ಫೋನ್ ಕಾಟ...

7

ಫೋನ್ ಕಾಟ...

Published:
Updated:

ಕಿರುಕುಳಗಳ ಸುತ್ತ

ಬೀದಿ ಕಾಮಣ್ಣರ ಅಸಭ್ಯ ನೋಟ, ವರ್ತನೆ, ಅಶ್ಲೀಲ ಮಾತುಗಳು ಸಾರ್ವಜನಿಕ ಸ್ಥಳಗಳಲ್ಲಿ ಸದಾ ಸರ್ವದಾ ಇದ್ದದ್ದೇ ಹೆಣ್ಣಿಗೆ ಸಹನೆ ದೈವದತ್ತವರವಾದ್ದರಿಂದ ಇದೆಲ್ಲ ಸಾಮಾನ್ಯ ಎನ್ನುವಂತೆ ಸಹ್ಯವಲ್ಲದಿದ್ದರೂ ಸಹಿಸಿಕೊಂಡು, ಯಾರಲ್ಲೂ ಹೇಳಿಕೊಳ್ಳದೇ ತನ್ನಲ್ಲೇ ಮುಚ್ಚಿಟ್ಟುಕೊಳ್ಳುತ್ತ ಕೊರಗುವುದು, ಮರ್ಯಾದೆಗೆ ಅಂಜುವುದು ತನಗೆ ಕಷ್ಟವಾದರೂ ಪರರಿಗಾಗಿ ತುಡಿಯುವುದು ಆಕೆಯ ದೌರ್ಬಲ್ಯವೂ ಹೌದು.ಮೌನವಾಗಿ ಸಹಿಸಿಕೊಳ್ಳುವ ಆಕೆಯ ಈ ಗುಣವನ್ನು ದುರುಪಯೋಗಪಡಿಸಿಕೊಂಡಿದ್ದಕ್ಕೆ ಜ್ವಲಂತ ಉದಾಹರಣೆ ಈ ನನ್ನ ಸ್ನೇಹಿತೆ. ಆದರೆ ಅದು ಒಂದು ರೀತಿಯಲ್ಲಿ ವಿಚಿತ್ರವಾಗಿದೆ.ಆಕೆಯದ್ದು ತುಂಬು ಕುಟುಂಬ. ಹಿರಿಸೊಸೆಯ ಪಟ್ಟ. ಹೊಂದಿಕೊಂಡು ಹೋಗುವ ಸ್ವಭಾವ ಸ್ವಲ್ಪ ಹೆಚ್ಚೇ, ಮಧ್ಯಮ ವಯಸ್ಕಳು. ಕುಶಲಕಲೆಗಳಲ್ಲಿ ಎತ್ತಿದ ಕೈ, ಕಲಿತವಳು ತಮಾಷೆಯ ಸ್ವಭಾವದ ಆಕೆ ಲಘುಹಾಸ್ಯ ಮಾಡುತ್ತ ಎಲ್ಲರೊಡನೆ ಬೆರೆಯುವುದು ಆಕೆಯ ಜಾಯಮಾನ.ವ್ಯಕ್ತಿಗತವಾಗಿ ಅಥವಾ ವೈಯಕ್ತಿಕವಾಗಿ ಮಾತನಾಡಲಿಚ್ಛಿಸದೇ ಎಲ್ಲರೊಂದಿಗೂ ಸಾಮಾನ್ಯವಾದ ವಿಷಯ ಚರ್ಚಿಸುತ್ತ ಎಷ್ಟು ಬೇಕೋ ಅಷ್ಟು ಮಾತನಾಡುತ್ತ ಯಾವಾಗಲೂ ಎಚ್ಚರಿಕೆಯಿಂದಿರುತ್ತಿದ್ದಳು. ಬಾಲ್ಯದ ಕೆಲವು ಕಹಿ ಘಟನೆಗಳು ಹಾಗೂ ಬೆಳೆದುಬಂದ ವಾತಾವರಣ ಆಕೆಯನ್ನು ಗಂಭೀರಳಾಗಿರುವಂತೆಯೂ ಮಾಡಿತ್ತು. ಎಷ್ಟು ಬೇಕೋ ಅಷ್ಟೇ ಹಾಸ್ಯದ ಹಿತಮಿತ ಸ್ವಭಾವ.ಈಗಿನ ವಿಭಕ್ತ ಕುಟುಂಬದ ವ್ಯವಸ್ಥೆಯಲ್ಲಿ ಮಕ್ಕಳು ಕೆಲಸದ ನಿಮಿತ್ತ ದೂರದಲ್ಲಿರುವುದರಿಂದ ಇಬ್ಬಿಬ್ಬರೇ ಇರುವ ಕುಟುಂಬದ ಚಿತ್ರಣ ಹೆಚ್ಚುತ್ತಿದೆ.ಒಬ್ಬರಿಗೊಬ್ಬರು ಕಷ್ಟ-ಸುಖದಲ್ಲಿ ಆಗುತ್ತಾರೆಂದುಕೊಂಡು ಹತ್ತಿರದ ಸಂಬಂಧಿಗಳು ಒಂದೇ ಊರಿನಲ್ಲಿ ಸಾಧ್ಯವಾದರೆ ಹತ್ತಿರದಲ್ಲೇ ಮನೆ ಮಾಡಿಕೊಳ್ಳುವುದು ಚಾಲ್ತಿಯಲ್ಲಿರುವ ಸದ್ಯದ ನೋಟ. ಹಾಗೆಯೇ ನಿವೃತ್ತಿ ಹೊಂದಿದ ನಂತರ ಹತ್ತಿರದಲ್ಲೇ ಈಕೆಯ ನಾದಿನಿ ಹಾಗೂ ಆಕೆಯ ಗಂಡ ಮನೆ ಮಾಡಿದ್ದರು. ಸಹಜವಾಗಿಯೇ ಒಡನಾಟ ಹೆಚ್ಚಿತ್ತು.ಆಕೆಯ ನಾದಿನಿಯದ್ದು ಬಹಳ ಜೋರಿನ ಸ್ವಭಾವ, ಒಳ್ಳೆಯವಳಾದರೂ ಸದಾ ತನ್ನ ಸಂಬಂಧಿಕರೊಡನೆಯೇ ಹೆಚ್ಚಾಗಿ ಒಡನಾಡುತ್ತಿದ್ದಳು. ಆಕೆಯ ಗಂಡ ಮೃದುಮಾತಿನ ಕಡಿಮೆ ಮಾತಿನವ. ಸೌಜನ್ಯಯುತ ನಡವಳಿಕೆ. ಗಂಭೀರ ವ್ಯಕ್ತಿ. ತಾನಾಯಿತು ತನ್ನ ಪಾಡಾಯಿತು ಹೀಗಿದ್ದವ.ಎಲ್ಲ ಸಂಬಂಧಿಕರೂ ಕಲೆತು ಒಮ್ಮೆ ಪ್ರವಾಸ ಮಾಡಿ ಬಂದಾಗಿನಿಂದ ಈಕೆಯ ಸಮಸ್ಯೆಯ ಉದ್ಭವ, ಮೊದಮೊದಲು ಆತನಿಂದ ನನ್ನ ಸ್ನೇಹಿತೆಗೆ ಫೋನ್ ಕರೆಗಳು ಬರುತ್ತಿದ್ದವು. ಸೌಜನ್ಯಯುತ ಮಾತು ಆರಂಭವಾಗಿ ನಂತರದ ದಿನಗಳಲ್ಲಿ ಆಕೆಯನ್ನು ಬಹಳವಾಗಿ ಹಚ್ಚಿಕೊಂಡಿದ್ದ. ಈಕೆಯೂ ಸಹಜವಾಗಿಯೇ ದೈನಂದಿನ ಮಾತುಗಳನ್ನು ಮಾತನಾಡುತ್ತಿದ್ದಳು. ಆದರೆ ಆತ ಹೆಂಡತಿ ಇಲ್ಲದಿರುವಾಗ ಅಥವಾ ಮನೆಯಿಂದ ಹೊರಬಂದು ಈಕೆಯೊಡನೆ ಮಾತನಾಡುತ್ತಿದ್ದದ್ದು ತಿಳಿದಾಗಲೇ ಸ್ವಲ್ಪ ಸಂಶಯಗೊಂಡಿದ್ದಳು.ಯಾಕೋ ಸರಿ ಎನ್ನಿಸಿರಲಿಲ್ಲ. ಆದರೂ ಸಂಕೀರ್ಣ ಮನೋಭಾವ ಬೇಡ ಎಂದುಕೊಂಡು ಆತನೊಡನೆ ಸಹಜವಾಗಿಯೇ ಮಾತನಾಡುತ್ತಿದ್ದಳು. ಆತನಿಂದ ಮೆಸೇಜ್‌ಗಳು ಬರಹತ್ತಿದವು. ಜೋಕ್ಸ್ ಕಳಿಸುತ್ತಿದ್ದರೂ ಒಮ್ಮಮ್ಮೆ ಪ್ರವಾಸದಲ್ಲಿ ಆಕೆ ತೊಟ್ಟಿದ್ದ ಕೆಲವು ತೊಡುಗೆಗಳ ವರ್ಣನೆ ಮಾಡಿ ಅವುಗಳಲ್ಲಿ ಬಹಳ ಚೆನ್ನಾಗಿ ಕಾಣುತ್ತಿದ್ದೆ ಎಂಬಂತಹ ಮೆಸೇಜ್‌ಗಳಾಗಿತ್ತು.ಹೊಗಳಿದರೆ ಎಲ್ಲರಿಗೂ ಸಂತೋಷವಾಗುವಂತೆ ಈಕೆಯೂ ಸಂತಸಪಟ್ಟಿದ್ದಳು. ಆದರೆ ಬೇರಾವ ಅರ್ಥ ತಿಳಿಯದೇ ಸಹಜವಾಗಿದ್ದಳು. ಆತನ ಆತ್ಮೀಯ ಮಾತು ಆಕೆಗೆ ಆಕೆಯ ತವರಿನ ಜನರನ್ನು ನೆನಪಿಸಿ ಸ್ಪಂದಿಸಿದ್ದಳು. ತವರಿನವರೊಟ್ಟಿಗೆ ಒಡನಾಟ ಕಡಿಮೆ ಇದ್ದದ್ದರಿಂದ ಈತನಿಗೆ ರಕ್ತಸಂಬಂಧದ ದರ್ಜೆಯನ್ನಿತ್ತಿದ್ದಳು.ಆದರೆ `ವ್ಯಾಲೆಂಟೈನ್ಸ್ ದಿನ~ದಂದು ಆತನಿಂದ ಬಂದ ಮೆಸೇಜ್‌ಗೆ ಆಕೆ ದಿಗ್ಭ್ರಾಂತಳಾಗಿದ್ದಳು. ಆತನ ಭಾವನೆಯ ಅನಾವರಣವಾಗಿತ್ತು. ಗರಬಡಿದಂತಾದರೂ ಆಕೆ ತನ್ನ ಮೌನದಿಂದ ಆತ ತಪ್ಪು ತಿಳಿದಿರಬಹುದೆಂದುಕೊಂಡು ಯೋಚಿಸಿ ನಯವಾಗಿ ಆದರೆ ಸ್ಪಷ್ಟವಾಗಿ ಆತನ ಭಾವನೆಗಳು ತಪ್ಪು; ಸರಿಯಲ್ಲ ಅಣ್ಣ ತಂಗಿಯರ ಸಂಬಂಧಕ್ಕೆ ಅಪಾರ್ಥ ಬೇಡ ಎಂದು ಮೆಸೇಜ್ ಕಳಿಸಿದ್ದಳು.

 

ಗಂಡನಿಗೆ ಏನೂ ಹೇಳಲಿಲ್ಲ. ಸುಮ್ಮನೆ ವಿಷಯ ಹಿಂಜುವುದರಿಂದ ಸಂಬಂಧಗಳು ಹಳಸುತ್ತವೆಯೇ ವಿನಃ ಮತ್ತೇನೂ ಒಳ್ಳೆಯದಂತೂ ಆಗಲು ಸಾಧ್ಯವಿಲ್ಲ. ಆತನ ತಪ್ಪು ಕಲ್ಪನೆ ದೂರ ಮಾಡಿದ್ದರಿಂದ ಇನ್ನ್ಲ್ಲೆಲಾ ಸರಿಹೋಗಬಹುದು ಎಂದುಕೊಂಡಳು.ನಂತರ ಆಕೆಯ ನಾದಿನಿಯಿಂದ ತಿಳಿಯಿತು ಮಾನಸಿಕವಾಗಿ ಆತ ಬಹಳ ಬೇಸರದಲ್ಲಿದ್ದಾನೆಂದೂ, ಕಾರಣ ಹೇಳುತ್ತಿಲ್ಲವೆಂದೂ ಮುಂತಾಗಿ. ಬಹಳಷ್ಟು ದಿನಗಳು ಆತನಿಂದ ಯಾವ ಮೆಸೇಜೂ ಇಲ್ಲ ಫೋನ್ ಕರೆಗಳೂ ಇರಲಿಲ್ಲ. ಹೀಗಿರುವುದೇ ಒಳ್ಳೆಯದು ಎಂದುಕೊಂಡು ದಿನದ ಚಟುವಟಿಕೆಯಲ್ಲಿ ವ್ಯಸ್ತಳಾದವಳಿಗೆ ಅದೊಂದು ದಿನ ಆತನಿಂದ ಕರೆ ಬಂದಿತ್ತು.ಈಕೆ ಆ ವಿಷಯದ ಉಲ್ಲೇಖವಿಲ್ಲದಂತೆ ಏನೂ ನಡೆದಿಲ್ಲವೆಂಬಂತೆ ಸಹಜವಾಗಿ ಆರೋಗ್ಯ ವಿಚಾರಿಸಿ ಮಾತನಾಡಿದ್ದಳು. ಆತನೂ ಸಹಜವಾಗಿಯೇ ಸ್ಪಂದಿಸಿದ್ದ. ಆಕೆಗಿಂತ ವಯಸ್ಸಲ್ಲಿ ಆತ ಬಹಳ ಹಿರಿಯ. ಪುನಃ ಫೋನ್ ಕರೆಗಳು ಬರತೊಡಗಿದ್ದವು. ತನ್ನ ಸ್ನೇಹಿತರು ಊರು, ಕಾಲೇಜು, ಬಾಲ್ಯ ಹೀಗೆ ಮಾತನಾಡುತ್ತಿದ್ದವನಿಗೆ ಸಹನೆಯಿಂದ ಕೇಳಿಸಿಕೊಳ್ಳುವ ಕಿವಿಯಾಗಿದ್ದಳು ಈಕೆ ಅಷ್ಟೆ.ಗಂಟೆಗಟ್ಟಳೆ ಮಾತನಾಡುತ್ತಿದ್ದ. ಯಥಾಪ್ರಕಾರ ಮನೆಯಿಂದ ಹೊರಬಂದು ತುಂಬು ಕುಟುಂಬದಲ್ಲಿ ಹಬ್ಬ ಹರಿದಿನದಂದು ಎಲ್ಲರೂ ಸೇರಿ ಸಂಭ್ರಮಿಸುವುದು ರೂಢಿ. ಮುಖತಃ ಸಿಕ್ಕಾಗ ಎಲ್ಲರೂ ಇದ್ದಾಗ ಗಂಭೀರನಾಗಿರುತ್ತಿದ್ದ. ಸೌಜನ್ಯಯುತ ನಡವಳಿಕೆ. ಇಬ್ಬರೇ ಇರುವಂತಾದ ಸ್ವಲ್ಪ ಸಮಯದಲ್ಲೂ ಮೆಲುದನಿಯಲ್ಲಿ ವೈಯುಕ್ತಿಕವಾಗಿ ಹೊಗಳುವಿಕೆ ಪ್ರಾರಂಭಿಸುತ್ತಿದ್ದ.ಹೇಗೆ ಸ್ಪಂದಿಸಬೇಕೆನ್ನುವುದೇ ಈಕೆಗೆ ತಿಳಿಯುತ್ತಿರಲಿಲ್ಲ. ಕೆಲವೊಮ್ಮೆ ಆಕಸ್ಮಿಕವೆಂಬಂತೆ ಆಕೆಯ ಹಿಂಭಾಗ ಸ್ಪರ್ಶಿಸಿದ್ದ. ಸಲುಗೆಯೆಂದುಕೊಂಡರೂ ಆಕೆಗದು ಸರಿಬರಲಿಲ್ಲ. ಇವಳ ಮನೆಯಲ್ಲೂ ಯಾರೂ ಇಲ್ಲದಿದ್ದಾಗಲೇ ಕರೆಮಾಡುವ ಅವನ ರೀತಿ ಕಿರಿಕಿರಿ ಎನ್ನಿಸತೊಡಗಿದೆ. ಕರೆ ತೆಗೆದುಕೊಳ್ಳದೇ ಬಿಟ್ಟರೂ ಪುನಃ ಮಾಡುತ್ತಾನೆ. ಕೆಲವೊಂದು ಮುದ್ದಿನ ಹೆಸರಿನಿಂದ ಆಕೆಯನ್ನು ಕರೆಯುತ್ತಾನೆ.ಅದೂ ಫೋನ್‌ನಲ್ಲಿ ಮಾತ್ರ. ಅಥವಾ ಎಲ್ಲರೂ ಸೇರಿ ಸಂಭ್ರಮಿಸುವಾಗ ಈಕೆ ಎಲ್ಲ ಮರೆತು ಸಹಜವಾಗಿ ಮಾತಾಡುವಾಗ ಯಾರಿಗೂ ಕೇಳಿಸದಂತೆ ವೈಯುಕ್ತಿಕ ಮಾತುಗಳ ಪ್ರಯೋಗ ಮಾಡುತ್ತಾನೆ. ಆತನಿಗದು ಒಂಟಿತನ ನೀಗಿಸುವ ಹೊತ್ತು ಹೋಗಿಸುವ ದಾರಿಯಿರಬಹುದೇನೋ. ಆದರೆ ಆಕೆಗೀಗ ಫೋನ್ ಕರೆಗಳು ಯಾವುದೇ  ಬಂದರೂ ಹೆದರುವಂತಾಗಿದೆ.ಈ ವಯಸ್ಸಿನಲ್ಲಿ ಬೆಳೆದ ಮಕ್ಕಳಿರುವಾಗ ಅದೂ ಹತ್ತಿರದ ಸಂಬಂಧ ಹೇಗೆ ನಿಭಾಯಿಸಬೇಕೆಂಬುದೇ ತಿಳಿಯುತ್ತಿಲ್ಲ. ಗಂಡನಿಗೆ, ನಾದಿನಿಗೆ, ಅತ್ತೆ-ಮಾವಂದಿರಿಗೆ ಅಕಸ್ಮಾತ್ ತಿಳಿದರೂ ಅವರೆಲ್ಲ ಈಕೆಯತ್ತ ಸಂಶಯದ ಬೆರಳು ತೋರುವರೇ ಹೊರತು ಆತನನ್ನು ಎಂದಿಗೂ ಸಂಶಯಿಸಲಾರರು. ಹಾಗಿದೆ ಆತನ ವ್ಯಕ್ತಿತ್ವ, ದಿನವಿಡೀ ಈಕೆ ಒಂದು ರೀತಿಯ ಗುಂಗಿನಲ್ಲಿರುತ್ತಾಳೆ.ಆತನಿಗೇ ಕಟ್ಟುನಿಟ್ಟಾಗಿ ಹೇಳಿ ಬೈಯುವಂತೆಯೂ ಇಲ್ಲ. ವಯಸ್ಸಾದವ, ಮಾನಸಿಕವಾಗಿ ಅಥವಾ ಆರೋಗ್ಯಕ್ಕೆಲ್ಲಿ ಧಕ್ಕೆ ಮಾಡಿಕೊಳ್ಳುತ್ತಾನೋ ಎನ್ನುವ ಭಯ. ಎಲ್ಲರೊಡನೆಯೂ ಇರುವ ಸುಂದರ ಸಂಬಂಧದ ಹಳಸುವಿಕೆಯನ್ನು ಈಕೆ ಬಯಸಲಾರಳು. ಋತುಬಂಧದ ಹಂತದಲ್ಲಿರುವ ಈಕೆ ಈಗ ಮಾನಸಿಕವಾಗಿ ಬಳಲುತ್ತಿದ್ದಾಳೆ.ಆತಂಕದಲ್ಲಿ ನಿದ್ರೆಗೂ ಧಕ್ಕೆಯುಂಟಾಗಿದೆ. ಇದೂ ಒಂದು ರೀತಿಯ ಲೈಂಗಿಕ ದೌರ್ಜನ್ಯವಿರಬಹುದು ಎನ್ನಿಸತೊಡಗಿದೆ. ಈ ವಯಸ್ಸಿನಲ್ಲಿ ಇಂತಹ ಸಮಸ್ಯೆ ಅದೂ ಹತ್ತಿರದವರಿಂದ ಉಂಟಾದದ್ದನ್ನು ಒಬ್ಬಂಟಿಯಾಗಿ ಹೇಗೆ ಎದುರಿಸುವುದು ಎನ್ನುವುದೇ ಈಕೆಯ ಈಗಿನ ಮುಖ್ಯ ಪ್ರಶ್ನೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry