ಫೈನಲ್‌ಗೆ ಆಸ್ಟ್ರೇಲಿಯಾದ ಹೆಜ್ಜೆ

7
ಮಹಿಳಾ ವಿಶ್ವಕಪ್ ಕ್ರಿಕೆಟ್: ಇಂಗ್ಲೆಂಡ್‌ಗೆ ಜಯ

ಫೈನಲ್‌ಗೆ ಆಸ್ಟ್ರೇಲಿಯಾದ ಹೆಜ್ಜೆ

Published:
Updated:
ಫೈನಲ್‌ಗೆ ಆಸ್ಟ್ರೇಲಿಯಾದ ಹೆಜ್ಜೆ

ಮುಂಬೈ (ಪಿಟಿಐ): ಐದು ಬಾರಿಯ ಚಾಂಪಿಯನ್ ಆಸ್ಟ್ರೇಲಿಯಾ ತಂಡದವರು ಇಲ್ಲಿ ನಡೆಯುತ್ತಿರುವ ಐಸಿಸಿ ಮಹಿಳಾ ವಿಶ್ವಕಪ್ ಕ್ರಿಕೆಟ್ ಟೂರ್ನಿಯ ಫೈನಲ್ ತಲುಪಿದ್ದಾರೆ.ಬ್ರೆಬೋರ್ನ್ ಕ್ರೀಡಾಂಗಣದಲ್ಲಿ ಭಾನುವಾರ ನಡೆದ `ಸೂಪರ್ ಸಿಕ್ಸ್' ಹಂತದ ಎರಡನೇ ಪಂದ್ಯದಲ್ಲಿ ಶ್ರೀಲಂಕಾ ತಂಡವನ್ನು 9 ವಿಕೆಟ್‌ಗಳಿಂದ ಮಣಿಸಿದ ಕಾಂಗರೂ ಪಡೆ ಎಂಟನೇ ಬಾರಿ ಈ ಸಾಧನೆ ಮಾಡಿದೆ. ಲಂಕಾ ನೀಡಿದ 132 ರನ್‌ಗಳ ಸುಲಭ ಗುರಿಯನ್ನು ಆಸೀಸ್ ಬಳಗ 22.2 ಓವರ್‌ಗಳಲ್ಲಿ ಕೇವಲ 1 ವಿಕೆಟ್ ಕಳೆದುಕೊಂಡು ತಲುಪಿತು.ಮೇಗನ್ ಶಟ್ (34ಕ್ಕೆ2), ಲೀಸಾ ಸ್ಥಾಲೇಕರ್ (26ಕ್ಕೆ2) ಹಾಗೂ ಎರಿನ್ ಒಸ್ಬಾರ್ನ್ (9ಕ್ಕೆ3) ಅವರ ಪ್ರಭಾವಿ ಬೌಲಿಂಗ್ ದಾಳಿ ಈ ಗೆಲುವಿಗೆ ಪ್ರಮುಖ ಕಾರಣ. ಬಳಿಕ ಬ್ಯಾಟಿಂಗ್‌ನಲ್ಲಿ ರಚೆಲ್ ಹೇನ್ಸ್ (ಅಜೇಯ 71; 61 ಎಸೆತ) ಮಿಂಚಿದರು.

ಎರಡನೇ ಸೋಲು ಕಂಡ ಲಂಕಾ ಟೂರ್ನಿಯಿಂದ ಹೊರಬಿದ್ದಿದೆ. ಆಸ್ಟ್ರೇಲಿಯಾದ ಆಟಗಾರ್ತಿಯರು `ಸೂಪರ್ ಸಿಕ್ಸ್' ಹಂತದ ತಮ್ಮ ಕೊನೆಯ ಲೀಗ್ ಪಂದ್ಯದಲ್ಲಿ ಬುಧವಾರ ವೆಸ್ಟ್ ಇಂಡೀಸ್ ಎದುರು ಆಡಲಿದ್ದಾರೆ. ಫೈನಲ್ ಫೆ.17ರಂದು ನಡೆಯಲಿದೆ.ಇಂಗ್ಲೆಂಡ್ ಆಸೆ ಜೀವಂತ: `ಮಾಡು ಇಲ್ಲವೇ ಮಡಿ' ಎನಿಸಿದ್ದ ಮತ್ತೊಂದು ಪಂದ್ಯದಲ್ಲಿ ಇಂಗ್ಲೆಂಡ್ ತಂಡದವರು ಏಳು ವಿಕೆಟ್‌ಗಳಿಂದ ದಕ್ಷಿಣ ಆಫ್ರಿಕಾ ತಂಡವನ್ನು ಸೋಲಿಸಿದರು. ದಕ್ಷಿಣ ಆಫ್ರಿಕಾ ನೀಡಿದ 78 ರನ್‌ಗಳ ಗುರಿಯನ್ನು ಇಂಗ್ಲೆಂಡ್ 9.3 ಓವರ್‌ಗಳಲ್ಲಿ ಕೇವಲ 3 ವಿಕೆಟ್ ಕಳೆದುಕೊಂಡು ತಲುಪಿತು.ವಿಜಯಿ ತಂಡದ ಅನ್ಯಾ ಶ್ರುಬ್ಸೋಲ್ (17ಕ್ಕೆ5) ಅಮೋಘ ಪ್ರದರ್ಶನ ತೋರಿದರು. ಅವರಿಗೆ ಡೇನಿಯೆಲ್ ವ್ಯಾಟ್ (7ಕ್ಕೆ3) ಉತ್ತಮ ನೆರವು ನೀಡಿದರು. ಇವರಿಬ್ಬರು ದಕ್ಷಿಣ ಆಫ್ರಿಕಾ ತಂಡವನ್ನು ಅಲ್ಪ ಮೊತ್ತಕ್ಕೆ ನಿಯಂತ್ರಿಸಿದರು.

ಆದರೆ ಇಂಗ್ಲೆಂಡ್ ತಂಡದವರು ಬುಧವಾರ ನ್ಯೂಜಿಲೆಂಡ್ ಎದುರು ಪೈಪೋಟಿ ನಡೆಸಲಿದ್ದು, ಅದರಲ್ಲಿ ಗೆದ್ದರೆ ಫೈನಲ್ ಪ್ರವೇಶ ಖಚಿತವಾಗಲಿದೆ.ಸಂಕ್ಷಿಪ್ತ ಸ್ಕೋರ್: ಶ್ರೀಲಂಕಾ: 45.2 ಓವರ್‌ಗಳಲ್ಲಿ 131 (ದೀಪಿಕಾ ರಸಂಗಿಕಾ 43, ದಿಲಾನಿ ಸುರಂಗಿಕಾ 21, ಚಾಮನಿ ಸೇನೆವಿರತ್ನ 17; ಮೇಗನ್ ಶಟ್ 34ಕ್ಕೆ2, ಲೀಸಾ ಸ್ಥಾಲೇಕರ್ 26ಕ್ಕೆ2, ಎರಿನ್ ಒಸ್ಬಾರ್ನ್ 9ಕ್ಕೆ3); ಆಸ್ಟ್ರೇಲಿಯಾ: 22.2 ಓವರ್‌ಗಳಲ್ಲಿ 1 ವಿಕೆಟ್ ನಷ್ಟಕ್ಕೆ 132 (ಮೆಗ್ ಲ್ಯಾನಿಂಗ್ 37, ರಚೆಲ್ ಹೇನ್ಸ್ ಔಟಾಗದೆ 71, ಜೆಸ್ ಕೆಮರಾನ್ ಔಟಾಗದೆ 22); ಫಲಿತಾಂಶ: ಆಸ್ಟ್ರೇಲಿಯಾ ತಂಡಕ್ಕೆ 9 ವಿಕೆಟ್ ಜಯ. ದಕ್ಷಿಣ ಆಫ್ರಿಕಾ: 29.3 ಓವರ್‌ಗಳಲ್ಲಿ 77 (ಮರಿಜಾನೆ ಕಾಪ್ 13, ಶಾಂಡ್ರೆ ಫ್ರಿಟ್ಜ್ 10, ಡೇನ್ ವಾನ್ ನೀಕರ್ಕ್ ಔಟಾಗದೆ 17, ಶಬ್ನಿಮ್ ಇಸ್ಮಾಯಿಲ್ 16; ಅನ್ಯಾ ಶ್ರುಬ್ಸೋಲ್ 17ಕ್ಕೆ5, ಡೇನಿಯೆಲ್ ವ್ಯಾಟ್ 7ಕ್ಕೆ3): ಇಂಗ್ಲೆಂಡ್: 9.3 ಓವರ್‌ಗಳಲ್ಲಿ 3 ವಿಕೆಟ್ ನಷ್ಟಕ್ಕೆ 81 (ಲಿಡಿಯಾ ಗ್ರೀನ್‌ವೇ ಔಟಾಗದೆ 25, ಅರಾನ್ ಬ್ರಿಂಡ್ಲ್ ಔಟಾಗದೆ 28; ಚ್ಲೋ ಟ್ರಿಯೋನ್ 14ಕ್ಕೆ2): ಫಲಿತಾಂಶ: ಇಂಗ್ಲೆಂಡ್‌ಗೆ ಏಳು ವಿಕೆಟ್ ಗೆಲುವು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry