ಫೆ.2ಕ್ಕೆ `ವಿಶ್ವರೂಪಂ' ಬಿಡುಗಡೆ

7

ಫೆ.2ಕ್ಕೆ `ವಿಶ್ವರೂಪಂ' ಬಿಡುಗಡೆ

Published:
Updated:
ಫೆ.2ಕ್ಕೆ `ವಿಶ್ವರೂಪಂ' ಬಿಡುಗಡೆ

`ವಿಶ್ವರೂಪಂ' ಸಿನಿಮಾವನ್ನು ಡಿಟಿಎಚ್‌ನಲ್ಲಿ ಬಿಡುಗಡೆ ಮಾಡುವುದಾಗಿ ತಿಳಿಸಿ ಚಿತ್ರ ಪ್ರದರ್ಶಕರು ಹಾಗೂ ವಿತರಕರಲ್ಲಿ ತಲ್ಲಣ ಹುಟ್ಟಿಸಿದ್ದರು ನಟ ಕಮಲ್ ಹಾಸನ್. ಡಿಟಿಎಚ್‌ನಲ್ಲಿ ಚಿತ್ರ ಬಿಡುಗಡೆ ಮಾಡಿದರೆ ನಿಮಗೆ ತೊಂದರೆ ತಪ್ಪಿದ್ದಲ್ಲ ಎಂಬಂಥ ಬೆದರಿಕೆಯ ಕರೆಗಳು ಕಮಲ್‌ಗೆ ಬಂದಿದ್ದವು. ಚಿತ್ರಮಂದಿರಗಳ ಮಾಲೀಕರ ವಿರೋಧ ಹಾಗೂ ವಿತರಕರು ಹೇರಿದ ಒತ್ತಡದಿಂದಾಗಿ ಚಿತ್ರ ಬಿಡುಗಡೆಯ ದಿನಾಂಕ ಮುಂದೆ ಹೋಗಿತ್ತು.ಈಗ ಕಮಲ್ ಹಾಸನ್ `ವಿಶ್ವರೂಪಂ' ಸಿನಿಮಾವನ್ನು ಡಿಟಿಎಚ್‌ನಲ್ಲಿ ಫೆಬ್ರುವರಿ 2ರಂದು ಬಿಡುಗಡೆ ಮಾಡುವುದಾಗಿ ಪ್ರಕಟಿಸಿದ್ದಾರೆ. ಈ ಹಿಂದೆ ಪ್ರದರ್ಶಕರು ಹಾಗೂ ಚಿತ್ರಮಂದಿರಗಳ ಮಾಲೀಕರ ಒತ್ತಡಕ್ಕೆ ಮಣಿದಿದ್ದ ಕಮಲ್ ಕೊನೆಗೂ ವಿಶ್ವರೂಪಂ ಸಿನಿಮಾವನ್ನು ಡಿಟಿಎಚ್‌ನಲ್ಲಿ ಬಿಡುಗಡೆ ಮಾಡುವ ದಿನಾಂಕವನ್ನು ಪಕ್ಕಾ ಮಾಡಿದ್ದಾರೆ. ಫೆಬ್ರುವರಿ 2ರಂದು ಡಿಟಿಎಚ್‌ನಲ್ಲಿ ತೆರೆಕಂಡ ಒಂದು ವಾರದ ಬಳಿಕ ವಿಶ್ವರೂಪಂ ಸಿನಿಮಾ ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗಲಿದೆಯಂತೆ.ಜನವರಿ 10 ಚಿತ್ರವನ್ನು ವೀಕ್ಷಿಸುವ ಸಲುವಾಗಿ ಡಿಟಿಎಚ್ ಬುಕಿಂಗ್ ಮಾಡಿದ್ದ ವೀಕ್ಷಕರಿಗೆ ನಿರಾಶೆ ಉಂಟು ಮಾಡಿದ್ದಕ್ಕೆ ಕಮಲ್ ಅವರು ಈ ಸಂದರ್ಭದಲ್ಲಿ ಕ್ಷಮೆಯನ್ನು ಕೋರಿದ್ದಾರೆ. `ಪ್ರದರ್ಶಕರ ಕೋರಿಕೆಯನ್ನು ಗಮನದಲ್ಲಿರಿಸಿಕೊಂಡು ನಾನು ಡಿಟಿಎಚ್‌ನಲ್ಲಿ ಸಿನಿಮಾವನ್ನು ಬಿಡುಗಡೆ ಮಾಡುವ ದಿನಾಂಕವನ್ನು ನಿಗದಿ ಮಾಡಿದ್ದೇನೆ' ಎಂದಿದ್ದಾರೆ ಅವರು. ಕಮಲ್ ಈ ಬಾರಿ ಯಾವ ಡಿಟಿಎಚ್ ಆಪರೇಟರ್‌ಗಳು ಸಿನಿಮಾವನ್ನು ಪ್ರದರ್ಶಿಸಲಿದ್ದಾರೆ ಎಂಬುದನ್ನು ತಿಳಿಸಿಲ್ಲ. `ಚಿತ್ರವನ್ನು ಯಾವ ಡಿಟಿಎಚ್ ಆಪರೇಟರ್‌ಗಳು ಪ್ರದರ್ಶಿಸಲಿದ್ದಾರೆ ಎಂಬುದನ್ನು ಸದ್ಯದಲ್ಲೇ ತಿಳಿಸುತ್ತೇನೆ' ಎಂದಿದ್ದಾರೆ ಅವರು. ಅಂದಹಾಗೆ, ಹಿಂದಿಯಲ್ಲಿ ತಯಾರಾಗಿರುವ `ವಿಶ್ವರೂಪಂ' ಸಿನಿಮಾ ಫೆಬ್ರುವರಿ 1ರಂದು ತೆರೆಕಂಡರೆ; ತಮಿಳು ಮತ್ತು ತೆಲುಗು ರೂಪ ಸಿನಿಮಾ ಫೆಬ್ರುವರಿ 2ಕ್ಕೆ ಪ್ರದರ್ಶನಗೊಳ್ಳಲಿದೆ. ಈ ಹಿಂದೆ ಚಿತ್ರ ವೀಕ್ಷಣೆಗೆಂದು ಬುಕ್ ಮಾಡಿದ್ದ ವೀಕ್ಷಕರಿಗೆ ಹಣವನ್ನು ಹಿಂತಿರುಗಿಸುವ ಕೆಲಸವನ್ನು ಡಿಟಿಎಚ್ ಕಂಪೆನಿಗಳು ಮಾಡಿವೆ ಎಂದಿರುವ ಕಮಲ್, ಈ ಬಾರಿ ಚಿತ್ರ ವೀಕ್ಷಣೆಗೆ ಮೂರು ನಿಗದಿತ ಸಮಯಗಳನ್ನು ಗೊತ್ತು ಮಾಡಿದ್ದಾರೆ, ವೀಕ್ಷಕರು ತಮಗೆ ಅನುಕೂಲವಾಗುವ ಸಮಯವನ್ನು ಆಯ್ಕೆ ಮಾಡಿಕೊಂಡು ಚಿತ್ರವೀಕ್ಷಣೆ ಮಾಡಬಹುದು ಎಂದು ಅವರು ತಿಳಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry