ಗುರುವಾರ , ನವೆಂಬರ್ 21, 2019
21 °C
ಮಿನಿ ಕಥೆ

ಫ್ಲಾಟ್ ನಂ. 144

Published:
Updated:

ಮಾ ಇಂಜಿನಿಯರಿಂಗ್ ಓದುತ್ತಿದ್ದಾಳೆ. ಕ್ಲಾಸ್ ಮುಗಿಸಿಕೊಂಡು ನಗರ ಸಾರಿಗೆ ಬಸ್‌ನಲ್ಲಿ ಮನೆಯ ಕಡೆ ಹೊರಟಳು. ಅವಳ ಪಕ್ಕದ ಸೀಟು ಖಾಲಿ ಇತ್ತು. ಯುವಕನೊಬ್ಬ ಅಲ್ಲಿ ಬಂದು ಕುಳಿತ. ಅವಳಿಗೆ ಬೇಸರವಾಯಿತು. ಆದರೂ ಏನೂ ಮಾತನಾಡದೆ ಸುಮ್ಮನಾದಳು.ಅವಳು ಸಿನಿಮಾ ನಟಿಯಂತಿದ್ದಾಳೆ. ಬಂಗಾರದಂತಹ ಬಣ್ಣ, ಗಲಾಬಿ ವರ್ಣದ ಚೂಡಿದಾರ್ ಧರಿಸಿದ್ದಾಳೆ. ಅವಳ ಸೌಂದರ್ಯ ಎಂತಹವರ ಮನಸ್ಸನ್ನಾದರೂ ಆಕರ್ಷಿಸುತ್ತದೆ. ಇನ್ನು ಹುಡುಗರಿಗೆ ಅವಳನ್ನು ನೋಡಿದರೆ ಹುಚ್ಚು ಹಿಡಿದಂತಾಗುತ್ತದೆ.`ಮಿಸ್ ನೀವು ಏನು ಓದುತ್ತಿದ್ದೀರಿ' ಕೇಳಿದ ಯುವಕ. `ಇಂಜಿನಿಯರಿಂಗ್' ಎಂದಳು ಬೇಸರದಿಂದ. `ನಿಮ್ಮ ಮನೆ ಎಲ್ಲಿ?' ಅವಳನ್ನೇ ನೋಡುತ್ತಾ ಕೇಳಿದ.

`ಗಾಂಧಿ ನಗರ, ಎರಡನೇ ಕ್ರಾಸ್, ಫ್ಲಾಟ್ ನಂ. 144. ಸಾಕಾ, ಇನ್ನೂ ವಿವರ ಬೇಕಾ? ಯಾಕೆ ಹುಡುಗಿ ಒಂಟಿಯಾಗಿ ಕಂಡರೆ ವಿವರಗಳನ್ನೆಲ್ಲ ಕೇಳುತ್ತೀರಲ್ಲ? ನಾನೇನಾದರೂ ನಿಮ್ಮನ್ನು ಕೇಳಿದ್ದೀನಾ?' ಬೇಸರದಿಂದ ಜೋರಾಗಿ ಹೇಳಿದಳು.ಅವನನ್ನು ನೋಡಿದರೆ ಒರಟು ಮನುಷ್ಯನಂತಿದ್ದಾನೆ. ರಮಾಗೆ ಭಯವಾಯಿತು. ಅಷ್ಟರಲ್ಲಿ ಅವಳು ಇಳಿಯುವ ಸ್ಟಾಪ್ ಬಂದಿತು.

ಬಸ್‌ನಲ್ಲಿ ಪ್ರಯಾಣ ಮಾಡಿದ ಯುವಕ ಮರುದಿನ ಠಾಕುಠೀಕಾಗಿ ಡ್ರೆಸ್ ಮಾಡಿಕೊಂಡು ಮೋಟಾರ್ ಸೈಕಲ್‌ನಲ್ಲಿ ರಮಾಳ ಮನೆಯ ಕಡೆ ಹೊರಟ. ಅವಳು ಶ್ರೀಮಂತರ ಮಗಳಂತಿದ್ದಾಳೆ, ಓ.ಕೆ ಲೈನ್ ಹೊಡೆಯುವಾ ಎಂಬ ಆಲೋಚನೆ ಅವನದು.ಗಾಂಧಿ ನಗರದ ಎರಡನೆಯ ಕ್ರಾಸ್‌ನಲ್ಲಿ ಅವಳು ಹೇಳಿದ ಫ್ಲಾಟ್ ನಂಬರ್ ತಲುಪಿದ. ನೋಡಿದರೆ ಅದು ಗಾಂಧಿ ನಗರದ ಪೊಲೀಸ್ ಠಾಣೆ! `ಭಲೇ ಹುಡುಗಿ, ಕೈಕೊಟ್ಟಳು' ಎಂದುಕೊಂಡು ಭಯದಿಂದ, ಬ್ರೇಕ್ ಹಾಕದೆ ಮೋಟಾರ್ ಸೈಕಲ್‌ನ್ನು ವೇಗವಾಗಿ ಓಡಿಸಿಕೊಂಡು ಪರಾರಿಯಾದ.

ಪ್ರತಿಕ್ರಿಯಿಸಿ (+)