ಫೆರಿಫೆರಲ್ ರಸ್ತೆ: ವಿಚಾರಣೆ ಮುಂದಕ್ಕೆ

7

ಫೆರಿಫೆರಲ್ ರಸ್ತೆ: ವಿಚಾರಣೆ ಮುಂದಕ್ಕೆ

Published:
Updated:

ಬೆಂಗಳೂರು: ಪೆರಿಫೆರಲ್ ವರ್ತುಲ ರಸ್ತೆಯ ಭೂಸ್ವಾಧೀನ ವಿವಾದಕ್ಕೆ ಸಂಬಂಧಿಸಿದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆಯನ್ನು ಹೈಕೋರ್ಟ್ ನಾಲ್ಕು ವಾರಗಳ ಕಾಲ ಮುಂದೂಡಿದೆ. ಅಲ್ಲಿಯವರೆಗೂ ಯಾವುದೇ ಕ್ರಮ ಕೈಗೊಳ್ಳದಂತೆ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರಕ್ಕೆ (ಬಿಡಿಎ) ಆದೇಶಿಸಿದೆ.ವರ್ತುಲ ರಸ್ತೆ ಕಾಮಗಾರಿಗಾಗಿ 2006, 2007ರಲ್ಲಿ ಹೊರಡಿಸಿದ್ದ ಅಧಿಸೂಚನೆಗಳನ್ನು ಪ್ರಶ್ನಿಸಿ ಕರ್ನಲ್ ರಾಯ್ ಮತ್ತು ಇತರರು ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು. ಗುರುವಾರ ಅರ್ಜಿಯ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಜೆ.ಎಸ್.ಕೇಹರ್ ಹಾಗೂ ನ್ಯಾಯಮೂರ್ತಿ ಎ.ಎಸ್.ಬೋಪಣ್ಣ ಅವರನ್ನೊಳಗೊಂಡ ವಿಭಾಗೀಯ ಪೀಠ, ಶುಕ್ರವಾರ ಖುದ್ದು ಹಾಜರಾಗುವಂತೆ ಬಿಡಿಎ ಆಯುಕ್ತರಿಗೆ ಆದೇಶಿಸಿತ್ತು.ಬಿಡಿಎ ಆಯುಕ್ತರು ಮಧ್ಯಾಹ್ನ ನ್ಯಾಯಾಲಯಕ್ಕೆ ಹಾಜರಾಗುತ್ತಾರೆ ಎಂದು ಶುಕ್ರವಾರ ವಿಚಾರಣೆ ಆರಂಭವಾದಾಗ ಬಿಡಿಎ ಪರ ವಕೀಲರು ವಿಭಾಗೀಯ ಪೀಠಕ್ಕೆ ತಿಳಿಸಿದರು. ಮಧ್ಯಾಹ್ನ ಮತ್ತೆ ವಿಚಾರಣೆ ಆರಂಭವಾದಾಗಲೂ ಆಯುಕ್ತರು ಬರಲಿಲ್ಲ. ಅಧಿಕಾರಿಗಳ ನಿರ್ಲಕ್ಷ್ಯದ ಬಗ್ಗೆ ನ್ಯಾಯಪೀಠ  ಅಸಮಾಧಾನ ವ್ಯಕ್ತಪಡಿಸಿತು.ಪ್ರಕರಣ ವಿಚಾರಣೆ ಹಂತದಲ್ಲಿದ್ದರೂ ಬಿಡಿಎ ರಸ್ತೆ ನಿರ್ಮಾಣಕ್ಕೆ ಟೆಂಡರ್ ಆಹ್ವಾನಿಸಿದೆ. ತಕ್ಷಣವೇ ಟೆಂಡರ್ ಪ್ರಕ್ರಿಯೆಗೆ ತಡೆ ನೀಡಬೇಕು ಎಂದು ಮನವಿ ಮಾಡಿದರು. ಆಗ ಉತ್ತರ ನೀಡಿದ ಬಿಡಿಎ ವಕೀಲರು, ರಸ್ತೆ ನಿರ್ಮಾಣಕ್ಕೆ ಈವರೆಗೂ ಟೆಂಡರ್ ಆಹ್ವಾನಿಸಿಲ್ಲ ಎಂದು ನ್ಯಾಯಾಲಯಕ್ಕೆ ತಿಳಿಸಿದರು.ಅರ್ಜಿಯ ವಿಚಾರಣೆಯನ್ನು ನಾಲ್ಕು ವಾರಗಳ ಕಾಲ ಮುಂದೂಡಿದ ವಿಭಾಗೀಯ ಪೀಠ, ಅಲ್ಲಿಯವರೆಗೂ ಯಾವುದೇ ತೀರ್ಮಾನ ಕೈಗೊಳ್ಳದಂತೆ ಬಿಡಿಎಗೆ ಆದೇಶಿಸಿತು.ಉದ್ದೇಶಿತ ರಸ್ತೆಯು ‘ರಾಷ್ಟ್ರೀಯ ಪುನರ್ವಸತಿ ಮತ್ತು ಪರಿಹಾರ ನೀತಿ-2000’ಕ್ಕೆ ವಿರುದ್ಧವಾಗಿದೆ. ಈ ಯೋಜನೆ ಜಾರಿಯಾದಲ್ಲಿ ಸಾವಿರಾರು ಜನರು ತೊಂದರೆಗೆ ಒಳಗಾಗುತ್ತಾರೆ. ಯೋಜನೆಗೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಒಪ್ಪಿಗೆಯನ್ನೂ ಪಡೆದಿಲ್ಲ ಎಂದು ಅರ್ಜಿದಾರರು ದೂರಿದ್ದಾರೆ.‘ಉದ್ದೇಶಿತ ರಸ್ತೆಯು ಒಂದು ಭಾಗದಲ್ಲಿ ಪೆಟ್ರೋಲಿಯಂ ಉತ್ಪನ್ನಗಳನ್ನು ಪೂರೈಸುವ ಕೊಳವೆ ಮಾರ್ಗದ ಮೇಲೆ ಹಾದು ಹೋಗಲಿದೆ. ಅಲ್ಲಿ ರಸ್ತೆ ನಿರ್ಮಿಸಿದರೆ ಅಪಾಯ ಕಟ್ಟಿಟ್ಟ ಬುತ್ತಿ. ಆದ್ದರಿಂದ ಯೋಜನೆಯನ್ನು ಕೈಬಿಡಬೇಕು’ ಎಂದು ಕೋರಿದ್ದಾರೆ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry