ಗುರುವಾರ , ಮೇ 13, 2021
39 °C

ಫ್ರಾನ್ಸ್ ವಿರುದ್ಧ ಗೆದ್ದ ಭಾರತ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ರೋಟರ್‌ಡಮ್ (ಪಿಟಿಐ): ಸತತ ಸೋಲುಗಳಿಂದ ಚೇತರಿಸಿಕೊಂಡಿರುವ ಭಾರತ ಇಲ್ಲಿ ನಡೆಯುತ್ತಿರುವ ಎಫ್‌ಐಎಚ್ ವಿಶ್ವ ಹಾಕಿ ಲೀಗ್ ರೌಂಡ್ -3 ಟೂರ್ನಿಯ ಪುರುಷರ ವಿಭಾಗದಲ್ಲಿ ಫ್ರಾನ್ಸ್ ವಿರುದ್ಧ 6-2ರಲ್ಲಿ ಜಯ ಸಾಧಿಸಿದೆ. ಈ ಗೆಲುವಿನ ಮೂಲಕ ಟೂರ್ನಿಯ 5-6ನೇ ಸ್ಥಾನಕ್ಕಾಗಿ ನಡೆಯುವ ಪಂದ್ಯಕ್ಕೆ ಭಾರತ ಅರ್ಹತೆ ಗಿಟ್ಟಿಸಿದೆ.ಭಾರತ ಪಂದ್ಯದ ಮೊದಲ ಹಾಗೂ ಉತ್ತರಾರ್ಧದಲ್ಲಿ ತಲಾ ಮೂರು ಗೋಲುಗಳನ್ನು ಗಳಿಸಿ ಗೆಲುವು ಪಡೆಯಿತು. ಮೂರನೇ ನಿಮಿಷದಲ್ಲಿ ಹ್ಯೂಗೊ ಗೆನೆಸ್ಟೆಟ್ ಬಾರಿಸಿದ ಗೋಲಿನಿಂದ ಫ್ರಾನ್ಸ್ ತಂಡ ಉತ್ತಮ ಆರಂಭ ಪಡೆಯಿತು. ಆದರೆ ಮರು ಹೋರಾಟ ನಡೆಸಿದ ಭಾರತ ಆಕಾಶ್‌ದೀಪ್ (13ನೇ ನಿ.) ತಂದಿತ್ತ ಗೋಲಿನ ಮೂಲಕ ಸಮಬಲ ಸಾಧಿಸಿತು.27ನೇ ನಿಮಿಷದಲ್ಲಿ ತಂಡದ ಉಪನಾಯಕ ರಘುನಾಥ್ ಪೆನಾಲ್ಟಿ ಕಾರ್ನರ್ ಅವಕಾಶದಲ್ಲಿ ಚೆಂಡನ್ನು ಗುರಿ ಸೇರಿಸಿ ಮುನ್ನಡೆ ತಂದಿತ್ತರು. ಇದಾದ ಆರು ನಿಮಿಷಗಳ ಬಳಿಕ ಎಸ್.ವಿ. ಸುನಿಲ್ (33ನೇ ನಿ.) ಹೊಡೆದ ಗೋಲಿನಿಂದ ಮುನ್ನಡೆ ಅಂತರ 3-1ಕ್ಕೆ ಹೆಚ್ಚಿತು. ಅನಂತರ ನಾಯಕ ಸರ್ದಾರ್ ಸಿಂಗ್ (42ನೇ ನಿ.) ಹಾಗೂ ಮನ್‌ದೀಪ್ ಸಿಂಗ್ (56, 69ನೇ ನಿ.) ಭಾರತದ ಪರ ಗೋಲು ತಂದಿತ್ತರು.ಮೂರನೇ ನಿಮಿಷದಲ್ಲಿ ಗೋಲು ಗಳಿಸಿದ ಫ್ರಾನ್ಸ್‌ಗೆ ಎರಡನೇ ಗೋಲು ದೊರಕಿದ್ದು ಪಂದ್ಯದ ಕೊನೆಯ ನಿಮಿಷದಲ್ಲಿ. ಗ್ಯುಲೊಮ್ ಡೆರೊಂಟ್ ಅವರು ಪೆನಾಲ್ಟಿ ಕಾರ್ನರ್ ಅವಕಾಶವನ್ನು ಗೋಲಾಗಿ ಪರಿವರ್ತಿಸಿ ಸೋಲಿನ ಅಂತರವನ್ನು ಕಡಿಮೆಗೊಳಿಸಿದರು. ವಿಶ್ವ ರ‌್ಯಾಂಕಿಂಗ್‌ನಲ್ಲಿ 11ನೇ ಸ್ಥಾನದಲ್ಲಿರುವ ಭಾರತ 5-6ನೇ ಸ್ಥಾನಕ್ಕಾಗಿ ಭಾನುವಾರ ನಡೆಯಲಿರುವ ಪಂದ್ಯದಲ್ಲಿ ಏಳನೇ ರ‌್ಯಾಂಕ್‌ನ ಸ್ಪೇನ್ ವಿರುದ್ಧ ಸೆಣಸಲಿದೆ. ದಿನದ ಮತ್ತೊಂದು ಪಂದ್ಯದಲ್ಲಿ ಸ್ಪೇನ್ 1-0ರಲ್ಲಿ ಐರ್ಲೆಂಡ್ ವಿರುದ್ಧ ಗೆಲುವು ಕಂಡಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.