ಫುಟ್‌ಬಾಲ್ ಟೆನಿಸ್ ಎಂಬ `ತ್ರೀ ಇನ್ ಒನ್' ಆಟ

7

ಫುಟ್‌ಬಾಲ್ ಟೆನಿಸ್ ಎಂಬ `ತ್ರೀ ಇನ್ ಒನ್' ಆಟ

Published:
Updated:
ಫುಟ್‌ಬಾಲ್ ಟೆನಿಸ್ ಎಂಬ `ತ್ರೀ ಇನ್ ಒನ್' ಆಟ

ಭಾರತಕ್ಕೆ ಹೊಸ ಕ್ರೀಡೆಯಾಗಿರುವ  ಫುಟ್‌ಬಾಲ್ ಟೆನಿಸ್ ದಿನದಿಂದ ದಿನಕ್ಕೆ ಜನಪ್ರಿಯವಾಗತೊಡಗಿದೆ. ಟೆನಿಸ್ ಕೋರ್ಟ್‌ನಲ್ಲಿ ವಾಲಿಬಾಲ್ ನಿಯಮಾವಳಿ ಪ್ರಕಾರ ಫುಟ್‌ಬಾಲ್ ಆಡುವ `ತ್ರಿಇನ್‌ಒನ್' ಆಟವೇ ಫುಟ್‌ಬಾಲ್ ಟೆನಿಸ್.ಕೇವಲ ನಾಲ್ಕು ವರ್ಷಗಳ ಹಿಂದೆ ಈ ಕ್ರೀಡೆ ಭಾರತಕ್ಕೆ ಕಾಲಿಟ್ಟಿದೆ. ಭಾರತ ಫುಟ್‌ಬಾಲ್ ಟೆನಿಸ್ ಸಂಸ್ಥೆಯ ಕಾರ್ಯದರ್ಶಿ ರಾಮು ಅವತಾರ್ ಹೇಳುವಂತೆ `ಜಗತ್ತಿನ ಕ್ರೀಡಾಂಗಣಕ್ಕೆ 1922ರಲ್ಲಿ ಫುಟ್‌ಬಾಲ್ ಟೆನಿಸ್ ಅನ್ನು ಪರಿಚಯಿಸಿದ ಕೀರ್ತಿ ಸ್ವಿಟ್ಜರ್‌ಲ್ಯಾಂಡ್‌ಗೆ ಸಲ್ಲುತ್ತದೆ. ಸ್ವಿಟ್ಜರ್‌ಲ್ಯಾಂಡ್‌ನ ಶಾಲಾ ಕ್ರೀಡೆಯಲ್ಲೊಂದಾಗಿರುವ ಫುಟ್‌ಬಾಲ್‌ಟೆನಿಸ್‌ಗೆ ಅಲ್ಲಿ ಶೇ.90ರಷ್ಟು ಕ್ರೀಡಾಭಿಮಾನಿಗಳಿದ್ದಾರೆ'.`ಸ್ವಿಟ್ಜರ್‌ಲ್ಯಾಂಡ್‌ನಲ್ಲಿ ಕೇಂದ್ರ ಕಚೇರಿ ಹೊಂದಿರುವ  ಅಂತರರಾಷ್ಟ್ರೀಯ ಫುಟ್‌ಬಾಲ್ ಟೆನಿಸ್ ಫೆಡರೇಷನ್ 1987ರಲ್ಲಿ ಅಸ್ತಿತ್ವಕ್ಕೆ ಬಂದ ಬಳಿಕ ಹಂಗರಿ, ಟರ್ಕಿ, ಬೆಲ್ಜಿಯಂ, ಇಂಗ್ಲೆಂಡ್, ಹಾಂಕಾಂಗ್, ಅಮೆರಿಕ, ಭಾರತ, ಉಗಾಂಡ, ಕೆನ್ಯಾ, ಮಲೇಷ್ಯಾ, ಬಾಂಗ್ಲಾದೇಶ, ಪಾಕಿಸ್ತಾನ, ಶ್ರೀಲಂಕಾ, ನೇಪಾಳ ಒಳಗೊಂಡಂತೆ ವಿಶ್ವದ 53 ದೇಶದಲ್ಲಿ ಈ ಕ್ರೀಡೆಯು ನಿಧಾನವಾಗಿ ಜನಪ್ರಿಯತೆ ಗಳಿಸತೊಡಗಿದೆ' ಎಂದು ಹೇಳಿದರು.`ಅಖಿಲ ಭಾರತ ಫುಟ್‌ಬಾಲ್ ಟೆನಿಸ್ ಸಂಸ್ಥೆ 2008ರಲ್ಲಿ ಹುಟ್ಟು ಪಡೆಯಿತು.   ದೇಶದಲ್ಲಿ ಈ ಕ್ರೀಡೆ ಇನ್ನೂ ಪೂರ್ಣ ಪ್ರಮಾಣದಲ್ಲಿ ಪರಿಚಯವಾಗಿಲ್ಲ. ರಾಷ್ಟ್ರೀಯ ಶಾಲಾ ಕ್ರೀಡೆಯಲ್ಲಿ ಈಗಾಗಲೇ ಇದು ಸೇರ್ಪಡೆಯಾಗಿದೆ' ಎನ್ನುತ್ತಾರೆ ರಾಮು ಅವತಾರ್.`ದೆಹಲಿ, ಪಾಂಡಿಚೇರಿ, ತಮಿಳುನಾಡು, ಮಹಾರಾಷ್ಟ್ರ, ಪಂಜಾಬ್, ಮಣಿಪುರ, ಕರ್ನಾಟಕ, ಒರಿಸ್ಸಾ, ಆಂಧ್ರಪ್ರದೇಶ, ಛತ್ತೀಸಘಡ, ಜಮ್ಮು-ಕಾಶ್ಮೀರ, ಕೇರಳ, ಗೋವಾ ಮತ್ತು ಗುಜರಾತ್ ಸೇರಿದಂತೆ ದೇಶದ 23 ರಾಜ್ಯಗಳಲ್ಲಿ ಈ ಕ್ರೀಡೆ ಜನಮನ್ನಣೆ ಪಡೆಯುವ ಹಾದಿಯಲ್ಲಿದೆ' ಎಂದು ಅವರು ಮಾಹಿತಿ ನೀಡಿದರು.ಆಟದ ವಿಧಾನ ಮತ್ತು ನಿಯಮ:ಫುಟ್‌ಬಾಲ್ ಟೆನಿಸ್‌ನ ವಿಧಾನ ಮತ್ತು ನಿಯಮಾವಳಿ ಕುರಿತು ಖಚಿತವಾಗಿ ಮಾತನಾಡಬಲ್ಲ ಬಾಗಲಕೋಟೆ ಜಿಲ್ಲಾ ಫುಟ್‌ಬಾಲ್ ಟೆನಿಸ್ ಸಂಸ್ಥೆಯ ಗೌರವ ಕಾರ್ಯದರ್ಶಿ ಗುರುರಾಜ ಬಾಗೇವಾಡಿ, `ಫುಟ್‌ಬಾಲ್, ಟೆನಿಸ್ ಮತ್ತು ವಾಲಿಬಾಲ್ ಮೂರು ಕ್ರೀಡೆಯ ನಿಯಮಾವಳಿಗಳು ಇಲ್ಲಿ ಅನ್ವಯವಾಗುವುದರಿಂದ ಆಟಗಾರರಿಗೆ ಈ ಮೂರೂ ಕ್ರೀಡೆಯ ಜ್ಞಾನ ಮತ್ತು ನೈಪುಣ್ಯತೆ ಅಗತ್ಯವಾಗಿದೆ' ಎನ್ನುತ್ತಾರೆ.`ಟೆನಿಸ್, ಫುಟ್‌ಬಾಲ್ ಮತ್ತು ವಾಲಿಬಾಲ್ ಮೂರು ಕ್ರೀಡೆಯ ಆಯ್ದ ನಿಯಮಾವಳಿಗಳನ್ನು ಅಂತರರಾಷ್ಟ್ರೀಯ ಫುಟ್‌ಬಾಲ್ ಫೆಡರೇಷನ್ ಒಂದೆಡೆ ಸೇರಿಸಿ ಫುಟ್‌ಬಾಲ್‌ಟೆನಿಸ್‌ನ ನಿಯಮಾವಳಿಯನ್ನು ರೂಪಿಸಿದೆ. ಜೊತೆಗೆ ಆಟಕ್ಕೆ ಹೊಸತನ ನೀಡುವ ಉದ್ದೇಶದಿಂದ ಕೆಲವು ಹೊಸ ನಿಯಮಗಳನ್ನೂ ಸೇರ್ಪಡೆ ಮಾಡಿದೆ'.`ಟೆನಿಸ್‌ನಲ್ಲಿ ಬಳಕೆಯಾಗುವ ಕೋರ್ಟ್, ನೆಟ್, ಕಂಬಗಳನ್ನು ಈ ಕ್ರೀಡೆಯಲ್ಲಿ ಅಳವಡಿಸಿಕೊಳ್ಳಲಾಗಿದೆ. ಟೆನಿಸ್‌ನಲ್ಲಿ ಆಡುವಂತೆ ಸಿಂಗಲ್ಸ್, ಡಬಲ್ಸ್ ಮತ್ತು ಮಿಶ್ರ ಡಬಲ್ಸ್ ವಿಭಾಗದಂತೆ ಇಲ್ಲೂ ಮೂರು ವಿಭಾಗದಲ್ಲಿ ಆಡಲಾಗುತ್ತದೆ. ಜೊತೆಗೆ ಹೆಚ್ಚುವರಿಯಾಗಿ ತ್ರಿಬಲ್ಸ್, ಮಿಶ್ರ ತ್ರಿಬಲ್ಸ್ ಎಂಬುದನ್ನು ಹೊಸದಾಗಿ ಸೇರ್ಪಡೆ ಮಾಡಿಕೊಳ್ಳಲಾಗಿದೆ'.`ಫುಟ್‌ಬಾಲ್ ಆಟದಲ್ಲಿ ಬಳಕೆಯಾಗುವ ಫುಟ್‌ಬಾಲ್ (ಚೆಂಡು) ಮತ್ತು ಪಾದರಕ್ಷೆಗಳನ್ನು ಇಲ್ಲಿಯೂ ಧರಿಸಲಾಗುತ್ತದೆ. ಫುಟ್‌ಬಾಲ್ ಆಟದಲ್ಲಿರುವಂತೆ ಇಲ್ಲಿಯೂ ಬಾಲ್ ಅನ್ನು ಕಾಲು, ಎದೆ ಮತ್ತು ತಲೆಯ ಮೂಲಕ ಟಚ್ ಮಾಡಲು ಅವಕಾಶವಿದೆ. ಇನ್ನು ವಾಲಿಬಾಲ್ ಆಟದಲ್ಲಿ ಬಳಕೆಯಲ್ಲಿರುವ ಪಾಯಿಂಟ್ ಕೌಂಟಿಂಗ್ (21 ಅಥವಾ 16 ಸೆಟ್) ಪದ್ಧತಿಯನ್ನು  ಈ ಆಟದಲ್ಲಿ ಅಳವಡಿಸಿಕೊಳ್ಳಲಾಗಿದೆ' ಎಂದರು.`ಸಿಂಗಲ್ಸ್, ಡಬಲ್ಸ್, ತ್ರಿಬಲ್ಸ್ ಮತ್ತು ಮಿಶ್ರ ಡಬಲ್, ಮಿಶ್ರ ತ್ರಿಬಲ್ಸ್ ವಿಭಾಗದಲ್ಲಿ  ಫುಟ್‌ಬಾಲ್‌ಟೆನಿಸ್ ಆಡಲಾಗುತ್ತದೆ'  `8.2x12.8 ಮೀಟರ್ ಸುತ್ತಳತೆಯ ಕೋರ್ಟ್‌ನಲ್ಲಿ ಸಿಂಗಲ್ಸ್, ಡಬಲ್ಸ್ ಮತ್ತು ಮಿಶ್ರ ಡಬಲ್ಸ್ ಹಾಗೂ  8.2 x 18.0 ಮೀಟರ್ ಸುತ್ತಳತೆಯ ಕೋರ್ಟ್‌ನಲ್ಲಿ  ಮಿಶ್ರ ತ್ರಿಬಲ್ಸ್ ಆಡಲಾಗುತ್ತದೆ'.`ಕೋರ್ಟ್ ನಡುವೆ ನೆಲದಿಂದ ಒಂದು ಮೀಟರ್ ಎತ್ತರದಲ್ಲಿ ಟೆನಿಸ್ ನೆಟ್ ಕಟ್ಟಲಾಗುತ್ತದೆ. ನಾಕೌಟ್ ಪದ್ಧತಿ ಅನ್ವಯ ಆಡಲಾಗುತ್ತದೆ. ಪಂದ್ಯಕ್ಕೆ ಸಮಯವನ್ನು ಪರಿಗಣನೆಗೆ ತೆಗೆದುಕೊಳ್ಳುವ ಬದಲು ಯಾರು ಹೆಚ್ಚು ಪಾಯಿಂಟ್ ಗಳಿಸುತ್ತಾರೋ ಆ ಆಧಾರದ ಮೇಲೆ ಫಲಿತಾಂಶ ನಿರ್ಧರಿಸಲಾಗುತ್ತದೆ'`ಒಟ್ಟು 21 ಮತ್ತು 16 ಪಾಯಿಂಟ್‌ಗೆ ಸೀಮಿತವಾಗಿ ಫುಟ್‌ಬಾಲ್ ಟೆನಿಸ್ ಆಡಲಾಗುತ್ತದೆ. ಆಟದ ಮಧ್ಯಂತರಕ್ಕೆ ಆಟಗಾರರಿಗೆ ಕೋರ್ಟ್ ಅದಲು-ಬದಲಾಯಿಸಲಾಗುತ್ತದೆ'.`ಸಿಂಗಲ್ಸ್‌ನಲ್ಲಿ ಫುಟ್‌ಬಾಲ್ ಅನ್ನು ಎರಡು ಟಚ್‌ಗೆ ಎದುರಾಳಿಗೆ ಪಾಸ್ ಮಾಡಬೇಕಾಗುತ್ತದೆ. ಆದರೆ, ಡಬಲ್ಸ್ ಮತ್ತು ತ್ರಿಬಲ್ಸ್ ಆಡುವಾಗ ಮೂರು ಟಚ್‌ಗೆ ಅವಕಾಶ ಇರುತ್ತದೆ. ಅಲ್ಪ ಅಂತರದಲ್ಲಿ ವೇಗವಾಗಿ ಬರುವ ಫುಟ್‌ಬಾಲ್ ಅನ್ನು ಏಕಾಏಕಿ ಹತೋಟಿಗೆ ತಂದು ಸಹ ಆಟಗಾರರಿಗೆ ಕೊಡಬೇಕಾಗುತ್ತದೆ. ಸ್ವಲ್ಪ ಎಡವಿದರೂ ಗೆಲುವು ಸಾಧಿಸುವುದು ಕಷ್ಟವಾಗುತ್ತದೆ' ಎನ್ನುತ್ತಾರೆ ಬಾಗೇವಾಡಿ.`2009-10ರಲ್ಲಿ ಕರ್ನಾಟಕ ಫುಟ್‌ಬಾಲ್ ಟೆನಿಸ್ ಸಂಸ್ಥೆ ರಾಜ್ಯದಲ್ಲಿ ಅಸ್ವಿತ್ವಕ್ಕೆ ಬಂದಿದೆ. ರಾಜ್ಯದ ಶಾಲಾ ಕ್ರೀಡೆಯಲ್ಲಿ ಇನ್ನೂ ಈ ಆಟಕ್ಕೆ ಮಾನ್ಯತೆ ದೊರೆತಿಲ್ಲ. ಆದರೂ ಉತ್ತರ ಕರ್ನಾಟಕ ಭಾಗದ ಕೊಪ್ಪಳ, ಬಾಗಲಕೋಟೆ, ಬೆಳಗಾವಿ, ಧಾರವಾಡ, ಗದಗ, ಬಳ್ಳಾರಿ ಜಿಲ್ಲೆಯಲ್ಲಿ ಹೆಚ್ಚು ಆಟಗಾರರಿದ್ದಾರೆ' ಎಂದು ಬಾಗೇವಾಡಿ ತಿಳಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry