ಶುಕ್ರವಾರ, ನವೆಂಬರ್ 22, 2019
20 °C

ಬಂಗಾರದ ಕಳಸ ಬಲು ಸೊಗಸ...

Published:
Updated:

ಮೂರು ನದಿಗಳ ಸಂಗಮ ಭಕ್ತಿ ಭಂಡಾರ, ಬಸವಣ್ಣನ ತಪೋಭೂಮಿ, ಶ್ರಿ ಕೂಡಲಸಂಗಮನಾಥನು ಲಿಂಗಸ್ವರೂಪಿಯಾಗಿ ನೆಲೆನಿಂತ ಪಾವನ ಕ್ಷೇತ್ರ ಬಾಗಲಕೋಟೆ ಜಿಲ್ಲೆಯ ಕೂಡಲಸಂಗಮದಲ್ಲೆಗ ಜಾತ್ರೆಯ ಸಂಭ್ರಮ. ಇದೇ 30ರಂದು ಭಕ್ತಿಯಲ್ಲಿ ಲೀನವಾಗಲಿದೆ ಜನಸಮೂಹ.ಚೈತ್ರ ಮಾಸದ ದವನದ ಹುಣ್ಣಿಮೆಯ ಐದನೇ ದಿನ ನಡೆಯುವ ಈ ಜಾತ್ರೆಗೆ ದೇಶದಾದ್ಯಂತ ಜನರು ಸಾಕ್ಷಿಯಾಗಲಿದ್ದಾರೆ. ನಯನಮನೋಹರ ರಥೋತ್ಸವದೊಂದಿಗೆ ಬಂಗಾರದ ಕಳಸದ ಮೆರವಣಿಗೆ ಈ ಜಾತ್ರೆಯ ಕೇಂದ್ರಬಿಂದು.17ನೇ ಶತಮಾನದಲ್ಲಿ ರಕ್ಕಸಗಿ ಅಮರಾವತಿ ದೇಸಾಯಿ ಮನೆತನದವರು ಬಂಗಾರದ ಕಳಸವನ್ನು ಶ್ರಿ ಸಂಗಮನಾಥನಿಗೆ ಅರ್ಪಿಸಿದ್ದರು. 5ಅಡಿ ಎತ್ತರ ಮತ್ತು 50 ಕೆ.ಜಿ ತೂಕದ ಕಳಸ ಭಕ್ತಿ ಮತ್ತು ಭವ್ಯತೆಯ ಪ್ರತೀಕ. ಕಳಸ ಹೊರುವ ಮನೆತನದವರು ತಮ್ಮ ಆಸ್ತಿ ಬರೆದುಕೊಟ್ಟು ಕಳಸವನ್ನು ಜಾತ್ರೆಗೆ ತರುತ್ತಾರೆ. ಜಾತ್ರೆಯ ಹಿಂದಿನ ದಿನ ಕಳಸವನ್ನು ಸಹಸ್ರಾರು ಭಕ್ತರು 60 ಕಿ.ಮಿ. ಪಾದಯಾತ್ರೆ ಮೂಲಕ ತರುತ್ತಾರೆ. ಭಗವತಿ, ಬೆವೂರ, ಹಳ್ಳೂರ, ಕಿರಸೂರ, ಎಲ್ಲ ಗ್ರಾಮಗಳಲ್ಲಿ ಕಳಸಕ್ಕೆ ಪೂಜೆ ಸಲ್ಲಿಸಲಾಗುತ್ತದೆ. ಕಳಸ ಕನಾಡಿ, ವಾದ್ಯಮೇಳ ಹಾಗೂ ಪುರವಂತರ ಮೆರವಣಿಗೆಗಳೊಂದಿಗೆ ಕಳಸ ಮೆರವಣಿಗೆ ಹೊರಡುತ್ತದೆ.ಹೀಗಿದೆ ಕಳಸದ ಇತಿಹಾಸ: ಕಳ್ಳರ ಹಾವಳಿ ತಪ್ಪಿಸಲು ದೇಸಾಯಿ ಮನೆತನದವರು ಹತ್ತಿಯ ದಿಂಡಿನಲ್ಲಿ ಕಳಸ ಬಚ್ಚಿಟ್ಟಿರುತ್ತಾರೆ.ದೇಸಾಯಿ ಮನೆತನದ ಆಳುಮಕ್ಕಳ ಅಚಾತುರ್ಯದಿಂದ ಕಳಸದ ದಿಂಡು ನೂರಾರು ದಿಂಡುಗಳೊಂದಿಗೆ ಎತ್ತಿನ ಬಂಡಿಗಳಲ್ಲಿ ಬಾಗಲಕೋಟೆಯ ನಾರಾ ಹಾಗೂ ಬಣಗಾರವರ ಅಡತಿ ಅಂಗಡಿಗೆ ಬರುತ್ತದೆ. ದಿಂಡುಗಳನ್ನು ತೂಕ ಮಾಡುವಾಗ ಅಂಗಡಿಯ ಕಲ್ಲುಗಳು ಸಾಲದೇ ಪೇಟೆಯ ಎಲ್ಲ ಅಂಗಡಿಗಳಿಂದಲೂ ಕಲ್ಲುಗಳು ತರಲಾಗುತ್ತದೆ. ಆದರೂ ತೂಕ ಮಾಡುವುದು ಕಷ್ಟವಾಗುತ್ತದೆ. ಆಗ ಕಳಸದ ಬಿಂದಿಗೆ ಅದರಲ್ಲಿ ಇರುವುದು ತಿಳಿಯುತ್ತದೆ.ದೇಸಾಯಿ ಮನೆತನದವರು, ಗ್ರಾಮದವರು ತಮ್ಮ ಕಳಸ ತಮಗೆ ಕೊಡಬೇಕೆನ್ನುತ್ತಾರೆ. ಆದರೆ ಬಾಗಲಕೋಟೆ ಜನ ಒಪ್ಪುವುದಿಲ್ಲ.ನಗರಕ್ಕೆ ಬಂದ ಭಾಗ್ಯ ಬಿಡುವುದಿಲ್ಲ ಎಂಬುದು ಅವರ ಹಟ. ವಿವಾದ ಕೋರ್ಟ್ ಮೆಟ್ಟಿಲೇರುತ್ತದೆ. ನ್ಯಾಯಾಲಯದ ತೀರ್ಮಾನದಂತೆ ಪ್ರತಿ ವರ್ಷ ಜಾತ್ರೆಯ ಹಿಂದಿನ ದಿನ ಕಳಸವನ್ನು ದೇಸಾಯಿ ಮನೆಯವರಿಗೆ ನೀಡಲಾಗುತ್ತದೆ. ರಥೋತ್ಸವದ ನಂತರ ಬಾಗಲಕೋಟೆ ತಹಶೀಲ್ದಾರ ಕಚೇರಿಗೆ ಮರಳಿಸಲಾಗುತ್ತಿದೆ.

 

ಪ್ರತಿಕ್ರಿಯಿಸಿ (+)