ಬುಧವಾರ, ಅಕ್ಟೋಬರ್ 23, 2019
22 °C

ಫ್ಯಾಕ್ಟರಿ ತ್ಯಾಜ್ಯ: ದುರ್ನಾತ,ಬೆಳೆಗೆ ಕುತ್ತು

Published:
Updated:

ಹಾಸನ: ಫ್ಯಾಕ್ಟರಿಯಿಂದ ಬರುವ ವಿಚಿತ್ರ ವಾಸನೆಯಿಂದಾಗಿ ಉಸಿರಾಡಲೂ ಆಗುತ್ತಿಲ್ಲ ಎಂದು ಕೈಗಾರಿಕಾ ಪ್ರದೇಶದ ಹಿಂಭಾಗದಲ್ಲಿ ವಾಸಿಸುವ ನಾಲ್ಕೈದು ಗ್ರಾಮಗಳ ನಿವಾಸಿಗಳು ಕಳೆದ ವಾರ ಪ್ರತಿಭಟನೆ ನಡೆಸಿದ್ದರು.

 

ಹಲವು ದಿನಗಳಿಂದ ಈ ಭಾಗದ ಹಳ್ಳಿಗಳ ಜನರ ಬದುಕು ದುರ್ಭರವಾಗಿದೆ. ಸಿದ್ಧ ಉಡುಪು ಕಾರ್ಖಾನೆಯಿಂದ ಹೊರಹೊಮ್ಮುವ ದುರ್ನಾತ ಈ ಜನರ ನಿದ್ದೆಗೆಡಿಸಿದೆ. ಊಟಮಾಡಲೂ ಸಾಧ್ಯವಾಗದೆ, ಉಸಿರಾಡಲೂ ಆಗದಂಥ ಸ್ಥಿತಿಗೆ ಬಂದಾಗ ಜನರು ಪ್ರತಿಭಟನೆಗೆ ಇಳಿದಿದ್ದರು.ಈ ಭಾಗದ ಜನರ ಸಮಸ್ಯೆ ಇದೊಂದೇ ಅಲ್ಲ. ಕಳೆದ ಹಲವು ವರ್ಷಗಳಿಂದ ಸುತ್ತಮುತ್ತಲಿನ ಹಳ್ಳಿಗಳ ಜನರು ಇನ್ನಿಲ್ಲದ ಸಂಕಷ್ಟ ಎದುರಿಸುವಂತಾಗಿದೆ. ಹಿಮ್ಮತ್ ಸಿಂಗ್ ಫ್ಯಾಕ್ಟರಿಯ ಹಿಂಭಾಗದ ಕೊಕ್ಕನಘಟ್ಟದಲ್ಲಿ 12 ಮನೆಗಳಿವೆ. ಒಂದು ಕಾಲದಲ್ಲಿ ಫಲವತ್ತಾಗಿದ್ದ ಇಲ್ಲಿನ ಭೂಮಿ ಈಗ ಯಾವ ಬೆಳೆಯೂ ಬೆಳಯದಂತಾಗಿದೆ. ಇದಕ್ಕೆ ಕಾರಣ ಕೊಕ್ಕನಘಟ್ಟ ಕೆರೆ ಮಲಿನಗೊಂಡಿರುವುದು.ರಾಸಾಯನಿಕಗಳಿಂದ ಕೂಡಿದ ಫ್ಯಾಕ್ಟರಿಯ ಮಲಿನ ನೀರು ಕೆರೆಯನ್ನು ಸೇರಿದ ಪರಿಣಾಮ ಈ ಕೆರೆಯ ನೀರನ್ನೇ ಬಳಸಿ ಬತ್ತ ಬೆಳೆಯುತ್ತಿದ್ದ ಸುಮಾರು 60 ಎಕರೆ ಜಮೀನು ಬಹುತೇಕ ಬರಡಾಗಿದೆ. `ಈ ಹೊಲಗಳಲ್ಲೆಗ ಬತ್ತ ಬೆಳೆಯುವುದೇ ಇಲ್ಲ. ಕೆರೆಯ ನೀರು ಹಾಯಿಸಿದರೆ ಬೆಳೆಯೇ ಸತ್ತು ಹೋಗುತ್ತದೆ. ಸ್ವಂತ ಕೊಳವೆ ವಾವಿ ಹೊಂದಿದವರು ಆ ನೀರಿನಿಂದ ಬತ್ತ ಬೆಳೆಯುತ್ತಿದ್ದಾರೆ. ಆದರೆ ಹಿಂದಿನ ಬೆಳೆಗೆ ಹೋಲಿಸಿದರೆ ಶೇ. ಹತ್ತರಷ್ಟು ಇಳುವರಿಯೂ ಬರುತ್ತಿಲ್ಲ. ಮುಕ್ಕಾಲು ಪಾಲು ಭೂಮಿಯಲ್ಲಿ ರೈತರು ಬಿತ್ತನೆ ಮಾಡುವುದನ್ನೇ ಬಿಟ್ಟಿದ್ದಾರೆ~ ಎಂದು ರೈತ ಮೂಡಲಗಿರಿಗೌಡ ನುಡಿಯುತ್ತಾರೆ.ಹಿಮ್ಮತ್ ಸಿಂಗ್ ಫ್ಯಾಕ್ಟರಿ ಆರಂಭವಾದ ಬಳಿಕ ಈ ಸಮಸ್ಯೆ ಬಂದಿದೆ. ವಿವಿಧ ಇಲಾಖೆಯವರು ಬಂದು ಪರೀಕ್ಷೆ ಮಾಡಿ ಹೋಗಿದ್ದಾರೆ, ನೀರು, ಮಣ್ಣು ಪರೀಕ್ಷೆಗಳೂ ನಡೆದಿವೆ. ಕೆರೆ ಮಲಿನಗೊಂಡಿದ್ದರಿಂದಲೇ ಹೀಗಾಗಿದೆ ಎಂದು ಮೂರು ವರ್ಷ ಹಿಂದೆ ಎಕರೆಗೆ 25ಸಾವಿರ ರೂಪಾಯಿಯಂತೆ ಪರಿಹಾರ ನೀಡಿದ್ದರು. ಪ್ರತಿ ವರ್ಷ ಪರಿಹಾರ ನೀಡುವುದಾಗಿ ಭರವಸೆ ಕೊಟ್ಟಿದ್ದರು. ಆದರೆ ಹಣ ಬಂದಿಲ್ಲ. ಈಗ ಎರಡು ವರ್ಷಗಳ ಹಿಂದೆ ಕೆರೆಯ ನೀರನ್ನು ಬಳಸಬೇಡಿ, ದನಕರುಗಳಿಗೆ ಕುಡಿಸಿದರೂ ಅಪಾಯ ಎಂದರು. ದನಕರುಗಳಿಗೆ ನೀರು ಕುಡಿಸಲು ತೊಟ್ಟಿ ನಿರ್ಮಿಸುವುದಾಗಿ ಫ್ಯಾಕ್ಟರಿಯವರು ಹೇಳಿದ್ದರು. ಎರಡು ವರ್ಷದ ಹಿಂದೆ ಊರಲ್ಲಿ ಕೆಲವು ತೊಟ್ಟಿಗಳನ್ನು ನಿರ್ಮಿಸಿ ಕೊಳವೆ ಬಾವಿಯಿಂದ ನೀರು ಕೊಟ್ಟಿದ್ದರು. ಕ್ರಮೇಣ ಅದನ್ನೂ ನಿಲ್ಲಿಸಿದ್ದಾರೆ. ಈಗ ಕೆರೆಯ ನೀರನ್ನೇ ದನಕರುಗಳು ಕುಡಿಯುತ್ತವೆ.ಕೆರೆಯ ಪಕ್ಕದಲ್ಲಿ ಮಂಡಲ ಪಂಚಾಯಿತಿಯವರೇ ಒಂದು ಕೊಳವೆ ಬಾವಿ ಕೊರೆದಿದ್ದರು. ನೀರಿನ ತಪಾಸಣೆ ನಡೆಸಿರುವ ವೈದ್ಯರು ಅದರ ನೀರನ್ನೂ ಕುಡಿಯಲೇ ಬಾರದು ಎಂದು ಸೂಚನೆ ನೀಡಿದ್ದಾರೆ. ಬೇರೆ ನೀರು ಎಲ್ಲಿಂದ ತರಬೇಕು ? ಎಂಬುದು ಇಲ್ಲಿಯ ಜನರ ಸಮಸ್ಯೆ. ನೀರು ಕಲುಷಿತವಾಗಿದೆ ಎಂದು ತಿಳಿದಿದ್ದರೂ, ಬಟ್ಟೆ ಬರೆ ಒಗೆಯಲು, ಪಾತ್ರೆ ತೊಳೆಯಲು ಇದನ್ನೇ ಬಳಸುತ್ತಾರೆ. ದೇವಸ್ಥಾನದ ಸಮೀಪದ ಕೊಳವೆ ಬಾವಿಯ ನೀರನ್ನು ಕುಡಿಯಲು ಬಳಸುತ್ತಾರೆ. ಆ ನೀರೂ ಶುದ್ಧವಾಗಿಲ್ಲ ಎಂದು ರೈತ ತಿಮ್ಮೇಗೌಡ ದೂರುತ್ತಾರೆ.

ತಿಮ್ಮೇಗೌಡ ಸ್ವಲ್ಪ ಜಮೀನಿನಲ್ಲಿ ತೆಂಗು ಬೆಳೆದಿದ್ದಾರೆ. ಬತ್ತ ಬೆಳೆಯುತ್ತಿದ್ದ ಭೂಮಿಯನ್ನು ಹಲವು ವರ್ಷಗಳಿಂದ ಬಾಳು ಬಿಟ್ಟಿದ್ದಾರೆ.ದುರ್ವಾಸನೆಯಿಂದ ಕಂಗೆಟ್ಟಿದ್ದ ರೈತರೆಲ್ಲ ಕಳೆದವಾರ ಪ್ರತಿಭಟನೆ ನಡೆಸಿದ್ದರು. ಇದಾದ ಬಳಿಕ ಪ್ರಕರಣದ ಬಗ್ಗೆ ತನಿಖೆ ನಡೆಸುವುದಾಗಿ ತಿಳಿಸಿರುವ ಜಿಲ್ಲಾಧಿಕಾರಿ ಮಾಲಿನ್ಯ ನಿಯಂತ್ರಣ ಮಂಡಳಿಯ ಸದಸ್ಯ ಕಾರ್ಯದರ್ಶಿಗೆ ಈಬಗ್ಗೆ ಪತ್ರ ಬರೆದಿದ್ದಾರೆ. ಫ್ಯಾಕ್ಟರಿಯಿಂದ ಬರುವ ದುರ್ವಾಸನೆಯಿಂದ ಮನುಷ್ಯರಿಗೆ ಎಷ್ಟು ಹಾನಿಯಾಗುತ್ತದೆ ಎಂಬ ಬಗ್ಗೆ ತನಿಖೆ ನಡೆಸಬೇಕಾಗಿದೆ.

 

ಆದರೆ ಹಾಸನದಲ್ಲಿ ಅದಕ್ಕೆ ಬೇಕಾದಂಥ ಉಪಕರಣಗಳಾಗಲಿ, ವ್ಯವಸ್ಥೆಯಾಗಲಿ ಇಲ್ಲ. ಬೆಂಗಳೂರಿನಿಂದ ಅಧಿಕಾರಿಗಳು ಬಂದು ಪರೀಕ್ಷೆ ನಡೆಸಬೇಕಾಗಿದೆ. ಪ್ರತಿಭಟನೆಯ ನಂತರ ಇಡೀ ದಿನ ದುರ್ವಾಸನೆ ಬರುವುದು ನಿಂತಿದ್ದರೂ, ಸಂಜೆ ಇಡೀ ಊರಿನಲ್ಲಿ ನಿಲ್ಲಲು ಸಾಧ್ಯವಾಗದ ರೀತಿ ವಾಸನೆ ಬರುತ್ತದೆ ಎಂದು ರೈತರು ನುಡಿಯುತ್ತಾರೆ. ಕಲುಷಿತ ನೀರನ್ನು ಕೆರೆಗೆ ಬಿಡದಂತೆ ಫ್ಯಾಕ್ಟರಿಗೆ ನೋಟಿಸ್ ನೀಡಲಾಗಿದೆ ಎಂದು ಪರಿಸರ ಮಾಲಿನ್ಯ ನಿಯಂತ್ರಣ ಇಲಾಖೆಯವರು ನುಡಿಯುತ್ತಾರೆ. ಆದರೆ ಈಗಲೂ ನೀರು ಕೆರೆಯನ್ನು ಸೇರುತ್ತಿದೆ.ಕೈಗಾರಿಕಾ ವಲಯಕ್ಕೆ ಬೂಮಿ ಬಿಟ್ಟು ಪರಿಹಾರ ಪಡೆದ ರೈತರ ಸ್ಥಿತಿ ಒಂದಾದರೆ, ಕೈಗಾರಿಕಾ ಪ್ರದೇಶದೊಳಗೆ ಸೇರ್ಪಡೆಯಾಗದೆ ಪರಿಹಾರವೂ ಇಲ್ಲದೆ, ಭೂಮಿ ಇದ್ದೂ ಪ್ರಯೋಜನವಿಲ್ಲದಂತಾದ ಈ ರೈತರ ಸ್ಥಿತಿ ಇನ್ನೊಂದು ರೀತಿಯದ್ದಾಗಿದೆ.

ಚುನಾವಣಾ ಫಲಿತಾಂಶ 2019 | ಹರಿಯಾಣ ಮತ್ತು ಮಹಾರಾಷ್ಟ್ರ ವಿಧಾನಸಭೆ 2019 ಚುನಾವಣೆಗೆ ಸಂಬಂಧಿಸಿದ ಸಮಗ್ರ ಸುದ್ದಿ, ಮಾಹಿತಿ, ವಿಶ್ಲೇಷಣೆ ಇಲ್ಲಿ ಲಭ್ಯ.

ಮಹಾರಾಷ್ಟ್ರ ವಿಧಾನಸಭೆಯ ಫಲಿತಾಂಶಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ

ಹರಿಯಾಣ ವಿಧಾನಸಭೆಯ ಫಲಿತಾಂಶಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ

ಪ್ರತಿಕ್ರಿಯಿಸಿ (+)