ಫೆ.27ರಂದು ರಾಜ್ಯದಾದ್ಯಂತ ಪಲ್ಸ್ ಪೋಲಿಯೊ

7

ಫೆ.27ರಂದು ರಾಜ್ಯದಾದ್ಯಂತ ಪಲ್ಸ್ ಪೋಲಿಯೊ

Published:
Updated:

ಬೆಂಗಳೂರು: ‘ಪೋಲಿಯೊ ಮುಕ್ತ ಕರ್ನಾಟಕ’ ಘೋಷವಾಕ್ಯದಡಿ 2010-11ನೇ ಸಾಲಿನ ಮೊದಲನೆಯ ಸುತ್ತಿನ ಪಲ್ಸ್ ಪೋಲಿಯೊ ಕಾರ್ಯಕ್ರಮ ಇದೇ ಭಾನುವಾರ (ಜ. 23) ರಾಜ್ಯದಾದ್ಯಂತ ಬೆಳಿಗ್ಗೆ 8 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ನಡೆಯಲಿದೆ. ಎರಡನೆಯ ಸುತ್ತಿನ ಕಾರ್ಯಕ್ರಮ ಫೆಬ್ರವರಿ 27ರಂದು ರಾಜ್ಯದಾದ್ಯಂತ ನಡೆಯಲಿದೆ.ಈ ಕಾರ್ಯಕ್ರಮಕ್ಕೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಬೆಂಗಳೂರಿನಲ್ಲಿ ಭಾನುವಾರ ಸಾಂಕೇತಿಕವಾಗಿ ಚಾಲನೆ ನೀಡಲಿದ್ದಾರೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಆಯುಕ್ತ ಡಿ.ಎನ್. ನಾಯಕ್ ಅವರು ಶುಕ್ರವಾರ ಇಲ್ಲಿ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.‘ರಾಜ್ಯದ ಜನಸಂಖ್ಯೆಯಲ್ಲಿ 73,24,730 ಮಂದಿ ಐದು ವರ್ಷಕ್ಕಿಂತ ಕಡಿಮೆ ವಯಸ್ಸಿನವರಾಗಿದ್ದಾರೆ. ಇವರೆಲ್ಲರಿಗೂ ಪೋಲಿಯೊ ಲಸಿಕೆ ನೀಡುವ ಗುರಿ ಇದೆ’ ಎಂದು ಹೇಳಿದರು.‘ಪೋಲಿಯೊ ಲಸಿಕೆ ನೀಡುವ ದಿನದ ನಂತರ ಗ್ರಾಮೀಣ ಪ್ರದೇಶಗಳಲ್ಲಿ 3 ದಿನಗಳ ಕಾಲ ಮತ್ತು ನಗರ ಪ್ರದೇಶಗಳಲ್ಲಿ 4 ದಿನಗಳ ಕಾಲ ಪ್ರತಿ ಮನೆಗೆ ತೆರಳಿ ಐದು ವರ್ಷದೊಳಗಿನ ಎಲ್ಲ ಮಕ್ಕಳಿಗೂ ಲಸಿಕೆ ಹಾಕಿಸಲಾಗಿದೆಯೇ ಎಂದು ಪರಿಶೀಲಿಸುತ್ತೇವೆ. ಐದು ವರ್ಷದೊಳಗಿನ ಒಂದು ಮಗು ಕೂಡ ಲಸಿಕೆಯಿಂದ ವಂಚಿತವಾಗಬಾರದು’ ಎಂದರು.ಈ ಬಾರಿ ರಾಜ್ಯದಲ್ಲಿ ಒಟ್ಟು 31,618 ಬೂತ್‌ಗಳಲ್ಲಿ ಲಸಿಕೆ ನೀಡಲಾಗುವುದು. ಒಟ್ಟು 48,995 ತಂಡಗಳು, 6,202 ಮೇಲ್ವಿಚಾರಕರು ಹಾಗೂ 97,110 ಮಂದಿ ವ್ಯಾಕ್ಸಿನೇಟರ್‌ಗಳು ಈ ಕಾರ್ಯಕ್ರಮದಲ್ಲಿ ಪಾಲೊಳ್ಳಲಿದ್ದಾರೆ. 1,672 ಪ್ರಯಾಣಿಕ ನಿಲ್ದಾಣಗಳಲ್ಲಿ ಲಸಿಕೆ ನೀಡಲಾಗುವುದು, ಈ ಬಾರಿ 934 ಸಂಚಾರಿ ತಂಡಗಳು ಪೋಲಿಯೊ ಲಸಿಕೆ ನೀಡಲಿವೆ ಎಂದು ಮಾಹಿತಿ ನೀಡಿದರು.ರಾಮನಗರದಲ್ಲಿ ಉತ್ತರ ಪ್ರದೇಶದಿಂದ ವಲಸೆ ಬಂದ ಒಂದು ಕುಟುಂಬದಲ್ಲಿ 2007ರಲ್ಲಿ ಪೋಲಿಯೊ ರೋಗ ಪತ್ತೆಯಾಗಿತ್ತು. ಅನಂತರ ರಾಜ್ಯದಲ್ಲಿ ಎಲ್ಲಿಯೂ ಈ ರೋಗ ಪತ್ತೆಯಾಗಿಲ್ಲ ಎಂದರು.‘ಹಾನಿಯಿಲ್ಲ’: ಪೋಲಿಯೊ ಲಸಿಕೆ ಹಾಕಿಸುವುದರಿಂದ ಮಕ್ಕಳಿಗೆ ಯಾವುದೇ ಅಪಾಯ ಇಲ್ಲ. ಆದರೆ ಅನಾರೋಗ್ಯದಿಂದ ತೀವ್ರ ನಿಗಾ ಘಟಕಗಳಲ್ಲಿ ಚಿಕಿತ್ಸೆ ಪಡೆಯುತ್ತಿರುವ ಮಕ್ಕಳಿಗೆ ಪೋಲಿಯೊ ಲಸಿಕೆ ನೀಡಬಾರದು. ಉಳಿದಂತೆ ಈ ಲಸಿಕೆ ನೀಡುವುದರಿಂದ ಮಕ್ಕಳ ಮೇಲೆ ಯಾವುದೇ ದುಷ್ಪರಿಣಾಮ ಇಲ್ಲ ಎಂದು ಅವರು ಸ್ಪಷ್ಟಪಡಿಸಿದರು.ಕಟ್ಟುನಿಟ್ಟಿನ ಕ್ರಮ

‘ನಗರದಲ್ಲಿ ಪೋಲಿಯೊ ರೋಗದ ಸಂಪೂರ್ಣ ನಿರ್ಮೂಲನೆಗಾಗಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದು’ ಎಂದು ಮೇಯರ್ ಎಸ್.ಕೆ.ನಟರಾಜ್ ತಿಳಿಸಿದರು.ಬಿಬಿಎಂಪಿ ನಗರದ ಮಹಾತ್ಮ ಗಾಂಧಿ ಪ್ರತಿಮೆ ಬಳಿ ಶುಕ್ರವಾರ ಆಯೋಜಿಸಿದ್ದ ಪಲ್ಸ್ ಪೋಲಿಯೊ ಅರಿವು ನೀಡುವ ಜಾಥಾಕ್ಕೆ ಚಾಲನೆ ಅವರು ಮಾತನಾಡಿದರು.‘ಪೋಲಿಯೊ ನಿರ್ಮೂಲನೆ ಕಾರ್ಯಕ್ರಮ ಅಂತಿಮ ಹಂತ ತಲುಪಿದ್ದು ಫೆ.27ರಂದು ಮತ್ತೊಂದು ಕಾರ್ಯಕ್ರಮ ಹಮ್ಮಿಕೊಳ್ಳ ಲಾಗುವುದು.ಪ್ರತಿ ತಂದೆ ತಾಯಂದಿರು ರೋಗದ ಬಗ್ಗೆ ಮುಂಜಾಗ್ರತೆ ವಹಿಸಿ ಮಕ್ಕಳನ್ನು ಪೋಲಿಯೊ ರೋಗದಿಂದ ಮುಕ್ತಗೊಳಿಸಬೇಕು’ ಎಂದರು.‘ಪೋಲಿಯೊವನ್ನು ಸಂಪೂರ್ಣವಾಗಿ ತೊಡೆದು ಹಾಕಲು ಸಾರ್ವಜನಿಕರು ಪಾಲಿಕೆಯೊಂದಿಗೆ ಸಹಕರಿಸಿ, 5 ವರ್ಷ ಒಳಗಿನ ಎಲ್ಲಾ ಮಕ್ಕಳಿಗೆ ಲಸಿಕೆ ಹಾಕಿಸಬೇಕು’ ಎಂದು ಪಾಲಿಕೆ ಆಯುಕ್ತ ಸಿದ್ದಯ್ಯ ನಾಗರಿಕರಲ್ಲಿ ಮನವಿ ಮಾಡಿದರು.ಬಳಿಕ ಮಹಾತ್ಮಗಾಂಧಿ ಪ್ರತಿಮೆಯಿಂದ ಬಿಬಿಎಂಪಿ ಕೇಂದ್ರ ಕಚೇರಿವರೆಗೆ ಜಾಥಾ ನಡೆಯಿತು. ಉಪ ಮೇಯರ್ ಎನ್.ದಯಾನಂದ್, ಚಿತ್ರನಟಿ ಪೂಜಾಗಾಂಧಿ, ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷ ಬಿ.ಎಸ್.ಮಂಜುನಾಥ ರೆಡ್ಡಿ ಕಾರ್ಯಕ್ರಮದಲ್ಲಿ ಪಾಲ್ಗೊಂಡರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry