ಫ್ರೆಂಚ್ ಓಪನ್: ಎರಡನೇ ಸುತ್ತಿಗೆ ಅಜರೆಂಕಾ, ವೀನಸ್

7

ಫ್ರೆಂಚ್ ಓಪನ್: ಎರಡನೇ ಸುತ್ತಿಗೆ ಅಜರೆಂಕಾ, ವೀನಸ್

Published:
Updated:
ಫ್ರೆಂಚ್ ಓಪನ್: ಎರಡನೇ ಸುತ್ತಿಗೆ ಅಜರೆಂಕಾ, ವೀನಸ್

ಪ್ಯಾರಿಸ್ (ರಾಯಿಟರ್ಸ್): ಕಳೆದ ಬಾರಿಯ ಚಾಂಪಿಯನ್ ಲೀ ನಾ ಹಾಗೂ ವಿಕ್ಟೋರಿಯಾ ಅಜರೆಂಕಾ ಇಲ್ಲಿ ನಡೆಯುತ್ತಿರುವ ಫ್ರೆಂಚ್ ಓಪನ್ ಗ್ರ್ಯಾನ್‌ಸ್ಲಾಮ್ ಟೆನಿಸ್ ಟೂರ್ನಿಯ ಮಹಿಳೆಯರ ಸಿಂಗಲ್ಸ್ ವಿಭಾಗದ ಎರಡನೇ ಸುತ್ತು ಪ್ರವೇಶಿಸಿದರು.

 ರೋಲಂಡ್ ಗ್ಯಾರೋಸ್‌ನ ಫಿಲಿಪ್ ಚಾಟ್ರಿಯರ್ ಕೋರ್ಟ್‌ನಲ್ಲಿ ಸೋಮವಾರ ನಡೆದ ಮೊದಲ ಸುತ್ತಿನ ಪಂದ್ಯದಲ್ಲಿ ಚೀನಾದ ಲೀ ನಾ 6-2, 6-1 ರಲ್ಲಿ ರುಮೇನಿಯದ ಸೊರಾನಾ ಸಿಸ್ಟಿಯಾ ಅವರನ್ನು ಮಣಿಸಿದರು. ನಾ ಕಳೆದ ವರ್ಷ ಇಲ್ಲಿ ಚಾಂಪಿಯನ್ ಆಗಿದ್ದರಲ್ಲದೆ, ಗ್ರ್ಯಾನ್ ಸ್ಲಾಮ್ ಸಿಂಗಲ್ಸ್ ವಿಭಾಗದ ಪ್ರಶಸ್ತಿ ಗೆದ್ದ ಏಷ್ಯಾದ ಮೊದಲ ಆಟಗಾರ್ತಿ ಎನಿಸಿಕೊಂಡಿದ್ದರು.

ಚೀನಾದ ಆಟಗಾರ್ತಿಗೆ ಗೆಲುವು ಪಡೆಯಲು 58 ನಿಮಿಷಗಳು ಸಾಕಾದವು. ಆದರೆ ಅಗ್ರಶ್ರೇಯಾಂಕದ ಆಟಗಾರ್ತಿ ಬೆಲಾರಸ್‌ನ ವಿಕ್ಟೋರಿಯಾ ಅಜರೆಂಕಾ ಮೊದಲ ತಡೆಯನ್ನು ದಾಟಲು ಸಾಕಷ್ಟು ಬೆವರು ಸುರಿಸಬೇಕಾಯಿತು.

ಮೊದಲ ಸೆಟ್‌ನಲ್ಲಿ ಸೋಲು ಅನುಭವಿಸಿದರೂ ತಿರುಗೇಟು ನೀಡಿದ ಅಜರೆಂಕಾ 6-7, 6-4, 6-2 ರಲ್ಲಿ ಇಟಲಿಯ ಅಲ್ಬೆರ್ಟಾ ಬ್ರಿಯಾಂಟಿ ವಿರುದ್ಧ ಜಯ ಪಡೆದರು. ಆರಂಭಿಕ ಸೆಟ್‌ನ್ನು ಟೈಬ್ರೇಕರ್‌ನಲ್ಲಿ ಕಳೆದುಕೊಂಡ ಅಜರೆಂಕಾ ಎರಡನೇ ಸೆಟ್‌ನಲ್ಲಿ 0-4 ರಲ್ಲಿ ಹಿನ್ನಡೆ ಅನುಭವಿಸಿದ್ದರು. ಬಳಿಕ ಅಸಾಮಾನ್ಯ ಪ್ರದರ್ಶನ ನೀಡಿ ಸೋಲಿನ ಸುಳಿಯಿಂದ ಪಾರಾದರು. ಫ್ರೆಂಚ್ ಓಪನ್ ಟೂರ್ನಿಯ ಇತಿಹಾಸದಲ್ಲಿ ಅಗ್ರಶ್ರೇಯಾಂಕದ ಆಟಗಾರ್ತಿ ಮೊದಲ ಸುತ್ತಿನಲ್ಲಿ ಸೋಲು ಅನುಭವಿಸಿಯೇ ಇಲ್ಲ.

ಮಹಿಳೆಯರ ವಿಭಾಗದ ಮೊದಲ ಸುತ್ತಿನ ಇತರ ಪಂದ್ಯಗಳಲ್ಲಿ ಸರ್ಬಿಯದ ಜೆಲೆನಾ ಜಾಂಕೋವಿಚ್ 1-6, 6-1, 7-5 ರಲ್ಲಿ ಪೆಟ್ರಿಸಿಯಾ ಮೆಯರ್ ಎದುರೂ, ಚೀನಾದ ಜೀ ಜೆಂಗ್ 6-4, 6-4 ರಲ್ಲಿ ಫ್ರಾನ್ಸ್‌ನ ಅಲೈಸ್ ಕಾರ್ನೆಟ್ ಮೇಲೂ, ಅಮೆರಿಕದ ವೀನಸ್ ವಿಲಿಯಮ್ಸ 4-6, 6-1, 6-3 ರಲ್ಲಿ ಅರ್ಜೆಂಟೀನಾದ ಪೌಲಾ ಅರ್ಮೆಶಿಯಾ ವಿರುದ್ಧವೂ ಗೆಲುವು ಪಡೆದರು.

ಫೆಡರರ್ ಶುಭಾರಂಭ: ಪುರುಷರ ಸಿಂಗಲ್ಸ್ ವಿಭಾಗದಲ್ಲಿ ಸ್ವಿಟ್ಜರ್‌ಲೆಂಡ್‌ನ ರೋಜರ್ ಫೆಡರರ್ ಮತ್ತು ಸರ್ಬಿಯದ ನೊವಾಕ್ ಜೊಕೊವಿಚ್ ಶುಭಾರಂಭ ಮಾಡಿದರು. 16 ಬಾರಿಯ ಗ್ರ್ಯಾನ್‌ಸ್ಲಾಮ್ ವಿಜೇತ ಫೆಡರರ್ ಮೊದಲ ಸುತ್ತಿನ ಪಂದ್ಯದಲ್ಲಿ 6-2, 7-5, 6-3 ರಲ್ಲಿ ಜರ್ಮನಿಯ ಟೊಬಿಯಸ್ ಕಾಮ್ಕೆ ಅವರನ್ನು ಮಣಿಸಿದರು.

ಫೆಡರರ್‌ಗೆ ಗ್ರ್ಯಾನ್‌ಸ್ಲಾಮ್ ಟೂರ್ನಿಯಲ್ಲಿ ಒಲಿದ 233ನೇ ಗೆಲುವು ಇದು. ಈ ಮೂಲಕ ಜಿಮ್ಮಿ    ಕಾನರ್ಸ್‌ ಹೆಸರಿನಲ್ಲಿದ್ದ ವಿಶ್ವದಾಖಲೆಯನ್ನು ಸರಿಗಟ್ಟಿದರು. 

ಅಗ್ರಶ್ರೇಯಾಂಕದ ಜೊಕೊವಿಚ್ 7-6, 6-3, 6-1 ರಲ್ಲಿ ಇಟಲಿಯ ಪೊಟಿಟೊ ಸ್ಟರೇಸ್ ವಿರುದ್ಧ ಜಯ ಪಡೆದರು.

ಭೂಪತಿ- ರೋಹನ್‌ಗೆ 6ನೇ ಶ್ರೇಯಾಂಕ

ಮಹೇಶ್ ಭೂಪತಿ ಮತ್ತು ರೋಹನ್ ಬೋಪಣ್ಣ ಜೋಡಿಗೆ ಇಲ್ಲಿ ನಡೆಯುತ್ತಿರುವ ಫ್ರೆಂಚ್ ಓಪನ್ ಗ್ರ್ಯಾನ್‌ಸ್ಲಾಮ್ ಟೆನಿಸ್ ಟೂರ್ನಿಯ ಪುರುಷರ ಡಬಲ್ಸ್ ವಿಭಾಗದಲ್ಲಿ ಆರನೇ ಶ್ರೇಯಾಂಕ ದೊರೆತಿದೆ.

ಲಿಯಾಂಡರ್ ಪೇಸ್ ಮತ್ತು ಆಸ್ಟ್ರಿಯದ ಅಲೆಕ್ಸಾಂಡರ್ ಪೆಯಾ ಜೋಡಿ ಏಳನೇ ಶ್ರೇಯಾಂಕ ಹೊಂದಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry