ಶುಕ್ರವಾರ, ಮೇ 7, 2021
26 °C

ಬಂಗಾರಪ್ಪ ಬಗ್ಗೆ ಹಗುರ ಮಾತು ಸಲ್ಲ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸೊರಬ: ಮಂಚಿ ಆಂಜನೇಯ ದೇವರು ನಮ್ಮ ಮನೆ ದೇವರಾಗಿದ್ದು, ಎಸ್. ಬಂಗಾರಪ್ಪ ಅವರ ಅಧಿಕಾರಾವಧಿಯಲ್ಲಿ ವೈಯುಕ್ತಿಕವಾಗಿ ಸಾಕಷ್ಟು ಹಣ ನೀಡಿ ದೇವಸ್ಥಾನದ ನಿರ್ಮಾಣಕ್ಕೆ ಕಾರಣರಾಗಿದ್ದರು. ಸರ್ಕಾರದಿಂದ ನೀಡುವ ಹಣಕ್ಕೆ ಗುದ್ದಲಿ ಪೂಜೆಯ ನೆಪದಲ್ಲಿ ಬಂದು ಶಾಸಕ ಹೆಚ್. ಹಾಲಪ್ಪ ಅವರು ಎಸ್. ಬಂಗಾರಪ್ಪ ಅವರ ಬಗ್ಗೆ ಕೇವಲವಾಗಿ ಮಾತನಾಡಿ ಜನರನ್ನು ಕೆರಳಿಸಿ ಗೂಂಡಾ ಸಂಸ್ಕತಿಯನ್ನು ಪ್ರಚೋದಿಸುತ್ತಿದ್ದಾರೆ ಎಂದು ಯುವ ಜೆಡಿಎಸ್ ರಾಜ್ಯಾಧ್ಯಕ್ಷ ಮಧು ಬಂಗಾರಪ್ಪ ಆರೋಪಿಸಿದರು.ಬಂಗಾರಪ್ಪ ಅವರು ಇದ್ದಾಗ ಧೈರ್ಯ ಇಲ್ಲದೇ ಅಲ್ಲಲ್ಲಿ ಮಾತನಾಡಿಕೊಂಡಿದ್ದವರು ಇಂದು ಬಂಗಾರಪ್ಪ ಇಲ್ಲ ಎಂಬ ಕಾರಣಕ್ಕಾಗಿ ಏನು ಬೇಕಾದರೂ ಮಾತನಾಡಿದರೆ, ತಾಲ್ಲೂಕಿನ ತುಂಬಾ ನೂರಾರು ಬಂಗಾರಪ್ಪಗಳಿದ್ದಾರೆ ಎಚ್ಚರಿಕೆ ಎಂದು ಪಟ್ಟಣದ ಪ್ರವಾಸಿಮಂದಿರದಲ್ಲಿ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಪರೋಕ್ಷವಾಗಿ ವಾಗ್ದಾಳಿ ಮಾಡಿದರು.`ಬಂಗಾರಪ್ಪ ಅಭಿಮಾನಿಗಳಿಗೆ ಕುಡಿದು ಬಂದಿದ್ದೀಯಾ, ಗಲಾಟೆ ಮಾಡಲು ಬರುತ್ತೀಯಾ, ನೀನು ರೌಡಿ~ ಎಂದೆಲ್ಲಾ ಹೇಳಿದ ಬಗ್ಗೆ ಮಾಹಿತಿ ದೊರಕಿದೆ. ಹಾಗೇನಾದರೂ ಹೇಳಿದ್ದಾದಲ್ಲಿ ಆ ರೌಡಿ ಜನಗಳೇ ಸೂಕ್ತ ನಿರ್ಧಾರವನ್ನು ತೆಗೆದುಕೊಳ್ಳು ತ್ತಾರೆ. ಆ ರೌಡಿ ಜನಗಳಿಗೆಲ್ಲಾ ನಾನೇ ಬಾಸ್ ಎಂದು ನಕ್ಕರು. ಮುಂದಿನ ಚುನಾವಣೆಯಲ್ಲಿ ಇವರೇ ಸೂಕ್ತ ಉತ್ತರ ನೀಡುತ್ತಾರೆ.ಹಿಂದಿನವರು ತಾಲೂಕನ್ನು ಅಭಿವದ್ಧಿ ಮಾಡಲಿಲ್ಲ ಎಂದು ಶಾಸಕರು  ಹಿಡಿತವಿಲ್ಲದೇ ಮಾತನಾಡುತ್ತಿದ್ದಾರೆ.  ಬಂಗಾರಪ್ಪ ಅವರು ತಾಲೂಕಿನ ಜನರಿಗೆ ನಿಯತ್ತಾಗಿ ದುಡಿದು ತಿನ್ನುವ ಶಕ್ತಿ ಕೊಟ್ಟಿದ್ದಾರೆ. ಇನ್ನುಮುಂದೆ ಶಾಸಕರು ಬಂಗಾರಪ್ಪ ಅವರ ಬಗ್ಗೆ ಹಗುರವಾಗಿ ಮಾತನಾಡಿದರೆ ಸಹಿಸುವುದಿಲ್ಲ ಎಂದರು.ತಾಲ್ಲೂಕಿನಾದ್ಯಂತ ಬಿಜೆಪಿಯ ಜನಪರ ಅಭಿವೃದ್ಧಿ ಕಾರ್ಯಕ್ರಮ ಎಂದು ಜನರನ್ನು ಮೋಸ ಮಾಡಲಾಗುತ್ತಿದೆ. ಜೆಡಿಎಸ್ ವತಿಯಿಂದ ಈಗಾಗಲೇ ರಾಜ್ಯಾದ್ಯಂತ ಮಾಹಿತಿ ಹಕ್ಕು ಆಧಾರದ ಮೇಲೆ ಅರ್ಜಿಯನ್ನು ಸಲ್ಲಿಸಲಾಗಿದ್ದು ಅವು  25 ದಿನಗಳಲ್ಲಿ ತಮ್ಮ ಕೈಸೇರಲಿದೆ.  ಅರ್ಜಿಯಲ್ಲಿ ಯಾವ ಯೋಜನೆಗೆ ಎಷ್ಟು ಹಣ, ಬಿಡುಗಡೆಯಾದ ಹಣ, ಅನುಷ್ಠಾನ ಆದ ಬಗ್ಗೆ ಇತ್ಯಾದಿ ಎಲ್ಲಾ ವಿಷಯಗಳನ್ನೂ ಕೇಳಲಾಗಿದ್ದು ಅದು ಸಿಕ್ಕ ತಕ್ಷಣ ಮಾತನಾಡುತ್ತೇನೆ. ಜನರಿಗೆ ನಿಜವಾದ ವಿಚಾರವನ್ನು ತಿಳಿಸುತ್ತೇನೆ ಎಂದರು. ತಾಲೂಕಿನ 8 ಸಾವಿರ ಜನರಿಗೆ ಮನೆ ಕೊಡುತ್ತೇನೆ ಎಂದು ಸಚಿವ ಸೋಮಣ್ಣ ಅವರನ್ನು ಕರೆತಂದು ಇತ್ತೀಚಿಗೆ ಸಮಾರಂಭ ಮಾಡಿದ್ದು, ಅಂದು ನಡೆದ ಸಭೆಗೆ ಜನರನ್ನು ಸೇರಿಸುವ ಉದ್ದೇಶದಿಂದ ಜನರಿಗೆ ಸುಳ್ಳು ಮಾಹಿತಿ ನೀಡಿ ಕರೆ ತರಲಾಗಿತ್ತು. ಅದು ಪೊಳ್ಳು ಭರವಸೆ. ಮನೆ ಹಂಚಿಕೆಯಲ್ಲಿ ಭಾರೀ ಅವ್ಯವಹಾರ ಮಾಡಿದ್ದು, ತಾರತಮ್ಯ ಎಸಗಲಾಗಿದೆ. ತಾಲೂಕಿನ ಪ್ರತಿ ಗಾ.ಪಂ.ಗಳಲ್ಲಿ ಈ ಬಗ್ಗೆ ಗಲಾಟೆಯಾಗಿದೆ ಗ್ರಾ.ಪಂ. ಸದಸ್ಯರನ್ನು ಅವರು ಅಲಕ್ಷಿಸುತ್ತಿದ್ದಾರೆ ಎಂದರು. ಕಳೆದ 6 ತಿಂಗಳ ಹಿಂದೆ ತಾಲೂಕಿನ ಹೆಗ್ಗೋಡು ಗ್ರಾ.ಪಂ.ನ ಅಧ್ಯಕ್ಷ ಉಪಾಧ್ಯಕ್ಷರ ಆಯ್ಕೆ ಸಂಬಂಧ ಗಲಾಟೆ, ದೊಂಬಿ ನಡೆಸಿದ ಬಿಜೆಪಿಯವರು 6 ತಿಂಗಳಿನಿಂದ ಅಧ್ಯಕ್ಷ ಉಪಾಧ್ಯಕ್ಷರ ಆಡಳಿತ ಇಲ್ಲದಂತೆ ನೋಡಿಕೊಂಡಿದ್ದರು. ಇತ್ತೀಚಿಗೆ ಅಧ್ಯಕ್ಷ ಉಪಾಧ್ಯಕ್ಷರಾಗಿ ಜೆಡಿಎಸ್‌ನ ಅಭ್ಯರ್ಥಿಗಳು ಆಯ್ಕೆಯಾಗಿದ್ದು ಇದು ಸತ್ಯಕ್ಕೆ ದೊರೆತ ಜಯ. ಶಾಸಕ ಹಾಲಪ್ಪ ಕೆಂಪು ಗೂಟವನ್ನು ಕಳೆದುಕೊಂಡಿದ್ದಾಗಿದೆ.ಇನ್ನು ಕೆಲವೇ ದಿನಗಳಲ್ಲಿ ಎಲ್ಲವನ್ನು ಕಳೆದುಕೊಂಡು ಮನೆ ಸೇರಲಿದ್ದಾರೆ. ಇವರ ಯಾವುದೇ ಗೊಡ್ಡು ಬೆದರಿಕೆಗೆ ಹೆದರುವುದಿಲ್ಲ. ಇದೆಲ್ಲವನ್ನು ಎದುರಿಸಲು ಜೆಡಿಎಸ್ ಕಾರ್ಯಕರ್ತರು ಸಿದ್ದರಿದ್ದಾರೆ ಎಂದರು.

ಮೇ 15ರಿಂದ ತಾಲೂಕಿನಾದ್ಯಂತ ಪ್ರವಾಸ  ತೆರಳಿ ಕಾರ್ಯಕರ್ತರ ಜತೆ ಪಕ್ಷ ಸಂಘಟನೆಯ ಬಗ್ಗೆ ಚರ್ಚಿಸಲಾಗುವುದು.ಈ ಹಿಂದೆಯೇ ದಾವಣಗೆರೆಯಲ್ಲಿ ನಡೆಯಬೇಕಿದ್ದ ಯುವಚೇತನ ಸಮಾವೇಶವನ್ನು ಮೇ ತಿಂಗಳಿನಲ್ಲಿ ನಡೆಸುವುದರ ಮೂಲಕ ದೇವೇಗೌಡ ಅವರ 50 ವರ್ಷದ ರಾಜಕಾರಣದ ಅಂಶವನ್ನು ಹಾಗೂ ಬಂಗಾರಪ್ಪ ಅವರ ರಾಜಕೀಯ ಜೀವನದ ಅನುಭವವನ್ನು ಜನರಿಗೆ ತಿಳಿಸಲಾಗುವುದು ಎಂದರು.ಇದೇ ಸಮಯದಲ್ಲಿ ಹೆಗ್ಗೋಡು ಗ್ರಾ.ಪಂ. ಅಧ್ಯಕ್ಷೆ ನಾಗಮ್ಮ, ಉಪಾಧ್ಯಕ್ಷ ಸೋಮಶೇಖರ ಮಧು ಬಂಗಾರಪ್ಪ ಅವರಿಗೆ ಹಾರ ಹಾಕಿ ಅಭಿನಂದಿಸಿದರು.  ಪತ್ರಿಕಾಗೋಷ್ಠಿಯಲ್ಲಿ ತಾ.ಪಂ. ಮಾಜಿ ಸದಸ್ಯ ಶಿವಪ್ಪ, ಚಂದ್ರಪ್ಪ ಬಿಳಾಗಿ, ಜಗದೀಶ, ಯಲ್ಲಪ್ಪ ಉದ್ರಿ, ಲೋಕೇಶ, ಹೆಗ್ಗೋಡು ಗ್ರಾ.ಪಂ. ಅಧ್ಯಕ್ಷೆ ನಾಗಮ್ಮ, ಉಪಾಧ್ಯಕ್ಷ ಸೋಮಶೇಖರ ಮೊದಲಾದವರು ಹಾಜರಿದ್ದರು.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.