ಫೆ.26ರಂದು ನ್ಯಾಯಾಲಯ ಆದೇಶ

7

ಫೆ.26ರಂದು ನ್ಯಾಯಾಲಯ ಆದೇಶ

Published:
Updated:

ಬೆಂಗಳೂರು:ಮುಖ್ಯಮಂತ್ರಿ ವಿರುದ್ಧ ದಾಖಲಾಗಿರುವ ಖಾಸಗಿ ಕ್ರಿಮಿನಲ್ ಮೊಕದ್ದಮೆಯ ಪ್ರಾರಂಭಿಕ ಹಂತದ ವಿಚಾರಣೆಯಲ್ಲಿ ಪ್ರತಿವಾದಿಗಳಿಗೆ ಭಾಗವಹಿಸುವ ಅವಕಾಶ ಇದೆಯೇ? ಇಲ್ಲವೇ? ಎಂಬುದರ ಬಗ್ಗೆ ಭ್ರಷ್ಟಾಚಾರ ಪ್ರಕರಣಗಳ ವಿಶೇಷ ನ್ಯಾಯಾಲಯ ಫೆ.26ರಂದು ಆದೇಶ ನೀಡಲಿದೆ.



ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ವಿರುದ್ಧ ವಕೀಲ ಸಿರಾಜಿನ್ ಬಾಷಾ ದಾಖಲಿಸಿರುವ ಕ್ರಿಮಿನಲ್ ಮೊಕದ್ದಮೆಗಳಲ್ಲಿ ಆರೋಪಿ ಪಟ್ಟಿಯಲ್ಲಿರುವ ಮುಖ್ಯಮಂತ್ರಿಯವರ ಅಳಿಯ ಆರ್.ಎನ್.ಸೋಹನ್‌ಕುಮಾರ್ ವಿಚಾರಣೆಗೆ ತಡೆ ಕೋರಿ ಅರ್ಜಿ ಸಲ್ಲಿಸಿದ್ದರು. ಖಾಸಗಿ ಮೊಕದ್ದಮೆಗಳ ಪ್ರಾರಂಭಿಕ ಹಂತದ ವಿಚಾರಣೆಯಲ್ಲಿ ಪ್ರತಿವಾದಿಗಳಿಗೆ ಅವಕಾಶ ನೀಡುವಂತಿಲ್ಲ ಎಂದು ಅರ್ಜಿದಾರರ ಪರ ವಕೀಲರು ಆಕ್ಷೇಪ ವ್ಯಕ್ತಪಡಿಸಿದ್ದರು.



ವಕೀಲರ ಹಾಜರಾತಿಗೆ ಆಕ್ಷೇಪ: ಅರ್ಜಿದಾರ ಸಿರಾಜಿನ್ ಬಾಷಾ ಪರವಾಗಿ ಹಿರಿಯ ವಕೀಲ ಸಿ.ಎಚ್.ಹನುಮಂತರಾಯ ಅವರೊಂದಿಗೆ ಸುಪ್ರೀಂಕೋರ್ಟ್ ಹಿರಿಯ ವಕೀಲ ಅನುಪ್ ಚೌಧರಿ ಮತ್ತು ಅವರ ಪತ್ನಿ ಜೂನ್ ಚೌಧರಿ ವಾದ ಮಂಡಿಸುತ್ತಿದ್ದಾರೆ. ಆದರೆ ಸೋಮವಾರ ವಿಚಾರಣೆ ಆರಂಭವಾಗುತ್ತಿದ್ದಂತೆ ಈ ಬಗ್ಗೆ ಆಕ್ಷೇಪಣೆ ಸಲ್ಲಿಸಿದ ಸೋಹನ್‌ಕುಮಾರ್ ಪರ ವಕೀಲರು, ಅನುಪ್ ಮತ್ತು ಜೂನ್ ಚೌಧರಿ ಅವರಿಗೆ ವಾದ ಮಂಡನೆಗೆ ಅವಕಾಶ ನೀಡಬಾರದು ಎಂದು ಕೋರಿದರು.



ನಿಗದಿತ ಪ್ರಾಸಿಕ್ಯೂಟರ್ ಇರುವ ಪ್ರಕರಣಗಳಲ್ಲಿ ಇತರೆ ವಕೀಲರು ವಾದಿಸುವಂತಿಲ್ಲ ಎಂದು ಸುಪ್ರೀಂಕೋರ್ಟ್ ಮತ್ತು ಹೈಕೋರ್ಟ್ ತೀರ್ಪು ನೀಡಿವೆ ಎಂದು ಅವರು ಆಕ್ಷೇಪಣೆಯಲ್ಲಿ ಉಲ್ಲೇಖಿಸಿದ್ದರು. ಆದರೆ ಸರ್ಕಾರವೇ ದಾಖಲಿಸಿದ ಪ್ರಕರಣಗಳಲ್ಲಿ ಮಾತ್ರ ಈ ನಿಯಮ ಅನ್ವಯವಾಗುತ್ತದೆ ಎಂದು ಅನುಪ್ ಚೌಧರಿ ವಾದಿಸಿದರು. ಅಂತಿಮವಾಗಿ ಆಕ್ಷೇಪಣೆಯನ್ನು ನ್ಯಾಯಾಲಯ ಮಾನ್ಯ ಮಾಡಲಿಲ್ಲ.



‘ದೇಶ ಗಮನಿಸುತ್ತಿದೆ’: ಬಳಿಕ ಆರೋಪಿಗಳಿಗೆ ಆರಂಭಿಕ ಹಂತದ ವಿಚಾರಣೆಯಲ್ಲಿ ಭಾಗವಹಿಸುವ ಅವಕಾಶ ನೀಡುವುದನ್ನು ವಿರೋಧಿಸಿ ವಾದ ಮಂಡಿಸಿದ ಅನುಪ್ ಚೌಧರಿ, ಸಾಕ್ಷ್ಯಗಳನ್ನು ದಾಖಲಿಸಿಕೊಂಡು ನ್ಯಾಯಾಲಯ ಸಮನ್ಸ್ ಜಾರಿ ಮಾಡುವವರೆಗೂ ಆರೋಪಿಗಳಿಗೆ ವಿಚಾರಣೆಯಲ್ಲಿ ಭಾಗವಹಿಸುವ ಅವಕಾಶ ಇಲ್ಲ ಎಂದರು. ತಮ್ಮ ವಾದಕ್ಕೆ ಪೂರಕವಾಗಿ ಸುಪ್ರೀಂಕೋರ್ಟ್‌ನ ಮೂರು ತೀರ್ಪುಗಳನ್ನು ನ್ಯಾಯಾಧೀಶ ಸಿ.ಬಿ.ಹಿಪ್ಪರಗಿ ಅವರ ಮುಂದಿಟ್ಟರು.



‘ಇದು ಪ್ರಭಾವಿ ವ್ಯಕ್ತಿಗಳ ವಿರುದ್ಧ ದಾಖಲಾಗಿರುವ ಮೊಕದ್ದಮೆ. ಆದ್ದರಿಂದ ಇಡೀ ದೇಶವೇ ಈ ನ್ಯಾಯಾಲಯದ ಕಡೆಗೆ ದೃಷ್ಟಿ ನೆಟ್ಟಿದೆ. ಇಂತಹ ಸಂದರ್ಭದಲ್ಲಿ ಕಾನೂನಿನ ವ್ಯಾಪ್ತಿ ಮೀರಿ ಆರೋಪಿಗಳಿಗೆ ವಿಚಾರಣೆಯಲ್ಲಿ ಭಾಗವಹಿಸಲು ಅವಕಾಶ ನೀಡುವುದು ಸರಿಯಲ್ಲ. ಹಾಗೆ ಮಾಡುವುದು ಸುಪ್ರೀಂಕೋರ್ಟ್ ತೀರ್ಪುಗಳ ಉಲ್ಲಂಘನೆಯೂ ಆಗುತ್ತದೆ’ ಎಂದು ಅವರು ವಾದಿಸಿದರು. ‘ಪ್ರಭಾವಿ ವ್ಯಕ್ತಿಗಳಿಗೆ ಕಾನೂನು ವಿಶೇಷ ಮನ್ನಣೆ ನೀಡುವುದಿಲ್ಲ ಎಂಬ ಸಂದೇಶ ಈ ನ್ಯಾಯಾಲಯದ ಮೂಲಕ ರವಾನೆ ಆಗಬೇಕು. ತಕ್ಷಣವೇ ಮುಂದಿನ ಪ್ರಕ್ರಿಯೆ ಆರಂಭಿಸಿ ಅರ್ಜಿದಾರರಿಂದ ಸಾಕ್ಷ್ಯ ದಾಖಲಿಸಬೇಕು. ನಂತರ ನ್ಯಾಯಾಲಯವು ತನ್ನ ವಿವೇಚನಾ ಅಧಿಕಾರ ಬಳಸಿ ವಿಚಾರಣೆಗೆ ಸಂಬಂಧಿಸಿದಂತೆ ನಿರ್ಧಾರಕ್ಕೆ ಬರಬೇಕು. ಅಲ್ಲಿಯವರೆಗೆ ಆರೋಪಿಗಳ ಸಾಲಿನಲ್ಲಿರುವವರೆಗೆ ವಿಚಾರಣೆಯಲ್ಲಿ ಭಾಗವಹಿಸಲು ಅವಕಾಶ ನೀಡಬಾರದು’ ಎಂದು ಮನವಿ ಮಾಡಿದರು.



ರಾಜ್ಯಪಾಲರತ್ತ ಬೆರಳು: ಬಳಿಕ ತಮಗೆ ವಿಚಾರಣೆಯಲ್ಲಿ ಪಾಲ್ಗೊಳ್ಳುವ ಹಕ್ಕು ಇದೆ ಎಂಬುದನ್ನು ಮಂಡಿಸಲು ಸೋಹನ್‌ಕುಮಾರ್ ಪರ ವಾದಿಸುತ್ತಿರುವ ಹಿರಿಯ ವಕೀಲ ರವಿ ಬಿ.ನಾಯಕ್ ಮುಂದಾದರು. ಆದರೆ ನ್ಯಾಯಾಧೀಶರು ಅವಕಾಶ ನಿರಾಕರಿಸಿ, ತಾವು ಆದೇಶ ನೀಡಿದ ಬಳಿಕವೇ ಮುಂದಿನ ಪ್ರಕ್ರಿಯೆ ಸಾಧ್ಯ ಎಂದರು.



ಆದರೂ ವಾದ ಮುಂದುವರಿಸಲು ನಾಯಕ್ ಯತ್ನಿಸಿದರು. ಅದಕ್ಕೆ ಅರ್ಜಿದಾರರ ಪರ ವಕೀಲರು ಆಕ್ಷೇಪ ವ್ಯಕ್ತಪಡಿಸಿದರು. ಇದರಿಂದ ಕೋಪಗೊಂಡ ಅವರು, ‘ನಾವು ಆರೋಪಿ ಪರ ವಾದಿಸುತ್ತಿಲ್ಲ. ಅರ್ಜಿದಾರರಾಗಿ ನ್ಯಾಯಾಲಯದ ಎದುರಿನಲ್ಲಿ ನಿಂತಿದ್ದೇವೆ. ರಾಜ್ಯಪಾಲರು ಮಾಡಿರುವ ತಪ್ಪುಗಳನ್ನು ಸಾಬೀತುಪಡಿಸಲು ಅವಕಾಶ ನೀಡಬೇಕು’ ಎಂದು ಕೋರಿದರು.



ಬಳಿಕ ವಿಚಾರಣೆಯನ್ನು ಫೆ. 26ಕ್ಕೆ ಮುಂದೂಡಿದ ನ್ಯಾಯಾಧೀಶರು, ಆರೋಪಿಗಳಿಗೆ ಪ್ರಾಥಮಿಕ ಹಂತದ ವಿಚಾರಣೆಯಲ್ಲಿ ಪಾಲ್ಗೊಳ್ಳುವ ಅವಕಾಶ ಇದೆಯೇ? ಇಲ್ಲವೇ ಎಂಬ ವಿವಾದದ ಬಗ್ಗೆ ಅಂದೇ ಆದೇಶ ನೀಡುವುದಾಗಿ ಪ್ರಕಟಿಸಿದರು.



ಗೌಡರ ವಿರುದ್ಧದ ಪ್ರಕರಣ: ಭ್ರಷ್ಟಾಚಾರ, ಭೂ ಹಗರಣಕ್ಕೆ ಸಂಬಂಧಿಸಿದಂತೆ ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಎಚ್.ಡಿ.ದೇವೇಗೌಡ, ರಾಜ್ಯ ಘಟಕದ ಅಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಮತ್ತು ಅವರ ಕುಟುಂಬದ ಸದಸ್ಯರ ವಿರುದ್ಧ ವಕೀಲ ವಿನೋದ್‌ಕುಮಾರ್ ದಾಖಲಿಸಿರುವ ಖಾಸಗಿ ಮೊಕದ್ದಮೆಯ ವಿಚಾರಣೆಯನ್ನೂ ನ್ಯಾಯಾಲಯ ಫೆ. 26ಕ್ಕೆ ಮುಂದೂಡಿದೆ.

ಮಾತಿನ ಚಕಮಕಿ

ಸೋಮವಾರ ಮುಖ್ಯಮಂತ್ರಿ ವಿರುದ್ಧದ ಮೊಕದ್ದಮೆಯ ವಿಚಾರಣೆ ನಡೆಯುತ್ತಿದ್ದಾಗ ವಕೀಲರ ಎರಡು ಗುಂಪುಗಳ ನಡುವೆ ನ್ಯಾಯಾಲಯದಲ್ಲೇ ಮಾತಿನ ಚಕಮಕಿ ನಡೆಯಿತು.

ಮೊದಲು ಪರಸ್ಪರ ಪ್ರತಿವಾದಿಗಳಾಗಿರುವ ಅನುಪ್ ಚೌಧರಿ ಮತ್ತು ರವಿ ಬಿ.ನಾಯಕ್ ನಡುವೆ ಮಾತಿಗೆ-ಮಾತು ಬೆಳೆಯಿತು. ಇಬ್ಬರೂ ಹಠಕ್ಕೆ ಬಿದ್ದವರಂತೆ ಮಾತಿನ ಚಕಮಕಿ ನಡೆಸಿದರು. ಇದರಿಂದ ನ್ಯಾಯಾಲಯದಲ್ಲಿ ಗದ್ದಲದ ವಾತಾವರಣ ನಿರ್ಮಾಣವಾಯಿತು. ಕೊನೆಯ ಹಂತದಲ್ಲಿ ಎರಡೂ ಕಡೆಯಲ್ಲಿದ್ದ ಕೆಲವು ಕಿರಿಯ ವಕೀಲರು ಏರು ದನಿಯಲ್ಲಿ ಗದ್ದಲ ನಡೆಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry