ಭಾನುವಾರ, ಮೇ 16, 2021
22 °C
ಬ್ಯಾಡ್ಮಿಂಟನ್: ಪ್ರಶಸ್ತಿಗಾಗಿ ಇಂದು ಥಾಯ್ಲೆಂಡ್‌ನ ಪೋನ್ಸಾನ ಎದುರು ಪೈಪೋಟಿ

ಫೈನಲ್‌ಗೆ ಶ್ರೀಕಾಂತ್ ಲಗ್ಗೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬ್ಯಾಂಕಾಕ್ (ಪಿಟಿಐ): ಅಚ್ಚರಿ ಹಾಗೂ ಅಮೋಘ ಪ್ರದರ್ಶನದ ಮೂಲಕ ಗಮನ ಸೆಳೆದಿರುವ ಭಾರತದ ಕೆ.ಶ್ರೀಕಾಂತ್ ಇಲ್ಲಿ ನಡೆಯುತ್ತಿರುವ ಥಾಯ್ಲೆಂಡ್ ಓಪನ್ ಗ್ರ್ಯಾನ್ ಪ್ರಿ ಗೋಲ್ಡ್ ಬ್ಯಾಡ್ಮಿಂಟನ್ ಟೂರ್ನಿಯ ಫೈನಲ್ ಪ್ರವೇಶಿಸಿದ್ದಾರೆ.ಶನಿವಾರ ನಿಮಿಟ್‌ಬಟ್ರ್ ನ್ಯಾಷನಲ್ ಕ್ರೀಡಾಂಗಣದಲ್ಲಿ ನಡೆದ ಸೆಮಿಫೈನಲ್‌ನಲ್ಲಿ ಶ್ರೀಕಾಂತ್ 21-14, 21-18ರಲ್ಲಿ ಸ್ಥಳೀಯ ಆಟಗಾರ ಥಾಮಸಿನ್ ಸಿಥಿಕೋಮ್ ಅವರನ್ನು ಮಣಿಸಿದರು.   13ನೇ ಶ್ರೇಯಾಂಕದ ಆಟಗಾರ ಈ ಗೆಲುವಿಗಾಗಿ ಕೇವಲ 43 ನಿಮಿಷ ತೆಗೆದುಕೊಂಡರು.ಆಂಧ್ರಪ್ರದೇಶದ ಶ್ರೀಕಾಂತ್ ಅವರ ಬ್ಯಾಡ್ಮಿಂಟನ್ ಜೀವನದ ಅತ್ಯುತ್ತಮ ಸಾಧನೆ ಇದಾಗಿದೆ. ಈ ಪಂದ್ಯದ ಮೊದಲ ಗೇಮ್‌ನಲ್ಲಿ ಭಾರತದ ಆಟಗಾರ ಆರಂಭದಲ್ಲಿಯೇ ಮುನ್ನಡೆ ಸಾಧಿಸಿದರು. ಆದರೆ ತಿರುಗೇಟು ನೀಡಲು ಪ್ರಯತ್ನಿಸಿದ ಸಿಥಿಕೋಮ್ 6-7 ಪಾಯಿಂಟ್ ಮೂಲಕ ಸವಾಲಾಗಿ ಪರಿಣಮಿಸಿದರು.ಆಗ ಆಕರ್ಷಕ ಸ್ಮ್ಯಾಷ್‌ಗಳ ಮೂಲಕ ಮಿಂಚಿದ 20ರ ಹರೆಯದ ಶ್ರೀಕಾಂತ್ 15-6, 20-7 ಪಾಯಿಂಟ್‌ನಿಂದ ಮುನ್ನಡೆ ಸಾಧಿಸಿದರು. ಆದರೆ ಶ್ರೀಕಾಂತ್ ಈ ಗೇಮ್‌ನ ಕೊನೆಯ ಪಾಯಿಂಟ್ ಗೆಲ್ಲುವಷ್ಟರಲ್ಲಿ ಥಾಯ್ಲೆಂಡ್ ಆಟಗಾರ ಏಳು ಪಾಯಿಂಟ್ ಕಲೆಹಾಕಿದರು.ಎರಡನೇ ಗೇಮ್ ಆರಂಭದಿಂದಲೇ ಪೈಪೋಟಿಗೆ ಕಾರಣವಾಯಿತು. ಉಭಯ ಆಟಗಾರರು ಒಂದು ಹಂತದಲ್ಲಿ 7-7 ಪಾಯಿಂಟ್‌ಗಳಿಂದ ಸಮಬಲ ಸಾಧಿಸಿದ್ದರು. ಬಳಿಕ ಈ ಗೇಮ್ 17-17 ಪಾಯಿಂಟ್ ತಲುಪಿ ಮತ್ತಷ್ಟು ಕುತೂಹಲಕ್ಕೆ ಸಾಕ್ಷಿಯಾಯಿತು. ಈ ಹಂತದಲ್ಲಿ 61ನೇ ರ‍್ಯಾಂಕ್ ನ  ಶ್ರೀಕಾಂತ್ ಸತತ ಮೂರು ಪಾಯಿಂಟ್ ಗೆದ್ದು ಮುನ್ನಡೆ ಸಾಧಿಸಿದರು.ಶ್ರೀಕಾಂತ್ ಭಾನುವಾರ ನಡೆಯಲಿರುವ ಫೈನಲ್‌ನಲ್ಲಿ ಥಾಯ್ಲೆಂಡ್‌ನ ಬೂನ್‌ಸಾಕ್ ಪೋನ್ಸಾನ ಎದುರು ಪೈಪೋಟಿ ನಡೆಸಲಿದ್ದಾರೆ. ಪೋನ್ಸಾನ ವಿಶ್ವ ರ‌್ಯಾಂಕಿಂಗ್‌ನಲ್ಲಿ ಏಳನೇ ಸ್ಥಾನದಲ್ಲಿದ್ದಾರೆ. ಜೊತೆಗೆ ಅವರು ಸ್ಥಳೀಯ ಆಟಗಾರ. ಪೋನ್ಸಾನ ಸೆಮಿಫೈನಲ್‌ನಲ್ಲಿ 21-9, 21-9ರಲ್ಲಿ ಸಿಂಗಪುರದ ವಿಸ್ನು ಯೂಲಿ ಎದುರು ಗೆದ್ದು ಫೈನಲ್ ತಲುಪಿದ್ದಾರೆ.ದೊಡ್ಡ ಟೂರ್ನಿಯೊಂದರಲ್ಲಿ ಶ್ರೀಕಾಂತ್‌ಗೆ ಇದು ಚೊಚ್ಚಲ ಫೈನಲ್. ಗುಂಟೂರು ಮೂಲದ ಈ ಆಟಗಾರ ಚೊಚ್ಚಲ ಪ್ರಶಸ್ತಿ ಗೆಲ್ಲುವ ವಿಶ್ವಾಸವನ್ನು ವ್ಯಕ್ತಪಡಿಸಿದ್ದಾರೆ. `ಪೋನ್ಸಾನ ಖಂಡಿತ ಅತ್ಯುತ್ತಮ ಆಟಗಾರ. ಆದರೆ ಭಾರತದ ಹೆಚ್ಚಿನ ಆಟಗಾರರು ಅವರು ವಿರುದ್ಧ ಇತ್ತೀಚಿನ ದಿನಗಳಲ್ಲಿ ಯಶಸ್ಸು ಕಂಡಿದ್ದಾರೆ. ಅದು ನನಗೆ ವಿಶ್ವಾಸ  ನೀಡಿದೆ' ಎಂದು ಶ್ರೀಕಾಂತ್ ನುಡಿದಿದ್ದಾರೆ.ಪಿ.ಕಶ್ಯಪ್, ಎಚ್.ಪ್ರಣಯ್ ಹಾಗೂ ಗುರುಸಾಯಿದತ್ ಇತ್ತೀಚಿನ ಟೂರ್ನಿಗಳಲ್ಲಿ ಪೋನ್ಸಾನಗೆ ಆಘಾತ ನೀಡಿದ್ದರು. `ಅವರಿಗೆ ಸ್ಥಳೀಯ ಪ್ರೇಕ್ಷಕರ ಬೆಂಬಲವಿರುತ್ತದೆ. ಆದರೆ ನಾನು ಆ ಬಗ್ಗೆ ಚಿಂತಿಸಿಲ್ಲ. ನನ್ನ ಯೋಜನೆಗೆ ಬದ್ಧವಾಗಿ ಆಡುತ್ತೇನೆ' ಎಂದಿದ್ದಾರೆ.ಶ್ರೀಕಾಂತ್ ಈ ಹಿಂದೆ ಏಷ್ಯನ್ ಜೂನಿಯರ್ ಚಾಂಪಿಯನ್‌ಷಿಪ್‌ನಲ್ಲಿ ಕ್ವಾರ್ಟರ್ ಫೈನಲ್ ತಲುಪಿದ್ದರು. 2011ರ ವಿಶ್ವ ಜೂನಿಯರ್ ಚಾಂಪಿಯನ್‌ಷಿಪ್‌ನಲ್ಲಿ ಪ್ರೀ ಕ್ವಾರ್ಟರ್ ಫೈನಲ್  ಪ್ರವೇಶಿಸಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.