ಫೆ.24ಕ್ಕೆ ಪಿಜಿ ಸಿಇಟಿ: ವಿ.ವಿ. ನಿರ್ಧಾರ

7

ಫೆ.24ಕ್ಕೆ ಪಿಜಿ ಸಿಇಟಿ: ವಿ.ವಿ. ನಿರ್ಧಾರ

Published:
Updated:

ಬೆಂಗಳೂರು: ಸ್ನಾತಕೋತ್ತರ ವೈದ್ಯಕೀಯ/ದಂತ ವೈದ್ಯಕೀಯ ಕೋರ್ಸ್‌ಗಳ ಪ್ರವೇಶಕ್ಕೆ ಫೆಬ್ರುವರಿ 24ರಂದು ಸಾಮಾನ್ಯ ಪ್ರವೇಶ ಪರೀಕ್ಷೆ (ಪಿಜಿ ಸಿಇಟಿ) ನಡೆಸಲು ರಾಜೀವ್‌ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯ ತೀರ್ಮಾನಿಸಿದೆ.ಸುಪ್ರೀಂ ಕೋರ್ಟ್ ಈಚೆಗೆ ನೀಡಿರುವ ಮಧ್ಯಂತರ ತೀರ್ಪು ಆಧರಿಸಿ ಪ್ರವೇಶ ಪರೀಕ್ಷೆಯ ದಿನಾಂಕ ಪ್ರಕಟಿಸಲಾಗಿದೆ. ಆದರೆ, ಈ ವೇಳಾಪಟ್ಟಿ ನ್ಯಾಯಾಲಯವು ಜ.17ರಂದು ನೀಡುವ ಅಂತಿಮ ತೀರ್ಪಿನ ಮೇಲೆ ಅವಲಂಬನೆಯಾಗಲಿದೆ ಎಂದು ವಿಶ್ವವಿದ್ಯಾಲಯದ ಕುಲಸಚಿವ ಡಾ.ಡಿ.ಪ್ರೇಮಕುಮಾರ್ `ಪ್ರಜಾವಾಣಿ'ಗೆ ತಿಳಿಸಿದರು.ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷಾ (ಎನ್‌ಇಇಟಿ) ಪದ್ಧತಿ ಈ ವರ್ಷದಿಂದಲೇ ಕಡ್ಡಾಯವಾಗಿ ಜಾರಿಯಾಗಬೇಕು ಎಂದು ನ್ಯಾಯಾಲಯ ತೀರ್ಪು ನೀಡಿದರೆ, ಈ ಪಿಜಿ- ಸಿಇಟಿ ಇರುವುದಿಲ್ಲ. ಆಯಾ ರಾಜ್ಯ ಸರ್ಕಾರಗಳು, ಸಂಬಂಧಪಟ್ಟ ವೈದ್ಯಕೀಯ ಕಾಲೇಜುಗಳು ಪ್ರತ್ಯೇಕವಾಗಿ ಪ್ರವೇಶ ಪರೀಕ್ಷೆ ನಡೆಸಬಹುದು ಎಂದು ನ್ಯಾಯಾಲಯ ತೀರ್ಪು ನೀಡಿದರೆ, ಫೆ.24ಕ್ಕೆ ಪರೀಕ್ಷೆ ನಡೆಯಲಿದೆ ಎಂದು ಅವರು ಹೇಳಿದರು.ಕಳೆದ ವರ್ಷದಂತೆ ಈ ವರ್ಷವೂ ಬೆಂಗಳೂರಿನಲ್ಲಿ ಮಾತ್ರ ಪರೀಕ್ಷೆ ನಡೆಯಲಿದೆ. ಜನವರಿ ಎರಡರಿಂದ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಆರಂಭವಾಗಲಿದ್ದು, ಜ.19ರವರೆಗೂ ಅರ್ಜಿ ಸಲ್ಲಿಸಲು ಅವಕಾಶವಿದೆ. ಆನ್‌ಲೈನ್ ಮೂಲಕವೇ ಶುಲ್ಕ ಪಾವತಿಗೂ ಅವಕಾಶ ಕಲ್ಪಿಸಲಾಗಿದೆ ಎಂದರು.

ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಿದ ನಂತರ, ಅದರ ಪ್ರತಿಯನ್ನು ಫೆ.24ರ ಒಳಗೆ ವಿಶ್ವವಿದ್ಯಾಲಯಕ್ಕೆ ಸಲ್ಲಿಸಬೇಕು. ಸಾಮಾನ್ಯ ವರ್ಗ ಹಾಗೂ ಇತರ ಹಿಂದುಳಿದ ವರ್ಗದ ಅಭ್ಯರ್ಥಿಗಳಿಗೆ ಎರಡು ಸಾವಿರ ಹಾಗೂ ಪರಿಶಿಷ್ಟ ಜಾತಿ/ಪಂಗಡ ಹಾಗೂ ಪ್ರವರ್ಗ-1ರ ಅಭ್ಯರ್ಥಿಗಳಿಗೆ 500 ರೂಪಾಯಿ ಶುಲ್ಕ ನಿಗದಿ ಮಾಡಲಾಗಿದೆ.ಯುಜಿ ಸಿಇಟಿ: ಎಂಜಿನಿಯರಿಂಗ್, ವೈದ್ಯಕೀಯ/ದಂತ ವೈದ್ಯಕೀಯ ಮತ್ತಿತರ ವೃತ್ತಿಪರ ಪದವಿ ಕೋರ್ಸ್‌ಗಳ ಪ್ರವೇಶಕ್ಕೂ ಸಾಮಾನ್ಯ ಪ್ರವೇಶ ಪರೀಕ್ಷೆ ನಡೆಸಲು ಈಗಾಗಲೇ ತೀರ್ಮಾನಿಸಲಾಗಿದ್ದು, ಜನವರಿ ಮೊದಲ ವಾರ ಪರೀಕ್ಷೆಯ ದಿನಾಂಕ ಪ್ರಕಟವಾಗುವ ಸಾಧ್ಯತೆ ಇದೆ.ಶುಕ್ರವಾರ ನಡೆಯಬೇಕಿದ್ದ ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಆಡಳಿತ ಮಂಡಳಿ ಸಭೆಯನ್ನು ಮುಂದೂಡಲಾಗಿದೆ. ಜನವರಿ ಮೊದಲ ವಾರ ಮಂಡಳಿ ಸಭೆ ಸೇರಲಿದ್ದು, ಅಲ್ಲಿಯೇ ಪರೀಕ್ಷಾ ದಿನಾಂಕ ನಿರ್ಧಾರವಾಗಲಿದೆ ಎಂದು ಮೂಲಗಳು ತಿಳಿಸಿವೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry