ಫೆ.6,7ಕ್ಕೆ ಅಭಿವೃದ್ಧಿ ಸಂವಾದ

ಬೆಂಗಳೂರು: ಸ್ಥಳೀಯ ನಾಯಕತ್ವ ರೂಪಿಸುವ ಮತ್ತು ಹೊಸ ಆಲೋಚನೆಗಳನ್ನು ಕಾರ್ಯರೂಪಕ್ಕೆ ತರಲು ಅಗತ್ಯ ವೇದಿಕೆ ಕಲ್ಪಿಸುವ ಉದ್ದೇಶದಿಂದ ದೇಶಪಾಂಡೆ ಪ್ರತಿಷ್ಠಾನವು ಹುಬ್ಬಳ್ಳಿಯಲ್ಲಿ ಎರಡು ದಿನಗಳ ‘ಅಭಿವೃದ್ಧಿ ಸಂವಾದ’ ಆಯೋಜಿಸಿದೆ.
‘ಫೆಬ್ರುವರಿ 6 ಮತ್ತು 7ರಂದು ಹುಬ್ಬಳ್ಳಿಯಲ್ಲಿ ಈ ಕಾರ್ಯಕ್ರಮ ನಡೆಯಲಿದೆ’ ಎಂದು ದೇಶಪಾಂಡೆ ಪ್ರತಿಷ್ಠಾನದ ಸಂಸ್ಥಾಪಕ ಅಧ್ಯಕ್ಷ ಡಾ. ಗುರುರಾಜ ದೇಶಪಾಂಡೆ ಅವರು ಬುಧವಾರ ಇಲ್ಲಿ ಸುದ್ದಿಗಾರರಿಗೆ ತಿಳಿಸಿದರು.
ಬಾಂಗ್ಲಾದೇಶದ ಮೊದಲ ನೊಬೆಲ್ ಪ್ರಶಸ್ತಿ ಪುರಸ್ಕೃತ ಹಾಗೂ ಕಿರು ಹಣಕಾಸು ಸಾಲ ಯೋಜನೆಯ ರೂವಾರಿ ಮೊಹಮ್ಮದ್ ಯುನೂಸ್, ಇರಾನ್ ಮೂಲದ ಮೊದಲ ಖಾಸಗಿ ಅಂತರರಾಷ್ಟ್ರೀಯ ಬಾಹ್ಯಾಕಾಶ ಯಾತ್ರಿ ಅನೌಷಾ ಅನ್ಸಾರಿ, ಇನ್ಫೊಸಿಸ್ ಸ್ಥಾಪಕ ಎನ್.ಆರ್. ನಾರಾಯಣಮೂರ್ತಿ ಸೇರಿದಂತೆ ಅನೇಕ ಉದ್ಯಮಿಗಳು, ಶಿಕ್ಷಣ ತಜ್ಞರು ಮತ್ತು ಗಣ್ಯರು ಈ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.
‘ಪ್ರತಿವರ್ಷ ಆಯೋಜಿಸುವ ಅಭಿವೃದ್ಧಿ ಸಂವಾದ ಹಾಗೂ ಇನ್ನಿತರ ಕಾರ್ಯಕ್ರಮಗಳ ಮೂಲಕ ಗ್ರಾಮೀಣ ಪ್ರದೇಶದ ಸಾವಿರಾರು ಯುವಕರು, ಮಹಿಳೆಯರ ಆತ್ಮವಿಶ್ವಾಸ ಮತ್ತು ಮನೋವಿಕಾಸ ಹೆಚ್ಚಿಸುವ ಕೆಲಸ ಮಾಡಲಾಗುತ್ತಿದೆ’ ಎಂದರು.
‘ಸ್ಯಾಂಡ್ಬಾಕ್ಸ್ ಎಂಬ ವಿನೂತನ ಕಾರ್ಯಕ್ರಮದ ಅಡಿ ಸಾಮಾಜಿಕ ಉದ್ಯಮಶೀಲತೆ ಹಾಗೂ ನಾಯಕತ್ವ ಗುಣ ಬೆಳೆಸಿಕೊಳ್ಳುವ ಪಟ್ಟುಗಳನ್ನೂ ಕಲಿಸಿಕೊಡಲಾಗುತ್ತದೆ’ ಎಂದು ಅವರು ತಿಳಿಸಿದರು. ‘ದಶಕದ ಹಿಂದೆ (1996ರಲ್ಲಿ) ಪತ್ನಿ ಜಯಶ್ರೀ ಜೊತೆಗೂಡಿ ಹುಟ್ಟುಹಾಕಿದ ಪ್ರತಿಷ್ಠಾನವು ಉತ್ತರ ಕರ್ನಾಟಕದಲ್ಲಿ ಸಾಮಾಜಿಕ ಬದಲಾವಣೆಗೆ ನಾಂದಿ ಹಾಡಿದೆ. ಆರೇಳು ವರ್ಷಗಳಿಂದ ಹುಬ್ಬಳ್ಳಿಯಲ್ಲಿ ಆಯೋಜಿಸುತ್ತಿರುವ ‘ಅಭಿವೃದ್ಧಿ ಸಂವಾದ’ ನವೋದ್ಯಮಿಗಳಿಗೆ ನೆರವಾಗುತ್ತಿದೆ.
‘ವಿದ್ಯಾರ್ಥಿಗಳು, ಕೃಷಿಕರು, ಮಹಿಳೆಯರು, ನಿರುದ್ಯೋಗಿಗಳನ್ನು ದೃಷ್ಟಿಯಲ್ಲಿಕೊಂಡು ಶಿಕ್ಷಣ, ಸ್ವಯಂ ಉದ್ಯೋಗ, ಆರೋಗ್ಯ ಕ್ಷೇತ್ರದಲ್ಲಿ ವಿವಿಧ ಕಾರ್ಯಕ್ರಮ ರೂಪಿಸಲಾಗಿದೆ. ಕೃಷಿ ಸಿಂಚನ, ನವೋದ್ಯಮಿ, ಅಗಸ್ತ್ಯ ಯುವ ಶೃಂಗಸಭೆ, ಅಭಿವೃದ್ಧಿ ಸಂವಾದ ಮುಂತಾದ ವಿಭಿನ್ನ ಕಾರ್ಯಕ್ರಮಗಳಿಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ’ ಎಂದರು.
ಕೃಷಿ ತರಬೇತಿ ಕೇಂದ್ರ: ‘ಹುಬ್ಬಳಿ ಸಮೀಪದ ಕುಂದಗೋಳ ಬಳಿ ಹುಲಗೂರು ಗ್ರಾಮದಲ್ಲಿ 11 ಎಕರೆ ಭೂಮಿಯಲ್ಲಿ ಕೃಷಿ ತರಬೇತಿ ಕೇಂದ್ರ ನಿರ್ಮಿಸಲಾಗುವುದು. ಹಸಿರು ಮನೆ ಪರಿಣಾಮ, ಬೆಳೆ ಮತ್ತು ನೀರು ನಿರ್ವಹಣೆ ಕುರಿತು ರೈತರಿಗೆ ತರಬೇತಿ ನೀಡಲಾಗುವುದು ಎಂದು ದೇಶಪಾಂಡೆ ತಿಳಿಸಿದರು.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.