ಶುಕ್ರವಾರ, ಏಪ್ರಿಲ್ 16, 2021
31 °C

ಫೆಲಿಕ್ಸ್ ಸ್ಯಾಂಚೆಜ್ ಅಸಾಮಾನ್ಯ ಸಾಧನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಲಂಡನ್: ಡೊಮಿನಿಕನ್ ರಿಪಬ್ಲಿಕ್‌ನ ಫೆಲಿಕ್ಸ್ ಸ್ಯಾಂಚೆಜ್ ಸೋಮವಾರ ಒಲಿಂಪಿಕ್ಸ್ ಕ್ರೀಡಾಂಗಣದ ವಿಜಯವೇದಿಕೆಯಲ್ಲಿ ಚಿನ್ನದ ಪದಕ ಸ್ವೀಕರಿಸಿ ಬಿಕ್ಕಿಬಿಕ್ಕಿ ಅತ್ತರು. ಭಾವೋದ್ವೇಗಕ್ಕೆ ಒಳಗಾದ ಅವರಿಗೆ ಅಳು ತಡೆಯಲು ಆಗಲಿಲ್ಲ.

ಪುರುಷರ 400 ಮೀ. ಹರ್ಡಲ್ಸ್‌ನಲ್ಲಿ ಚಿನ್ನ ಗೆದ್ದ ಸ್ಯಾಂಚೆಸ್ ಅಳುವುದಕ್ಕೆ ಕಾರಣವಿತ್ತು. ಅಥೆನ್ಸ್ ಕೂಟದಲ್ಲಿ ಚಿನ್ನ ಜಯಿಸಿದ್ದ ಅವರು ನಾಲ್ಕು ವರ್ಷಗಳ ಹಿಂದೆ ಬೀಜಿಂಗ್‌ನಲ್ಲಿ ಫೈನಲ್ ಪ್ರವೇಶಿಸುವಲ್ಲೂ ವಿಫಲರಾಗಿದ್ದರು.

ಬೀಜಿಂಗ್ ಕೂಟದ ಸಂದರ್ಭ ಸ್ಯಾಂಚೆಜ್ ಅವರ ಅಜ್ಜಿ ಲಿಲಿಯಾನ್ ಮಾರ್ಸೆಲೊ ನಿಧನರಾಗಿದ್ದರು. ಅಜ್ಜಿಯ ಆರೈಕೆಯಲ್ಲೇ ಬೆಳೆದಿದ್ದ ಸ್ಯಾಂಚೆಜ್‌ಗೆ ಈ ಸುದ್ದಿ ಆಘಾತ ಉಂಟುಮಾಡಿತ್ತು. ಮಾತ್ರವಲ್ಲ ಹೀಟ್ಸ್‌ನಲ್ಲೇ ಸೋಲು ಅನುಭವಿಸಿದ್ದರು. ಆದರೆ ಅಂದು ಅವರು ಒಂದು ಪ್ರತಿಜ್ಞೆ ಕೈಗೊಂಡಿದ್ದರು. `ಅಜ್ಜಿಗಾಗಿ ಒಲಿಂಪಿಕ್ಸ್ ಪದಕ ಗೆದ್ದೇ ಗೆಲ್ಲುವೆನು~ ಎಂದಿದ್ದರು. ಆ ಮಾತು ಇದೀಗ ಈಡೇರಿದೆ. ಸೋಮವಾರ ನಡೆದ ಸ್ಪರ್ಧೆಯಲ್ಲಿ 47.63 ಸೆಕೆಂಡ್‌ಗಳಲ್ಲಿ ಗುರಿ ತಲುಪಿ ಅಗ್ರಸ್ಥಾನ ಪಡೆದರು.

ವಿಜಯವೇದಿಕೆಯಲ್ಲಿ ಚಿನ್ನದ ಪದಕ ಸ್ವೀಕರಿಸುವ ಸಂದರ್ಭ ಭಾವೋದ್ವೇಗಕ್ಕೆ ಒಳಗಾಗಿ ಕಣ್ಣೀರು ಸುರಿಸಿದರು. `ನಿವೃತ್ತಿಗೆ ಮುನ್ನ ಅಜ್ಜಿಗಾಗಿ ಒಂದು ಪದಕ ಗೆಲ್ಲಬೇಕೆಂಬ ಮಾತುಕೊಟ್ಟಿದೆ. ನನ್ನ ಬಿಬ್ ಸಂಖ್ಯೆಯ ಹಿಂದೆ ಆಕೆಯ ಫೋಟೊವನ್ನು ಇರಿಸಿದ್ದೆ~ ಎಂದು 34ರ ಹರೆಯದ ಸ್ಯಾಂಚೆಜ್ ನುಡಿದರು. ಮೊದಲಿಗರಾಗಿ ಗುರಿಮುಟ್ಟಿದ ಸ್ಯಾಂಚೆಜ್ ಟ್ರ್ಯಾಕ್‌ನಲ್ಲಿ ಮಂಡಿಯೂರಿ ಕುಳಿತರು. ಬಳಿಕ ಅಜ್ಜಿಯ ಫೋಟೋವನ್ನು ಚುಂಬಿಸಿದರು.

ಅಮೆರಿಕದ ಮೈಕಲ್ ಟಿನ್‌ಸ್ಲೆ (47.91 ಸೆ.) ಮತ್ತು ಪೋರ್ಟೊರಿಕೊದ ಜೇವಿಯರ್ ಕಲ್ಸನ್ (48.10) ಈ ಸ್ಪರ್ಧೆಯಲ್ಲಿ ಕ್ರಮವಾಗಿ ಬೆಳ್ಳಿ ಹಾಗೂ ಕಂಚಿನ ಪದಕ ಗೆದ್ದುಕೊಂಡರು.

ಯೂಲಿಯಾಗೆ ಸ್ವರ್ಣ: ರಷ್ಯಾದ ಯೂಲಿಯಾ ಜರಿಪೋವಾ ಮಹಿಳೆಯರ 3,000 ಮೀ. ಸ್ಟೀಪಲ್‌ಚೇಸ್ ಸ್ಪರ್ಧೆಯಲ್ಲಿ ಚಿನ್ನ ತಮ್ಮದಾಗಿಸಿಕೊಂಡರು. ಅವರು 9:06.72 ಸೆಕೆಂಡ್‌ಗಳಲ್ಲಿ ಸ್ಪರ್ಧೆ ಕೊನೆಗೊಳಿಸಿದರು. ಟ್ಯುನಿಷಿಯದ ಹಬೀಬಾ ಗರೀಬಿ (9:08.37) ಬೆಳ್ಳಿ ಗೆದ್ದರೆ, ಇಥಿಯೋಪಿದ ಸೋಫಿಯಾ ಅಸೆಫಾ (9:09.84) ಕಂಚು ಪಡೆದರು.

ಮಹಿಳೆಯರ ಶಾಟ್‌ಪಟ್‌ನಲ್ಲಿ ಬೆಲಾರಸ್‌ನ ನಾಡ್ಜೆಯಾ ಒಸ್ಟಾಪ್ಚುಕ್ (21.36 ಮೀ.) ಅಗ್ರಸ್ಥಾನ ಪಡೆದರೆ, ನ್ಯೂಜಿಲೆಂಡ್‌ನ ವಲೇರಿ ಆ್ಯಡಮ್ಸ (20.70) ಮತ್ತು ರಷ್ಯಾದ ಎವ್ಗೆನಿಯಾ ಕೊಲೊಡ್ಕೊ (20.48) ಕ್ರಮವಾಗಿ ಬೆಳ್ಳಿ ಹಾಗೂ ಕಂಚಿನ ಪದಕ ಜಯಿಸಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.