ಫುಟ್‌ಬಾಲ್: ಲಂಡನ್‌ನಲ್ಲಿ ಮಿಂಚಿದ ಸ್ಲಮ್ ಹುಡುಗರು

7

ಫುಟ್‌ಬಾಲ್: ಲಂಡನ್‌ನಲ್ಲಿ ಮಿಂಚಿದ ಸ್ಲಮ್ ಹುಡುಗರು

Published:
Updated:
ಫುಟ್‌ಬಾಲ್: ಲಂಡನ್‌ನಲ್ಲಿ ಮಿಂಚಿದ ಸ್ಲಮ್ ಹುಡುಗರು

ಬೆಂಗಳೂರು: ಕನಸು ನನಸಾಗಿಸಿಕೊಳ್ಳುವ ಉತ್ಸಾಹವನ್ನು ತಗ್ಗಿಸಲಿಲ್ಲ ಕಿತ್ತು ತಿನ್ನುವಂಥ ಬಡತನ. ಮನಸು ಮಾಡಿದರೆ ಸವಾಲುಗಳನ್ನೆಲ್ಲಾ ಮೀರಿ ಬೆಳೆದು ಮೋಡಗಳ ಸಾಲಿನಲ್ಲಿ ಯಶಸ್ಸಿನ ಅಕ್ಷರಗಳ ಬರೆಯಬಹುದೆಂದು ಸಾಧಿಸಿ ತೋರಿಸಿದ್ದಾರೆ ಉದ್ಯಾನ ನಗರಿಯ ಸ್ಲಮ್ ಹುಡುಗರಾದ ಮಣಿ ಮಾರನ್ ಹಾಗೂ ಸಂತೋಷ್ ಕುಮಾರ್.ಈ ಹುಡುಗರಿಬ್ಬರೂ ಅರ್ಸೆನಲ್ ಫುಟ್‌ಬಾಲ್ ಕ್ಲಬ್ ಕಳೆದ ತಿಂಗಳು ಲಂಡನ್‌ನಲ್ಲಿ ಆಯೋಜಿಸಿದ್ದ ಅಂತರರಾಷ್ಟ್ರೀಯ ಫುಟ್‌ಬಾಲ್ ಉತ್ಸವದಲ್ಲಿ ಅದ್ಭುತ ಸಾಧನೆ  ಮಾಡಿ ಬಂದಿದ್ದಾರೆ. ಅಷ್ಟು ಮಾತ್ರವಲ್ಲದೇ, ಸ್ಕಾಟ್ಲೆಂಡ್‌ನ ಸೆಲ್ಟಿಂಕ್ ಫುಟ್‌ಬಾಲ್ ಕ್ಲಬ್‌ನಲ್ಲಿ ತರಬೇತಿ ಪಡೆಯಲು ಮಣಿ ಆಯ್ಕೆ ಆಗಿದ್ದಾರೆ.ಅಂತರರಾಷ್ಟ್ರೀಯ ಫುಟ್‌ಬಾಲ್ ಉತ್ಸವದಲ್ಲಿ ಮಣಿ ಹಾಗೂ ಸಂತೋಷ್ 15 ವರ್ಷದೊಳಗಿನವರ ಭಾರತ ತಂಡ ಪ್ರತಿನಿಧಿಸಿದ್ದರು. ರಾಜ್ಯದಿಂದ ಆಯ್ಕೆ ಆಗಿದ್ದು ಇವರಿಬ್ಬರು ಮಾತ್ರ.ಆಸ್ಟಿನ್ ಟೌನ್‌ನ ಮಣಿ ಅವರಿಗೆ ತಂದೆ-ತಾಯಿ ಇಬ್ಬರೂ ಇಲ್ಲ. ಮೂರು ತಿಂಗಳ ಹಿಂದೆಯಷ್ಟೇ ತಂದೆ ಸಾವನ್ನಪ್ಪಿದ್ದರು. ಸಂತೋಷ್ ಅವರ ತಂದೆ ಕಣ್ಣನ್ ಆಟೋ ಚಾಲಕ.  `ಸಾಲ ಮಾಡಿ ಲಂಡನ್‌ಗೆ ತೆರಳಲು ಪಾಸ್‌ಪೋರ್ಟ್ ಹಾಗೂ ವೀಸಾ ಮಾಡಿಸಿದೆವು. ಹುಡುಗರ ಖರ್ಚಿಗಾಗಿ ಕೂಡ ಸಾಲ ಮಾಡಿದ್ದೇನೆ. ನಾನು 15 ವರ್ಷಗಳಿಂದ ಆಟೋ ಚಾಲಕನಾಗಿದ್ದೇನೆ. ಆದರೆ ಆ ಹಣ ನನ್ನ ಕುಟುಂಬ ನಿರ್ವಹಣೆಗೆ ಸಾಕಾಗುವುದಿಲ್ಲ~ ಎನ್ನುತ್ತಾರೆ ಕಣ್ಣನ್.`ಪ್ರಾಯೋಜಕತ್ವ ಇರುವ ಕಾರಣ ನಾನು ಸ್ಕಾಟ್ಲೆಂಡ್‌ಗೆ ತೆರಳುತ್ತಿದ್ದೇನೆ. ಆದರೆ ಅಲ್ಲಿ ಖರ್ಚಿಗಾಗಿ ನನ್ನ ಬಳಿ ಸ್ವಲ್ಪವೂ ಹಣವಿಲ್ಲ. ಇಷ್ಟೆಲ್ಲಾ ಸಾಧನೆ ಮಾಡಿದ್ದರೂ ನಮ್ಮ ನೆರವಿಗೆ ಯಾರೂ ಬರುತ್ತಿಲ್ಲ~ ಎಂದು 14ರ ಹರೆಯದ ಮಣಿ ಮಾರನ್ `ಪ್ರಜಾವಾಣಿ~ಗೆ ತಿಳಿಸಿದರು.