ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಫುಟ್ ಬಾಲ್ ಜ್ವರದ ಕಾವು

Last Updated 3 ಜುಲೈ 2014, 19:30 IST
ಅಕ್ಷರ ಗಾತ್ರ

ವಿಶ್ವ ಕಪ್ ಫುಟ್‌ಬಾಲ್ ಜನರ ಜೀವನ, ನಿತ್ಯದ ದಿನಚರಿ ಮೇಲೆ ಪರಿಣಾಮ ಬೀರಿದೆ. ತಿಂಗಳಿಡೀ ನಡೆಯುವ ಫುಟ್‌ಬಾಲ್‌ ಹಬ್ಬದ ಪ್ರತಿಕ್ಷಣವನ್ನು ಆಸ್ವಾದಿಸುವ ಸಂಕಲ್ಪ ಮಾಡಿದವರು ನಮ್ಮ ನಡುವೆ ಕಾಣಸಿಗುವಂತೆ, ಸಮಯ ಸಿಕ್ಕಾಗ ಪಂದ್ಯ ನೋಡುವ ಹವ್ಯಾಸ ಇರಿಸಿಕೊಂಡವರೂ ಇದ್ದಾರೆ. ಇಟಲಿ ತಂಡದ ಡಿಫೆಂಡರ್ ಚಿಲಿನಿ ಭುಜವನ್ನು ಉರುಗ್ವೆ ತಂಡದ ಆಟಗಾರ ಲೂಯಿಸ್‌ ಸ್ವಾರೆಜ್‌ ಕಚ್ಚಿದ್ದು ಈ ಬಾರಿಯ ದೊಡ್ಡ ವಿವಾದ.

ಈ ಕುರಿತು ಫುಟ್‌ಬಾಲ್‌ ಪ್ರೇಮಿಗಳು ತಮ್ಮ ಅಭಿಪ್ರಾಯವನ್ನು ಇಲ್ಲಿ ದಾಖಲಿಸಿದ್ದಾರೆ. ಹಾಗೆಯೇ, ಅರ್ಜೆಂಟೀನಾ ತಂಡದ ಮೆಸ್ಸಿ ಈ ಬಾರಿಯ ಸ್ಟಾರ್‌ ಆಟಗಾರ ಎಂದು ಹೇಳಿಕೊಂಡಿದ್ದಾರೆ. ಫುಟ್‌ಬಾಲ್‌ ಉತ್ಸವ ತಮ್ಮ ಜೀವನಕ್ರಮದಲ್ಲಿ ಯಾವ ಬದಲಾವಣೆ ತಂದಿದೆ ಹಾಗೂ  ತಮ್ಮಿಷ್ಟದ ತಂಡ, ಆಟಗಾರರು ಯಾರು, ತಾವು ಕಂಡ ಕಿರಿಕಿರಿಗಳು ಯಾವುವು ಮೊದಲಾದ ವಿಷಯಗಳ ಕುರಿತು ಕೆಲವು ಫುಟ್‌ಬಾಲ್‌ ಪ್ರೇಮಿಗಳು ಮಾತನಾಡಿದ್ದಾರೆ.

ಸ್ವಾರೆಜ್‌ಗೆ ನೀಡಿದ ಶಿಕ್ಷೆಯ ಪ್ರಮಾಣ ಜಾಸ್ತಿ ಆಯ್ತು
‘ನಾನು ಅಂಚೆ ಕಚೇರಿ ಉದ್ಯೋಗಿ. ಅದಕ್ಕಿಂತ ಹೆಚ್ಚಾಗಿ ಫುಟ್‌ಬಾಲ್‌ ಪ್ರೇಮಿ ಮತ್ತು ಫುಟ್‌ಬಾಲ್‌ ಆಟಗಾರ. ನಾಲ್ಕು ವರ್ಷಕ್ಕೊಮ್ಮೆ ಬರುವ ಫುಟ್‌ಬಾಲ್‌

ಋತು ನನ್ನ ಪಾಲಿಗೆ ಹಬ್ಬವಿದ್ದಂತೆ. ಈವರೆಗೆ ನಡೆದಿರುವ ಎಲ್ಲ ಪಂದ್ಯಗಳನ್ನು ತಪ್ಪದೇ ನೋಡಿದ್ದೇನೆ. ಕೆಲವು ಪಂದ್ಯಗಳು ರಾತ್ರಿ 9.30ಕ್ಕೆ ಶುರುವಾಗುತ್ತವೆ. ಉಳಿದಂತೆ ಬಹುತೇಕ ಪಂದ್ಯಗಳು ತಡರಾತ್ರಿಯಲ್ಲಿ ಆರಂಭಗೊಳ್ಳುತ್ತವೆ. ಮಧ್ಯರಾತ್ರಿ ದಾಟಿದ ನಂತರ ಆರಂಭಗೊಳ್ಳುವ ಪಂದ್ಯಗಳನ್ನು ನೋಡಲು ಅಲಾರ್ಮ್ ಇಟ್ಟು ಮಲಗುತ್ತೇನೆ.

ಪಂದ್ಯ ಆರಂಭಗೊಂಡಾಗ ಎದ್ದು ಪಂದ್ಯದ ರೋಚಕತೆಯನ್ನು ಕನಸಿನಂತೆ ಸವಿದು ಮತ್ತೆ ಮಲಗುತ್ತೇನೆ. ಈ ದಿನಚರಿ ಕೆಲವೊಮ್ಮೆ ನನ್ನ ಆರೋಗ್ಯದ ಮೇಲೂ ಪರಿಣಾಮ ಬೀರಿದೆ. ಹಾಗಾಗಿ ಕೆಲವು ಪಂದ್ಯಗಳನ್ನು ಮಿಸ್‌ ಮಾಡಿಕೊಳ್ಳಬೇಕಾಯಿತು. ಕ್ರಿಸ್ಟಿಯಾನೋ ರೊನಾಲ್ಡೊ ನನ್ನ ಅಚ್ಚುಮೆಚ್ಚಿನ ಆಟಗಾರ. ಪೋರ್ಚುಗಲ್‌ ನೆಚ್ಚಿನ ತಂಡ. ಈ ಬಾರಿಯ ಪಂದ್ಯಾವಳಿಯಿಂದ ಪೋರ್ಚುಗಲ್‌ ಹೊರಬಿದ್ದದ್ದು ತುಂಬ ನೋವುಂಟು ಮಾಡಿತು. ಈ ಪಂದ್ಯಾವಳಿಯಲ್ಲಿ ಸಾಕಷ್ಟು ಕಾಂಟ್ರವರ್ಸಿಗಳು ಆದವು. ಅವುಗಳಲ್ಲಿ ನನ್ನನ್ನು ಹೆಚ್ಚು ಕಾಡಿದ್ದು, ಸ್ವಾರೆಜ್‌ ಅವರು ಚಿಲಿನಿಯ ಭುಜ ಕಚ್ಚಿದ್ದು. ಸ್ವಾರೆಜ್‌ ಮತ್ತೊಬ್ಬ ಆಟಗಾರನಿಗೆ ಕಚ್ಚಿದ್ದು ತಪ್ಪು. ಆದರೆ, ಆತನಿಗೆ ನೀಡಿದ ಶಿಕ್ಷೆಯ ಪ್ರಮಾಣ ಜಾಸ್ತಿ ಆಯ್ತು. ವಿಶ್ವಕಪ್‌ ಫುಟ್‌ಬಾಲ್‌ ಪಂದ್ಯಾವಳಿಯಲ್ಲಿ ಉರುಗ್ವೆ ಮತ್ತು ಇಟಲಿ ತಂಡದ ಪಂದ್ಯಗಳು ನನ್ನನ್ನು ಹೆಚ್ಚು ಕಾಡಿದವು. ಅಂದಹಾಗೆ, ಈ ಬಾರಿಯ ವಿಶ್ವಕಪ್‌ ಅನ್ನು ಫ್ರಾನ್ಸ್‌ ತಂಡ ಗೆಲ್ಲಬೇಕು ಎಂಬುದು ನನ್ನಾಸೆ.

ಫುಟ್‌ಬಾಲ್‌ ಆಟ ನಮ್ಮ ದೇಶದಲ್ಲೂ ಮುಂಚೂಣಿಗೆ ಬರಬೇಕೆಂಬುದು ನನ್ನ ಕನಸು. ಅದಕ್ಕಾಗಿ ನಾನು ಮತ್ತು ನನ್ನ ಗೆಳೆಯರು ಸೇರಿಕೊಂಡು ಸ್ಲಂ ಹುಡುಗರಿಗೆ ಫುಟ್‌ಬಾಲ್ ಆಟ ಹೇಳಿಕೊಡುತ್ತಿದ್ದೇವೆ. ತಿಂಗಳ ಸಂಬಳದಲ್ಲಿ ಇಂತಿಷ್ಟು ಎಂದು ಎತ್ತಿಟ್ಟು, ಅವರಿಗೆ ಟಿ–ಶರ್ಟ್‌, ಷೂ, ಫುಟ್‌ಬಾಲ್‌, ಊಟ, ತಿಂಡಿ ಒದಗಿಸಿಕೊಡುತ್ತಿದ್ದೇವೆ. ಬೇಸಿಗೆಯಲ್ಲಿ ಎರಡು ತಿಂಗಳು ಮತ್ತು ದಸರಾ ರಜೆ ಸಂದರ್ಭದಲ್ಲಿ ಒಂದು ತಿಂಗಳು ಫುಟ್‌ಬಾಲ್‌ ಕ್ಯಾಂಪ್‌ ಆಯೋಜಿಸಿ ಮಕ್ಕಳಲ್ಲಿ ಫುಟ್‌ಬಾಲ್‌ ಪ್ರೇಮ ಮೂಡಿಸುತ್ತಿದ್ದೇವೆ. ಈ ಬೇಸಿಗೆಯಲ್ಲಿ ನಡೆಸಿದ ಕ್ಯಾಂಪ್‌ನಲ್ಲಿ 130 ಹುಡುಗರು ಪಾಲ್ಗೊಂಡಿದ್ದರು’ ಎನ್ನುತ್ತಾರೆ ಸಂತೋಷ್‌.


ಡಿಆರ್‌ಡಿಒ ಅಧೀನದಲ್ಲಿರುವ ಏರೋನಾಟಿಕಲ್‌ ಡೆವಲಪ್‌ಮೆಂಟ್‌ ಎಸ್ಟಾಬ್ಲಿಷ್‌ಮೆಂಟ್‌ನಲ್ಲಿ (ಎಡಿಎ) ಟೆಕ್ನೀಷಿಯನ್‌ ಆಗಿ ಕೆಲಸ ನಿರ್ವಹಿಸುತ್ತಿರುವ ಇಳಂಗೋವನ್‌ ಫುಟ್‌ಬಾಲ್‌ ಆಟಗಾರರೂ ಹೌದು. ಈಚೆಗೆ ನಡೆದ ಸೂಪರ್‌ ಡಿವಿಷನ್‌ ಲೀಗ್‌ನಲ್ಲಿ ಇವರ ತಂಡ ಚಾಂಪಿಯನ್‌ ಪಟ್ಟವನ್ನು ಗಿಟ್ಟಿಸಿಕೊಂಡಿತು. ಕಳೆದ ಕೆಲವು ವರ್ಷಗಳಿಂದ ಅವರು ನಾಯಕರಾಗಿ ತಂಡವನ್ನು ಮುನ್ನಡೆಸುತ್ತಿದ್ದಾರೆ.

‘ನಾಲ್ಕು ವರ್ಷಕ್ಕೊಮ್ಮೆ ಬರುವ ವಿಶ್ವಕಪ್‌ ಫುಟ್‌ಬಾಲ್‌ ಪಂದ್ಯಾವಳಿ ನನಗಂತೂ ಭರಪೂರ ಮಾಹಿತಿ, ಮನರಂಜನೆಯನ್ನು ಹೊತ್ತು ತರುತ್ತದೆ. ನಾನೂ ಒಬ್ಬ ಫುಟ್‌ಬಾಲ್‌ ಆಟಗಾರ. ನಾವು ಆಡುವ ಆಟಕ್ಕೂ, ಅಂತರರಾಷ್ಟ್ರೀಯ ಆಟಗಾರರು ಆಡುವ ಆಟಕ್ಕೂ ತುಂಬ ವ್ಯತ್ಯಾಸವಿದೆ. ಇಲ್ಲಿನವರು ಫುಟ್‌ಬಾಲ್‌ ಅಂಗಳದೊಳಗೆ ನೀಡುವ ಪಾಸ್‌ಗಳು, ಶೂಟಿಂಗ್‌ಗಳು, ಕ್ರಾಸಿಂಗ್‌ ಇವೆಲ್ಲವುಗಳಲ್ಲಿ ಸಾಕಷ್ಟು ತಪ್ಪು ಎಸಗುತ್ತಾರೆ. ಆದರೆ, ಅವರು ಹಾಗಲ್ಲ. ಎದುರಾಳಿ ತಂಡದವರು ಎಷ್ಟೇ ಪ್ರಬಲರಾಗಿದ್ದರೂ ಅವರು ನೀಡುವ ಕೌಂಟರ್‌ ಅದ್ಭುತ. ಅವರು ಆಟದಲ್ಲಿ ತಪ್ಪು ಮಾಡುವುದು ಕಡಿಮೆ. ಇಂತಹ ಪಂದ್ಯಗಳನ್ನು ನೋಡುವುದರಿಂದ ಅವರ ಕೌಶಲಗಳನ್ನು ನಾವು ಕಲಿತು, ಆಟದಲ್ಲಿ ಅಳವಡಿಸಿಕೊಳ್ಳಬಹುದು.

ಮಧ್ಯರಾತ್ರಿ ನಡೆಯುವ ಪಂದ್ಯಗಳನ್ನು ಮಿಸ್‌ ಮಾಡದೇ ನೋಡುತ್ತೇನೆ. ರಾತ್ರಿ ಪಂದ್ಯಗಳನ್ನು ನೋಡಿದರೂ ದಿನವೂ ಬೆಳಿಗ್ಗೆ 6ಕ್ಕೆ ಏಳುತ್ತೇನೆ. ಎದ್ದು ಫುಟ್‌ಬಾಲ್‌ ಪ್ರಾಕ್ಟೀಸ್‌ ಮಾಡುತ್ತೇನೆ. ಫುಟ್‌ಬಾಲ್‌ ಆಡಿ, ನಂತರ ತಿಂಡಿ ತಿಂದು 8.30ಕ್ಕೆಲ್ಲಾ ಆಫೀಸ್‌ಗೆ ತೆರಳುತ್ತೇನೆ. ನನಗೀಗ 38 ವರ್ಷ ವಯಸ್ಸು. ನನ್ನದು ಕ್ರೀಡಾಪಟುವಿನ ದೇಹ. ಬದಲಾದ ದಿನಚರಿಯಿಂದ ಆರೋಗ್ಯದಲ್ಲಿ ಏರುಪೇರಾಗಿಲ್ಲ. ನಾಲ್ಕು ವರ್ಷಕ್ಕೊಮ್ಮೆ ಬರುವ ‘ಹಬ್ಬ’ದ ರೋಚಕ ಪಂದ್ಯಗಳನ್ನು ಸಣ್ಣಪುಟ್ಟ ನೆಪವೊಡ್ಡಿ ಮಿಸ್‌್ ಮಾಡಿಕೊಳ್ಳಲು ನಾನು ಬಯಸುವುದಿಲ್ಲ. ನೆದರ್‌ಲ್ಯಾಂಡ್‌ನ ರೋಬಲ್‌ ಮತ್ತು ಅರ್ಜೆಂಟೀನಾದ ಮೆಸ್ಸಿ ನನ್ನಿಷ್ಟದ ಆಟಗಾರರು. ಸ್ಪೇನ್‌ ಟೂರ್ನಿಯಿಂದ ಹೊರಬಿದ್ದದ್ದು ಅಘಾತ ನೀಡಿತು. 

ಎದುರಾಳಿ ತಂಡದ ಆಟಗಾರನ ಭುಜವನ್ನು ಸ್ವಾರೆಜ್‌ ಕಚ್ಚಿದ್ದು ಈ ಬಾರಿಯ ಬಿಸಿಬಿಸಿ ಸುದ್ದಿ. ಫುಟ್‌ಬಾಲ್‌ ಆಟಗಾರರು ಈ ರೀತಿ ನಡೆದುಕೊಳ್ಳುವುದು ಸರಿಯಲ್ಲ. ಸ್ವಾರೆಜ್‌ ಈ ರೀತಿ ಮಾಡಿದ್ದರಿಂದ ಆತ ಆಟವಾಡುವ ತಂಡಕ್ಕೆ, ಕ್ಲಬ್‌ಗೆ ಮತ್ತು ದೇಶಕ್ಕೆ ತುಂಬ ನಷ್ಟವಾಯ್ತು. ಯಾವುದೇ ಫುಟ್‌ಬಾಲ್‌ ಆಟಗಾರನಾಗಲೀ ಮೊದಲಿಗೆ ಶಿಸ್ತು ಮೈಗೂಡಿಸಿಕೊಳ್ಳಬೇಕು. ಕೋಚ್‌ಗೆ ವಿಧೇಯರಾಗಿ ನಡೆದುಕೊಳ್ಳುವುದನ್ನು ಕಲಿಯಬೇಕು. ನಿತ್ಯ ತರಬೇತಿ ಪಡೆದುಕೊಳ್ಳುವ ಮೂಲಕ ಆಟದಲ್ಲಿ ಪಳಗಬೇಕು ಎಂಬುದು ನನ್ನ ಅಭಿಪ್ರಾಯ’ ಎನ್ನುತ್ತಾರೆ ಇಳಂಗೋವನ್‌.

ತಡರಾತ್ರಿ ಪಂದ್ಯಗಳಿಗೆ ಕೊಕ್‌
‘ನಾನು ಈವರೆಗೆ ನೆದರ್‌ಲ್ಯಾಂಡ್‌ನಲ್ಲಿ ಕೆಲಸ ನಿರ್ವಹಿಸುತ್ತಿದ್ದೆ. ಭಾರತೀಯ ಕಾಲಮಾನಕ್ಕೂ ಅಲ್ಲಿನ ಕಾಲಮಾನಕ್ಕೂ ಮೂರೂವರೆ ಗಂಟೆ ವ್ಯತ್ಯಾಸವಿತ್ತು.

ಹಾಗಾಗಿ, ಅಲ್ಲಿದ್ದಾಗ ಎಲ್ಲ ಮ್ಯಾಚ್‌ಗಳನ್ನು ತಪ್ಪದೇ ನೋಡುತ್ತಿದ್ದೆ. ಬೆಂಗಳೂರಿಗೆ ಬಂದಮೇಲೆ ತಡರಾತ್ರಿ ನಡೆವ ಪಂದ್ಯಗಳನ್ನು ನೋಡಲಾಗುತ್ತಿಲ್ಲ. ನನಗೆ ಫುಟ್‌ಬಾಲ್‌ ಪಂದ್ಯಗಳ ರೂಲ್ಸ್‌ ಗೊತ್ತಿಲ್ಲ. ಆಟವನ್ನು ಎಂಜಾಯ್‌ ಮಾಡುವುದಷ್ಟೇ ಗೊತ್ತು. ಬ್ರೆಜಿಲ್‌ ತಂಡದ ನೆಯ್ಮಾರ್‌, ನೆದರ್‌ಲ್ಯಾಂಡ್‌ನ ವಾನ್‌ ಪರ್ಸಿ ನನ್ನ ಅಚ್ಚುಮೆಚ್ಚಿನ ಆಟಗಾರರು. ಸ್ವಾರೆಜ್‌ ಸಹ ಆಟಗಾರನನ್ನು ಕಚ್ಚಿದ್ದೇ ಈ ಬಾರಿಯ ದೊಡ್ಡ ಕಾಂಟ್ರವರ್ಸಿ. ನೆದರ್‌ಲ್ಯಾಂಡ್‌ ತಂಡದ ಆಕ್ರಮಣಕಾರಿ ಆಟ ನನಗೆ ಇಷ್ಟವಾಯ್ತು’ ಎನ್ನುತ್ತಾರೆ ಎಲ್‌ ಅಂಡ್‌ ಟಿ ವಾಲ್ಡೆಲ್‌ ಕಂಪೆನಿಯಲ್ಲಿ ಸೀನಿಯರ್‌ ಎಂಜಿನಿಯರ್‌ ಆಗಿರುವ ಸಂಜಯ್‌.

ನಿರೂಪಕಿ, ನಟಿ ಅಪರ್ಣಾ ಅವರಿಗೆ ಜಗತ್ತಿನಲ್ಲಿ ಫುಟ್‌ಬಾಲ್‌ ಆಟ ನಡೆಯುತ್ತಿದೆ, ಆ ಆಟದ ಬಗ್ಗೆ ಜನರಿಗೆ ವಿಪರೀತ ಕ್ರೇಜ್‌ ಇದೆ ಎನ್ನುವುದು ಮಾತ್ರ ಗೊತ್ತಿದೆಯಂತೆ. ‘ನಾನು ಫುಟ್‌ಬಾಲ್‌ ಪಂದ್ಯಗಳನ್ನು ನೋಡುವುದಿಲ್ಲ, ಸ್ಸಾರಿ...’ ಎಂದಷ್ಟೇ ಹೇಳಿ ನಕ್ಕರು. ನಂತರ ಫೋನ್‌ ಇಟ್ಟರು. ಇತ್ತ ಚೆನ್ನೈನಲ್ಲಿ ಶೂಟಿಂಗ್‌ನಲ್ಲಿ ಬ್ಯುಸಿಯಾಗಿರುವ ಕನ್ನಡತಿ ನಿಕ್ಕಿ ಗರ್ಲಾನಿ ಮಾತಿಗೆ ಸಿಕ್ಕರು.

‘ಫುಟ್‌ಬಾಲ್‌ ಪಂದ್ಯಗಳನ್ನು ನೋಡುವುದು ನನಗಿಷ್ಟ. ಆದರೆ, ಮಧ್ಯರಾತ್ರಿ ನಡೆಯುವ ಪಂದ್ಯಗಳನ್ನು ನೋಡುವುದಕ್ಕೆ ಆಗುವುದಿಲ್ಲ. ಬೆಳಿಗ್ಗೆ ಶೂಟಿಂಗ್‌ನಲ್ಲಿ ತೊಡಗಿಸಿಕೊಂಡು ರಾತ್ರಿ ನಿದ್ದೆಗೆಡುವುದು ತುಂಬ ಕಷ್ಟದ ಸಂಗತಿ. ಬಿಡುವು ಸಿಕ್ಕರೆ ರಾತ್ರಿ 9.30ಕ್ಕೆ ಆರಂಭಗೊಳ್ಳುವ ಪಂದ್ಯಗಳನ್ನು ನೋಡುತ್ತೇನೆ. ಕೆಲ ದಿನಗಳ ಹಿಂದಷ್ಟೇ ಫ್ರೆಂಡ್ಸ್‌ ಮನೆಯಲ್ಲಿ ಕುಳಿತು ಎರಡು ಮೂರು ಪಂದ್ಯಗಳನ್ನು ನೋಡಿದೆ. ಈಗ ತಮಿಳು ಚಿತ್ರವೊಂದರಲ್ಲಿ ನಟಿಸುತ್ತಿದ್ದೇನೆ. 40 ದಿನಗಳ

ಶೂಟಿಂಗ್‌ ಇರುವುದರಿಂದ ಆಗಸ್ಟ್‌ 16ರವರೆಗೆ ಚೆನ್ನೈನಲ್ಲೇ ಇರಬೇಕಾಗುತ್ತದೆ. ಈ ನಡುವೆ ಸಮಯ ಸಿಕ್ಕರೆ ಮತ್ತಷ್ಟು ಪಂದ್ಯಗಳನ್ನು ನೋಡುತ್ತೇನೆ’ ಎನ್ನುವ  ನಿಕ್ಕಿಗೆ ರೊನಾಲ್ಡೊ ಮತ್ತು ಮೆಸ್ಸಿ ಮೆಚ್ಚಿನ ಆಟಗಾರರಂತೆ. 

ಹುಚ್ಚು ಇರಬೇಕು
ಫುಟ್‌ಬಾಲ್‌ ಬಹಳ ಜನಪ್ರಿಯ ಕ್ರೀಡೆಯಾಗಿರುವು­ದರಿಂದ ಜಾಗತಿಕ ಮಟ್ಟದಲ್ಲಿ ಗಂಭೀರ ಸ್ಪರ್ಧೆ ಇದೆ. ಅರ್ಹತೆ ಪಡೆಯುವುದು ಸುಲಭದ ವಿಷಯವಲ್ಲ. ಆದರೆ, ಅದು ಕಷ್ಟಕರವೂ ಅಲ್ಲ. ಫುಟ್‌ಬಾಲ್‌ ಬಗ್ಗೆ ಆಸಕ್ತಿ ಇರುವ ಮಕ್ಕಳಿಗೆ ಪ್ರೋತ್ಸಾಹ ನೀಡಿ ಅವಶ್ಯಕ ನೆರವು, ತರಬೇತಿ ನೀಡಿದರೆ ಒಳ್ಳೆಯ ತಂಡವನ್ನು ಕಟ್ಟಬಹುದು.

ನೈಜೀರಿಯಾದಂತಹ ಬಡ ಹಾಗೂ ಚಿಕ್ಕ ರಾಷ್ಟ್ರ ಫುಟ್‌ಬಾಲ್‌ನಲ್ಲಿ  ಅರ್ಹತೆ ಪಡೆಯುವುದಾದರೆ ನಮ್ಮಿಂದೇಕೆ ಸಾಧ್ಯವಿಲ್ಲ?
ನಮ್ಮ ಮನೆಗ

ಳಲ್ಲಿ ದೇವರ ಭಾವಚಿತ್ರಗಳಿದ್ದರೆ ಬ್ರೆಜಿಲ್‌ನಂತಹ ರಾಷ್ಟ್ರದಲ್ಲಿ ಪ್ರತಿಯೊಬ್ಬರ ಮನೆಯಲ್ಲಿ ಫುಟ್‌ಬಾಲ್‌ ಆಟಗಾರರ ಭಾವಚಿತ್ರ­ಗಳು ಇರುತ್ತವೆ. ಪ್ರಮುಖ ವೃತ್ತಗಳಲ್ಲಿ ಅವರ ಪ್ರತಿಮೆಗಳನ್ನು ನಿಲ್ಲಿಸಲಾಗಿದೆ. ಆ ದೇಶದಲ್ಲಿ ಫುಟ್‌ಬಾಲ್‌ ಬಗ್ಗೆ ಅಷ್ಟೊಂದು ಹುಚ್ಚು ಇದೆ. ಯಾವುದೇ ಕ್ಷೇತ್ರದಲ್ಲಿ ಮೇಲೆ ಬರಬೇಕಾದರೆ ಮನು

ಷ್ಯನಿಗೆ ಒಂದು ಹುಚ್ಚು ಇರಬೇಕು. ಆ ಹುಚ್ಚು ಇನ್ನೂ ಭಾರತೀಯರಲ್ಲಿ ಇಲ್ಲ.
ನನಗೆ ಫುಟ್‌ಬಾಲ್‌ ಅಂದರೆ ಬಹಳ ಇಷ್ಟ. ಭಾರತೀಯ ಕಾಲಮಾನದ ಪ್ರಕಾರ ತಡರಾತ್ರಿ ಪಂದ್ಯಗಳು ನಡೆಯುತ್ತಿದ್ದರೂ ಸಾಧ್ಯವಾದಷ್ಟೂ ಪಂದ್ಯಗಳನ್ನು ನೋಡುತ್ತೇನೆ. ಬ್ರೆಜಿಲ್‌ ನನ್ನ ನೆಚ್ಚಿನ ತಂಡವಾಗಿದ್ದು, ಆ ತಂಡದ ಎಲ್ಲ ಪಂದ್ಯಗಳನ್ನು ತಪ್ಪದೇ ನೋಡುತ್ತೇನೆ. ಈ ಸಲ ಬ್ರೆಜಿಲ್‌ ಪ್ರಶಸ್ತಿ ಗೆಲ್ಲುತ್ತದೆ ಎಂಬುದು ನನ್ನ ಅನಿಸಿಕೆ.


–ಬಸವ ಕುಮಾರ ವಗದಾಳೆ, ಎಂ.ಬಿ.ಎ. ಅಂತಿಮ ವರ್ಷದ ವಿದ್ಯಾರ್ಥಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT