ಫೇಸ್‌ಬುಕ್: ಭಾಷೆಗೆ ಮರುಹುಟ್ಟು

7

ಫೇಸ್‌ಬುಕ್: ಭಾಷೆಗೆ ಮರುಹುಟ್ಟು

Published:
Updated:
ಫೇಸ್‌ಬುಕ್: ಭಾಷೆಗೆ ಮರುಹುಟ್ಟು

ನೆಲ ಮುಗಿಲು ಒಂದಾಗುವಂತೆ ಬರುತ್ತಿರುವ ಸಾಮಾಜಿಕ ಸಂವಹನ ತಾಣಗಳ ಬಗ್ಗೆ ಅಪವಾದಗಳು ಏನೇ ಇರಲಿ, ಫೇಸ್‌ಬುಕ್, ಟ್ವಿಟರ್, ಯೂಟ್ಯೂಬ್, ಗೂಗಲ್ ಪ್ಲಸ್‌ನಂತಹ  ಹಲವು ತಾಣಗಳು ಪ್ರಪಂಚದ ಅಪಾಯದ ಅಂಚಿನಲ್ಲಿರುವ ಹಲವು ಭಾಷೆಗಳನ್ನು ಉಳಿಸಿ ಬೆಳೆಸುತ್ತಿವೆ  ಎನ್ನುತ್ತಾರೆ ವಿಜ್ಞಾನಿಗಳು.ಸದ್ಯಕ್ಕೆ ಪ್ರಪಂಚದಾದ್ಯಂತ ಮಾತನಾಡುತ್ತಿರುವ ಸುಮಾರು 7 ಸಾವಿರದಷ್ಟು ಭಾಷೆಗಳಲ್ಲಿ ಸುಮಾರು ಅರ್ಧದಷ್ಟು ಭಾಷೆಗಳು ಈ ಶತಮಾನ ಅಂತ್ಯಕ್ಕೆ ನಶಿಸಿಹೋಗಲಿವೆ ಎನ್ನುವುದು ಭಾಷಾ ವಿಜ್ಞಾನಿಗಳ ಅಂದಾಜು. ಸಾಮಾನ್ಯವಾಗಿ ಭಾಷೆಯೊಂದರ ವಿನಾಶಕ್ಕೆ ಜಾಗತೀಕರಣ ದೂರುತ್ತೇವೆ.  ಆದರೆ, ಆಧುನಿಕ ಜಗತ್ತಿನ ಕೆಲವು ಸಂಗತಿಗಳು ಅದರಲ್ಲೂ ಡಿಜಿಟಲ್ ತಂತ್ರಜ್ಞಾನವು ಭಾಷೆ ಉಳಿಸಿ ಬೆಳೆಸುವಲ್ಲಿ ಮಹತ್ತರ ಪಾತ್ರ ವಹಿಸುತ್ತಿವೆ ಎಂದು ಪ್ರತಿಪಾದಿಸುತ್ತಾರೆ ಕೆಲವು ಭಾಷಾ ವಿಜ್ಞಾನಿಗಳು.

ಉದಾಹರಣೆಗೆ ಉತ್ತರ ಅಮೆರಿಕದ ಬುಡಕಟ್ಟು ಜನರು ತಮ್ಮ ಯುವ ತಲೆಮಾರಿಗೆ ಮೂಲ ಭಾಷೆಯನ್ನು ಕಲಿಸಲು  ಫೇಸ್‌ಬುಕ್‌ನಂತಹ ಸಾಮಾಜಿಕ ಸಂವಹನ ತಾಣಗಳನ್ನೇ ಪ್ರಮುಖ ವೇದಿಕೆಯಾಗಿ ಬಳಸಿಕೊಳ್ಳುತ್ತಿದ್ದಾರೆ. ಸೈಬೀರಿಯಾ ಮತ್ತು ಮಂಗೋಲಿಯಾದ ಅಲೆಮಾರಿ ಜನರ ಮೂಲ ಭಾಷೆ ತುವಾನ್. ಸದ್ಯ ಈ ಭಾಷೆ ಅವಸಾನದ ಅಂಚಿನಲ್ಲಿದೆ. ಕುತೂಹಲದ ವಿಷಯವೆಂದರೆ, ತುವಾನ್ ಭಾಷೆಯ ಉಚ್ಚಾರ ತಿಳಿಯಲು ಐಫೋನ್‌ನಲ್ಲಿ ಅಪ್ಲಿಕೇಷನ್ ಒಂದನ್ನು ಅಭಿವೃದ್ಧಿಪಡಿಸಲಾಗಿದೆ. ಈ ಅಪ್ಲಿಕೇಷನ್ ಬಳಸಿ ಶಾಲೆಗಳಲ್ಲಿ ಮಕ್ಕಳಿಗೆ ಈ ಭಾಷೆಯ ಉಚ್ಚಾರಣೆ ಕಲಿಸಲಾಗುತ್ತದೆ. ಚಿಕ್ಕ, ಚಿಕ್ಕ ಭಾಷೆಗಳು ಅದರಲ್ಲೂ ಕೆಲವೇ ಕೆಲವು ಸಮುದಾಯ ಮತ್ತು ಭೌಗೋಳಿಕ ಪ್ರದೇಶಗಳಿಗೆ ಮಾತ್ರ ಸೀಮಿತವಾದ ಭಾಷೆಗಳನ್ನು ಸಾಮಾಜಿಕ ಸಂವಹನ ತಾಣಗಳಲ್ಲಿ ವಿಪುಲವಾಗಿ ಬಳಸಲಾಗುತ್ತಿದೆ ಎನ್ನುತ್ತದೆ ಸಮೀಕ್ಷೆಯೊಂದು.ಯೂಟ್ಯೂಬ್‌ನಂತಹ ತಾಣದಲ್ಲಿ ಅಳಿವಿನ ಅಂಚಿನಲ್ಲಿರುವ ಅನೇಕ ಭಾಷೆಗಳ ಪಠ್ಯ ಮತ್ತು ಧ್ವನಿ ಆಲಿಸಲು ಸಾಧ್ಯವಿದೆ. ಇದೆಲ್ಲವೂ ತಂತ್ರಜ್ಞಾನದಿಂದ ಮಾತ್ರ ಸಾಧ್ಯವಾಗುವಂತದ್ದು. ಟ್ವಿಟರ್ ಸೇರಿದಂತೆ ಅನೇಕ ಕಿರು ಬ್ಲಾಗಿಂಗ್ ತಾಣದಲ್ಲಿ ಪಠ್ಯ ಸಂದೇಶ ರೂಪದಲ್ಲಿ ಭಾಷೆಯ ಪ್ರಸರಣ ನಡೆಯುತ್ತಿದ್ದು, ಹಲವು ಬುಡಕಟ್ಟು ಭಾಷೆಗಳು ಇದರಿಂದ ಇಂದಿಗೂ ಅಸ್ತಿತ್ವ ಉಳಿಸಿಕೊಂಡಿವೆ ಎನ್ನುತ್ತಾರೆ ಅಮೆರಿಕದ ಸ್ವಾರ್ಥ್‌ಮೋರ್ ಕಾಲೇಜಿನ ಭಾಷಾ  ಉಪನ್ಯಾಸಕ ಡೇವಿಡ್ ಹ್ಯಾರಿಸನ್.`ಜಾಗತೀಕರಣವು ಜಗತ್ತಿನ ಹಲವು ಚಿಕ್ಕ ಚಿಕ್ಕ ಭಾಷೆ ಮತ್ತು ಸಂಸ್ಕೃತಿಗಳನ್ನು ವಿನಾಶದ ಅಂಚಿಗೆ ದೂಡಿವೆ ಎಂದು ಅನೇಕರು ಬೊಬ್ಬೆ ಹಾಕುತ್ತಿದ್ದಾರೆ. ಆದರೆ, ಇದೇ ಜಾಗತೀಕರಣದ ಇನ್ನೊಂದು ಮುಖ ಗಮನಿಸಿ. ಉದಾಹರಣೆಗೆ ಪ್ರಪಂಚದ ಯಾವುದೋ ಒಂದು ಮೂಲೆಯಲ್ಲಿ ಕೇವಲ ಐದು ಮಂದಿ ಅಥವಾ  50 ಜನರು ಮಾತ್ರ ಮಾತನಾಡುವ ಒಂದು ಭಾಷೆ ಇದೆ ಎಂದಿಟ್ಟುಕೊಳ್ಳಿ. ಈಗ ತಂತ್ರಜ್ಞಾನದ ನೆರವಿನಿಂದ ಆ ಭಾಷೆಗೆ ಜಾಗತಿಕ ಧ್ವನಿ ಮತ್ತು ಜಾಗತಿಕ ಕೇಳುಗರನ್ನು ಸೃಷ್ಟಿಸಬಹುದು. ಇದು ಈ ಶತಮಾನದ ಬಹು ದೊಡ್ಡ ಸಾಧ್ಯತೆ~  ಎನ್ನುವ ಹ್ಯಾರಿಸನ್, ಪ್ರಪಂಚದಾದ್ಯಂತ ಅವಸಾನದ ಅಂಚಿನಲ್ಲಿರುವ ಚಿಕ್ಕ ಚಿಕ್ಕ ಉಪ ಭಾಷೆಗಳ ಬಗ್ಗೆ (dialect) ಅಧ್ಯಯನ ನಡೆಸುತ್ತಿದ್ದಾರೆ.ಭಾಷೆಯೊಂದು ವಿನಾಶದ ಅಂಚಿನಲ್ಲಿದ್ದರೆ, ಅದನ್ನು ಮಾತನಾಡುವ  ಕೊನೆಯ ವ್ಯಕ್ತಿ ಪ್ರಪಂಚದ ಯಾವುದೇ ಭಾಗದಲ್ಲಿದ್ದರೂ ಅವರನ್ನು ಭೇಟಿಯಾಗಿ ಆ ಭಾಷೆಯನ್ನು ಅವರು ದಾಖಲಿಸಿಕೊಳ್ಳುತ್ತಾರೆ. ಇತ್ತೀಚೆಗೆ ಅಮೆರಿಕದಲ್ಲಿ ನಡೆದ ಅಮೆರಿಕನ್ ಅಸೋಸಿಯೇಷನ್ ಫಾರ್ ದ ಅಡ್ವಾನ್ಸ್‌ಮೆಂಟ್ ಸೈನ್ಸ್ (ಎಎಎಎಸ್) ಸಮ್ಮೇಳನದಲ್ಲಿ ಹ್ಯಾರಿಸನ್ ಅವರ ಭಾಷಾ ಅಧ್ಯಯನ ವರದಿ ಮಂಡಿಸಲಾಯಿತು. ಪ್ರಪಂಚದ ಹಲವೆಡೆ ಅವಸಾನದ ಅಂಚಿನಲ್ಲಿರುವ ಸುಮಾರು 8 ಭಾಷೆಗಳ `ಧ್ವನಿ ಸಹಿತ ಪದಕೋಶ~ಗಳನ್ನು ಅಭಿವೃದ್ಧಿಪಡಿಸಿದ್ದಾರೆ. ಈ ಪದಕೋಶದಲ್ಲಿ ಸುಮಾರು 32 ಸಾವಿರಕ್ಕೂ ಹೆಚ್ಚು ಪದಗಳಿವೆ. ಬುಡಕಟ್ಟು ಉಪಭಾಷೆಗಳಿಗೆ ಸಂಬಂಧಿಸಿದಂತೆ ಆನ್‌ಲೈನ್ ಪದಕೋಶವನ್ನೂ (http://siletz.­swart­hmore.edu/)  ಆರಂಭಿಸಲಾಗಿದೆ. ಮಿಚಿಗನ್ ವಿವಿಯಲ್ಲಿ ಭಾಷಾ ತಜ್ಞೆಯಾಗಿರುವ ಮಾರ್ಗ್‌ರೇಟ್ ನೂರಿ `ಅನಿಶಿನಾಬೆಮೊವಿನ್~ ಎನ್ನುವ ಉಪ ಭಾಷೆ ಮಾತನಾಡುವಲ್ಲಿ ಪ್ರವೀಣಳು.  ಕೆನಡಾ ಮತ್ತು ಅಮೆರಿಕದ  ಸುಮಾರು 200ಕ್ಕೂ ಮೂಲ ನಿವಾಸಿ ಸಮುದಾಯಗಳು ಈ ಭಾಷೆಯನ್ನು ಮಾತನಾಡುತ್ತವೆ. ವಿಶೇಷವೆಂದರೆ ಈ ಸಮುದಾಯದಲ್ಲಿ ಭಾಗಶಃ ಜನರು ಈಗ ಫೇಸ್‌ಬುಕ್ ಬಳಸುತ್ತಾರೆ ಮತ್ತು ತಮ್ಮ ಭಾಷೆಯಲ್ಲೇ ಸಂವಹನ ನಡೆಸುತ್ತಾರೆ.  ತಂತ್ರಜ್ಞಾನ ಎಂದರೆ ಅದು ಭಾಷೆ ಮತ್ತು ಬಾಂಧವ್ಯವನ್ನೂ ಬೆಸೆಯುವ ಕೊಂಡಿ ಎನ್ನುತ್ತಾರೆ ನೂರಿ.`ತಂತ್ರಜ್ಞಾನ ಒಂದರಿಂದ ಮಾತ್ರ ಎಲ್ಲ ಭಾಷೆಗಳನ್ನು ಉಳಿಸಬಹುದು ಎಂದು ನಾನು ಹೇಳುತ್ತಿಲ್ಲ. ಮಾತನಾಡುವವರು ಇಲ್ಲದಿದ್ದರೆ ಕ್ರಮೇಣ ಭಾಷೆಯೊಂದು ತನ್ನ ಅಸ್ತಿತ್ವ ಕಳೆದುಕೊಂಡು ಅವನತಿ ಹೊಂದುತ್ತದೆ. ಆದರೆ, ಅಳಿವಿನ ಅಂಚಿನಲ್ಲಿರುವ ಹಲವು ಭಾಷೆಗಳನ್ನು ಡಿಜಿಟಲ್ ತಂತ್ರಜ್ಞಾನ ಬಳಸಿ ರಕ್ಷಿಸಬಹುದು. ಮುಂದಿನ ತಲೆಮಾರಿಗೆ ಆ ಭಾಷೆಯನ್ನು ತಲುಪಿಸಬಹುದು. ಇನ್ನೂ ಒಂದಷ್ಟು ಕಾಲ ಆ ಭಾಷೆಯ ಆಯುಷ್ಯ ಇರುವಂತೆ ನೊಡಿಕೊಳ್ಳಬಹುದು~   ಎನ್ನುತ್ತಾರೆ ಹ್ಯಾರಿಸನ್.ಭೂಮಿಯ ಮೇಲಿರುವ ಪ್ರತಿಯೊಂದು ವಸ್ತು, ವಿಷಯದ ಬಗ್ಗೆ ಜನರಿಗೆ ತಿಳಿದಿದೆ.  ಪರಿಸರ ವ್ಯವಸ್ಥೆ, ಜೀವ ವೈವಿಧ್ಯತೆ, ಜೀವ ವಿಕಾಸ ಹೀಗೆ ಪ್ರತಿಯೊಂದು ಸಂಗತಿಯೂ ನಮ್ಮ ಭಾಷೆಗಳಲ್ಲಿ ಮತ್ತು ಸಂಸ್ಕೃತಿಗಳಲ್ಲಿ ಅಡಕವಾಗಿದೆ ಎನ್ನುವ ಹ್ಯಾರಿಸನ್ ಮಾತಿನಲ್ಲಿ ಎಷ್ಟೊಂದು ಅರ್ಥವಿದೆ. ಅವಸಾನದ ಅಂಚಿನಲ್ಲಿರುವ ಭಾಷೆಯೊಂದನ್ನು ಯಾಕೆ ಸಂರಕ್ಷಿಸಬೇಕು ಎನ್ನುವುದಕ್ಕೆ ಇಲ್ಲಿ ಉತ್ತರವಿದೆ. 

 ವಿವಿಧ ಮೂಲಗಳಿಂದ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry