ಮಂಗಳವಾರ, ಮೇ 11, 2021
27 °C

ಫ್ರಾನ್ಸ್, ಭಾರತ ಜಂಟಿ ಅಧ್ಯಯನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಜಾಗತಿಕ ತಾಪಮಾನದಿಂದ ಅಂತರ್ಜಲ ಆಧಾರಿತ ಕೃಷಿ ಮೇಲೆ ಬೀರುತ್ತಿರುವ ಪರಿಣಾಮಗಳ ಬಗ್ಗೆ ಫ್ರಾನ್ಸ್ ಮತ್ತು ಭಾರತ ಜಂಟಿಯಾಗಿ ಅಧ್ಯಯನ ಕೈಗೊಂಡಿವೆ.ನಗರದ ಫ್ರಾನ್ಸ್ ಕಾನ್ಸುಲೇಟ್ ಕಚೇರಿಯಲ್ಲಿ ಸೋಮವಾರ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ ಇಂಡೋ-ಫ್ರಾನ್ಸ್ ಜಲ ವಿಜ್ಞಾನ ಘಟಕದ ಸದಸ್ಯ ಪ್ರೊ. ಶೇಖರ್ ಮುದ್ದು, ಪ್ರಮುಖವಾಗಿ ದಕ್ಷಿಣ ಭಾರತದಲ್ಲಿ ಜಾಗತಿಕ ತಾಪಮಾನದಿಂದ ಕೃಷಿ ಮೇಲಾಗುತ್ತಿರುವ ಪರಿಣಾಮಗಳ ಬಗ್ಗೆ ಈ ಅಧ್ಯಯನ ನಡೆಸಲಾಗುತ್ತಿದೆ ಎಂದು ಹೇಳಿದರು.ಚಾಮರಾಜನಗರ ಜಿಲ್ಲೆ ಗುಂಡ್ಲುಪೇಟೆ ತಾಲ್ಲೂಕಿನ ಹಂಗಳ ಗ್ರಾಮದ ನೂರು ಚದರ ಕಿ.ಮೀ. ವ್ಯಾಪ್ತಿಯಲ್ಲಿ ಈ ಅಧ್ಯಯನ ಕೈಗೊಳ್ಳಲಾಗುತ್ತಿದೆ. 3 ವರ್ಷಗಳ ಈ ಯೋಜನೆಗೆ ಒಟ್ಟು 2.25 ಕೋಟಿ ರೂಪಾಯಿ ಖರ್ಚಾಗಲಿದ್ದು, ಎರಡೂ ಸರ್ಕಾರಗಳು ಸಮಾನವಾಗಿ ವೆಚ್ಚವನ್ನು ಭರಿಸಲಿವೆ ಎಂದರು.ಜಾಗತಿಕ ತಾಪಮಾನದಿಂದ ವರ್ಷದಿಂದ ವರ್ಷಕ್ಕೆ ಅಂತರ್ಜಲ ಮಟ್ಟ ಕುಸಿಯುತ್ತಿದೆ. ಮುಂದಿನ ದಿನಗಳಲ್ಲಿ ಅಂತರ್ಜಲ ಮಟ್ಟ ಇನ್ನಷ್ಟು ಕುಸಿಯುವ ಅಪಾಯವಿದೆ. ಈ ಹಿನ್ನೆಲೆಯಲ್ಲಿ ಭವಿಷ್ಯದಲ್ಲಿ ಯಾವ ರೀತಿ ಕಡಿಮೆ ನೀರನ್ನು ಬಳಸಿ ಹೆಚ್ಚು ಕೃಷಿ ಚಟುವಟಿಕೆ ಮಾಡಬಹುದು ಎಂಬುದರ ಬಗ್ಗೆ ಅಧ್ಯಯನ ನಡೆಸಲಾಗುತ್ತದೆ ಎಂದರು.

ಅಧ್ಯಯನ ಮುಗಿದ ನಂತರ ಕೇಂದ್ರ ಹಾಗೂ ಫ್ರಾನ್ಸ್ ಸರ್ಕಾರಗಳೆರಡಕ್ಕೂ ವರದಿ ಸಲ್ಲಿಸಲಾಗುವುದು. ಇದರಿಂದ ಸರ್ಕಾರಕ್ಕೆ ಸ್ಪಷ್ಟ ನೀತಿ ರೂಪಿಸಲು ಸಹಕಾರಿಯಾಗಲಿದೆ ಎಂದರು.ಭಾರತ-ಫ್ರಾನ್ಸ್ ಉನ್ನತ ಅಧ್ಯಯನ ಸಂಶೋಧನಾ ಕೇಂದ್ರ, ಭಾರತ- ಫ್ರಾನ್ಸ್ ಜಲ ವಿಜ್ಞಾನ ಘಟಕ, ಅಶೋಕ ಪರಿಸರ, ಜೀವಿಶಾಸ್ತ್ರ ಸಂಶೋಧನಾ ಟ್ರಸ್ಟ್, ಫ್ರಾನ್ಸ್ ರಾಷ್ಟ್ರೀಯ ಕೃಷಿ ಸಂಶೋಧನಾ ಸಂಸ್ಥೆಯ ಸಹಯೋಗದಲ್ಲಿ ಈ ಅಧ್ಯಯನ ನಡೆಯಲಿದೆ.ಫ್ರಾನ್ಸ್‌ನ ಹಿರಿಯ ಸಂಶೋಧಕರಾದ ಅಲ್ಬನ್ ಥಾಮಸ್ ಹಾಗೂ ಡಾ. ಲಾರೆಂಟ್ ರೂಸ್ ಮತ್ತಿತರರು ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.