ಶನಿವಾರ, ಮೇ 21, 2022
28 °C

ಫುಟ್‌ಬಾಲ್: ಜರ್ಮನಿ ತಂಡಕ್ಕೆ ಗೆಲುವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಲಿವ್, ಉಕ್ರೇನ್ (ಐಎಎನ್‌ಎಎಸ್): ಜರ್ಮನಿ ತಂಡದವರು ಇಲ್ಲಿ ನಡೆಯುತ್ತಿರುವ ಯೂರೊ-2012 ಫುಟ್‌ಬಾಲ್ ಚಾಂಪಿಯನ್‌ಷಿಪ್‌ನಲ್ಲಿ ಶುಭಾರಂಭ ಮಾಡಿದ್ದಾರೆ.ಭಾರತೀಯ ಕಾಲಮಾನ ಶನಿವಾರ ಮಧ್ಯ ರಾತ್ರಿ ನಡೆದ `ಬಿ~ ಗುಂಪಿನ ತಮ್ಮ ಮೊದಲ ಪಂದ್ಯದಲ್ಲಿ ಜರ್ಮನಿ ತಂಡದವರು 1-0 ಗೋಲಿನಿಂದ ಬಲಿಷ್ಠ ಪೋರ್ಚುಗಲ್ ತಂಡವನ್ನು ಪರಾಭವಗೊಳಿಸಿದರು.ಅತ್ಯುತ್ತಮ ಪ್ರದರ್ಶನ ತೋರಿದ ವಿಜಯಿ ತಂಡದ ಮರಿಯಾ ಗೋಮೆಜ್ 74ನೇ ನಿಮಿಷದಲ್ಲಿ ಹೆಡರ್ ಮೂಲಕ ಚೆಂಡನ್ನು ಗುರಿ ಸೇರಿಸಿದರು. ಇದರೊಂದಿಗೆ ಈ ಗುಂಪಿನಲ್ಲಿ ಜರ್ಮನಿ ಹಾಗೂ  ಡೆನ್ಮಾರ್ಕ್ ಜಂಟಿ ಅಗ್ರಸ್ಥಾನದಲ್ಲಿವೆ. ಬುಧವಾರ ಜರ್ಮನಿ-ಹಾಲೆಂಡ್ ಹಾಗೂ ಪೋರ್ಚುಗಲ್-ಡೆನ್ಮಾರ್ಕ್ ತಂಡಗಳು ಪೈಪೋಟಿ ನಡೆಸಲಿವೆ.ಈ ಪಂದ್ಯದಲ್ಲಿಆರಂಭದಲ್ಲಿಯೇ ಪೋರ್ಚುಗಲ್‌ಗೆ ಗೋಲು ಗಳಿಸುವ ಅವಕಾಶ ಇತ್ತು. ಆದರೆ ಹೊಂದಾಣಿಕೆಯ ಕೊರತೆಯಿಂದಾಗಿ ಅದು ಸಾಧ್ಯವಾಗಲಿಲ್ಲ.

ಈ ತಂಡದ ಕ್ರಿಸ್ಟಿಯಾನ್ ರೊನಾಲ್ಡೊ ಉತ್ತಮ ಪಾಸ್‌ಗಳನ್ನು ನೀಡಿದರು. ಅದನ್ನು ಸದುಪಯೋಗ ಪಡಿಸಿಕೊಳ್ಳಲು ಉಳಿದ ಆಟಗಾರರು ವಿಫಲರಾದರು.`ಉತ್ತಮ ತಂಡದ ಎದುರು ಮೊದಲ ಪಂದ್ಯದಲ್ಲಿಯೇ ಸಕಾರಾತ್ಮಕ ಫಲಿತಾಂಶ ಲಭಿಸಿದೆ. ನಮ್ಮ ಆಟಗಾರರು ಶಿಸ್ತುಬದ್ಧವಾಗಿ ಆಡಿದರು. ಜೊತೆಗೆ ರಕ್ಷಣೆಗೆ ಹೆಚ್ಚು ಗಮನ ನೀಡಿದ್ದರು. ಮುಂದಿನ ಪಂದ್ಯಗಳಲ್ಲೂ ಇದೇ ರೀತಿಯ ಪ್ರದರ್ಶನ ಮುಂದುವರಿಸಬೇಕು~ ಎಂದು ಜರ್ಮನಿ ತಂಡದ ಕೋಚ್ ಜೋಕಿಮ್ ಲೋವ್ ನುಡಿದರು.ಫಾರ್ವರ್ಡ್ ಆಟಗಾರ ಮೆಸುತ್ ಒಜಿಲ್‌ಗೆ `ಪಂದ್ಯ ಶ್ರೇಷ್ಠ~ ಗೌರವ ಲಭಿಸಿತು. `ಇದೊಂದು ಕಠಿಣ ಪಂದ್ಯ. ಆದರೆ ಗೆಲುವು ಲಭಿಸಿದ್ದು ಖುಷಿ ನೀಡಿದೆ. ನಾವು ಮತ್ತಷ್ಟು ಸುಧಾರಿಸಬೇಕಾಗಿದೆ~ ಎಂದು ಅವರು ಹೇಳಿದರು.

`ಆದರೆ ಗೋಮೆಜ್ ಗಳಿಸಿದ ಗೋಲು ಅದೃಷ್ಟದಿಂದ ಬಂದಿದ್ದು~ ಎಂದು ಪೋರ್ಚುಗಲ್ ತಂಡದ ಕೋಚ್ ಪಾಲೊ ಬೆಂಟೊ ನುಡಿದರು. `ಈ ಪಂದ್ಯದಲ್ಲಿ ನಮ್ಮ ಆಟಗಾರರು ಕೂಡ ಉತ್ತಮ ಪ್ರದರ್ಶನ ತೋರಿದರು. ಆದರೆ ಹಲವು ಅವಕಾಶಗಳು ತಪ್ಪಿ ಹೋದವು~ ಎಂದರು.ಡೆನ್ಮಾರ್ಕ್‌ಗೆ ಜಯ: ಶನಿವಾರ ನಡೆದ `ಬಿ~ ಗುಂಪಿನ ಮೊದಲ ಪಂದ್ಯದಲ್ಲಿ ಮೈಕಲ್ ಕ್ರೋಹ್ನ್ ಗಳಿಸಿದ ಏಕೈಕ ಗೋಲಿನ ನೆರವಿನಿಂದ    ಡೆನ್ಮಾರ್ಕ್ ತಂಡದವರು 1-0 ಗೋಲಿನಿಂದ ಹಾಲೆಂಡ್ ತಂಡವನ್ನು ಮಣಿಸಿದರು. ಪಂದ್ಯದ 24ನೇ ನಿಮಿಷದಲ್ಲಿ ಕ್ರೋಹ್ನ್ ಚೆಂಡನ್ನು ಗುರಿ ಮುಟ್ಟಿಸಿದರು.

ಇಂದಿನ ಪಂದ್ಯಗಳುಫ್ರಾನ್ಸ್-ಇಂಗ್ಲೆಂಡ್ (`ಡಿ~ ಗುಂಪು)

ಭಾರತೀಯ ಕಾಲಮಾನ; ರಾತ್ರಿ 9.30ಕ್ಕೆ

ಉಕ್ರೇನ್-ಸ್ವೀಡನ್ (`ಡಿ~ ಗುಂಪು)

ಮಧ್ಯರಾತ್ರಿ: 12.15ಕ್ಕೆ

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.