ಸೆಲ್ಟಿಂಕ್ ಫುಟ್‌ಬಾಲ್ ಕ್ಲಬ್‌ನಲ್ಲಿ ತರಬೇತಿ ಪಡೆಯಲು ಭಾರತದಿಂದ    ಮೂರು ಮಂದಿ ಆಯ್ಕೆ ಆಗಿದ್ದಾರೆ. ಅದರಲ್ಲಿ ಕರ್ನಾಟಕದ ಮಿಡ್‌ಫೀಲ್ಡರ್ ಮಣಿ ಕೂಡ ಒಬ್ಬರು. ಅವರು ಸೆಪ್ಟೆಂಬರ್ 10ಕ್ಕೆ ಗ್ಲಾಸ್‌ಗೌಗೆ ತೆರಳಲಿದ್ದಾರೆ. ಮಣಿ ಹಾಗೂ ಸಂತೋಷ್ ವಿದ್ಯಾನಗರದ ಡಿವೈಎಸ್‌ಎಸ್ ಕ್ರೀಡಾ ಹಾಸ್ಟೆಲ್‌ನಲ್ಲಿ 9ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ. ಆಸ್ಟಿನ್ ಟೌನ್‌ನ ನಂದನ್ ಫುಟ್‌ಬಾಲ್ ಕ್ರೀಡಾಂಗಣದಲ್ಲಿ ಈ ಪ್ರತಿಭೆಗಳು ಮೊದಲ ಬಾರಿಗೆ ಬೆಳಕಿಗೆ ಬಂದರು. ಮೇರಿ ವಿಕ್ಟೋರಿಯಾ ಹಾಗೂ ನ್ಯಾನ್ಸಿ ಇವರ ಆರಂಭದ ಕೋಚ್‌ಗಳು.ಈಗ ಈ ಹುಡುಗರು ಕೋಚ್ ಕೃಷ್ಣ ಅವರ ಮಾರ್ಗದರ್ಶನದಲ್ಲಿ ಮಿಂಚುತ್ತಿದ್ದಾರೆ. `ಲಂಡನ್ ಫುಟ್‌ಬಾಲ್ ಉತ್ಸವದಲ್ಲಿ ಪಾಲ್ಗೊಂಡಿದ್ದು ನಮಗೆ ವಿಶೇಷ ಅನುಭವ ನೀಡಿದೆ. ಫುಟ್‌ಬಾಲ್‌ನಲ್ಲಿ ಉತ್ತಮ ಸಾಧನೆ ಮಾಡಲು ಸ್ಫೂರ್ತಿ ಉಂಟು ಮಾಡಿದೆ. ಇದಕ್ಕೆ ಕಾರಣ ನಮ್ಮ ಕೋಚ್ ಕೃಷ್ಣ. ಅಲ್ಲಿಗೆ ತೆರಳುವ ಮೊದಲು ನಮಗೆ ಅಂತರರಾಷ್ಟ್ರೀಯ ಮಟ್ಟದ ಕೋಚ್‌ಗಳಿಂದ ತರಬೇತಿ ಲಭಿಸಿತ್ತು~ ಎಂದು ಸ್ಟ್ರೈಕರ್ ಸಂತೋಷ್ ಹೇಳಿದರು.ಈ ಟೂರ್ನಿಯಲ್ಲಿ ಇಂಗ್ಲೆಂಡ್, ದಕ್ಷಿಣ ಆಫ್ರಿಕಾ ತಂಡಗಳು ಪಾಲ್ಗೊಂಡಿದ್ದವು. ಇದರಲ್ಲಿ ಭಾರತದ ಆಟಗಾರರಿಗೆ ಆರು ಪಂದ್ಯ ಆಡುವ ಅವಕಾಶ ಲಭಿಸಿತ್ತು. ಈ ಆರೂ ಪಂದ್ಯದಲ್ಲಿ ಗೆದ್ದು ಮಿಂಚಿದ್ದಾರೆ.

 ಅಷ್ಟು ಮಾತ್ರವಲ್ಲದೇ, ಅರ್ಸೆನಲ್ ಫುಟ್‌ಬಾಲ್ ಕ್ಲಬ್ ತಂಡದ ಪಂದ್ಯ ನೋಡುವ ಸೌಭಾಗ್ಯ ಕೂಡ ಲಭಿಸಿತ್ತು.

14ರ ಹರೆಯದ ಸಂತೋಷ್ ಇದೇ ಸೆ.10ರಂದು ಜಮ್ಮು ಕಾಶ್ಮೀರದಲ್ಲಿ ನಡೆಯಲಿರುವ ರಾಷ್ಟ್ರೀಯ ಮಟ್ಟದ ಫುಟ್‌ಬಾಲ್ ಟೂರ್ನಿಯಲ್ಲಿ ಕೂಡ ಪಾಲ್ಗೊಳ್ಳುತ್ತಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry