡದ ಫ್ರಾಂಕ್ ರಿಬೆರಿ ಅವರನ್ನು ಫೌಲ್ ಮಾಡಿದ್ದಕ್ಕೆ ರೆಫರಿ ಪೆನಾಲ್ಟಿ ವಿಧಿಸಿದರು. ಆದರೆ ಚೆಲ್ಸಿ ತಂಡದ ಅರ್ಯೆನ್ ರಾಬೆನ್ ಅವರ ಪೆನಾಲ್ಟಿ ಕಿಕ್‌ನ್ನು ಗೋಲ್‌ಕೀಪರ್ ಪೆಟ್ರ್ ಸೆಚ್ ತಡೆದರು.ಪೆನಾಲ್ಟಿ ಶೂಟೌಟ್‌ನಲ್ಲೂ ತುರುಸಿನ ಪೈಪೋಟಿ ಕಂಡುಬಂತು. ತಲಾ ನಾಲ್ಕು ಅವಕಾಶಗಳ ಬಳಿಕ ಉಭಯ ತಂಡಗಳು 3-3 ರಲ್ಲಿ ಸಮಬಲ ಸಾಧಿಸಿದ್ದವು. ಬಯೇನ್ ಪರ ಅಂತಿಮ ಅವಕಾಶ ತೆಗೆದುಕೊಂಡ ಬಾಸ್ಟಿಯನ್ ಶ್ವೆನ್‌ಸ್ಟೀಗರ್ ಒದ್ದ ಚೆಂಡು ಗೋಲು ಕಂಬಕ್ಕೆ ಬಡಿದು ಹೊರಹೋಯಿತು. ಚೆಲ್ಸಿ ಪರ ಕೊನೆಯ ಅವಕಾಶ ತೆಗೆದುಕೊಂಡ ದ್ರೋಗ್ಬಾ ಚೆಂಡನ್ನು ಯಶಸ್ವಿಯಾಗಿ ನೆಟ್‌ನೊಳಕ್ಕೆ ತಳ್ಳಿ ಗೆಲುವಿನ ರೂವಾರಿ ಎನಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry