ಫೆಬ್ರುವರಿ 8ಕ್ಕೆ ಬಜೆಟ್?

7

ಫೆಬ್ರುವರಿ 8ಕ್ಕೆ ಬಜೆಟ್?

Published:
Updated:

ಬೆಂಗಳೂರು: ವಿಧಾನ ಮಂಡಲದ ಜಂಟಿ ಅಧಿವೇಶನ ಮತ್ತು ಬಜೆಟ್ ಅಧಿವೇಶನವನ್ನು ಇಲ್ಲಿನ ವಿಧಾನಸೌಧದಲ್ಲೇ ನಡೆಸಲು ರಾಜ್ಯ ಸರ್ಕಾರ ತೀರ್ಮಾನಿಸಿದೆ. ಫೆಬ್ರುವರಿ ಮೊದಲ ವಾರ ಅಧಿವೇಶನ ಆರಂಭವಾಗಲಿದ್ದು, ಫೆ.8ಕ್ಕೆ ಬಜೆಟ್ ಮಂಡಿಸುವ ಸಾಧ್ಯತೆ ಇದೆ.ವಿಧಾನಸಭೆಯಲ್ಲಿ ಹವಾನಿಯಂತ್ರಣ ವ್ಯವಸ್ಥೆ ಅಳವಡಿಕೆ, ವಿದ್ಯುತ್ ಪೂರೈಕೆ ಜಾಲದ ನವೀಕರಣ ಮತ್ತಿತರ ಕಾಮಗಾರಿಗಳು ನಡೆಯುತ್ತಿರುವುದರಿಂದ ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ ಅಧಿವೇಶನ ನಡೆಸುವ ಬಗ್ಗೆ ಚಿಂತನೆ ನಡೆದಿತ್ತು. ಜಂಟಿ ಅಧಿವೇಶನವನ್ನಾದರೂ ಅಲ್ಲಿ ನಡೆಸಬಹುದು ಎಂಬ ಯೋಚನೆ ಸರ್ಕಾರದಲ್ಲಿತ್ತು.ಆದರೆ, ಜಂಟಿ ಅಧಿವೇಶನ ಮತ್ತು ಬಜೆಟ್ ಅಧಿವೇಶನವನ್ನು ಒಂದೇ ಬಾರಿ ನಡೆಸಲು ಸರ್ಕಾರ ತೀರ್ಮಾನಿಸಿದೆ. ಫೆಬ್ರುವರಿ ಮೊದಲ ವಾರದ ವೇಳೆಗೆ ವಿಧಾನಸಭೆಯಲ್ಲಿ ಹವಾ ನಿಯಂತ್ರಣ ವ್ಯವಸ್ಥೆ ಅಳವಡಿಕೆ ಮತ್ತು ವಿದ್ಯುತ್ ಪೂರೈಕೆ ಜಾಲದ ನವೀಕರಣ ಕಾಮಗಾರಿ ಪೂರ್ಣಗೊಳ್ಳಬಹುದು ಎಂದು ಅಂದಾಜಿಸಲಾಗಿದೆ. ಸಿವಿಲ್ ಕಾಮಗಾರಿಗಳಿಗೆ ಮರು ಟೆಂಡರ್ ಆಹ್ವಾನಿಸಿರುವುದರಿಂದ ಅಧಿವೇಶನದ ಬಳಿಕವೇ ಅವುಗಳಿಗೆ ಚಾಲನೆ ದೊರೆಯುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.ಬೆಳಗಾವಿಯಲ್ಲಿ ಅಧಿವೇಶನ ನಡೆಸಿದರೆ ಬಜೆಟ್ ಪುಸ್ತಕ ಮುದ್ರಣದಲ್ಲಿ ಗೋಪ್ಯತೆ ಕಾಯ್ದುಕೊಳ್ಳುವುದು ಸೇರಿದಂತೆ ಹಲವು ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಈ ಕಾರಣಕ್ಕಾಗಿ ಬೆಂಗಳೂರಿನಲ್ಲೇ ಅಧಿವೇಶನ ನಡೆಸಲು ಸರ್ಕಾರ ಬಹುತೇಕ ಅಂತಿಮ ನಿರ್ಧಾರಕ್ಕೆ ಬಂದಿದೆ. ರಾಜ್ಯಪಾಲರು ಜಂಟಿ ಅಧಿವೇಶನ ಉದ್ದೇಶಿಸಿ ಮಾತನಾಡಲು ಲಭ್ಯರಿರುವ ದಿನಾಂಕವನ್ನು ಖಚಿತಪಡಿಸಿಕೊಂಡ ಬಳಿಕ ವೇಳಾಪಟ್ಟಿ ಸಿದ್ಧಪಡಿಸುವ ಸಾಧ್ಯತೆ ಇದೆ ಎಂದು ಮೂಲಗಳು ಹೇಳಿವೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry