ಫ್ರೀಡಂ ಪಾರ್ಕ್‌ನಲ್ಲಿ ಆದಿನಾಥ ದೇಗುಲದ ಉತ್ಸವ

7

ಫ್ರೀಡಂ ಪಾರ್ಕ್‌ನಲ್ಲಿ ಆದಿನಾಥ ದೇಗುಲದ ಉತ್ಸವ

Published:
Updated:
ಫ್ರೀಡಂ ಪಾರ್ಕ್‌ನಲ್ಲಿ ಆದಿನಾಥ ದೇಗುಲದ ಉತ್ಸವ

ಬೆಂಗಳೂರು: ನಗರದ ಚಿಕ್ಕಪೇಟೆಯಲ್ಲಿ ನವೀಕೃತಗೊಂಡಿರುವ ಆದಿನಾಥ ಜೈನ ಶ್ವೇತಾಂಬರ ದೇವಾಲಯದ ಉದ್ಘಾಟನೆ ಅಂಗವಾಗಿ ಫ್ರೀಡಂ ಪಾರ್ಕ್‌ನಲ್ಲಿ ಹಮ್ಮಿಕೊಂಡಿರುವ ಒಂಬತ್ತು ದಿನಗಳ ಅಂಜನ ಶಲಾಖಾ ಪ್ರತಿಷ್ಠಾನ ಮಹೋತ್ಸವವೂ ವಿಧ್ಯುಕ್ತವಾಗಿ ಪ್ರಾರಂಭವಾಯಿತು.ಜೈನರ ಅತ್ಯಂತ ದೊಡ್ಡ ಮಹೋತ್ಸವ ಎಂದೇ ಪರಿಗಣಿಸಲಾಗಿರುವ ಈ ಉತ್ಸವ ಡಿಸೆಂಬರ್ 1ರವರೆಗೆ ನಡೆಯಲಿದ್ದು, ಒಂಬತ್ತು ದಿನಗಳಲ್ಲಿ ಒಂದು ಲಕ್ಷ ಮಂದಿ ಭಾಗವಹಿಸಬಹುದು ಎಂದು ನಿರೀಕ್ಷಿಸಲಾಗಿದೆ.

ಫ್ರೀಡಂ ಪಾರ್ಕ್‌ನಲ್ಲಿ ದೇವಾಲಯ ಟ್ರಸ್ಟ್ ಅಯೋಧ್ಯಾ ನಗರಿಯ ಬೃಹತ್ ಪ್ರತಿಕೃತಿಯನ್ನು ರೂಪಿಸಿದೆ.ಅಯೋಧ್ಯೆಯು ಭಗವಾನ್ ಆದಿನಾಥರ ಜನ್ಮ ಸ್ಥಳವಾದ ಹಿನ್ನೆಲೆಯಲ್ಲಿ ಜೈನರಿಗೆ ಅತ್ಯಂತ ಮಹತ್ವದ ಸ್ಥಳವಾಗಿದೆ. ಸುಂದರವಾಗಿ ವಿನ್ಯಾಸಗೊಳಿಸಿರುವ ಈ ಪ್ರತಿಕೃತಿಯು ಭಗವಾನ್ ಆದಿನಾಥರ ಜೀವನ ಹಾಗೂ ಕಾಲಮಾನವನ್ನು ಪ್ರತಿಬಿಂಬಿಸುತ್ತದೆ.ಉತ್ಸವದ ವೇಳೆ ಭಗವಾನ್ ಆದಿನಾಥರ ಜೀವನಯಾತ್ರೆಯಿಂದ ಸ್ಫೂರ್ತಿ ಪಡೆಯುವ ನಿಟ್ಟಿನಲ್ಲಿ ಮಹಾನಾಟಕವೊಂದರ ಪ್ರದರ್ಶನವನ್ನೂ ಏರ್ಪಡಿಸಲಾಗಿದೆ. ಒಂಬತ್ತು ದಿನಗಳ ಕಾಲ ಫ್ರೀಡಂ ಪಾರ್ಕ್ ನಲ್ಲಿ ವಿವಿಧ ಕಾರ್ಯಕ್ರಮಗಳು ನಡೆಯಲಿವೆ. ಪ್ರತಿ ದಿನ ಸಾವಿರಾರು ಜನರಿಗೆ ಬೆಳಿಗ್ಗೆ ಉಪಾಹಾರ, ಮಧ್ಯಾಹ್ನದ ಭೋಜನ ಮತ್ತು ರಾತ್ರಿಯ ಊಟದ ವ್ಯವಸ್ಥೆಯನ್ನೂ ಮಾಡಲಾಗಿದೆ.ಒಂಬತ್ತು ದಿನಗಳಲ್ಲಿ ಸಾಕಷ್ಟು ಸಂಖ್ಯೆಯ ಗಣ್ಯರೂ ಉತ್ಸವಕ್ಕೆ ಭೇಟಿ ನೀಡಲಿದ್ದಾರೆ. 25ರಿಂದ 28ರ ನಡುವೆ ಮುಖ್ಯಮಂತ್ರಿ ಡಿ.ವಿ. ಸದಾನಂದಗೌಡ, ರಾಜ್ಯಪಾಲ ಎಚ್.ಆರ್. ಭಾರದ್ವಾಜ್, ಸಿದ್ದಗಂಗಾ ಮಠದ ಡಾ. ಶಿವಕುಮಾರ ಸ್ವಾಮೀಜಿ, ಸಂಸದರಾದ ಅನಂತಕುಮಾರ್ ಹಾಗೂ ಪಿ.ಸಿ. ಮೋಹನ್ ಸೇರಿದಂತೆ ಅನೇಕ ಗಣ್ಯರು ಭಾಗವಹಿಸಲು ಸಮ್ಮತಿ ಸೂಚಿಸಿದ್ದಾರೆ ಎಂದು ಚಿಕ್ಕಪೇಟೆ ಜೈನ ದೇವಸ್ಥಾನ ಟ್ರಸ್ಟ್‌ನ ಅಧ್ಯಕ್ಷ ಉತ್ತಮ್‌ಜೀ ಭಂಡಾರಿ ಸುದ್ದಿಗಾರರಿಗೆ ತಿಳಿಸಿದರು.`ಚಿಕ್ಕಪೇಟೆ ಜೈನ ದೇವಾಲಯವು ಜೈನ ವಿಶ್ವಾಸದ ಶ್ವೇತಾಂಬರ ಪಂಥದವರು ಬೆಂಗಳೂರಿನಲ್ಲಿ ಸ್ಥಾಪಿಸಿದ ಮೊದಲ ದೇವಾಲಯ. ನಗರಕ್ಕೆ ಆರಂಭದಲ್ಲಿ ಬಂದು ನೆಲೆಸಿದ ಬಹುತೇಕ ಜೈನರ ಯಶಸ್ಸಿಗೆ ದೇಗುಲದ ಆಧ್ಯಾತ್ಮಿಕ ಪ್ರಭಾವವು ಕಾರಣವಾಗಿರುವ ಹಿನ್ನೆಲೆಯಲ್ಲಿ ಈ ದೇವಾಲಯಕ್ಕೆ ಬಹಳ ಮಹತ್ವವಿದೆ. ಶಿಲ್ಪಕಲೆ ಮತ್ತು ಸಂಸ್ಕೃತಿಯ ಕುರಿತು ನಮ್ಮ ವಿಶ್ವಾಸವನ್ನು ಗೌರವಿಸಲು ದೇವಾಲಯದ ಪುನರುತ್ಥಾನ ಮಾಡಲಾಗಿದೆ.ಈ ಹಿನ್ನೆಲೆಯಲ್ಲಿ ಜೈನ ಸಮುದಾಯದವರೆಲ್ಲರೂ ಈ ಬೃಹತ್ ಉತ್ಸವದಲ್ಲಿ ಪಾಲ್ಗೊಂಡು ಸಂಭ್ರಮದಲ್ಲಿ ಭಾಗಿಯಾಗಬೇಕು~ ಎಂದು  ಕೋರಿದರು.ಇತ್ತೀಚೆಗೆ ನವೀಕರಿಸಲ್ಪಟ್ಟ ಆದಿನಾಥ ಜೈನ ಶ್ವೇತಾಂಬರ ದೇವಾಲಯದ ಅಧಿಕೃತ ಉದ್ಘಾಟನೆಯು ಈ ತಿಂಗಳ 30ರಂದು ನಡೆಯಲಿದೆ. 1918ರಲ್ಲಿ ನಿರ್ಮಾಣವಾದ ಈ ದೇವಾಲಯವು ಶ್ವೇತಾಂಬರ ಪಂಥಕ್ಕೆ ಸೇರಿದೆ.ಈ ದೇವಾಲಯದಲ್ಲಿ ಭಗವಾನ್ ಆದಿನಾಥ, ಭಗವಾನ್ ಪಾರ್ಶ್ವನಾಥ, ಭಗವಾನ್ ಶಾಂತಿನಾಥ ಮತ್ತು ಭಗವಾನ್ ಮಹಾವೀರರ ಮೂರ್ತಿಗಳನ್ನು ಪ್ರತಿಷ್ಠಾಪಿಸಲಾಗಿದ್ದು, ಭಕ್ತರಿಂದ ಪೂಜೆ- ಪುನಸ್ಕಾರಗಳು ಜರುಗುತ್ತಿವೆ. ಈ ಮೂರ್ತಿಗಳು 2300 ವರ್ಷಕ್ಕೂ ಹಿಂದಿನವಾಗಿದ್ದು, ಐತಿಹಾಸಿಕ ಮಹತ್ವವನ್ನೂ ಪಡೆದುಕೊಂಡಿವೆ.ನವೀಕೃತ ದೇವಾಲಯದ ಸಂಕೀರ್ಣವನ್ನು ರಾಜಸ್ತಾನದ ಮಕರ್ನಾ ಗಣಿಯಿಂದ ತರಿಸಲಾದ ಶುದ್ಧ ಬಿಳಿಯ ಅಮೃತಶಿಲೆಯಿಂದ ನಿರ್ಮಿಸಲಾಗಿದೆ. ರಾಜಸ್ತಾನದ ಶಿಲ್ಪಿಗಳು ಈ ಶಿಲೆಗಳನ್ನು ಸುಂದರವಾಗಿ ಕೆತ್ತಿದ್ದಾರೆ. ಮೌಂಟ್ ಅಬುವಿನ ದಿಲ್ವಾರಾ ಜೈನ ದೇವಾಲಯದ ಶಿಲ್ಪ ವೈಭವದಿಂದ ಸ್ಫೂರ್ತಿ ಪಡೆದು ಈ ವಿನ್ಯಾಸವನ್ನು ರೂಪಿಸಲಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry