ಸೋಮವಾರ, ಮಾರ್ಚ್ 8, 2021
19 °C
ಆಸ್ಟ್ರೇಲಿಯಾ ಟೆನಿಸ್‌: ಮಹಿಳಾ ವಿಭಾಗದ ಫೈನಲ್‌ನಲ್ಲಿ ಸೆರೆನಾ–ಕೆರ್ಬರ್‌ ಮುಖಾಮುಖಿ

ಫೆಡರರ್‌ ಎದುರು ಮೆರೆದ ಜೊಕೊವಿಚ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಫೆಡರರ್‌ ಎದುರು ಮೆರೆದ ಜೊಕೊವಿಚ್‌

ಮೆಲ್ಬರ್ನ್‌ (ರಾಯಿಟರ್ಸ್‌/ ಎಎಫ್‌ಪಿ/ ಪಿಟಿಐ): ವಿಶ್ವದ ಘಟಾನುಘಟಿಗಳ ಹೋರಾಟಕ್ಕೆ ಸಾಕ್ಷಿಯಾಗಿದ್ದ ರಾಡ್‌ ಲೇವರ್‌ ಅರೇನಾದಲ್ಲಿ ಗುರುವಾರ ಸರ್ಬಿಯಾದ ನೊವಾಕ್‌ ಜೊಕೊವಿಚ್‌ ಸಾಮ್ರಾಟನಂತೆ ಮೆರೆದರು.



ತಮ್ಮ ಬದ್ಧ ಎದುರಾಳಿ ಸ್ವಿಟ್ಜರ್‌ಲೆಂಡ್‌ನ ರೋಜರ್‌ ಫೆಡರರ್‌ ಅವರ ಸವಾಲನ್ನು ದಿಟ್ಟತನದಿಂದ ಮೆಟ್ಟಿನಿಂತ ಅವರು ಈ ಋತುವಿನ ಮೊದಲ ಗ್ರ್ಯಾಂಡ್‌ಸ್ಲಾಮ್‌ ಆಸ್ಟ್ರೇಲಿಯಾ ಓಪನ್‌ ಟೆನಿಸ್‌ ಟೂರ್ನಿಯಲ್ಲಿ ಫೈನಲ್‌ಗೆ ಲಗ್ಗೆ ಇಟ್ಟರು.



ನಾಲ್ಕರ ಘಟ್ಟದ ಹೋರಾಟದಲ್ಲಿ ವಿಶ್ವದ ಅಗ್ರಗಣ್ಯ ಆಟಗಾರ ನೊವಾಕ್‌ 6–1, 6–2, 3–6, 6–3ರಲ್ಲಿ ಮೂರನೇ ರ್‍‍ಯಾಂಕ್‌ನ ಫೆಡರರ್‌ಗೆ ಮತ್ತೊಮ್ಮೆ ಸೋಲಿನ ರುಚಿ ತೋರಿಸಿದರು.



ಇದರೊಂದಿಗೆ ಟೂರ್ನಿಯಲ್ಲಿ ಆರನೇ ಬಾರಿ ಪ್ರಶಸ್ತಿ ಸುತ್ತು ಪ್ರವೇಶಿಸಿದ ಶ್ರೇಯ ತಮ್ಮದಾಗಿಸಿಕೊಂಡರು. ಜತೆಗೆ ಸ್ವಿಸ್‌ ಆಟಗಾರನ ಎದುರಿನ ಜಯದ ದಾಖಲೆ ಯನ್ನು 23–22ಕ್ಕೆ ಹೆಚ್ಚಿಸಿಕೊಂಡರು.



ಉಭಯ ಆಟಗಾರರು ಅಂಗಳಕ್ಕೆ ಬಂದಾಗ ಮೈದಾನದಲ್ಲಿ ನೆರೆದಿದ್ದ ಕ್ರೀಡಾಭಿಮಾನಿಗಳು ಫೆಡರರ್. ಫೆಡರರ್‌ ಎಂದು ಕೂಗಿ ಸ್ವಿಸ್‌ ಆಟಗಾರನಿಗೆ ಬೆಂಬಲ ಸೂಚಿಸಿದರು. ಹಿಂದಿನ ಪಂದ್ಯಗಳಲ್ಲಿ  ಜೊಕೊವಿಚ್‌ ಎದುರು ಸೋಲು ಕಂಡಿದ್ದ ಫೆಡರರ್‌ ಈ ಪಂದ್ಯದಲ್ಲಿ ತಿರುಗೇಟು ನೀಡಲಿ ಎಂಬುದು ಅವರ ಹಾರೈಕೆಯಾಗಿತ್ತು. ಇದಕ್ಕೆ ಸರ್ಬಿಯಾದ ಆಟಗಾರ ಎಳ್ಳಷ್ಟೂ ಅವಕಾಶ ನೀಡಲಿಲ್ಲ.



ಮೊದಲ ಸೆಟ್‌ನ ಆರಂಭದಲ್ಲಿ ಫೆಡರರ್‌ ಸರ್ವ್‌ ಮುರಿದು ವಿಶ್ವಾಸ ಹೆಚ್ಚಿಸಿಕೊಂಡ ನೊವಾಕ್‌ ಬಳಿಕವೂ ಬೇಸ್‌ಲೈನ್‌ ರ್‍ಯಾಲಿಗಳ ಮೂಲಕ ಸ್ವಿಸ್‌ ಆಟಗಾರನನ್ನು ಕಂಗೆಡಿಸಿದರು.



ಮೂರು ಮತ್ತು ಐದನೇ ಗೇಮ್‌ಗಳಲ್ಲಿ ಮತ್ತೊಮ್ಮೆ ಎದುರಾಳಿಯ ಸರ್ವ್‌ ಮುರಿದ ಜೊಕೊವಿಚ್‌ ತಮ್ಮ ಸರ್ವ್‌ ಕಾಪಾಡಿಕೊಂಡು ಕೇವಲ 30 ನಿಮಿಷಗಳಲ್ಲಿ ಗೆಲುವು ಒಲಿಸಿಕೊಂಡರು.



ಎರಡನೇ ಸೆಟ್‌ನಲ್ಲೂ ಸರ್ಬಿಯಾದ ಆಟಗಾರನ ಅಬ್ಬರ ಮುಂದುವರಿಯಿತು.  ಸೊಗಸಾದ ಹಿಂಗೈ ಮತ್ತು ಮುಂಗೈ ಹೊಡೆತಗಳ ಮೂಲಕ ಗೇಮ್‌ ಗೆದ್ದುಕೊಂಡ ಅವರು ಮತ್ತೆ ಮುನ್ನಡೆ ಗಳಿಸಿದರು. ಇದರಿಂದ ಒತ್ತಡಕ್ಕೆ ಒಳಗಾದ ಫೆಡರರ್‌ ಕೆಲ ಸ್ವಯಂಕೃತ ತಪ್ಪುಗಳನ್ನು ಮಾಡಿ ಸೆಟ್‌ ಕೈಚೆಲ್ಲಿದರು. ಹೀಗಾಗಿ ಜೊಕೊವಿಚ್‌ಗೆ ಮತ್ತೊಮ್ಮೆ ಸುಲಭ ಜಯ ಒಲಿಯಿತು.



ಒಂದು ಗಂಟೆಯ ಅವಧಿಯಲ್ಲಿ ಎರಡೂ ಸೆಟ್‌ ಗೆದ್ದುಕೊಂಡಾಗಲೇ ಸರ್ಬಿಯಾದ ಆಟಗಾರನ ಗೆಲುವು ಖಚಿತವಾಗಿತ್ತು. ಇದರಿಂದ ಫೆಡರರ್‌ ವಿಶ್ವಾಸ ಕಳೆದುಕೊಳ್ಳಲಿಲ್ಲ. 17 ಗ್ರ್ಯಾಂಡ್‌ಸ್ಲಾಮ್‌ ಪ್ರಶಸ್ತಿಗಳನ್ನು ಗೆದ್ದಿರುವ ಅವರು ಮೂರನೇ ಸೆಟ್‌ನಲ್ಲಿ ಎದುರಾಳಿಯ ಸವಾಲನ್ನು ಮೀರಿ ನಿಂತರು. ಹೀಗಾಗಿ ಏಕಪಕ್ಷೀಯವಾಗಿ ಸಾಗಿದ್ದ ಆಟಕ್ಕೆ ತಿರುವು ಲಭಿಸಿತ್ತು.



ಆದರೆ ನಾಲ್ಕನೇ ಗೇಮ್‌ನಲ್ಲಿ ಸಿಡಿಲಬ್ಬರದ ಸರ್ವ್‌ ಹಾಗೂ ಮಿಂಚಿನ ಕ್ರಾಸ್‌ಕೋರ್ಟ್‌ ಸ್ಮ್ಯಾಷ್‌ಗಳ ಮೂಲಕ ಫೆಡರರ್‌ ಅವರನ್ನು ತಬ್ಬಿಬ್ಬುಗೊಳಿಸಿದ ಜೊಕೊವಿಚ್‌ ನಿರಾಯಾಸವಾಗಿ ಪಂದ್ಯ ಗೆದ್ದು ಸಂಭ್ರಮಿಸಿದರು.



ಸೆರೆನಾ ಮಿಂಚು: 22ನೇ ಗ್ರ್ಯಾಂಡ್‌ಸ್ಲಾಮ್‌ ಪ್ರಶಸ್ತಿಯ ನಿರೀಕ್ಷೆಯಲ್ಲಿರುವ  ಅಮೆರಿಕದ ಸೆರೆನಾ ವಿಲಿಯಮ್ಸ್‌ ಆಸ್ಟ್ರೇಲಿಯಾ ಓಪನ್‌ನ  ಸಿಂಗಲ್ಸ್‌ ವಿಭಾಗದ ಸೆಮಿಫೈನಲ್‌ನಲ್ಲಿ ಮಿಂಚು ಹರಿಸಿದರು. ವಿಶ್ವ ಕ್ರಮಾಂಕ ಪಟ್ಟಿಯಲ್ಲಿ ಅಗ್ರಸ್ಥಾನ ದಲ್ಲಿರುವ ಅಮೆರಿಕದ ಆಟಗಾರ್ತಿ 6–0, 6–4ರ ನೇರ ಸೆಟ್‌ಗಳಿಂದ ಪೋಲೆಂಡ್‌ನ ಅಗ್ನಿಸ್ಕಾ ರಾಡ್ವಾಂಸ್ಕಾ ಅವರನ್ನು ಪರಾಭವಗೊಳಿಸಿದರು.



ಇನ್ನೊಂದು ಪಂದ್ಯದಲ್ಲಿ ಜರ್ಮನಿಯ ಏಂಜಲಿಕ್‌ ಕೆರ್ಬರ್‌ 7–5, 6–2ರಲ್ಲಿ ಬ್ರಿಟನ್‌ನ ಜೊಹಾನ್ನ ಕೊಂಥಾ ಅವರನ್ನು ಸೋಲಿಸಿದರು.

ಇದರೊಂದಿಗೆ ಟೂರ್ನಿಯಲ್ಲಿ ಇದೇ ಮೊದಲ ಬಾರಿಗೆ ಫೈನಲ್‌ ಪ್ರವೇಶಿಸಿದ ಸಾಧನೆ ಮಾಡಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.