ಸೋಮವಾರ, ಜೂನ್ 21, 2021
23 °C
ಪತ್ತೆಯಾಗದ ವಿಮಾನ– ತೀವ್ರ ಶೋಧದಲ್ಲಿ ಭಾರತ ಭಾಗಿ

ಫ್ರಾನ್ಸ್‌ ಉಪಗ್ರಹದ ಹೊಸ ಸುಳಿವು: ತನಿಖೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕ್ವಾಲಾಲಂಪುರ/ಪರ್ತ್‌ (ಪಿಟಿಐ): ನಿಗೂಢವಾಗಿ ನಾಪತ್ತೆಯಾದ ಮಲೇಷ್ಯಾ ವಿಮಾನದ ಬಗ್ಗೆ ಫ್ರಾನ್ಸ್‌ ಭಾನುವಾರ ಹೊಸ ಸುಳಿವು ನೀಡಿದೆ. ತನ್ನ ಉಪ­ಗ್ರಹವೊಂದು ವಿಮಾನ ಭಗ್ನಾವ­ಶೇಷದ ಸಾಧ್ಯತೆ ಇರುವ ದೃಶ್ಯಗಳನ್ನು ಸೆರೆ ಹಿಡಿದಿದೆ ಎಂದು ಅದು ತಿಳಿಸಿದೆ. ಈ ನಿಟ್ಟಿನಲ್ಲಿ ತನಿಖೆ ಚುರುಕುಗೊಂಡಿದೆ.ಈ ಸುಳಿವನ್ನು ಆಧರಿಸಿ ಹಿಂದೂ ಮಹಾಸಾಗರದ ದಕ್ಷಿಣ ಭಾಗದಲ್ಲಿ ಭಾರತ, ಚೀನಾ ಮತ್ತು ಜಪಾನ್‌ಗಳು  ಹೆಚ್ಚಿನ ವಿಮಾನಗಳನ್ನು ನಿಯೋಜಿಸಿ ಶೋಧ ಕಾರ್ಯ ಬಿರುಸುಗೊಳಿಸಿವೆ.ನಾಪತ್ತೆಯಾದ ವಿಮಾನದ ಬಗ್ಗೆ ಉಪಗ್ರಹಗಳು ಹಿಂದೂ ಮಹಾಸಾಗರದ ದಕ್ಷಿಣ ಪ್ರದೇಶದಲ್ಲಿ ನೀಡಿರುವ ಮೂರನೇ ಮಾಹಿತಿ ಇದಾಗಿದೆ. ಈ ಹಿಂದೆ ಚೀನಾ ಮತ್ತು ಆಸ್ಟ್ರೇಲಿಯಾದ ಉಪಗ್ರಗಳು ನೀಡಿದ ಮಾಹಿತಿಯಿಂದ ಯಾವುದೇ ಪ್ರಯೋಜನ ಆಗಿಲ್ಲ.ಫ್ರಾನ್ಸ್‌ ಮಾಹಿತಿ ಆಸ್ಟ್ರೇಲಿಯಾಕ್ಕೆ ರವಾನೆ: ‘ಹಿಂದೂ ಮಹಾಸಾಗರದ ದಕ್ಷಿಣ ಭಾಗದಲ್ಲಿ ವಿಮಾನದ ಭಗ್ನಾವ­ಶೇಷ ಇರಬಹುದು ಎಂದು ಶಂಕಿಸಲಾಗಿ­ರುವ ವಸ್ತುವಿನ ದೃಶ್ಯವನ್ನು ತನ್ನ ಉಪ­ಗ್ರಹ ಸೆರೆ ಹಿಡಿದಿದೆ ಎಂಬ ಸಂದೇಶ ಫ್ರಾನ್ಸ್‌ನಿಂದ ಬಂದಿದೆ. ಇದನ್ನು ನಾವು ಆಸ್ಟ್ರೇಲಿಯಾದಲ್ಲಿ ಶೋಧ ಕಾರ್ಯ ನಡೆಸುತ್ತಿರುವ ತಂಡಕ್ಕೆ ರವಾನಿಸಲಾಗಿದೆ’ ಎಂದು ಮಲೇಷ್ಯಾ ಸಾರಿಗೆ ಸಚಿವಾ­ಲಯದ ಹೇಳಿಕೆ ತಿಳಿಸಿದೆ.‘ಫ್ರಾನ್ಸ್‌ ಉಪಗ್ರಹ ಸೆರೆ ಹಿಡಿದಿರುವ ದೃಶ್ಯಗಳು ಈ ಹಿಂದೆ ಚೀನಾ ಉಪಗ್ರಹ ಸೆರೆ ಹಿಡಿದಿದ್ದ ದೃಶ್ಯವೇ ಅಥವಾ

ಅಲ್ಲವೇ ಎನ್ನುವುದು ಇನ್ನೂ ಖಾತರಿಯಾಗಿಲ್ಲ’ ಎಂದು ಹೇಳಿಕೆಯಲ್ಲಿ ಉಲ್ಲೇಖಿಸ­ಲಾಗಿದೆ.ಚೀನಾ ಉಪಗ್ರಹ 22.5 ಮೀಟರ್‌ ಉದ್ದದ ಮತ್ತು 13 ಮೀಟರ್‌ ಅಗಲದ ವಸ್ತುವಿನ ದೃಶ್ಯವನ್ನು ಆಸ್ಟ್ರೇಲಿಯಾದ ಪಶ್ಚಿಮ ಭಾಗದ ಸಮುದ್ರದಲ್ಲಿ ಸೆರೆಹಿಡಿದಿತ್ತು. ಇದು ಮಾ. 16ರಂದು ಉಪಗ್ರಹವೊಂದು ಅದೇ ಭಾಗದ ನೈಋತ್ಯದಲ್ಲಿ 120 ಕಿ.ಮೀ. ದೂರದಲ್ಲಿ ಸೆರೆಹಿಡಿದ್ದ ದೃಶ್ಯವೇ ಎಂಬ ಅನು­ಮಾನುವೂ ಇದೆ.ಈ ನಿಟ್ಟಿನಲ್ಲಿ ಚೀನಾ ಮತ್ತು ಜಪಾನ್‌ ಹಡಗು ಮತ್ತು ವಿಮಾನಗಳು 36 ಸಾವಿರ ಚದರ ಕಿ.ಮೀ.ಗಳಷ್ಟು ವ್ಯಾಪ್ತಿ­ಯಲ್ಲಿ ಶನಿವಾರ ಶೋಧ ಕಾರ್ಯ ನಡೆಸಿವೆ.ಹಲಗೆ ಪತ್ತೆ: ಈ ಮಧ್ಯೆ, ಸರಕು ಸಾಗಿಸುವ ಮರದ ಹಲಗೆಯೊಂದು ಆಳ ಸಮುದ್ರದಲ್ಲಿ ಪತ್ತೆಯಾಗಿದೆ. ಇದು ನಾಪತ್ತೆಯಾಗಿ­ರುವ ವಿಮಾನದ ಶೋಧಕ್ಕೆ ಭರವಸೆ ನೀಡಿದೆ ಎಂದು ಆಸ್ಟ್ರೇಲಿಯಾ ತಿಳಿಸಿದೆ.ಈ ಹಲಗೆಯ ಜೊತೆಗೆ ಬೆಲ್ಟ್‌ ಇಲ್ಲವೆ ಪಟ್ಟಿಯಂತಹ ವಸ್ತುವನ್ನೂ ತನ್ನ ವಿಮಾನವೊಂದು ಪತ್ತೆ ಮಾಡಿದೆ ಎಂದು ಆಸ್ಟ್ರೇಲಿಯಾ ಹೇಳಿದೆ.

ನಾಪತ್ತೆಯಾಗಿರುವ ವಿಮಾನ ಆಸ್ಟ್ರೇಲಿಯಾ ಸಮುದ್ರದ ದೂರ ಪ್ರದೇಶದಲ್ಲೆಲ್ಲೋ ಬಿದ್ದಿರಬಹುದು ಎಂಬ ಶಂಕೆಗಳು ವ್ಯಕ್ತವಾಗಿವೆ. ಆದರೆ, ಅವಿರತ ಶೋಧ ನಡೆದರೂ ವಿಮಾನದ ಬಗ್ಗೆ ಯಾವುದೇ ಸುಳಿವು ಪತ್ತೆಯಾಗ­ದಿರುವುದು ಕಗ್ಗಂಟಾಗಿದೆ.ತೀವ್ರ ಶೋಧ: ನಾಪತ್ತೆಯಾದ ವಿಮಾನ­ವನ್ನು ಹುಡುಕಲು ಭಾನುವಾರ ಕೂಡ (16ನೇ ದಿನ) ಇನ್ನಿಲ್ಲದಂತೆ ಶೋಧ ಕಾರ್ಯ ನಡೆದಿವೆ.  ಆಸ್ಟ್ರೇಲಿಯಾದ ಉಪಗ್ರಹ ಕೆಲವು ವಸ್ತುಗಳು ದೃಶ್ಯವನ್ನು ಸೆರೆಹಿಡಿದಿದ್ದ ಪರ್ತ್‌ನಿಂದ ನೈಋತ್ಯಕ್ಕೆ 2,500 ಕಿ.ಮೀ. ದೂರದ ಹಿಂದೂ ಮಹಾಸಾಗರದಲ್ಲಿ ತಪಾಸಣೆ ಮಾಡಿವೆ.ಭಾರತದ ನೌಕಾಪಡೆಯ ‘ಪಿ8 ಪೊಸೆಡನ್‌’  ಯುದ್ಧ ನೌಕೆ ಮತ್ತು ವಾಯು­ಪಡೆಯ ‘130 ಜೆ ಸೂಪರ್‌ ಹರ್ಕ್ಯುಲೆಸ್‌’ ವಿಮಾನವು ಮಲೇಷ್ಯಾಕ್ಕೆ ಭಾನುವಾರ ತೆರಳಿದೆ. ಇವು ದಕ್ಷಿಣ ವಾಯು ಸಂಚಾರ ವಲಯದ ಉತ್ತರ ಭಾಗದಲ್ಲಿ ಇಂಡೊನೇಷ್ಯಾ ನೇತೃತ್ವದಲ್ಲಿ ನಡೆಯುತ್ತಿರುವ ಶೋಧ ಕಾರ್ಯದ ತಂಡವನ್ನು ಸೇರಿಕೊಳ್ಳಲಿವೆ.ಉತ್ತರ ವಾಯು ಸಂಚಾರ ವಲಯ­ದಲ್ಲಿ ಇದುವರೆಗೂ ಯಾವುದೇ ಉಪ­ಗ್ರಹ­ಗಳು ನಾಪತ್ತೆಯಾದ ವಿಮಾ­ನದ ಬಗ್ಗೆ ಸುಳಿವನ್ನು ನೀಡಿಲ್ಲ. ಇಲ್ಲೂ ಶೋಧ ಕಾರ್ಯ ಮುಂದುವರಿದಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.