ಫ್ಯಾಷನ್ ಹಿತಮಿತ

7

ಫ್ಯಾಷನ್ ಹಿತಮಿತ

Published:
Updated:
ಫ್ಯಾಷನ್ ಹಿತಮಿತ

ಚಿಗರೆ ಕಣ್ಣುಗಳ ಈ ಚೆಲುವೆ ಸ್ಕೆಥಾಸ್ಕೋಪ್ ಹಿಡಿದು ವೈದ್ಯೆಯಾಗಬೇಕೆಂಬ ಕನಸು ಕಂಡಿದ್ದಳು. ಆದರೆ ಪಿಯುಸಿಯಲ್ಲಿ ಕಡಿಮೆ ಅಂಕಗಳು ಬಂದ ಕಾರಣಕ್ಕೆ ಆ ಆಸೆಗೆ ತಣ್ಣೀರೆರಚಿದಂತಾಯಿತು. ಕೊನೆಗೆ ಸಿಲಿಕಾನ್ ಸಿಟಿಗೆ ಬಂದು ಬಿ.ಎ (ಎಚ್.ಇ.ಪಿ) ಮಾಡಬೇಕಾಯಿತು. ತೃತೀಯ ವರ್ಷದಲ್ಲಿದ್ದಾಗ ಕಾಲೇಜಿನ ಫ್ಯಾಷನ್ ವಿಭಾಗದಲ್ಲಿ ಅವಕಾಶ ಸಿಕ್ಕಿದ್ದೇ ತಡ, ಅಲ್ಲಿಂದ ಆಕೆಯ ದಾರಿಯೂ ಬದಲಾಯಿತು.ಮಾಡೆಲಿಂಗ್ ಕ್ಷೇತ್ರದಲ್ಲಿ ಎರಡು ವರ್ಷಗಳಿಂದ ಮಿಂಚುತ್ತಿರುವ ದರ್ಶಿತ್‌ಮಿತ ಈ ರೂಪದರ್ಶಿ. ಗಾಘ್ರಾ ಚೋಲಿ, ಮದುವೆ ಸಂಗ್ರಹ ಹಾಗೂ ರೇಷ್ಮೇ ಸೀರೆಗಳನ್ನು ಇಷ್ಟ ಪಡುವ ಇವರು ರ್‍ಯಾಂಪ್ ಮೇಲೆ ಮಾತ್ರ ವಿನ್ಯಾಸಕರು ಹೇಳಿದ ಉಡುಪಗಳನ್ನು ಒಪ್ಪಿಕೊಳ್ಳುತ್ತಾರಂತೆ. `ಮಾಡೆಲಿಂಗ್ ಕ್ಷೇತ್ರ ಸಾಗರದಂತೆ, ಅದರಲ್ಲಿ ನಾನಿನ್ನೂ ಸಣ್ಣ ಮೀನು' ಎಂದು ಹೇಳುವ ದರ್ಶಿತ್‌ಮಿತ `ಫೆಮಿನಾ ಮಿಸ್ ಸೌತ್', `ಮಿಸ್ ಬೆಂಗಳೂರು', `ಮೆಗಾ ಮಾರ್ಟ್', `ಗ್ಲೋಬ್ 2012' ಹಾಗೂ  `ಬ್ರೈಡಲ್' ಸೇರಿದಂತೆ ಮತ್ತಿತರೆ ಶೋಗಳಿಗೆ ಬಣ್ಣ ಹಚ್ಚಿದ್ದಾರೆ.

ಚಿಕ್ಕಮಗಳೂರಿನ ಎನ್.ಆರ್.ಪುರದ ದರ್ಶಿತ್‌ಮಿತ ಪದವಿ ಅಭ್ಯಾಸಕ್ಕಾಗಿ ಬೆಂಗಳೂರಿಗೆ ಬಂದರು. ಮೌಂಟ್ ಕಾರ್ಮೆಲ್ ಕಾಲೇಜಿನಲ್ಲಿ ಬಿ.ಎ. ಓದುತ್ತಿರುವಾಗಲೇ ಕಾಲೇಜಿನ ಫ್ಯಾಷನ್ ತಂಡದಲ್ಲಿ ಅವಕಾಶ ಸಿಕ್ಕಿತು. ಅಂತರ ಕಾಲೇಜು ಸೇರಿದಂತೆ ಕಾಲೇಜು ಮಟ್ಟದ ಶೋಗಳಿಗೆ ಹೆಜ್ಜೆ ಹಾಕಿ ಸೈ ಎನಿಸಿಕೊಂಡರು. ಆದರೆ ಮಗಳು ಚಿತ್ರನಟಿಯಾಗಬೇಕೆಂಬ ಬಯಕೆ ವ್ಯಕ್ತಪಡಿಸುತ್ತಿದ್ದ ತಂದೆ-ತಾಯಿಗೆ ಮಾಡೆಲಿಂಗ್ ವೃತ್ತಿ ಆಯ್ದುಕೊಂಡಿದ್ದಕ್ಕೆ ವಿರೋಧಿಸದೇ ಬೆಂಬಲ ಸೂಚಿಸಿದ್ದಾರೆ.

ರ್‍ಯಾಂಪ್ ಶೋಗಳಷ್ಟೇ ಅಲ್ಲದೇ ವೆಬ್‌ಸೈಟ್‌ನಲ್ಲೂ ಹಲವಾರು ಕಂಪೆನಿಗಳ ಬ್ರಾಂಡ್‌ಗಳಿಗೆ ಇವರು ರೂಪದರ್ಶಿಯಾಗಿದ್ದಾರೆ. 5.8 ಅಡಿ ಎತ್ತರದ ಈ ನೀಳಕಾಯ ಸುಂದರಿ ಸೆಪ್ಟೆಂಬರ್ 2012ರಲ್ಲಿ ನಡೆದ `ಮಿಸ್ ಬೆಂಗಳೂರು' ಫ್ಯಾಷನ್ ಸ್ಪರ್ಧೆಯಲ್ಲಿ ಮೊದಲ ರನ್ನರ್‌ಅಪ್ ಪ್ರಶಸ್ತಿ ಮುಡಿಗೇರಿಸಿಕೊಂಡು ತೀರ್ಪುಗಾರರ ಗಮನ ಸೆಳೆದಿದ್ದರು.

`ಅನಿರೀಕ್ಷಿತವಾಗಿ ಮಾಡೆಲಿಂಗ್ ಕ್ಷೇತ್ರಕ್ಕೆ ಪ್ರವೇಶ ಮಾಡಿದ್ದೇನೆ. ರಾಷ್ಟ್ರ, ಅಂತರರಾಷ್ಟ್ರೀಯ ಮಟ್ಟದಲ್ಲಿ ಹೆಸರು ಗಳಿಸಬೇಕು. `ಮಿಸ್ ಯೂನಿವರ್ಸ್' ಆಗಬೇಕೆಂಬ ಆಸೆಯಿದೆ' ಎಂದು ಹೇಳುತ್ತಾರೆ ದರ್ಶಿತ್‌ಮಿತ.ವಸ್ತ್ರವಿನ್ಯಾಸಕರಾದ ಮನೀಷ್ ಮಲ್ಹೋತ್ರಾ, ನಿತಾಲುಲ್ಲಾ ಅವರು ದರ್ಶಿತ್‌ಮಿತಗೆ ಇಷ್ಟವಂತೆ. ಅವರ ಸಂಗ್ರಹಗಳಲ್ಲಿ ವರ್ಣರಂಜಿತ, ಸೃಜನಾತ್ಮಕ ಹಾಗೂ ಹೊಸತನವಿರುತ್ತದೆ ಎಂಬ ಕಾರಣವನ್ನು ಅವರು ನೀಡುತ್ತಾರೆ.ಪ್ರೌಢ ಶಾಲೆಯಲ್ಲಿರುವಾಗ ಎಲ್ಲಾ ಕ್ರೀಡೆಗಳಲ್ಲೂ ಪಾಲ್ಗೊಳ್ಳುತ್ತಿದ್ದ ಈ ರೂಪದರ್ಶಿ, ಪ್ರತಿದಿನ ಯೋಗ ಮಾಡುವ ಮೂಲಕ ದೇಹ ಸೌಂದರ್ಯ ಕಾಪಾಡಿಕೊಳ್ಳುತ್ತಿದ್ದಾರೆ. `ನಾವು ಯಾವ ಬಟ್ಟೆ ಧರಿಸುತ್ತೇವೆಯೋ ಅದೇ ಫ್ಯಾಷನ್. ಒಬ್ಬೊಬ್ಬರಿಗೆ ಒಂದೊಂದು ಉಡುಪು ಚೆಂದ ಕಾಣುತ್ತದೆ. ನಮಗೆ ಹೊಂದಿಕೆಯಾಗುವಂತಹ ಬಟ್ಟೆ ಧರಿಸುವುದೇ ಫ್ಯಾಷನ್' ಎಂದು ಹೂನಗೆ ಸೂಸುತ್ತಾರೆ ದರ್ಶಿತ್‌ಮಿತ.ಈಗಲೇ ಮದುವೆ ಒಲ್ಲೆ ಎನ್ನುವ ದರ್ಶಿತ್‌ಮಿತ ಅವರು, ಬಣ್ಣದ ಫ್ಯಾಷನ್ ಲೋಕದಲ್ಲಿ ಯಶಸ್ವಿಯಾಗುವವರೆಗೂ ಆ ಬಗ್ಗೆ ಚಿಂತನೆ ಮಾಡುವುದಿಲ್ಲವಂತೆ. ಚಲನಚಿತ್ರಗಳಲ್ಲಿ ಅವಕಾಶ ಸಿಕ್ಕರೂ, ಚಿತ್ರರಂಗದ ಸಹವಾಸ ಬೇಡವೆಂದು ಮೂಗುಮುರಿಯುತ್ತಾರೆ.

 

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry