ಬುಧವಾರ, ಅಕ್ಟೋಬರ್ 16, 2019
22 °C

ಫೆ. 12ಕ್ಕೆ ಸಂಗೀತ ಸಮ್ಮೇಳನ

Published:
Updated:

ದಾವಣಗೆರೆ: ಕರ್ನಾಟಕ ಸುಗಮ ಸಂಗೀತ ಪರಿಷತ್ ಹಾಗೂ ಜಿಲ್ಲಾಡಳಿತದ ವತಿಯಿಂದ ಫೆ. 12, 13ರಂದು ದಾವಣಗೆರೆ ನಗರದಲ್ಲಿ 9ನೇ ರಾಜ್ಯಮಟ್ಟದ ಸಂಗೀತ ಸಮ್ಮೇಳನ ~ಗೀತೋತ್ಸವ-2012~ ಹಮ್ಮಿಕೊಳ್ಳಲಾಗಿದೆ.ಹಿರಿಯ ಸುಗಮ ಸಂಗೀತ ಕಲಾವಿದೆ ಡಾ.ಶ್ಯಾಮಲಾ ಜಿ. ಭಾವೆ ಅವರನ್ನು ಸಮ್ಮೇಳನದ ಅಧ್ಯಕ್ಷರಾಗಿ ಆಯ್ಕೆ ಮಾಡಲಾಗಿದೆ. 12ರಂದು ಸಮ್ಮೇಳನಾಧ್ಯಕ್ಷರ ಅದ್ಧೂರಿ ಮೆರವಣಿಗೆ ಹಮ್ಮಿಕೊಳ್ಳಲಾಗಿದೆ ಎಂದು ಕರ್ನಾಟಕ ಸುಗಮ ಸಂಗೀತ ಪರಿಷತ್ ಅಧ್ಯಕ್ಷ ವೈ.ಕೆ. ಮುದ್ದುಕೃಷ್ಣ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.ಸಮ್ಮೇಳನದಲ್ಲಿ ನಾಡಿನ 200ಕ್ಕೂ ಹೆಚ್ಚು ಪ್ರಖ್ಯಾತ ಕವಿಗಳು, ಸಂಗೀತ ಕಲಾವಿದರು ಭಾಗವಹಿಸಲಿದ್ದಾರೆ. ಎರಡೂ ದಿನ ಬೆಳಿಗ್ಗೆ ಬಾಪೂಜಿ ಸಭಾಂಗಣದಲ್ಲಿ ವಿಚಾರಗೋಷ್ಠಿಗಳು, ಕವಿತಾ ವಾಚನ ಹಾಗೂ ಪ್ರತಿದಿನ ಸಂಜೆ ಸಂಗೀತ, ಗೀತನೃತ್ಯ, ಸಮೂಹ ಗಾಯನ, ಚಿಣ್ಣರ ಗಾಯನ ಏರ್ಪಡಿಸಲಾಗಿದೆ. 200 ಕಲಾವಿದರು ಅಂದು ಒಟ್ಟಿಗೇ ಹಾಡುವುದು ವಿಶೇಷ ಎಂದು ವಿವರ ನೀಡಿದರು.ಇದೇ ಸಂದರ್ಭದಲ್ಲಿ ~ದಾವಣಗೆರೆ ಜಿಲ್ಲಾ ಉತ್ಸವ~ ಸಹ ನಡೆಯಲಿದ್ದು, ಸಂಗೀತ ಸಮ್ಮೇಳನದಿಂದಾಗಿ ಜಿಲ್ಲಾ ಉತ್ಸವಕ್ಕೆ ಹೆಚ್ಚಿನ ಮೆರುಗು ದೊರೆಯಲಿದೆ. ರಾಷ್ಟ್ರಕವಿ ಜಿ.ಎಸ್. ಶಿವರುದ್ರಪ್ಪ, ಜ್ಞಾನಪೀಠ ಪುರಸ್ಕೃತ ಸಾಹಿತಿ ಚಂದ್ರಶೇಖರ ಕಂಬಾರ ಅವರು ಆಗಮಿಸುವ ನಿರೀಕ್ಷೆ ಇದ್ದು, ಕವಿ ಎಚ್.ಎಸ್. ವೆಂಕಟೇಶ್‌ಮೂರ್ತಿ, ಗಾಯಕ ಶಿವಮೊಗ್ಗ ಸುಬ್ಬಣ್ಣ, ಬಿ.ವಿ. ಶ್ರೀನಿವಾಸ್, ಬಿ.ಕೆ. ಸುಮಿತ್ರಾ ಮತ್ತಿತರರು ಭಾಗವಹಿಸಲಿದ್ದಾರೆ ಎಂದರು.ಪತ್ರಿಕಾಗೋಷ್ಠಿಯಲ್ಲಿ ಕಿಕ್ಕೇರಿ ಕೃಷ್ಣಮೂರ್ತಿ, ಶ್ರೀನಿವಾಸ ಉಡುಪ, ಶಿವಮೊಗ್ಗ ಸುಬ್ಬಣ್ಣ, ಜಿಲ್ಲಾಧಿಕಾರಿ ಸುಭಾಷ್ ಎಸ್. ಪಟ್ಟಣಶೆಟ್ಟಿ, ಹೆಚ್ಚುವರಿ ಜಿಲ್ಲಾಧಿಕಾರಿ ಎಸ್.ಎಚ್. ವಿಜಯಕುಮಾರ್, ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆ ಉಪ ನಿರ್ದೇಶಕ ಡಾ.ಕೆ. ರಾಮೇಶ್ವರಪ್ಪ ಉಪಸ್ಥಿತರಿದ್ದರು.

Post Comments (+)