ಫ್ಲೆಕ್ಸ್‌ನಲ್ಲಿ ಹಿಂದೂಗಳಿಗೆ ಅವಮಾನ ಆರೋಪ

7
ಉಡುಪಿ: ಆತಂಕದ ವಾತಾವರಣ

ಫ್ಲೆಕ್ಸ್‌ನಲ್ಲಿ ಹಿಂದೂಗಳಿಗೆ ಅವಮಾನ ಆರೋಪ

Published:
Updated:
ಫ್ಲೆಕ್ಸ್‌ನಲ್ಲಿ ಹಿಂದೂಗಳಿಗೆ ಅವಮಾನ ಆರೋಪ

ಉಡುಪಿ: ವೇಲಂಕಣಿ ಮಾತೆಯ ಪ್ರತಿಷ್ಠಾಪನೆಯ ಬೆಳ್ಳಿ ಮಹೋತ್ಸವದ ಅಂಗವಾಗಿ ಉಡುಪಿಯ ಕಲ್ಮಾಡಿಯ ಸ್ಟೆಲ್ಲಾ ಮೇರಿಸ್ ಚರ್ಚ್ ಎದುರು ಅಳವಡಿಸಿದ್ದ ಫ್ಲೆಕ್ಸ್‌ನಲ್ಲಿ ಹಿಂದೂಗಳನ್ನು ಅವಮಾನಿಸುವಂತಹ ಚಿತ್ರ ಪ್ರದರ್ಶಿಸಲಾಗಿದೆ ಎಂದು ಆರೋಪಿಸಿ ಬಜರಂಗದಳದ ಕಾರ್ಯಕರ್ತರು ಚರ್ಚ್ ಎದುರು ಬುಧವಾರ ಪ್ರತಿಭಟನೆ ನಡೆಸಿದ ಹಿನ್ನೆಲೆಯಲ್ಲಿ ಸ್ಥಳದಲ್ಲಿ ಕೆಲ ಕಾಲ ಆತಂಕದ ವಾತಾವರಣ ನಿರ್ಮಾಣವಾಗಿತ್ತು,ಸ್ಟೆಲ್ಲಾ ಮೇರಿಸ್ ಚರ್ಚ್ ಆವರಣದಲ್ಲಿ ವೇಲಂಕಣಿ ಮಾತೆಯ ಕ್ಷೇತ್ರವಿದೆ. ಮಾತೆಯ ಪ್ರತಿಷ್ಠಾಪನೆಗೆ 25 ವರ್ಷ ತುಂಬಿದ ಹಿನ್ನೆಲೆಯಲ್ಲಿ ಚರ್ಚ್ ಎದುರು ದೊಡ್ಡ ಗಾತ್ರದ ಫ್ಲೆಕ್ಸ್ ಹಾಕ ಲಾಗಿತ್ತು. ಬ್ರಾಹ್ಮಣ ಹುಡುಗನೊಬ್ಬ ವೇಲಂಕಣಿ ಮಾತೆಯನ್ನು ಬೇಡುತ್ತಿರುವ ಮತ್ತು ಮಾತೆ ಬಾಲಕನನ್ನು ಹರಸುತ್ತಿರುವ ಚಿತ್ರ ಅದಾಗಿತ್ತು.ವಿಷಯ ತಿಳಿದ ಕೂಡಲೇ ಬಜರಂಗದಳದ ಕಾರ್ಯಕರ್ತರು ಚರ್ಚ್ ಎದುರು ಜಮಾಯಿಸಿದರು. ಚರ್ಚ್‌ನ ಆಡಳಿತ ಮಂಡಳಿ ಮತ್ತು ಧರ್ಮಗುರುಗಳ ವಿರುದ್ಧ ಘೋಷಣೆ ಕೂಗಿದರು. ವಿಪ್ರರು ಮಾತೆಯನ್ನು ಬೇಡುತ್ತಿರುವಂತೆ ಸೃಷ್ಟಿಸಿರುವ ಚಿತ್ರ ಹಿಂದೂಗಳನ್ನು ಅವಮಾನಿಸುವಂತಿದೆ ಎಂದು ಆರೋಪಿಸಿದರು. ಇಂತಹ ಚಿತ್ರವನ್ನು ಪ್ರದರ್ಶಿಸಿರುವುದಕ್ಕೆ ಕ್ಷಮೆ ಕೇಳಬೇಕು ಮತ್ತು ಫ್ಲೆಕ್ಸ್ ತೆರವುಗೊಳಿಸಬೇಕು ಎಂದು ಅವರು ಆಗ್ರಹಿಸಿದರು.ಚರ್ಚ್‌ನ ಆಡಳಿತಾಧಿಕಾರಿ ಲೂಯಿಸ್ ಲೋಬೊ ಅವರು ಪ್ರತಿಭಟ ನಾಕಾರರಲ್ಲಿ ಕ್ಷಮೆ ಕೇಳಿದರು. ಇಷ್ಟಕ್ಕೆ ಸುಮ್ಮನಾಗದ ಪ್ರತಿಭಟನಾಕಾರರು ಧರ್ಮಗುರುಗಳೇ ಹೊರಗೆ ಬಂದು ಬಹಿರಂಗವಾಗಿ ಕ್ಷಮೆ ಯಾಚಿಸಬೇಕು ಎಂದು ಪಟ್ಟುಹಿಡಿದರು.ಧರ್ಮಗುರು ಅಲ್ಬನ್ ಡಿಸೋಜ ಅವರು `ಈ ಚಿತ್ರದಿಂದ ಯಾರಿಗಾದರೂ ನೋವಾಗಿದ್ದರೆ ವಿಷಾದಿಸುತ್ತೇವೆ' ಎಂದು ಕ್ಷಮೆ ಕೇಳಿದ ನಂತರ ಪ್ರತಿಭಟನೆ ಹಿಂದಕ್ಕೆ ಪಡೆದರು. ಕೂಡಲೇ ಫ್ಲೆಕ್ಸ್ ಅನ್ನು ತೆರವುಗೊಳಿಸಲಾಯಿತು.ಪ್ರತಿಭಟನೆಯ ವಿಷಯ ತಿಳಿದ ಕೂಡಲೇ ಸ್ಥಳದಲ್ಲಿ ಹೆಚ್ಚಿನ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು. ಡಿವೈಎಸ್ಪಿ ಡಾ.ಪ್ರಭುದೇವ ಮಾನೆ ಖುದ್ದಾಗಿ ಸ್ಥಳಕ್ಕೆ ಬಂದು ಪರಿಸ್ಥಿತಿ ನಿಭಾಯಿಸಿದರು. ಪ್ರತಿಭಟನಾಕಾರರು ಮರಳಿದ ನಂತರವೂ ಚರ್ಚ್‌ಗೆ ಪೊಲೀಸ್ ಬಂದೋಬಸ್ತ್ ನೀಡಲಾ ಯಿತು. ಮಂಗಳವಾರ ಸಂಜೆಯೇ ಫ್ಲೆಕ್ಸ್ ಅಳವಡಿಸಲಾಗಿತ್ತು ಎಂದು ತಿಳಿದುಬಂದಿದೆ.ಹಿಂದೂಗಳನ್ನು ಅವಮಾನಿಸುವ ಉದ್ದೇಶದಿಂದ ಈ ಫ್ಲೆಕ್ಸ್ ಅಳವಡಿಸಿರಲಿಲ್ಲ. ವೇಲಂಕಣಿ ಮಾತೆ ಬ್ರಾಹ್ಮಣರ ಹುಡುಗನನ್ನು ಹರಸಿರುವ ಬಗ್ಗೆ ಇತಿಹಾಸದಲ್ಲಿ ಉಲ್ಲೇಖ ಇದೆ. ಅದೇ ಕಾರಣಕ್ಕೆ ಅಂತಹ ಚಿತ್ರವನ್ನು ಹಾಕಲಾಗಿತ್ತು. ಆದರೆ ಇದನ್ನು ಕೆಲವರು ತಪ್ಪಾಗಿ ಅರ್ಥೈಸಿದ ಹಿನ್ನೆಲೆಯಲ್ಲಿ ಗೊಂದಲವಾಯಿತು ಎಂದು ಕೆಲವು ಸ್ಥಳೀಯರು ಮಾಹಿತಿ ನೀಡಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry