ಬಂಕ್ ಮಾಲೀಕನ ಮೇಲೆ ಹಲ್ಲೆ: ದರೋಡೆ

7

ಬಂಕ್ ಮಾಲೀಕನ ಮೇಲೆ ಹಲ್ಲೆ: ದರೋಡೆ

Published:
Updated:

ಬೆಂಗಳೂರು: ಪೆಟ್ರೋಲ್ ಬಂಕ್ ಮಾಲೀಕನ ಮೇಲೆ ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ 1.50 ಲಕ್ಷ ನಗದು ಹಾಗೂ ಬೈಕ್ ದರೋಡೆ ಮಾಡಿರುವ ಘಟನೆ ಆರ್.ಟಿ.ನಗರದ ಗಣೇಶ ಬ್ಲಾಕ್‌ನಲ್ಲಿ ಭಾನುವಾರ ರಾತ್ರಿ ನಡೆದಿದೆ.ಗಣೇಶ ಬ್ಲಾಕ್ ಮೂರನೇ ಅಡ್ಡರಸ್ತೆ ನಿವಾಸಿ ಪ್ರಕಾಶ್ ದರೋಡೆಗೆ ಒಳಗಾದವರು. ಅವರು ಹೆಬ್ಬಾಳ ಸಮೀಪದ ಮನೋರಾಯನಪಾಳ್ಯದಲ್ಲಿ ಪೆಟ್ರೋಲ್ ಬಂಕ್ ಇಟ್ಟುಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.ಅವರು ದಿನದ ವಹಿವಾಟಿನ ಹಣ ತೆಗೆದುಕೊಂಡು ರಾತ್ರಿ 11 ಗಂಟೆ ಸುಮಾರಿಗೆ ಬಂಕ್‌ನಿಂದ ಬೈಕ್‌ನಲ್ಲಿ ಮನೆಗೆ ಹಿಂತಿರುಗುತ್ತಿದ್ದಾಗ ದುಷ್ಕರ್ಮಿಗಳು ಈ ಕೃತ್ಯ ಎಸಗಿದ್ದಾರೆ. ಎರಡು ಬೈಕ್‌ಗಳಲ್ಲಿ ಬಂದಿದ್ದ ನಾಲ್ಕು ಮಂದಿ ದರೋಡೆಕೋರರು ಕೆಎಚ್‌ಬಿ ರಸ್ತೆಯಲ್ಲಿ ಅವರನ್ನು ಅಡ್ಡಗಟ್ಟಿ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ, ಹಣ ಮತ್ತು ಬೈಕ್ ಕಿತ್ತುಕೊಂಡು ಪರಾರಿಯಾಗಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.ಕೆಲ ತಿಂಗಳುಗಳ ಹಿಂದೆ ಪ್ರಕಾಶ್ ಅವರ ತಮ್ಮನ ಮೇಲೂ ದುಷ್ಕರ್ಮಿಗಳು ಕೆಎಚ್‌ಬಿ ರಸ್ತೆಯಲ್ಲಿ ಇದೇ ರೀತಿ ಹಲ್ಲೆ ನಡೆಸಿ 70 ಸಾವಿರ ರೂಪಾಯಿ ದರೋಡೆ ಮಾಡಿದ್ದರು. ಆ ಸಂದರ್ಭದಲ್ಲಿ ಪ್ರಕಾಶ್ ಸಹೋದರರಿಗೆ ಬೈಕ್‌ನಲ್ಲಿ ಹಣ ಕೊಂಡೊಯ್ಯದಂತೆ ಎಚ್ಚರಿಕೆ ನೀಡಲಾಗಿತ್ತು. ಆದರೂ ಅವರು ನಿರ್ಲಕ್ಷ್ಯ ತೋರಿ ರಾತ್ರಿ ಒಬ್ಬಂಟಿಯಾಗಿ ಹಣ ತೆಗೆದುಕೊಂಡು ಬಂದಿದ್ದರು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಆರ್.ಟಿ.ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಲಾರಿ ಡಿಕ್ಕಿ-ಸಾವು


ಹೊಸೂರು ರಸ್ತೆಯ ಸಿಂಗಸಂದ್ರ ಬಳಿ ಸೋಮವಾರ ರಾತ್ರಿ ಲಾರಿ ಡಿಕ್ಕಿ ಹೊಡೆದು ತಮಿಳುನಾಡು ಮೂಲದ ಪಳನಿಸ್ವಾಮಿ (42) ಎಂಬುವರು ಮೃತಪಟ್ಟಿದ್ದಾರೆ.ಎಲೆಕ್ಟ್ರಾನಿಕ್‌ಸಿಟಿ ಸಮೀಪದ ಚನ್ನಕೇಶವನಗರ ನಿವಾಸಿಯಾದ ಪಳನಿಸ್ವಾಮಿ ಕೂಲಿ ಕೆಲಸ ಮಾಡುತ್ತಿದ್ದರು. ಅವರು, ರಸ್ತೆ ಮಧ್ಯೆ ಅಳವಡಿಸಿರುವ ಬ್ಯಾರಿಕೇಡ್ ಹಾರಿ ರಸ್ತೆ ದಾಟುವ ಯತ್ನದಲ್ಲಿದ್ದಾಗ ಲಾರಿ ಡಿಕ್ಕಿ ಹೊಡೆದಿದೆ. ತೀವ್ರವಾಗಿ ಗಾಯಗೊಂಡ ಅವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ ಚಾಲಕ ಪರಾರಿಯಾಗಿದ್ದಾನೆಂದು ಲಾರಿಯನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.ಮಹಿಳೆ ಆತ್ಮಹತ್ಯೆಕೆ.ನಾರಾಯಣಪುರ ಸಮೀಪದ ನಗರೇಶ್ವರ ನಾಗೇನಹಳ್ಳಿ ನಿವಾಸಿ ಸುರೇಶ್ ಎಂಬುವರ ಪತ್ನಿ ಪವಿತ್ರಾ (25) ಅವರು ಶನಿವಾರ ರಾತ್ರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮೂಲತಃ ಚಿತ್ರದುರ್ಗ ಜಿಲ್ಲೆಯವರಾದ ಪವಿತ್ರಾ ಅವರ ಮದುವೆಯಾಗಿ ಎಂಟು ವರ್ಷಗಳಾಗಿದ್ದವು.

 

ಸುರೇಶ್ ಪೇಂಟಿಂಗ್ ಕೆಲಸ ಮಾಡುತ್ತಾರೆ. ಪತಿ ಹೊರಗೆ ಹೋಗಿದ್ದ ಸಂದರ್ಭದಲ್ಲಿ ಪವಿತ್ರಾ ಅವರು ಮಕ್ಕಳನ್ನು ಮಲಗಿಸಿ, ನಂತರ ಕೊಠಡಿಯೊಂದರಲ್ಲಿ ನೇಣು ಹಾಕಿಕೊಂಡಿದ್ದಾರೆ. ಸುರೇಶ್ ಅವರು ರಾತ್ರಿ 12 ಗಂಟೆ ಸುಮಾರಿಗೆ ಮನೆಗೆ ಬಂದಾಗ ಆತ್ಮಹತ್ಯೆ ಪ್ರಕರಣ ಬೆಳಕಿಗೆ ಬಂದಿದೆ ಎಂದು ಪೊಲೀಸರು ಹೇಳಿದ್ದಾರೆ.ಕೊಲೆ ಆರೋಪಿಗಳ ಬಂಧನ

ಆಡುಗೋಡಿಯಲ್ಲಿ ನಡೆದಿದ್ದ ಅಲೆಕ್ಸ್ (45) ಎಂಬಾತನ ಕೊಲೆ ಪ್ರಕರಣದ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.ಆಡುಗೋಡಿ ಬಳಿಯ ದೇವೇಗೌಡ ಬ್ಲಾಕ್‌ನ ಬಸವರಾಜು (27) ಮತ್ತು ನಂಜಪ್ಪಲೇಔಟ್‌ನ ಗುಣಶೇಖರ್ (28) ಬಂಧಿತರು. ಸ್ನೇಹಿತರಾಗಿದ್ದ ಅಲೆಕ್ಸ್ ಮತ್ತು ಆರೋಪಿಗಳ ನಡುವೆ ಆಗಾಗ್ಗೆ ಜಗಳವಾಗುತ್ತಿತ್ತು. ಇದರಿಂದ ಕೋಪಗೊಂಡಿದ್ದ ಆರೋಪಿಗಳು, ಆತನನ್ನು ಸೆ.28ರಂದು ರಾತ್ರಿ ಖಾಸಗಿ ಶಾಲೆಯೊಂದರ ಬಳಿ ಕರೆದೊಯ್ದು ಮದ್ಯಪಾನ ಮಾಡಿಸಿ ಬಳಿಕ ತಲೆ ಮೇಲೆ ಕಲ್ಲು ಎತ್ತಿ ಹಾಕಿ ಕೊಲೆ ಮಾಡಿದ್ದರು ಎಂದು ಪೊಲೀಸರು ಹೇಳಿದ್ದಾರೆ.ದರೋಡೆ ಪ್ರಕರಣಕ್ಕೆ ಸಂಬಂಧಿಸಿದಂತೆ ಎಚ್‌ಎಸ್‌ಆರ್ ಲೇಔಟ್ ಪೊಲೀಸರು ಬಸವರಾಜುನನ್ನು ಈ ಹಿಂದೆಯೇ ಬಂಧಿಸಿದ್ದರು. ಮೂರು ವರ್ಷಗಳ ಕಾಲ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿದ್ದ ಆತ 2012ರ ಫೆಬ್ರುವರಿಯಲ್ಲಿ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry