ಬಂಗಲೆ ವಂಶದ ಆಳ ಅಗಲ

7

ಬಂಗಲೆ ವಂಶದ ಆಳ ಅಗಲ

ದ್ವಾರಕೀಶ್
Published:
Updated:
ಬಂಗಲೆ ವಂಶದ ಆಳ ಅಗಲ

`ನಮ್ಮೂರು ಮೈಸೂರು ನಿಮ್ಮೂರು ಯಾವೂರು~ ಅಂತ `ಪ್ರೀತಿ ಮಾಡು ತಮಾಷೆ ನೋಡು~ ಸಿನಿಮಾದಲ್ಲಿ ನಾನು ಹಾಡಿದ್ದನ್ನು, ಕುಣಿದಿದ್ದನ್ನು ನೀವು ನೋಡಿದ್ದೀರಿ. ಆ ಊರು, ಮೈಸೂರು.

 

ನನ್ನ ಮುದ್ದಾದ ಮೈಸೂರು. ನಾನು ಹುಟ್ಟಿದ್ದು ಹುಣಸೂರಿನಲ್ಲೇ ಆದರೂ ಬೆಳೆದದ್ದೆಲ್ಲಾ ಮೈಸೂರಿನಲ್ಲಿ. ನಮ್ಮ ಮನೆ ಇದ್ದದ್ದು ಇಟ್ಟಿಗೆಗೂಡಿನಲ್ಲಿ; ಝೂ ಗಾರ್ಡನ್ ಎದುರು. ಸದ್ಯ, ನಮ್ಮ ಮನೆ ಝೂನಲ್ಲೇ ಇರಲಿಲ್ಲವಲ್ಲ, ಅದೇ ನಮ್ಮ ಪುಣ್ಯ. ಆ ಝೂ ಗಾರ್ಡನ್ ಎದುರಲ್ಲಿ ದೊಡ್ಡ ಬಯಲಿತ್ತು.

 

ಈಗ ಅಲ್ಲಿ ಬಯಲೂ ಇಲ್ಲ, ಏನೂ ಇಲ್ಲ. ಕಾರ್ ಪಾರ್ಕಿಂಗ್ ಜಾಗವಾಗಿಬಿಟ್ಟಿದೆ. ನಮ್ಮ ಮನೆ ಇದ್ದ ಜಾಗ ಕೂಡ ಈಗ ದೊಡ್ಡ ಅಂಗಡಿಯಾಗಿಬಿಟ್ಟಿದೆ. ನಮ್ಮಮ್ಮನ ಕಾಲದಲ್ಲೇ ಆ ಮನೆಯನ್ನು ಮಾರಿದ್ದರು. ಈಗ ಆ ಜಾಗ ಗುರುತು ಸಿಗದಷ್ಟು ಬದಲಾಗಿದೆ.ನಮ್ಮ ಮನೆ ಮುಂದಿನ ಆ ಬಯಲಲ್ಲೇ ನಾನು ರಾಮನಾಗಿ, ಹನುಮಂತನಾಗಿ ಕಂಡಿದ್ದು. ಉದ್ದದ ಗಳು ಹಿಡಿದುಕೊಂಡು ಅದನ್ನೇ ಕುದುರೆಯಾಗಿಸಿ, ಏರಿ ಅಭಿನಯಿಸುತ್ತಿದ್ದ ದಿನಗಳಿನ್ನೂ ನನ್ನ ನೆನಪಲ್ಲಿವೆ. ಝೂ ಗಾರ್ಡನ್ ಎದುರಲ್ಲಿ `ಝೂ ಕಟ್ಟೆ~ ಇತ್ತು. ಅಲ್ಲೇ ನಾವು ಸ್ನೇಹಿತರೆಲ್ಲಾ ಕೂತು ಪಟ್ಟಾಂಗ ಹೊಡೆಯುತ್ತಿದ್ದದ್ದು.

 

ಆ ಕಟ್ಟೆ ಮೇಲೆ ನಾನು ಬೇಕಾದಷ್ಟು ಕನಸುಗಳನ್ನು ನಾನು ಕಟ್ಟಿದ್ದೇನೆ. ಅವುಗಳಲ್ಲಿ ಸುಮಾರು ನನಸೂ ಆಗಿವೆ. ನಮ್ಮ ತಂದೆ ಬಂಗಲೆ ಶಾಮರಾಯರು. ಬಂಗಲೆ ಅನ್ನೋದು ನಮ್ಮ ಮನೆತನದ ಹೆಸರು. ಚಿತ್ರದುರ್ಗದ ಕೋಟೆ ಒಳಗಡೆ ನಮ್ಮ ತಾತನ ತಾತ ಯಾರೋ ವಾಸವಿದ್ದರಂತೆ.ಅದರಿಂದ ನಮ್ಮ ಮನೆತನಕ್ಕೆ ಬಂಗಲೆ ಎಂಬ ಹೆಸರು ಬಂತು ಎಂದು ನಮ್ಮ ಮನೆಯ ಹಿರಿಯರು ಹೇಳುತ್ತಾರೆ. ನಮ್ಮ `ಆಪೋಸಿಷನ್ ಪಾರ್ಟಿ~ ಹೇಳುವ ಕತೆಯೇ ಬೇರೆ. ನಮ್ಮ ಮನೆಯವರು ಆ ಬಂಗಲೆಯಲ್ಲಿ ಕೆಲಸ ಮಾಡಿಕೊಂಡು ಇದ್ದರಂತೆ. ಹಾಗಾಗಿ ಆ ಹೆಸರು ಅಂಟಿಕೊಂಡಿತೆಂಬುದು ಆ ಪಾರ್ಟಿಯವರ ವಾದ. ಒಟ್ಟಿನಲ್ಲಿ ಬಂಗಲೆ ಎಂಬ ಮನೆತನ ನಮಗೆ ಅಂಟಿಕೊಂಡಿತು.ನನಗೆ ತಿಳಿದ ಮಟ್ಟಿಗೆ ನಮ್ಮದು ಬಹಳ ಶಿಸ್ತಿನ ವಂಶ. ನಮ್ಮ ತಂದೆ ವಕೀಲರು. ಆಗ ವಕೀಲರನ್ನು `ಪ್ಲೀಡರ್~ ಎನ್ನುತ್ತಿದ್ದರು. ದೊಡ್ಡಪ್ಪ ಬಂಗಲೆ ಕೃಷ್ಣರಾವ್ ಅವರಂತೂ ವಕೀಲರಾಗಿ ಇನ್ನೂ ದೊಡ್ಡ ಹೆಸರು ಮಾಡಿದ್ದರು. ಮೈಸೂರಿನ ನೂರು ಅಡಿ ರಸ್ತೆಯಲ್ಲಿನ ರಾಮಸ್ವಾಮಿ ಸರ್ಕಲ್‌ನಲ್ಲಿ ಬಲಭಾಗದಲ್ಲಿ ಅವರ ಮನೆ ಇತ್ತು.ಶೌಚಾಲಯಕ್ಕೆ ಆಟೊದಲ್ಲಿ ಹೋಗಬೇಕು ಎನ್ನುವಷ್ಟು ವಿಶಾಲ ಮನೆಯದು. ದೊಡ್ಡಪ್ಪ ತುಂಬಾ ಶಿಸ್ತಿನವರು. ಅವರು ನಿತ್ಯವೂ ಬೆಳಿಗ್ಗೆ ಕಾರಂಜಿ ಕೆರೆ ಪಕ್ಕ ವಾಕಿಂಗ್ ಮಾಡುತ್ತಿದ್ದರು. ಅದೇ ಕಾಲದಲ್ಲಿ ಮಹಾರಾಜರಾಗಿದ್ದ ನಾಲ್ವಡಿ ಕೃಷ್ಣರಾಜ ಒಡೆಯರ್ ಟೆನಿಸ್ ಆಡಲು ಆ ಕೆರೆ ಬಯಲಿನ ಪಕ್ಕದ ರಸ್ತೆಯಲ್ಲೇ ಹಾದು ಹೋಗುತ್ತಿದ್ದದ್ದು.

 

ಹಾಗೆ ಹೋಗುವಾಗ ಒಮ್ಮೆ ಮುದುಕನಾಗಿದ್ದ ನಮ್ಮ ದೊಡ್ಡಪ್ಪ ಅವರ ಕಣ್ಣಿಗೆ ಬಿದ್ದರು. ನಿತ್ಯವೂ ಅವರು ಅದೇ ವೇಳೆಯಲ್ಲಿ ಟೆನಿಸ್ ಆಡಲು ಹೋಗುತ್ತಿದ್ದರಿಂದ ಗಡಿಯಾರವನ್ನೊಮ್ಮೆ ನೋಡಿ, ನಮ್ಮ ದೊಡ್ಡಪ್ಪ ಯಾವ ಸಂಖ್ಯೆಯ ಕಲ್ಲಿನ ಪಕ್ಕ ಸಾಗುತ್ತಿದ್ದಾರೆ ಎಂಬುದನ್ನು ಗಮನಿಸಿದರು. ನಿತ್ಯವೂ ದೊಡ್ಡಪ್ಪನ ವಾಕಿಂಗ್‌ನ ವೇಗದಲ್ಲಾಗಲೀ, ಸಮಯದಲ್ಲಾಗಲೂ ಕಿಂಚಿತ್ತೂ ವ್ಯತ್ಯಾಸವಾಗುತ್ತಿರಲಿಲ್ಲ.ಒಂದು ವರ್ಷ ಅವರ ಈ ಶಿಸ್ತನ್ನು ಗಮನಿಸಿದ ಮಹಾರಾಜರು ಒಮ್ಮೆ ತಮ್ಮ ರೋಲ್ಸ್‌ರಾಯ್ ಕಾರಿನಿಂದ ಇಳಿದು ಬಂದು ದೊಡ್ಡಪ್ಪನನ್ನು ತಬ್ಬಿಕೊಂಡರಂತೆ. `ಏನ್ರೀ ನೀವು, ನಿತ್ಯವೂ ಒಂದೇ ಸಮಯದಲ್ಲಿ ವಾಕಿಂಗ್‌ಗೆ ಬರುತ್ತೀರಿ. ನಡೆಯುವ ರೀತಿಯಲ್ಲೂ ಏರುಪೇರಾಗೋಲ್ಲ.

 

ನಿಮ್ಮ ಹೆಂಡತಿ ಒಂದು ದಿನವೂ ನೀವು ಹೆಚ್ಚು ಹೊತ್ತು ಮಲಗಲಿ ಅಂತ ಬಲವಂತ ಮಾಡುವುದೇ ಇಲ್ಲವೇ? ಎಂಥ ಶಿಸ್ತು ನಿಮ್ಮದು~ ಎಂದು ಹೊಗಳಿ, ಚಿನ್ನದ ವಾಕಿಂಗ್ ಸ್ಟಿಕ್ಕನ್ನು ಉಡುಗೊರೆಯಾಗಿ ಕೊಟ್ಟರಂತೆ. ಆ ವಾಕಿಂಗ್ ಸ್ಟಿಕ್ಕನ್ನು ದೊಡ್ಡಪ್ಪನ ಮನೆಯಲ್ಲಿ ನಾನು ನೋಡಿದ್ದೆ. ಏಳುವುದು, ಸ್ನಾನ ಮಾಡುವುದು, ಊಟದ ಸಮಯ, ಶಾಲೆಯ ಹೋಂವರ್ಕ್ ಮಾಡುವುದು ಎಲ್ಲದರಲ್ಲೂ ಬಂಗಲೆ ವಂಶದವರು ತುಂಬಾ ಕಟ್ಟುನಿಟ್ಟಿನವರಾಗಿದ್ದರು.ನಮ್ಮ ತಂದೆ ರಸಿಕರು, ಅಂದರೆ ಕಲಾ ರಸಿಕರು. ಅವರು ಭಾರತ ವಾಚನ ಮಾಡುತ್ತಿದ್ದರು. ಸಂಗೀತವೆಂದರೆ ಅವರಿಗೆ ಬಹಳ ಪ್ರಿಯ. ರಜಾ ದಿನಗಳಲ್ಲಿ ಪಿಟೀಲು ಚೌಡಯ್ಯನವರಂಥರನ್ನು ಸೇರಿಸಿ ಮಹಾ ಸಂಗೀತ ಕಾರ್ಯಕ್ರಮಗಳನ್ನು ಆಯೋಜಿಸುತ್ತಿದ್ದರು. ಮನೆಯಲ್ಲಿ ಸಿದ್ಧವಾಗುತ್ತಿದ್ದ ಬೋಂಡಾ, ಕಾಫಿಗೆ ಲೆಕ್ಕವೇ ಇರುತ್ತಿರಲಿಲ್ಲ.ಭಾರತ ವಾಚನ ನಮ್ಮ ತಂದೆಗೆ ಬಹಳ ಪ್ರಿಯ. ದ್ರೌಪದಿ ವಸ್ತ್ರಾಪಹರಣ ಮೊದಲಾದ ಪ್ರಸಂಗಗಳನ್ನು ವಾಚನ ಮಾಡುವಾಗ ಅವರು ಭಾವುಕರಾಗುತ್ತಿದ್ದರು. ಕೆಲವು ಸನ್ನಿವೇಶಗಳಲ್ಲಂತೂ ಅವರ ಕಣ್ಣಿನಿಂದ ನೀರು ಬಂದುಬಿಡುತ್ತಿತ್ತು. ಮೊಟ್ಟ ಮೊದಲ ಬಾರಿಗೆ ಆಕಾಶವಾಣಿಯಲ್ಲಿ ಅವರು ಭಾರತ ವಾಚನ ಮಾಡಿದ್ದನ್ನು ಬಿತ್ತರಿಸಲಾಯಿತು.ನಾವು ಮನೆಮಂದಿಯೆಲ್ಲಾ ರೇಡಿಯೋ ಮುಂದೆ ಒಟ್ಟಿಗೆ ಕುಳಿತು ಅದನ್ನು ಕೇಳಿ ಆನಂದಿಸಿದ್ದೆವು. ನಮ್ಮ ತಂದೆ ಭಾರತ ವಾಚನ ಮಾಡಿದಾಗಲೆಲ್ಲಾ ಬೀಳುತ್ತಿದ್ದ ಚಪ್ಪಾಳೆಗಳ ದನಿಯ ನೆನಪು ಕೂಡ ಇನ್ನೂ ಮಾಸಿಲ್ಲ.ಇದು ನಮ್ಮ ತಂದೆಯ ರಸಿಕತನದ ಒಂದು ಭಾಗವಷ್ಟೆ. ಅವರು ಮೂರು ಮದುವೆಯಾದದ್ದು ಅವರ ಇನ್ನೊಂದು ರಸಿಕತನಕ್ಕೆ ಸಾಕ್ಷಿ. ಅವರು ಮದುವೆಯಾದ ಒಂದು ವರ್ಷಕ್ಕೇ ಮೊದಲ ಹೆಂಡತಿ ತೀರಿಹೋದರಂತೆ.

 

ಪದಕಿ ಕುಟುಂಬದ ಒಬ್ಬಾಕೆಯನ್ನು ಅವರು ಎರಡನೆ ಮದುವೆಯಾದರು. ಅವರಿಗೆ ಎರಡು ಹೆಣ್ಣು, ಒಂದು ಗಂಡು ಮಗು. ಆ ಗಂಡುಮಗುವೇ ಮಧುಸೂದನ ರಾವ್. ಉಳಿದಿಬ್ಬರು ಅಕ್ಕಂದಿರು; ಜಯಕ್ಕ, ಕಮಲಕ್ಕ. ನಾವೆಲ್ಲಾ ಪ್ರೀತಿಯಿಂದ ಅವರನ್ನು ಮದಣ್ಣ ಎಂದು ಕರೆಯುತ್ತಿದ್ದೆವು.ನನ್ನನ್ನು ಬೆಳೆಸಿದ್ದೇ ಅವರು. ನಮ್ಮ ತಂದೆ ತೀರಿಹೋದಾಗ ನನಗಿನ್ನೂ ಹತ್ತು ವರ್ಷ. ಆಮೇಲೆ ಮದಣ್ಣನೇ ನಮ್ಮನ್ನು ಬೆಳೆಸಿದ್ದು. ಬೆಂಗಳೂರಿನಲ್ಲಷ್ಟೇ ಅಲ್ಲದೆ ವಿವಿಧೆಡೆ ಚೆನ್ನಾಗಿಯೇ ವ್ಯಾಪಾರ ಮಾಡುತ್ತಿರುವ `ಮಧೂಸ್ ಟೈರ್ಸ್‌~ ಮದಣ್ಣ ಕಟ್ಟಿ ಬೆಳೆಸಿದ ಕಂಪೆನಿ. ನಾನು ಇವತ್ತು ಏನಾದರೂ ಆಗಿದ್ದರೆ ಅದಕ್ಕೆ ಕಾರಣನೇ ಮದಣ್ಣ.ನಮ್ಮ ಮನೆಯಲ್ಲಿ ಬಲಣ್ಣ, ಬಲತಮ್ಮ ಎಂಬ ಭೇದಭಾವವೇ ಇರಲಿಲ್ಲ. ನಮ್ಮಮ್ಮ ಜಯಮ್ಮ. ಹುಣಸೂರಿನವರು. ಅವರೇ ನಮ್ಮಪ್ಪನ ಮೂರನೇ ಹೆಂಡತಿ. ಹುಣಸೂರು ಕೃಷ್ಣಮೂರ್ತಿಯವರ ತಂಗಿ. ನಾಗರಾಜ, ತಾರಾನಾಥ್, ನಾನು ಹಾಗೂ ಪರಿಮಳಾ ಎಲ್ಲರೂ ಜನ್ಮತಾಳಿದ್ದು ಜಯಮ್ಮನವರ ಹೊಟ್ಟೆಯಲ್ಲೇ. ನಾಗರಾಜ ಅರ್ಥಾತ್ ನಾಗಣ್ಣ ಮೈಸೂರಿನಲ್ಲಿ ಭಾರತ್ ಆಟೋ ಸ್ಪೇರ್ಸ್‌ ಎಂಬ ಅಂಗಡಿಯ ಒಡೆಯ.ತಾರಾನಾಥ್ ಅಮೆರಿಕದಲ್ಲಿ ಅವನು `ಡಾಕ್ಟರ್ ಆಫ್ ಸ್ಟ್ರಕ್ಚರಲ್ ಎಂಜಿನಿಯರ್~ ಮಾಡಿ ಅತಿ ಎತ್ತರದ ಕಟ್ಟಡಗಳ ವಿನ್ಯಾಸ ಮಾಡಿದ. 1960ರ ದಶಕದಿಂದಲೂ ಅವನು ಅಮೆರಿಕದಲ್ಲೇ ವಾಸವಾಗಿದ್ದಾನೆ.ನಾನು ಅಮೆರಿಕಾಗೆ `ಆಪ್ತಮಿತ್ರ~ ಸಿನಿಮಾ ತೆಗೆದುಕೊಂಡು ಹೋದಾಗ ಒಮ್ಮೆ ಶಿಕಾಗೋದಲ್ಲಿ ಎತ್ತರದ ಕಟ್ಟಡವೊಂದಕ್ಕೆ ಹೋಗಿದ್ದೆ. ಅಲ್ಲಿ ಅಮೆರಿಕದಲ್ಲಿ ಅತಿ ಎತ್ತರದ ಕಟ್ಟಡಗಳನ್ನು ವಿನ್ಯಾಸ ಮಾಡಿದವರ ಫೋಟೋಗಳನ್ನು ಹಾಕಿದ್ದರು.ಆ ಫೋಟೋ ಗುಂಪಿನಲ್ಲಿ ನಮ್ಮಣ್ಣನದ್ದೂ ಇತ್ತು. ಅವನು ಸ್ಟ್ರಕ್ಚರಲ್ ಎಂಜಿನಿಯರಿಂಗ್‌ಗೆ ಸಂಬಂಧಿಸಿದಂತೆ ಅನೇಕ ಪುಸ್ತಕಗಳನ್ನು ಬರೆದಿದ್ದಾನೆ. ತಂಗಿ ಪರಿಮಳಾ ನಿರ್ದೇಶಕ ಭಾರ್ಗವ ಅವರನ್ನು ಮದುವೆಯಾದಳು.ಇಟ್ಟಿಗೆಗೂಡು ಪ್ರೈಮರಿ ಸ್ಕೂಲಿನಲ್ಲೇ ನಾನು ಓದಿದ್ದು. ಅಲ್ಲಿ ಒಂದು ಅಂಗಡಿ ಬೀದಿ. ಆಗಾಗ ನಾನು ಸಾಮಾನು ತರೋಕೆ ಅಲ್ಲಿಗೆ ಹೋಗುತ್ತಿದ್ದೆ. ಆ ಬೀದಿಯಲ್ಲಿ ಕೆಲವು ಶ್ರೀಮಂತ ಮನೆಗಳ ಹುಡುಗರು ಕೂತಿರುತ್ತಿದ್ದರು. ಅವರೆಲ್ಲಾ ನನ್ನನ್ನು ಕಂಡೊಡನೆ ಕರೆದು, `ಬಾರೋ ಕುಳ್ಳ, ಒಂದು ಹಾಡನ್ನು ಹಾಡು~ ಎಂದು ಪೀಡಿಸುತ್ತಿದ್ದರು. ಹಾಡು ಹೇಳದೇ ಇದ್ದರೆ ಚೆಡ್ಡಿ ಬಿಚ್ಚುತ್ತಿದ್ದರು.ಅವರಿಗೆಲ್ಲಾ ಹೆದರಿ ನಾನಾಗ `ದಲ್ಲಾಳಿ~, `ಕನ್ಯಾದಾನ~ `ಜಗನ್ಮೋಹಿನಿ~ ಮೊದಲಾದ ಸಿನಿಮಾಗಳ ಹಾಡುಗಳನ್ನು ಹಾಡುತ್ತಿದ್ದೆ. `ಜಗನ್ಮೋಹಿನಿ~ಯ `ಎಂದೋ ಎಂದೋ~ ಎಂಬ ಹಾಡಂತೂ ನನಗಾಗ ತುಂಬಾ ಮೆಚ್ಚು. ಆ ಅಂಗಡಿ ಬೀದಿ ಮೇಲೆ ನನಗೆ ವಿಚಿತ್ರವಾದ ಪ್ರೀತಿ.ಅದೇ ಅಂಗಡಿ ಬೀದಿಯಲ್ಲಿ ರಾಜಣ್ಣನನ್ನು ಆನೆ ಮೇಲೆ ಕೂರಿಸಿ `ಮೇಯರ್ ಮುತ್ತಣ್ಣ~ ಸಿನಿಮಾಗೆಂದು ಮೆರವಣಿಗೆ ಮಾಡಿಸಿದೆ. ಬದುಕಿನ ತಿರುವುಗಳು ಹೇಗಿರುತ್ತವೆ, ನೋಡಿ. ಯಾವ ಅಂಗಡಿ ಬೀದಿಗೆ ಹೋಗಲು ನಾನು ಹೆದರುತ್ತಿದ್ದೆನೋ, ಎಲ್ಲಿ ಮನಸ್ಸಿಟ್ಟು ಹಾಡುಗಳನ್ನು ಹಾಡಿದ್ದೆನೋ ಅದೇ ಬೀದಿಯಲ್ಲಿ ನನ್ನ ಇಷ್ಟದ ನಾಯಕನನ್ನು ಆನೆಮೇಲೆ ಕೂರಿಸಿ ಮೆರವಣಿಗೆ ಮಾಡಿಬಿಟ್ಟೆ.ಆನೆಯನ್ನು ತರಿಸುವುದು 1969ರಲ್ಲಿ ಸುಲಭವಿರಲಿಲ್ಲ. ಬಂಡಿಪುರದಿಂದ ಪಡಿಪಾಟಲು ಪಡುತ್ತಾ ಲಾರಿಯಲ್ಲಿ ಅದನ್ನು ತಂದರು. ಕೊನೆಗೂ ನಾನು ಅಂದುಕೊಂಡಂತೆ ಅದೇ ರಸ್ತೆಯಲ್ಲೇ `ಮೇಯರ್ ಮುತ್ತಣ್ಣ~ ಚಿತ್ರಕ್ಕಾಗಿ ರಾಜಣ್ಣನ ಮೆರವಣಿಗೆ ನಡೆದೇಹೋಯಿತು.

ಮುಂದಿನ ವಾರ: ಶಾಲಾ, ಕಾಲೇಜು ದಿನಗಳು

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry