ಬಂಗಾರಪೇಟೆ ಬಾಲೆಯರ ಸಾಧನೆ

7

ಬಂಗಾರಪೇಟೆ ಬಾಲೆಯರ ಸಾಧನೆ

Published:
Updated:

ರೇಣುಕಾಗೆ ವೈಯಕ್ತಿಕ ಪ್ರಶಸ್ತಿ 

ಕಾಲೇಜಿನ ಇಡೀ ತಂಡದ ಪೈಕಿ ದ್ವಿತೀಯ ಪಿಯುಸಿ ವಿದ್ಯಾರ್ಥಿನಿ ಎಂ.ರೇಣುಕಾ ಸಾಧನೆ ಗಮನಾರ್ಹ. ಏಕೆಂದರೆ ಆಕೆ ಬಾಲಕಿಯರ ವೈಯಕ್ತಿಕ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿರುವ ಕ್ರೀಡಾಪಟು. ಎರಡನೇ ಬಾರಿಗೆ 100 ಮೀಟರ್ ಓಟದಲ್ಲಿ ದ್ವಿತೀಯ ಸ್ಥಾನ ಪಡೆದಿರುವ ಜೊತೆಗೆ ಉದ್ದಜಿಗಿತ, 100 ಮೀ ಹರ್ಡಲ್ಸ್‌ನಲ್ಲಿ ಪ್ರಥಮ ಸ್ಥಾನ ಪಡೆದಿದ್ದಾಳೆ.ಪಟ್ಟಣದಿಂದ ಸುಮಾರು 5 ಕಿ.ಮೀ ದೂರದಲ್ಲಿರುವ ಹೊಸಕೋಟೆ ಎಂಬ ಗ್ರಾಮದಲ್ಲಿ ಹುಟ್ಟಿದ ಈಕೆ ಪ್ರಾಥಮಿಕ, ಹಿರಿಯ ಪ್ರಾಥಮಿಕ ಮತ್ತು ಕಾಲೇಜು ವಿಭಾಗದಲ್ಲಿ ನಡೆಯುವ ಪ್ರತಿ ಕ್ರೀಡಾಕೂಟದಲ್ಲಿ ಇದುವರೆಗೂ ಸೋಲೆಂಬುದೇ ಗೊತ್ತಿಲ್ಲದ ಕ್ರೀಡಾಪಟು. ಪ್ರತಿ ಕ್ರೀಡೆಯಲ್ಲೂ ಯಾವುದಾದರೊಂದು ಪ್ರಶಸ್ತಿ ತಮ್ಮದಾಗಿಸಿಕೊಳ್ಳುವ ಛಲ ಈಕೆಯದು.ಕಡು ಬಡತನದ ಮಧ್ಯೆ ಕೂಲಿ ಮಾಡಿ ಸಂಸಾರ ನಡೆಸುತ್ತಿರುವ ವಸಂತಮ್ಮ ಮತ್ತು ಮುನಿಯಪ್ಪ ದಂಪತಿಯ ಪುತ್ರಿಯಾದ ರೇಣುಕಾಗೆ ಹೈಸ್ಕೂಲ್ ವಿದ್ಯಾಭ್ಯಾಸವೇ ಕಡೆಯಾಗಿತ್ತು, ನೆರೆಯವರ ಸಹಾಯದಿಂದ ಕಾಲೇಜು ಪ್ರವೇಶಿಸಿ, ಕ್ರೀಡೆಯಲ್ಲಿ ಪಡೆದಿರುವ ಫಲಕ ಹಾಗೂ ಪ್ರಶಸ್ತಿ ಪತ್ರಗಳನ್ನು ಮನೆಯ ಒಂದು ಮೂಲೆಯಲ್ಲಿ ಜೋಡಿಸಿಟ್ಟಿದ್ದಾಳೆ. ವಿದ್ಯಾವಂತರಿಲ್ಲದ ಮನೆಯಲ್ಲಿ ಮಾರ್ಗದರ್ಶಕರು, ತರಬೇತುದಾರರಿಲ್ಲದೆಯೂ ಈಕೆ ಪ್ರಶಸ್ತಿಗಳನ್ನು ಗಳಿಸುತ್ತಿದ್ದಾಳೆ.ಗೆದ್ದೇ ಗೆಲ್ಲುವೆವು ನಾವು ಗೆದ್ದೇ ಗೆಲ್ಲುವೆವು....

-ಇದು ಬರೀ ಹಾಡಲ್ಲ. ಪ್ರತಿ ವರ್ಷವೂ ನಡೆಯುವ ತಾಲ್ಲೂಕು ಮಟ್ಟದ ಪದವಿಪೂರ್ವ ಕಾಲೇಜುಗಳ ಕ್ರೀಡಾಕೂಟದಲ್ಲಿ ಪ್ರಶಸ್ತಿ ಪಡೆಯುತ್ತಿರುವ ಬಂಗಾರಪೇಟೆಯ ಬಾಲಕಿಯರ ಸರ್ಕಾರಿ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿನಿಯರ ಆತ್ಮವಿಶ್ವಾಸದ ಹಾಡು. ಅದು ಗೆಲುವಿನ ಕಡೆಗೆ ಗಮನವಿಟ್ಟ ಪರಿಶ್ರಮದ ಹಾಡು.

 

ಈ ಬಾಲಕಿಯರು ಅಥ್ಲೆಟಿಕ್ಸ್‌ನಲ್ಲೂ ಸೈ, ಗುಂಪು ಆಟಗಳಾದ ಕೊಕ್ಕೊ, ವಾಲಿಬಾಲ್, ಷಟಲ್ ಬ್ಯಾಡ್ಮಿಂಟನ್, ಥ್ರೋ ಬಾಲ್, ಕಬಡ್ಡಿಯಾದರೂ ಸೈ ಎನ್ನುತ್ತಾರೆ. ಮೈದಾನದ ಕೊರತೆ ನಡುವೆಯೂ ಈ ಸಾಧನೆ ಮೆರೆದಿದ್ದಾರೆ ಎಂಬುದೇ ವಿಶೇಷ.ಹೀಗಾಗಿಯೇ ಅವರು ಬಿಇಎಂಎಲ್ ಕ್ರೀಡಾಂಗಣದಲ್ಲಿ ಸೆ.5ರಿಂದ 9ರವರೆಗೆ ನಡೆದ ತಾಲ್ಲೂಕು ಮಟ್ಟದ ಪದವಿ ಪೂರ್ವ ಕಾಲೇಜು ಕ್ರೀಡಾಕೂಟದಲ್ಲಿ ಸಮಗ್ರ ತಂಡ ಪ್ರಶಸ್ತಿ ಗಳಿಸಿ ಗೆಲುವಿನ ನಗೆ ಬೀರಿದ್ದಾರೆ. ಅಂದ ಹಾಗೆ ಈ ಸಮಗ್ರ  ತಂಡ ಪ್ರಶಸ್ತಿಯನ್ನು ಕಳೆದ 8 ವರ್ಷದಿಂದ ಈ ಕಾಲೇಜು ವಿದ್ಯಾರ್ಥಿನಿಯರು ಬೇರೆಯವರಿಗೆ ಬಿಟ್ಟುಕೊಟ್ಟಿಲ್ಲ. ಹೀಗಾಗಿ ಇಡೀ ತಾಲ್ಲೂಕಿನಲ್ಲಿ ಈ ಕಾಲೇಜು ವಿಶಿಷ್ಟ ಸ್ಥಾನ-ಮಾನ ಗಳಿಸಿದೆ.ಗೆಲುವಿನ ವಿವರ...

ತಾಲ್ಲೂಕು ಮಟ್ಟದ ಗುಂಪು ಕ್ರೀಡೆಗಳಾದ ಥ್ರೋಬಾಲ್, ಬಾಲ್ ಬ್ಯಾಡ್ಮಿಂಟನ್ ಮತ್ತು ಟಿನ್ನಿ ಕಾಯ್ಟಗಳಲ್ಲಿ ಪ್ರಥಮ ಸ್ಥಾನ ಪಡೆದಿರುವ ಬಾಲಕಿಯರ ತಂಡವು ಕೊಕ್ಕೊ, ಕಬಡ್ಡಿ, ವಾಲಿಬಾಲ್, ಷಟಲ್ ಬ್ಯಾಡ್ಮಿಂಟನ್‌ನಲ್ಲಿ ದ್ವಿತೀಯ ಸ್ಥಾನ ಗಳಿಸಿದೆ.ಮೇಲಾಟಗಳ ಪೈಕಿ 100 ಮೀ ಓಟ, 100 ಮೀ ಹರ್ಡಲ್ಸ್, 200 ಮೀ ಓಟ, ಮತ್ತು  400 ಮೀ ಹರ್ಡಲ್ಸ್ ನಲ್ಲಿ ಇದೇ ಕಾಲೇಜಿನ ವಿದ್ಯಾರ್ಥಿನಿಯರು ಪ್ರಥಮ ಮತ್ತು ದ್ವಿತೀಯ ಸ್ಥಾನ ಪಡೆದಿದ್ದಾರೆ.  1500 ಮೀ ಓಟ, 3000 ಮೀ ಓಟ, 5000 ಮೀ ಓಟ, 4*100 ಮೀ ರಿಲೇ, 4*400 ಮೀ ರಿಲೇನಲ್ಲಿ ದ್ವಿತೀಯ ಬಹುಮಾನ ಪಡೆದಿದ್ದಾರೆ. ಅಲ್ಲದೆ ಉದ್ದ ಜಿಗಿತ -ಪ್ರಥಮ, ತ್ರಿವಿಧ ಜಿಗಿತ -ದ್ವಿತೀಯ, ಚಕ್ರ ಎಸೆತದಲ್ಲಿ ತೃತೀಯ ಸ್ಥಾನ ಪಡೆದಿದ್ದಾರೆ. ಒಟ್ಟಾರೆ ಎಲ್ಲ ಆಟಗಳಲ್ಲೂ ಈ ಕಾಲೇಜಿನ ವಿದ್ಯಾರ್ಥಿನಿಯರ ಪಾಲ್ಗೊಳ್ಳುವಿಕೆ ಗಮನಾರ್ಹವಾಗಿದೆ.ಕಾಲೇಜಿನ ಈ ಸಾಧನೆ ಹಿಂದೆ ಅಲ್ಲಿನ ಕ್ರೀಡಾ ಕಾರ್ಯದರ್ಶಿ ನಾಗಾನಂದ್ ಕೆಂಪರಾಜ್ ಇದ್ದಾರೆ. ಸುಮಾರು 10 ವರ್ಷಗಳಿಂದ ಕ್ರೀಡಾ ಕಾರ್ಯದರ್ಶಿಯಾಗಿರುವ ಅವರು, ಯಾವುದೇ ಕ್ರೀಡಾಕೂಟಕ್ಕೂ 1 ತಿಂಗಳು ಮುಂಚೆಯೇ ಆಸಕ್ತ ವಿದ್ಯಾರ್ಥಿನಿಯರ ಗುಂಪನ್ನು ರಚಿಸಿ, ತರಬೇತಿ ಮತ್ತು ಮಾರ್ಗದರ್ಶನ ನೀಡಲಾಗುವುದು.  ಬಾಲಕಿಯರ ಪ್ರೌಢಶಾಲೆ ಮತ್ತು ಕಾಲೇಜು ಒಂದೇ ಆವರಣದಲ್ಲಿ ಇರುವುದರಿಂದ ಕೆಲವು ಬಾರಿ ಪ್ರೌಢ ಶಾಲಾ ವಿದ್ಯಾರ್ಥಿಗಳೊಂದಿಗೆ ಸ್ಪರ್ಧೆಗಳನ್ನು ಏರ್ಪಡಿಸಿ ಕಾಲೇಜು ವಿದ್ಯಾರ್ಥಿನಿಯರ ಸಾಮರ್ಥ್ಯ ಪರೀಕ್ಷೆಗೆ ಒಳಪಡಿಸಲಾಗುತ್ತದೆ.  ಇದು ನಮ್ಮ ಕಾಲೇಜಿನ ವಿಶೇಷ ಎನ್ನುತ್ತಾರೆ.ಇಡೀ  ತಾಲ್ಲೂಕಿನ ಪದವಿಪೂರ್ವ ಕಾಲೇಜುಗಳ ಪೈಕಿ ನಮ್ಮ ಕಾಲೇಜು ವಿಶೇಷ ಸ್ಥಾನ ಗಳಿಸಲು ಕ್ರೀಡಾಪಟುಗಳು ಮತ್ತು ಮಾರ್ಗದರ್ಶಕರ ಪಾತ್ರ ಮಹತ್ವದ್ದು ಎಂಬುದು ಪ್ರಾಂಶುಪಾಲ ಡಿ.ಇ.ವೆಂಕಟರಾಜು ನುಡಿ.ನಮ್ಮ ಕಾಲೇಜಿನ ವಿದ್ಯಾರ್ಥಿನಿಯರು ರಾಜ್ಯಮಟ್ಟದಲ್ಲೂ ಗಮನ ಸೆಳೆಯಬಲ್ಲ ಪ್ರತಿಭಾವಂತರು ಎಂಬುದು ಉಪ ಪ್ರಾಂಶುಪಾಲರಾದ ಶಂಕರಯ್ಯ, ದೈಹಿಕ ಶಿಕ್ಷಣ ಶಿಕ್ಷಕರಾದ ಚಂದ್ರಶೇಖರ್, ಹಿರಿಯ ಉಪನ್ಯಾಸಕರಾದ ಸಿ.ಸಿ. ನಾರಾಯಣಪ್ಪ, ಟಿ.ಕೆ.ವೆಂಕಟಚಲಪತಿ ಅವರ ಭರವಸೆಯ ನುಡಿ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry