ಭಾನುವಾರ, ಮೇ 16, 2021
28 °C

ಬಂಗಾರದ ಮಕ್ಕಳು: ಚಿಮ್ಮಿದ ಮಂದಹಾಸ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: `ಎಂಜಿನಿಯರಿಂಗ್ ಕಲಿಕೆಗೆ ಮೆರಿಟ್ ಸೀಟು ಸಿಕ್ಕಿತ್ತು. ಹಣಕಾಸಿನ ಸಮಸ್ಯೆಯಿಂದಾಗಿ ಎಂಜಿನಿಯರಿಂಗ್‌ಗೆ ಸೇರಲಾಗಲಿಲ್ಲ. ಆದರೆ ಇಂದು ಅದಕ್ಕಿಂತ ಮಿಗಿಲಾದ ಸಾಧನೆ ಮಾಡಿದ್ದೇನೆ ಎಂಬ ಸಾರ್ಥಕ ಭಾವ ಮೂಡಿದೆ. ಅಪ್ಪನ ಮೊಗದಲ್ಲೂ ಮಂದಹಾಸ ಮೂಡಿದೆ~.ಇದು ಭೂಗರ್ಭ ಶಾಸ್ತ್ರ ವಿಭಾಗದಲ್ಲಿ ಆರು ಚಿನ್ನದ ಪದಕ ಹಾಗೂ ಎರಡು ನಗದು ಬಹುಮಾನ ಪಡೆದ ದಯಾನಂದ ಬಿ.ಜಿ. ಅವರ ಪ್ರತಿಕ್ರಿಯೆ. ನಗರದ ಸೆಂಟ್ರಲ್ ಕಾಲೇಜು ಆವರಣದಲ್ಲಿರುವ ಜ್ಞಾನಜ್ಯೋತಿ ಸಭಾಂಗಣದಲ್ಲಿ ಗುರುವಾರ ನಡೆದ ಬೆಂಗಳೂರು ವಿಶ್ವವಿದ್ಯಾಲಯದ 47ನೇ ಘಟಿಕೋತ್ಸವದಲ್ಲಿ ಅವರು `ಪ್ರಜಾವಾಣಿ~ ಜತೆ ಮಾತನಾಡಿದರು. ಮಗನ ಸಾಧನೆಯಿಂದ ಪುಳಕಗೊಂಡಿದ್ದ ತಂದೆ ಗಂಗಾಧರಯ್ಯ ಆನಂದಭಾಷ್ಪ ಸುರಿಸಿದರು. ತಾಯಿ ಲಲಿತಮ್ಮ ಅನಕ್ಷರಸ್ಥೆ. ಅವರು ಒಂದು ಕ್ಷಣ ಭಾವುಕರಾದರು. ಮಗನ ಸಾಧನೆಗೆ ಹೆಮ್ಮೆ ವ್ಯಕ್ತಪಡಿಸಿದರು.`ತಂದೆಗೆ ಸುಂಕದಕಟ್ಟೆಯ ಸಿನಿಮಾ ಥಿಯೇಟರ್‌ನಲ್ಲಿ ಗೇಟ್‌ಕೀಪರ್ ಕೆಲಸ. ತಿಂಗಳ ಸಂಬಳ ರೂ 3 ಸಾವಿರ. ಗುಡಿಸಿಲಿನಂತಹ ಸಣ್ಣ ಮನೆಯ ಬಾಡಿಗೆಯೇ ರೂ 1,500. ಉಳಿದ ಹಣದಲ್ಲಿ ಮನೆಯ ಖರ್ಚು, ನನ್ನ ಹಾಗೂ ತಂಗಿಯ ವಿದ್ಯಾಭ್ಯಾಸಕ್ಕೆ ಸರಿದೂಗಿಸಬೇಕಿತ್ತು. ಎಂಜಿನಿಯರಿಂಗ್‌ನಲ್ಲಿ ಪ್ರವೇಶ ಸಿಕ್ಕಾಗ ರೂ 35 ಸಾವಿರ ಶುಲ್ಕ ಹೊಂದಿಸಲು ಸಾಧ್ಯವಾಗಲಿಲ್ಲ. ಆಗ ಯಾರೂ ನೆರವಿಗೆ ಬರಲಿಲ್ಲ. ಆಗ ತಂದೆ ಗೊಳೋ ಎಂದು ಅತ್ತಿದ್ದರು. ವಿದ್ಯಾರ್ಥಿ ವೇತನದ ನೆರವಿನಿಂದ ಸ್ನಾತಕೋತ್ತರ ಪದವಿ ಓದಿದೆ~ ಎಂದು ದಯಾನಂದ್ ಕಷ್ಟದ ಸರಪಳಿಯನ್ನು ಬಿಚ್ಟಿಟ್ಟರು.`ಓದಿನ ವೇಳೆ ಕೆಲವೊಮ್ಮೆ ನಿದ್ದೆ ಹೋಗುತ್ತಿದ್ದೆ. ಅಮ್ಮ ಪಕ್ಕದಲ್ಲೇ ಕುಳಿತು ನಿದ್ದೆ ಮಾಡದಂತೆ ಎಚ್ಚರಿಸುತ್ತಿದ್ದರು. ನನ್ನ ಓದು ಮುಗಿದ ಮೇಲೆಯೇ ಅವರು ನಿದ್ದೆ ಹೋಗುತ್ತಿದ್ದುದು. ಮಗ ಉನ್ನತ ವ್ಯಾಸಂಗ ಮಾಡಬೇಕು ಎಂಬುದು ಅವರ ಆಕಾಂಕ್ಷೆಯಾಗಿತ್ತು. ಜೀವನದ ಕಷ್ಟದ ಕಥೆಗಳನ್ನು ಹೇಳುತ್ತಿದ್ದರು~ ಎಂದು ಅವರು ನೆನಪಿಸಿಕೊಂಡರು.`ಪಿಎಚ್.ಡಿ ಮಾಡಬೇಕು ಎಂಬ ಆಸೆ ಇದೆ. ಮೊದಲು ತಂಗಿಗೆ ಮದುವೆ ಮಾಡಿಸಬೇಕು. ಹಾಗಾಗಿ ಕೆಲವು ಕಾಲ ಉದ್ಯೋಗ ಮಾಡುತ್ತೇನೆ. ತಾಂಜಾನಿಯಾದಲ್ಲಿ ಚಿನ್ನ ಹಾಗೂ ವಜ್ರದ ಗಣಿಯಲ್ಲಿ ಉದ್ಯೋಗ ದೊರಕಿದೆ. ಈಗ ಎಂಜಿನಿಯರ್ ಪದವಿ ಪಡೆದುದಕ್ಕಿಂತ ಜಾಸ್ತಿ ಖುಷಿಯಾಗಿದೆ~ ಎಂದು ಸಂತಸ ಹಂಚಿಕೊಂಡರು. ಗೆಳೆಯರ ಒತ್ತಾಯಕ್ಕೆ ಸೇರಿದ್ದೆ: `ಪದವಿ ಮುಗಿದ ಕೂಡಲೇ ಉದ್ಯೋಗದ ಹುಡುಕಾಟದಲ್ಲಿದ್ದೆ. ಗೆಳೆಯರು ಹಾಗೂ ಮನೆಯವರ ಒತ್ತಡಕ್ಕೆ ಮಣಿದು ಸ್ನಾತಕೋತ್ತರ ಪದವಿಗೆ ಸೇರಿದೆ. ಸ್ನಾತಕೋತ್ತರ ಪದವಿಯ ಅರ್ಜಿ ತಂದು ಭರ್ತಿ ಮಾಡಿದವರು ಗೆಳೆಯರೇ. ಅವರಿಗೆ ನಾನು ಚಿರಋಣಿ~ ಎಂಬುದು ರಸಾಯನ ವಿಜ್ಞಾನ ವಿಭಾಗದಲ್ಲಿ ಆರು ಚಿನ್ನ ಹಾಗೂ ಎರಡು ನಗದು ಬಹುಮಾನ ಪಡೆದ ಸಂತೋಷ್ ಕುಮಾರ್ ಅವರ ಅಭಿಮತ.`ಏಳನೇ ತರಗತಿ ವರೆಗೆ ಕನ್ನಡ ಮಾಧ್ಯಮದಲ್ಲಿ ವ್ಯಾಸಂಗ ಮಾಡಿದ್ದೆ. ಮೊದಲಿನಿಂದಲೂ ರಸಾಯನ ವಿಜ್ಞಾನವೆಂದರೆ ಇಷ್ಟ. ತಂದೆ ಎಂಟು ವರ್ಷಗಳ ಹಿಂದೆ ತೀರಿಕೊಂಡರು. ಅಪ್ಪ ಕಷ್ಟಪಟ್ಟು ಓದಿಸಿದರು. ರ‌್ಯಾಂಕ್ ನಿರೀಕ್ಷೆ ಮಾಡಿರಲಿಲ್ಲ. ಸಂಶೋಧನೆ ಮಾಡಬೇಕು ಎಂಬ ಗುರಿ ಇದೆ~ ಎಂದು ಅವರು ಭವಿಷ್ಯದ ಯೋಜನೆಗಳ ಬಗ್ಗೆ ಮಾಹಿತಿ ನೀಡಿದರು.ಅಪ್ಪನಿಗೆ ಅರ್ಪಣೆ: `ಚಿಕ್ಕಂದಿನಿಂದಲೂ ಅಪ್ಪ ಶಿಸ್ತಿನಿಂದ ಬೆಳೆಸಿದರು. ಗಣಿತದಲ್ಲಿ 100 ಅಂಕ ಪಡೆಯಬೇಕು ಎಂದು ಅಪ್ಪ ಕಿವಿಮಾತು ಹೇಳುತ್ತಿದ್ದರು. ಕೆಲವು ವರ್ಷಗಳ ಹಿಂದೆ ಅಪ್ಪ ನಿಧನರಾದರು. ಬಿ.ಎಸ್ಸಿಯಲ್ಲಿ ನಾಲ್ಕು ಸೆಮಿಸ್ಟರ್‌ಗಳಲ್ಲಿ ಗಣಿತದಲ್ಲಿ 100 ಅಂಕ ಪಡೆದೆ. ಈಗ ನಾಲ್ಕು ಚಿನ್ನದ ಪದಕ ಸಿಕ್ಕಿದೆ. ಪದಕ ಹಾಗೂ ಅಂಕಗಳನ್ನು ತಂದೆಗೆ ಅರ್ಪಿಸುತ್ತೇನೆ~ ಎಂದು ಬಿ.ಎಸ್ಸಿಯಲ್ಲಿ ನಾಲ್ಕು ಚಿನ್ನದ ಪದಕ ಹಾಗೂ ಒಂದು ನಗದು ಬಹುಮಾನ ಗಳಿಸಿದ ಬಾಗೆಪಲ್ಲಿ ನ್ಯಾಷನಲ್ ಕಾಲೇಜಿನ ಕುಶಲ ಪ್ರತಿಕ್ರಿಯಿಸಿದರು.ಪರೀಕ್ಷೆಗಾಗಿ ಓದಲಿಲ್ಲ: `ನಾನು ಯಾವತ್ತೂ ಪರೀಕ್ಷೆಗಾಗಿ ವಿಶೇಷವಾಗಿ ಓದಲಿಲ್ಲ. ಪಾಠ ಪ್ರವಚನಗಳನ್ನು ಶ್ರದ್ಧೆಯಿಂದ ಕೇಳುತ್ತಿದ್ದೆ. ಬೇಸರ ಎನಿಸಿದಾಗ ಸಂಗೀತ ಕೇಳುತ್ತಿದ್ದೆ, ಗೆಳತಿಯರೊಂದಿಗೆ ಹರಟೆ ಹೊಡೆಯುತ್ತಿದೆ. ರ‌್ಯಾಂಕ್ ಪಡೆಯಲೆಂದೇ ಓದಲಿಲ್ಲ~ ಎಂದು ಎಂಜಿನಿಯರಿಂಗ್‌ನಲ್ಲಿ ನಾಲ್ಕು ಚಿನ್ನ ಹಾಗೂ ಎರಡು ನಗದು ಬಹುಮಾನ ಗಳಿಸಿದ ಸಂಕೀರ್ತನಾ ಕೆ. ಪ್ರತಿಕ್ರಿಯಿಸಿದರು.ವೈದ್ಯಕೀಯವೇ ಏಕೆ: `ಶಾಲಾ ಅವಧಿಯಿಂದಲೂ ನನಗೆ ಪ್ರಾಣಿವಿಜ್ಞಾನದಲ್ಲಿ ಹೆಚ್ಚು ಆಸಕ್ತಿ. ವೈದ್ಯಕೀಯ, ಎಂಜಿನಿಯರಿಂಗ್ ಸೇರುವ ಅವಕಾಶ ಇದ್ದರೂ ಸೇರಲಿಲ್ಲ.ತರಗತಿಯಲ್ಲಿ ಶ್ರದ್ಧೆಯಿಂದ ಪಾಠ ಕೇಳಿದರೆ ಹೆಚ್ಚು ಓದುವ ಅಗತ್ಯವೇ ಇಲ್ಲ. ದಿನಕ್ಕೆ ಒಂದು ಗಂಟೆಯಷ್ಟು ಕಾಲ ಓದುತ್ತಿದ್ದೆ~ ಎಂದು ಎಂ.ಎಸ್ಸಿ ಪ್ರಾಣಿವಿಜ್ಞಾನ ವಿಭಾಗದಲ್ಲಿ ಐದು ಚಿನ್ನದ ಪದಕ ಜಯಿಸಿದ ವಿಯೊಲ್ಲಾ ಪಾವನ ಪಿಂಟೋ ಅಭಿಪ್ರಾಯ ವ್ಯಕ್ತಪಡಿಸಿದರು.ಚಿನ್ನದ ಬೇಟೆ: ಎಂ.ಎ. ಕನ್ನಡ ವಿಭಾಗದ ರುಕ್ಮಿಣಿ ಕೆ.ಕೆ. (ಏಳು ಚಿನ್ನದ ಪದಕ, ಒಂದು ನಗದು ಬಹುಮಾನ), ಸಂಸ್ಕೃತ ವಿಭಾಗದಲ್ಲಿ ಆಶಾ ಎಚ್.ಎಸ್. (ಐದು ಚಿನ್ನ, ಒಂದು ನಗದು), ಅರ್ಥಶಾಸ್ತ್ರ ವಿಭಾಗದಲ್ಲಿ ನವ್ಯಾ ಜಿ.ಎಸ್. (ನಾಲ್ಕು ಚಿನ್ನ, ಒಂದು ನಗದು), ಭೌತಶಾಸ್ತ್ರ ವಿಭಾಗದಲ್ಲಿ ಪಾವನಾ ಎಂ. ಬೊಂಬಾರೆ (ಏಳು ಚಿನ್ನ), ಬಿಎಸ್ಸಿಯಲ್ಲಿ ಅನುಷಾ ರಾಮಚಂದ್ರ ಸಿಂಗು (ಐದು ಚಿನ್ನ, ಮೂರು ನಗದು), ಎಂಜಿನಿಯರಿಂಗ್‌ನಲ್ಲಿ ಕೃಷ್ಣ ಭೋಜರಾಜು, ವಿನು ಪ್ರಸಾದ್ ಜಿ. (ತಲಾ ಐದು ಪದಕ) ಹೆಚ್ಚು ಚಿನ್ನದ ಪದಕ ಗಳಿಸಿದ ಸಾಧಕ ವಿದ್ಯಾರ್ಥಿಗಳು. 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.