ಬುಧವಾರ, ನವೆಂಬರ್ 20, 2019
22 °C
ಕೆಎಂಎಫ್ ಹಾಲಾಹಲ ಭಾಗ - 6

ಫ್ಯಾಟೂ ಕಮ್ಮಿ ರೇಟೂ ಕಮ್ಮಿ

Published:
Updated:

ಬೆಂಗಳೂರು: `ಹಾಲಿಗೆ ನೀವು ಕೊಡ್ತಿರೋ ರೇಟು ಕಮ್ಮಿಯಾಯ್ತು' ಎಂದು ಗೊಣಗುವ ರೈತರಿಗೆ ಸ್ಥಳೀಯ ಹಾಲು ಉತ್ಪಾದಕ ಸೊಸೈಟಿಗಳು ಮುಖಕ್ಕೆ ಹೊಡೆದಂತೆ ಕೊಡುವ ಒಂದೇ ಉತ್ತರ `ಫ್ಯಾಟೂ ಕಮ್ಮಿ ರೇಟೂ ಕಮ್ಮಿ'.ಈ ಫ್ಯಾಟಿಗೂ, ರೇಟಿಗೂ, ಬದುಕಿನ ಬಂಡಿ ಎಳೆಯಲು ಹೈನುಗಾರಿಕೆಯ ಬೆನ್ನು ಹತ್ತಿರುವ ರೈತರಿಗೂ ನಿಕಟ ಸಂಬಂಧ. ಗ್ರಾಹಕರಿಗೇನೋ ತಾವು ಬಯಸುವಷ್ಟು ಫ್ಯಾಟ್‌ಗೆ (ಕೊಬ್ಬಿನ ಅಂಶ) ತಕ್ಕಂತೆ ನೀಲಿ, ಹಸಿರು, ಕಿತ್ತಳೆ ಬಣ್ಣದ ಸುಂದರ ಪ್ಯಾಕೆಟ್‌ಗಳಲ್ಲಿ ಹಾಲು ಲಭ್ಯವಾಗುತ್ತದೆ. ಆದರೆ ರೈತರಿಂದ ಕೊಳ್ಳುವ ಲಕ್ಷಾಂತರ ಲೀಟರ್ ಹಾಲಿಗೆ, ಅದರಲ್ಲಿರುವ ಫ್ಯಾಟ್‌ಗೆ ತಕ್ಕಂತೆ ರೇಟು ನಿಗದಿ ಮಾಡುವ ಸೊಸೈಟಿಗಳಿಗೆ ಮಣ್ಣಿನ ಮಕ್ಕಳಿಂದ ಹಿಡಿಶಾಪ ತಪ್ಪಿದ್ದಲ್ಲ.ಇದೆಲ್ಲ ರೈತರು ತೆರೆದುಕೊಂಡ ಆಧುನಿಕತೆಯ ಫಲ. `ಯಾರೇ ಕೂಗಾಡಲಿ ಯಾರೇ ಹೋರಾಡಲಿ ಎಮ್ಮೇ ನಿನಗೆ ಸಾಟಿಯಿಲ್ಲ...' ಎಂಬಂತೆ ಬಿಸಿಲಿಗೆ, ಮಳೆಗೆ, ಚಳಿಗೆ ಎಲ್ಲಕ್ಕೂ ಒಗ್ಗಿಕೊಂಡು ಸರ್ವ ಕಾಲಕ್ಕೂ ಸಲ್ಲುತ್ತಿದ್ದ ಎಮ್ಮೆಗಳು, ನಾಟಿ ಹಸುಗಳನ್ನು ಸಾಕುತ್ತಿದ್ದಾಗ ರೈತರಿಗೆ ಹೈನುಗಾರಿಕೆ ಒಂದು ಹೊರೆ ಎಂದೇ ಅನಿಸಿರಲಿಲ್ಲ. ಈ ದೇಸಿ ತಳಿಗಳ ಉತ್ತಮ ಹಾಲು, ಮೊಸರು ಉಂಡು ಗಟ್ಟಿಮುಟ್ಟಾಗಿದ್ದ ಹಳ್ಳಿಗರು, ದೈಹಿಕ ಸಾಮರ್ಥ್ಯದಲ್ಲಿ ನಾಜೂಕಿನ ಸಿಟಿ ಮಂದಿಗೆ ಸೆಡ್ಡು ಹೊಡೆಯುತ್ತಿದ್ದರು.ಕಾಯಿಸಿದ ಬೆಳ್ಳಂ ಬೆಳ್ಳಗಿನ ಗಟ್ಟಿ ಹಾಲು, ಕೆನೆ ಮೊಸರು ಉಂಡವರೇ ಬಲ್ಲರು ಅದರ ಸೊಗಸು ಎಂಬಂತಿತ್ತು ಘಂ ಎನ್ನುವ ಹಾಲಿನ ಸವಿ ರುಚಿ. ಈ ತಳಿಗಳಲ್ಲಿ ಹೆಚ್ಚು ಹಾಲು ಬರದಿದ್ದರೂ ಅಪ್ಪಟವಾಗಿದ್ದ ಅದು ಕುಡಿಯಲು ಯೋಗ್ಯವಾಗಿತ್ತು. ಹೈಬ್ರಿಡ್ ಹುಲ್ಲು, ರಾಸಾಯನಿಕ ಗೊಬ್ಬರ ಬಳಸಿ ಬೆಳೆದ ಆಹಾರ ತಿನ್ನುವ ಸೀವೆು ಹಸುಗಳ ಹಾಲನ್ನು ಹೆಚ್ಚು ಕುಡಿಸಿದರೆ, ಮಕ್ಕಳು ಅಕಾಲ ಪ್ರೌಢಾವಸ್ಥೆಗೆ ಬಂದುಬಿಟ್ಟಾರು ಎಂಬ ಈಗಿನ ಪೋಷಕರ ಆತಂಕ ಎಳ್ಳಷ್ಟೂ ಆಗಿನವರಿಗೆ ಇರಲಿಲ್ಲ. ವಿಟಮಿನ್ `ಎ' ಪೂರೈಸುವ ದೇಸಿ ತಳಿಗಳ ಹಾಲನ್ನು ಹೆಚ್ಚು ಹೆಚ್ಚು ಕುಡಿದಷ್ಟೂ ಮಕ್ಕಳು ದಷ್ಟಪುಷ್ಟವಾಗಿ ಆರೋಗ್ಯವಂತರಾಗಿ ಇರುತ್ತಿದ್ದರು.ಆದರೆ ಹೈನುಗಾರಿಕೆ ಹೈನೋದ್ಯಮವಾಗಿ ರೂಪಾಂತರಗೊಂಡಂತೆಲ್ಲ ದೇಸಿ ತಳಿಗಳು ಹಿಂದೆ ಸರಿದವು. ಅವು ಕರೆಯುತ್ತಿದ್ದ ಕೇವಲ ಒಂದೆರಡು ಲೀಟರ್ ಹಾಲು ಮನೆಮಂದಿಗಷ್ಟೇ ಸಾಕಾಗುತ್ತಿತ್ತು. ಎಮ್ಮೆಗಳಿಗೆ ಪ್ರಿಯವಾದ ಕೆರೆ ಕಾಲುವೆಗಳು ಬತ್ತಿದ್ದರಿಂದ ಅವುಗಳನ್ನು ಸಾಕುವುದೂ ದುಸ್ತರವಾಯಿತು. ಹಾಲಿನಲ್ಲಿ ದುಡ್ಡು ಮಾಡುವ ಕನಸು ಗರಿಗೆದರತೊಡಗಿದಂತೆ ರೈತರು, ಒಮ್ಮೆಗೇ ಹತ್ತಾರು ಲೀಟರ್ ಹಾಲು ಕರೆಯುವ ಸೀಮೆ ಹಸುಗಳ ಮೋಡಿಗೆ ಒಳಗಾದರು. ಸಾವಿರಾರು ರೂಪಾಯಿ ಕೊಟ್ಟು ಅವುಗಳನ್ನು ಖರೀದಿಸಿ ತಂದರು. ಹೀಗೆ ಕೊಡಗಟ್ಟಲೆ ಹಾಲು ಹಿಂಡುವ ಅವರ ಕನಸೇನೋ ನನಸಾಯಿತು. ಆದರೆ ಅಷ್ಟೊಂದು ಹಾಲನ್ನೆಲ್ಲ ಏನು ಮಾಡುವುದು?ಅಕ್ಕಪಕ್ಕದವರಿಗೆ ಒಂದಷ್ಟು ಮಾರಿದರೂ ಲೀಟರ್‌ಗಟ್ಟಲೆ ಹಾಲು ಉಳಿಯುತ್ತದೆ. ಸೀವೆು ಹಸುಗಳ ಹಾಲು ತೆಳು. ಇದರಿಂದ, ಮೊದಲೆಲ್ಲ ಖುದ್ದು ರೈತರ ಮನೆಗಳ ಬಳಿಯೇ ಬಂದು ಡಬ್ಬಗಳಲ್ಲಿ ಹಾಲು ಸಂಗ್ರಹಿಸಿ, ಅದಕ್ಕೆ ಒಂದಷ್ಟು ನೀರು ಬೆರೆಸಿ ಸಮೀಪದ ಪಟ್ಟಣ/ ನಗರಗಳ ಮಂದಿಗೆ, ಹೋಟೆಲ್‌ಗಳಿಗೆ ಸರಬರಾಜು ಮಾಡುತ್ತಿದ್ದ `ಡಬ್ಬಾವಾಲಾ'ಗಳಿಗೆ ಈ ಹಾಲು ವರ್ಜ್ಯವಾಗತೊಡಗಿತು. ಮೊದಲೇ ನೀರ‌್ಹಾಲು, ಅದಕ್ಕೆ ಇನ್ನಷ್ಟು ನೀರು ಬೆರೆಸಿದರೆ ಕೊಳ್ಳುವವರಿಲ್ಲ. ಹೀಗಾಗಿ ಲೀಟರ್‌ಗಟ್ಟಲೆ ಕರೆದಿಟ್ಟುಕೊಂಡ ಹಾಲನ್ನು ಕೆಎಂಎಫ್ ಡೇರಿಗಳಿಗೆ ಹಾಕದೆ ರೈತರಿಗೆ ಗತ್ಯಂತರವಿಲ್ಲ.ಹೀಗೆ ರೈತರು ತರುವ ಹಾಲನ್ನು ಸೊಸೈಟಿಗಳು ಎರಡು ಬಗೆಯ ಪರೀಕ್ಷೆಗೆ ಒಳಪಡಿಸುತ್ತವೆ. ನಮ್ಮ ಜ್ವರದ ಪ್ರಮಾಣ ಅಳೆಯಲು ಥರ್ಮಾಮಿಟರ್ ಇರುವಂತೆಯೇ ಲ್ಯಾಕ್ಟೋಮೀಟರ್‌ಗಳು ಹಾಲಿನ ಗುಣಮಟ್ಟ ಅಳೆಯುತ್ತವೆ. ಕೆಎಂಎಫ್ ಮಾನದಂಡದ ಪ್ರಕಾರ, ಹಾಲಿನಲ್ಲಿ ನಿಗದಿತ ಪ್ರಮಾಣದ ಕೊಬ್ಬಿನ ಅಂಶ ಇರಲೇಬೇಕು. ಈ ಹಾಲನ್ನು ಸಂಸ್ಕರಿಸಿ ಮಾರುವ ಸಂಸ್ಥೆ, ಹೆಚ್ಚುವರಿ ಕೊಬ್ಬಿನಂಶದಿಂದ ಬೆಣ್ಣೆ, ತುಪ್ಪ, ಪೇಡ, ಮೈಸೂರು ಪಾಕ್, ಕುಂದಾದಂತಹ ಸಿಹಿ ತಿನಿಸುಗಳನ್ನು ತಯಾರಿಸುತ್ತದೆ.ಮಾರಾಟವಾಗದೇ ಉಳಿಯುವ ಹಾಲನ್ನು ಪುಡಿ ಮಾಡಿ ಮಾರುತ್ತದೆ. ಹೀಗಾಗಿ ಉತ್ತಮ ಗುಣಮಟ್ಟದ ಹಾಲು ಲಭ್ಯವಾಗದಿದ್ದರೆ ಸಂಸ್ಥೆಗೆ ನಷ್ಟ ತಪ್ಪಿದ್ದಲ್ಲ.ಸ್ವಭಾವತಃ ಈಗಿನ ಹಾಲಿನಲ್ಲಿ ಬರುವ ನೀರಿನ ಅಂಶ, ಅದರೊಟ್ಟಿಗೆ ಹಾಲಿನ ಗುಣಮಟ್ಟ ನಿರ್ವಹಣೆಯ ಅರಿವಿಲ್ಲದ ರೈತರ ಅಜ್ಞಾನ, ಹಸುಗಳಿಗೆ ಪೌಷ್ಟಿಕಾಂಶಯುಕ್ತ ಆಹಾರ ಒದಗಿಸಲಾಗದ ಅಸಹಾಯಕತೆ, ದುಡ್ಡಿಗಾಗಿ ಹಾಲಿಗೆ ನೀರು ಬೆರೆಸುವ ದುರಾಸೆ ಎಲ್ಲವೂ ಸೇರಿಕೊಂಡು `ನೀ ಕೊಡೆ, ನಾ ಬಿಡೆ' ಎಂಬಂತೆ ಗುಣಮಟ್ಟದ ಹಾಲು ಪಡೆಯಲು ಕೆಎಂಎಫ್ ಹೆಣಗಾಡುತ್ತಲೇ ಇರುತ್ತದೆ. ಗುಣಮಟ್ಟ ಹೆಚ್ಚಿಸಲು ನಡೆಸುತ್ತಿರುವ ಅದರ ಸಾಕಷ್ಟು ಪ್ರಯತ್ನಗಳು ನಿರೀಕ್ಷಿತ ಫಲ ಕೊಡುತ್ತಿಲ್ಲ. ಕಡೆಗೆ ಇದೊಂದು ಬಗೆಹರಿಯದ ಸಮಸ್ಯೆಯಾಗಿ `ಫ್ಯಾಟಿಲ್ಲ ಫ್ಯಾಟಿಲ್ಲ' ಎಂದು ಸೊಸೈಟಿಗಳು ಬೊಬ್ಬೆ ಹೊಡೆದುಕೊಂಡರೆ, `ರೇಟಿಲ್ಲ ರೇಟಿಲ್ಲ' ಎಂದು ರೈತರು ಗೋಳಾಡುತ್ತಲೇ ಇರುತ್ತಾರೆ.

ಇದೆಲ್ಲದರ ನಡುವೆಯೂ, ಹೆತ್ತ ಮಕ್ಕಳಿಗಿಂತ ಹೆಚ್ಚಾಗಿ ಹಸುಗಳನ್ನು ಸಾಕುವ ರೈತರೂ ಹಲವರಿದ್ದಾರೆ. ಹೈನುಗಾರಿಕೆಯನ್ನು ಗಂಭೀರವಾಗಿ ಪರಿಗಣಿಸಿರುವ ಅವರು, ತಮ್ಮ ಹೊಟ್ಟೆ ಬಟ್ಟೆ ಕಟ್ಟಿಯಾದರೂ ಹಸುಗಳನ್ನು ಪೋಷಿಸುತ್ತಾರೆ. ಹೀಗೆ ಕಷ್ಟಪಟ್ಟು ಸಾಕಿ ಸಲಹಿದ ಹಸುಗಳು ಕೊಡುವ ಗಟ್ಟಿ ಹಾಲನ್ನು ಡೇರಿಗೆ ಹಾಕಿ ಬಂದವರಿಗೆ, ಹಣ ಸಂದಾಯವಾದಾಗ ಮಾತ್ರ ಮುಖ ಮುದುಡುತ್ತದೆ. ಏಕೆಂದರೆ ಪ್ರತಿ ರೈತನಿಗೂ ತಾನು ತರುವ ಹಾಲಿನ ಕೊಬ್ಬಿನಂಶದ ಆಧಾರದ ಮೇಲೆ ಪ್ರತ್ಯೇಕವಾದ ದರ ಕೈಸೇರುತ್ತಿಲ್ಲ.ಸಾಮಾನ್ಯವಾಗಿ ಕನಿಷ್ಠ 100- 150 ಲೀಟರ್ ಹಾಲು ಸಂಗ್ರಹವಾಗುವ ಎಲ್ಲ ಹಳ್ಳಿಗಳಲ್ಲೂ ಸೊಸೈಟಿಗಳು ಇದ್ದೇ ಇರುತ್ತವೆ. ಅವು ಸಂಗ್ರಹಿಸಿ ತರುವ ಹಾಲಿನ ಗುಣಮಟ್ಟವನ್ನು ಆಧರಿಸಿ, ಜಿಲ್ಲಾ ಸೊಸೈಟಿಯು ಒಟ್ಟಾರೆ ದರ ನಿಗದಿ ಮಾಡುತ್ತದೆ. ಹಾಲಿನಲ್ಲಿ ನಿಗದಿತ ಗುಣಮಟ್ಟ ಇಲ್ಲದಿದ್ದರೆ ಅಂತಹ ಸೊಸೈಟಿಗಳಿಗೆ ದಂಡದ ರೂಪದಲ್ಲಿ ಕಡಿವೆು ದರ ನೀಡಲಾಗುತ್ತದೆ.ಇದರಿಂದ ನೀರು ಹಾಲು ತರುವವರು, ಉತ್ತಮವಾದ ಹಾಲು ಹಾಕುವವರು ಎಲ್ಲರಿಗೂ `ಗುಂಪಿನಲ್ಲಿ ಗೋವಿಂದ' ಎಂಬಂತೆ ಹೆಚ್ಚುಕಡಿಮೆ ಒಂದೇ ರೀತಿಯ ದರ ಸಿಗುತ್ತದೆ. ನೀರು ಹಾಲು ಖರೀದಿಸದೆ ವಾಪಸ್ ಕಳಿಸಿದರೆ ಸ್ಥಳೀಯರನ್ನು ಎದುರು ಹಾಕಿಕೊಳ್ಳಬೇಕಾಗುತ್ತದೆ ಎಂಬ ಆತಂಕ ಅಥವಾ ಸದ್ದಿಲ್ಲದೇ ಹೆಚ್ಚುತ್ತಿರುವ ಖಾಸಗಿ ಡೇರಿಗಳತ್ತ ಅವರು ಮುಖ ಮಾಡಿಬಿಟ್ಟರೆ ಎಂಬ ಚಿಂತೆ ನಿರೀಕ್ಷಿತ ಗುಣಮಟ್ಟವಿಲ್ಲದ ಹಾಲನ್ನೂ ಕೊಳ್ಳಲು ಸೊಸೈಟಿಗಳನ್ನು ಪ್ರೇರೇಪಿಸುತ್ತದೆ.`ಕಳೆದ ವರ್ಷ ಲೀಟರ್ ಹಾಲಿಗೆ 2 ರೂಪಾಯಿ ಪ್ರೋತ್ಸಾಹಧನವೂ ಸೇರಿದಂತೆ ನಮಗೆ 24 ರೂಪಾಯಿ ಸಿಕ್ಕಿತ್ತು. ಬೋನಸ್ ರೂಪದಲ್ಲಿ 2 ರೂಪಾಯಿ ದೊರೆತಿತ್ತು. ಅದನ್ನು ನೋಡಿ ಸುತ್ತಮುತ್ತಲಿನ ಎಲ್ಲ ರೈತರೂ ಹಸುಗಳನ್ನು ಸಾಕಲು ಶುರು ಮಾಡಿದರು. ಈಗಂತೂ ಹಾಲಿನ ಬೆಲೆ ಕೇಳುವಂತೆಯೇ ಇಲ್ಲ. ಜನವರಿಯಲ್ಲಿ ಲೀಟರ್‌ಗೆ 15.25 ರೂಪಾಯಿ, ಫೆಬ್ರುವರಿ ಕೊನೆಯ ವಾರ 18.65 ರೂಪಾಯಿ ಪಡೆದುಕೊಂಡಿದ್ದೇವೆ. ನಮ್ಮ ಬದುಕನ್ನೇ ಹಸುಗಳ ಸೇವೆಗೆ ಮುಡಿಪಾಗಿಟ್ಟು ಅತ್ಯಂತ ಜತನದಿಂದ ಅವುಗಳನ್ನು ಸಾಕಿ ಗಟ್ಟಿ ಹಾಲು ತಂದು ಕೊಡುವ ನಮಗೂ ಒಂದೇ ದರ, ಬರೀ ಬಯಲಲ್ಲಿ ಮೇಯಿಸಿ ನೀರ‌್ಹಾಲು ತಂದುಕೊಡುವವರಿಗೂ ಒಂದೇ ದರ, ಇದು ಯಾವ ನ್ಯಾಯ' ಎಂದು ಪ್ರಶ್ನಿಸುತ್ತಾರೆ ದಿನಕ್ಕೆ 30 ಲೀಟರ್ ಹಾಲನ್ನು ಕೆಎಂಎಫ್ ಸೊಸೈಟಿಗೆ ಹಾಕುವ ಮೈಸೂರು ಜಿಲ್ಲೆ ರಾಯರಹುಂಡಿಯ ಸಿ.ಎಸ್.ಅನುರಾಧ.`ಮೊದಲೆಲ್ಲ ಹಾಕಿದ ಹಾಲಿಗೆ ಸರಿಯಾಗಿ ವಾರಕ್ಕೊಮ್ಮೆ ಹಣ ಸಂದಾಯವಾಗುತ್ತಿತ್ತು. ಇತ್ತೀಚೆಗಂತೂ ಹಣ ಬಿಡುಗಡೆಯಾಗಿ ಬರುವುದೇ ನಿಧಾನವಾಗುತ್ತಿದೆ. ಫೆಬ್ರುವರಿ ಮೊದಲ ವಾರದಲ್ಲಿ ಸಂಘದವರು ಖರೀದಿಸಿದ ಹಾಲಿನ ಹಣ ಒಂದು ತಿಂಗಳ ನಂತರ ನಮ್ಮ ಕೈ ಸೇರಿದೆ' ಎನ್ನುತ್ತಾರೆ.ಆದರೆ, ಕೊಪ್ಪಳ ಜಿಲ್ಲೆ ಹಿರೇಸಿಂದಗಿಯ ರೈತ ಹನುಮಂತಪ್ಪ ಮಾತ್ರ `ನಮ್ಗೆಲ್ಲ ಲೀಟರ್ ಹಾಲಿಗೆ ಈ ಸಲ ಪ್ರೋತ್ಸಾಹಧನವೂ ಸೇರ್‌ದಂಗೆ 24 ರೂಪಾಯಿ ಬಂದೈತೆ ನೋಡ್ರಿ' ಎನ್ನುತ್ತಾರೆ.ಗ್ರಾಹಕರು ಕೊಳ್ಳುವ ಹಾಲಿನ ದರ ನಿಗದಿ ಮಾಡುವುದು ಕೆಎಂಎಫ್. ಆದರೆ ರೈತರಿಗೆ ಕೊಡುವ ಹಾಲಿನ ಖರೀದಿ ದರವನ್ನು ಕೆಎಂಎಫ್‌ನ ಪೂರ್ವಾನುಮತಿಯೊಂದಿಗೆ ಆಯಾ ಜಿಲ್ಲಾ ಒಕ್ಕೂಟಗಳು ನಿರ್ಧರಿಸುತ್ತವೆ. ಹೀಗಾಗಿ ರೈತರಿಗೆ ಸಿಗುವ ದರ ಎಲ್ಲ ಜಿಲ್ಲೆಗಳಲ್ಲೂ ಏಕರೂಪದಲ್ಲಿ ಇರುವುದಿಲ್ಲ.`ಗ್ರಾಹಕರಿಗೆ ಹಾಲಿನ ಬೆಲೆ ಏರಿಕೆ ಮಾಡುವಾಗ ತಿಂಗಳುಗಟ್ಟಲೆ ಚರ್ಚೆ ಮಾಡಿ ಸಭೆ ಕರೆದು, ಎಲ್ಲರಿಗೂ ಸ್ಪಷ್ಟೀಕರಣ ಕೊಟ್ಟು ನಂತರ ಏರಿಸಲಾಗುತ್ತದೆ, ಆದರೆ ನಮ್ಮಿಂದಲೇ ನಡೆಯುತ್ತಿರುವ ಸಹಕಾರ ಸಂಘಗಳು ಇದ್ದಕ್ಕಿದ್ದಂತೆ ಹಾಲಿನ ಖರೀದಿ ದರ ಇಳಿಸಿಬಿಡುತ್ತವೆ. ಇದ್ಯಾವ ನ್ಯಾಯ' ಎಂದು ಕೇಳುತ್ತಾರೆ ರೈತರು.`ಗ್ರಾಹಕರಿಗೆ ಬೆಲೆ ಏರಿಸಿದರೆ ಸಾರ್ವತ್ರಿಕವಾಗಿ ಖಂಡಿಸುತ್ತಾರೆ. ಆದರೆ ಎಷ್ಟೇ ಕಡಿಮೆ ದರ ಕೊಟ್ಟರೂ ಹಾಲು ಉತ್ಪಾದಕರು ಸಂಘಕ್ಕೆ ಹಾಲು ಕೊಟ್ಟೇಕೊಡುತ್ತಾರೆ. ಯಾಕೆಂದರೆ ಹಾಲು ಸೂಕ್ಷ್ಮವಾದ ಪದಾರ್ಥ. ಅದನ್ನು ಹಸುವಿನ ಕೆಚ್ಚಲಲ್ಲಿ ಹೆಚ್ಚು ಹೊತ್ತು ಬಿಡಲಾಗದು, ಬಿಟ್ಟರೆ ಕೆಚ್ಚಲು ಬಾವು ಬರುತ್ತದೆ. ಹಾಲು ಕರೆದ ಮೇಲೆ ಮನೆಯಲ್ಲೇ ಇಟ್ಟುಕೊಂಡರೆ ಒಡೆದು ಹೋಗುತ್ತದೆ. ಹೇಗಾದರೂ ಆ ಹೊತ್ತಿನ ಹಾಲು ಖರ್ಚಾದರೆ ಸಾಕೆಂದು ಸಂಘಕ್ಕೆ ಹಾಕೇಹಾಕುತ್ತಾರೆ ಎಂಬುದು ಒಕ್ಕೂಟಗಳಿಗೆ ತಿಳಿದಿದೆ. ನಮ್ಮ ಈ ಅಸಹಾಯಕತೆಯನ್ನು ಸೊಸೈಟಿಗಳು ಚೆನ್ನಾಗಿ ಬಳಸಿಕೊಳ್ಳುತ್ತಿವೆ' ಎಂದು ಅವರು ಆಕ್ಷೇಪಿಸುತ್ತಾರೆ.`ಹಿಂದೆ ಹಾಲು ಖರೀದಿಯಲ್ಲಿ ಇದ್ದ ಇಂತಹ ಲೋಪಗಳನ್ನು ಸರಿಪಡಿಸಲು ಸಾಕಷ್ಟು ಪ್ರಯತ್ನ ಮಾಡಲಾಗುತ್ತಿತ್ತು. ನಾಗರಾಜ್ ಎನ್ನುವವರು ಸಹಕಾರ ಸೊಸೈಟಿಗಳ ಜಂಟಿ ರಿಜಿಸ್ಟ್ರಾರ್ ಆಗಿದ್ದ ಕಾಲದಲ್ಲಿ ಎಲ್ಲ ಸೊಸೈಟಿಗಳಿಗೂ ಖುದ್ದು ಭೇಟಿ ಕೊಟ್ಟು ಲೋಪದೋಷಗಳನ್ನು ಸರಿಪಡಿಸಿದ್ದರು. ಹಾಲಿನ ಪುಡಿ ಬೆರೆಸಿ ಅದರ ಗುಣಮಟ್ಟವನ್ನು ಮೇಲ್ದರ್ಜೆಗೆ ಏರಿಸಲು ಕ್ರಮ ಕೈಗೊಂಡಿದ್ದರು. 13 ಕೋಟಿ ರೂಪಾಯಿಯ ಪುಡಿ ಬೆರೆಸಿ ಹಾಲು ಮಾರಿದ್ದರು' ಎಂದು ಸ್ಮರಿಸುತ್ತಾರೆ ಕೆಎಂಎಫ್‌ನ ಸಿಬ್ಬಂದಿ.ಮುಂದುವರಿಯುವುದು...

ಪ್ರತಿಕ್ರಿಯಿಸಿ (+)