ಬುಧವಾರ, ಜೂನ್ 16, 2021
21 °C
ರಾಷ್ಟ್ರೀಯ ಜೂನಿಯರ್ ಮಹಿಳಾ ಹಾಕಿ: ಗಂಗಪುರ ಒಡಿಶಾಗೆ ನಿರಾಸೆ

ಫೈನಲ್‌ಗೆ ಛತ್ತೀಸಗಡ, ಕೇರಳ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮೈಸೂರು: ಛತ್ತೀಸಗಡ ಮತ್ತು ಕೇರಳ ತಂಡಗಳು ಚಾಮುಂಡಿ ವಿಹಾರದ  ಅಂಗಳದಲ್ಲಿ ಗುರುವಾರ ನಡೆಯಲಿರುವ 4ನೇ ರಾಷ್ಟ್ರೀಯ ಜೂನಿಯರ್ ಮಹಿಳಾ ಹಾಕಿ ಟೂರ್ನಿಯ ‘ಬಿ’ ಡಿವಿಷನ್ ವಿಭಾಗದ ಫೈನಲ್‌ನಲ್ಲಿ ಮುಖಾಮುಖಿಯಾಗಲಿವೆ.

ಬುಧವಾರ ನಡೆದ ಸೆಮಿಫೈನಲ್‌ನಲ್ಲಿ ಮಣಿಪುರದ ಎದುರು ಗೆದ್ದ ಛತ್ತೀಸಗಡ ಮತ್ತು ಗಂಗಪುರ ಒಡಿಶಾ ವಿರುದ್ಧ ಜಯ ಗಳಿಸಿದ ಕೇರಳ ತಂಡಗಳು ಪ್ರಶಸ್ತಿ ಸುತ್ತಿಗೆ ಪ್ರವೇಶಿಸಿದವು. ಇದರೊಂದಿಗೆ ಹಾಕಿ ಇಂಡಿಯಾ ಮುಂದಿನ ವರ್ಷ ಆಯೋಜಿಸುವ ‘ಎ’ ಡಿವಿಷನ್ ಟೂರ್ನಿಗೆ ಉಭಯ ತಂಡಗಳು ಬಡ್ತಿ ಪಡೆದವು.ಮಣಿದ ಮಣಿಪುರ:

ಹಾಕಿ ಕರ್ನಾಟಕದ ಆಶ್ರಯದಲ್ಲಿ ನಡೆಯುತ್ತಿರುವ ಟೂರ್ನಿಯ ಮೊದಲ ದಿನದಿಂದಲೂ ಭರ್ಜರಿ ಆಟ ಪ್ರದರ್ಶಿಸಿದ್ದ ಗೀತಾರಾಣಿ ನೇತೃತ್ವದ ಮಣಿಪುರ ತಂಡವು ನಾಲ್ಕರ ಘಟ್ಟದಲ್ಲಿ ಛತ್ತೀಸಗಡಕ್ಕೆ ಸುಲಭದ ತುತ್ತಾಯಿತು. ಛತ್ತೀಸಗಡ ತಂಡವು 4-0 (2-0) ಗೋಲುಗಳಿಂದ ಮಣಿಪುರದ ವನಿತೆಯರನ್ನು ಮಣಿಸಿತು. ಟೂರ್ನಿಯ ಮೊದಲ ಪಂದ್ಯದಲ್ಲಿ 24 ಗೋಲು ಗಳಿಸಿ ಮೆರೆದಿದ್ದ ಮಣಿಪುರ ತಂಡ ಇಂದು ಒಂದೂ ಗೋಲು ಗಳಿಸಲು ಸಾಧ್ಯವಾಗಲಿಲ್ಲ.ಪಂದ್ಯದ 8ನೇ ನಿಮಿಷದಲ್ಲಿಯೇ ಇಷಿಕಾ ಚೌಧರಿ ತಂಡಕ್ಕೆ ಮೊದಲ ಗೋಲಿನ ಕಾಣಿಕೆ ನೀಡಿದರು. ನಂತರ ಪ್ರಿಯಾಂಕಾ (34ನಿ), ಆಕಾಂಕ್ಷಾ ಪರಮಾರ್ (38 ನಿ) ಮತ್ತು ಸಾಧನಾ ಸೆಂಗರ್ (65 ನಿ) ತಲಾ ಒಂದು ಬಾರಿ ಚೆಂಡನ್ನು ಗೋಲುಪೆಟ್ಟಿಗೆಗೆ ಕಳುಹಿಸಿದರು.

ಪಂದ್ಯದ ನಂತರ ಪ್ರತಿಕ್ರಿಯಿಸಿದ ಛತ್ತೀಸಗಡ ಕೋಚ್ ಇಂದರ್ ಪಾಲ್ ಸಿಂಗ್, ‘ಇನ್ನೂ ಹೆಚ್ಚು ಗೋಲುಗಳನ್ನು ಗಳಿಸುವ ಅವಕಾಶ ಇತ್ತು. ಸಿಕ್ಕ ಅವಕಾಶಗಳನ್ನು ಗೋಲುಗಳಲ್ಲಿ ಪರಿವರ್ತಿಸುವಲ್ಲಿ ಆಟಗಾರ್ತಿಯರು ವಿಫಲರಾದರು. ಆದರೂ, ಗೆಲುವು ಸಾಧಿಸಿರುವುದು ಆತ್ಮವಿಶ್ವಾಸ ಹೆಚ್ಚಿಸಿದ್ದು, ಫೈನಲ್‌ನಲ್ಲಿ ಕೇರಳದ ವಿರುದ್ಧ ಇನ್ನೂ ಉತ್ತಮ ಪ್ರದರ್ಶನ ನೀಡುತ್ತೇವೆ' ಎಂದರು.ಕೇರಳಕ್ಕೆ ಜಯ: ನಾಲ್ಕರ ಘಟ್ಟ ಪ್ರವೇಶಿಸಿದ್ದ ದಕ್ಷಿಣ ಭಾರತದ ಏಕೈಕ ತಂಡವಾದ ಕೇರಳ 2-0 (1-0) ಗೋಲುಗಳಿಂದ ಗಂಗಾಪುರ ಒಡಿಶಾ ತಂಡದ ಕಠಿಣ ಸವಾಲನ್ನು ಮೆಟ್ಟಿ ಗೆಲುವು ಸಾಧಿಸಿತು.ಪಂದ್ಯದ 26ನೇ ನಿಮಿಷದಲ್ಲಿ ಮುನ್ಪಡೆ ಆಟಗಾರ್ತಿ ಎಂ.ಆರ್. ಸಿಂಧೂ ಮೊದಲ ಗೋಲು ಹೊಡೆದರು. ನಂತರ ಗಂಗಾಪುರ ತಂಡದ ಆಟಗಾರ್ತಿಯರು ಆಕ್ರಮಣಕಾರಿ ಆಟ ಆರಂಭಿಸಿ ಗೋಲು ಗಳಿಸುವ ಯತ್ನಗಳನ್ನು ಮಾಡಿದರು. ಆದರೆ, ಅವರ ಎಲ್ಲ ಪ್ರಯತ್ನಗಳಿಗೂ ಕೇರಳದ ಗೋಲ್‌ಕೀಪರ್ ಎಂ.ಎಲ್. ಮಂಜಿಮಾ ಅಡ್ಡಗೋಡೆಯಾದರು. ಆಕರ್ಷಕ ಕೀಪಿಂಗ್ ಪ್ರದರ್ಶಿಸಿದ ಅವರು ಪ್ರೇಕ್ಷಕರ ಚಪ್ಪಾಳೆಯ ಮೆಚ್ಚುಗೆ ಪಡೆದರು. ಪಂದ್ಯದ 68ನೇ ನಿಮಿಷದಲ್ಲಿ ಅಮಲಾ ಥಾಮಸ್ ಮತ್ತೊಂದು ಗೋಲು ಹೊಡೆದು ತಂಡದ ಜಯದಲ್ಲಿ ತಾವೂ ಪಾಲುದಾರರಾದರು.ದಕ್ಷಿಣ ಭಾರತದ ತಮಿಳುನಾಡು, ಪುದುಚೇರಿ, ಆಂಧ್ರಪ್ರದೇಶ ತಂಡಗಳು ಲೀಗ್ ಹಂತದಲ್ಲಿಯೇ ಸೋಲನುಭವಿಸಿದ್ದವು.

ಈ ತಂಡಗಳು ನಿರೀಕ್ಷಿತ ಪ್ರದರ್ಶನವನ್ನು ತೋರದೇ ತಮ್ಮ ರಾಜ್ಯದ ಅಭಿಮಾನಿಗಳಲ್ಲಿ  ನಿರಾಸೆ ಮೂಡಿಸಿದವು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.