ಸೋಮವಾರ, ಜೂನ್ 21, 2021
30 °C

ಬಂಗಾರ ಆಮದು ಶುಲ್ಕ ಹೆಚ್ಚಳ ಖಂಡಿಸಿ ಪ್ರತಿಭಟನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ದಾವಣಗೆರೆ: ಕೇಂದ್ರ ಬಜೆಟ್‌ನಲ್ಲಿ ಬಂಗಾರದ ಮೇಲಿನ ಆಮದು ಶುಲ್ಕ ಹೆಚ್ಚಿಸಿದ ಕ್ರಮ ಖಂಡಿಸಿ ಚಿನ್ನ-ಬೆಳ್ಳಿ ವರ್ತಕರ ಸಂಘದ ಪದಾಧಿಕಾರಿಗಳು ನಗರದಲ್ಲಿ ಸೋಮವಾರ ಮೆರವಣಿಗೆ ನಡೆಸಿ, ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.ಬಂಗಾರದ ಮೇಲಿನ ಆಮದು ಶುಲ್ಕವನ್ನು ಶೇ. 2ರಿಂದ 4ಕ್ಕೆ ಹಾಗೂ ಸೇವಾ ಶುಲ್ಕದ ಪ್ರಮಾಣವನ್ನು ಶೇ. 1.5ರಿಂದ 3ಕ್ಕೆ ಏರಿಕೆ ಮಾಡಲಾಗಿದೆ. ಅಲ್ಲದೇ, ರೂ 2 ಲಕ್ಷ ಮೌಲ್ಯದ ಚಿನ್ನಾಭರಣ ಖರೀದಿ ಮಾಡುವ ಗ್ರಾಹಕರು ಟಿಡಿಎಸ್ ಕಟ್ಟುವುದನ್ನು ಕಡ್ಡಾಯ ಮಾಡಲಾಗಿದೆ. ಈ ಕ್ರಮಗಳು ಬಂಗಾರ ಮಾರಾಟ ಮಾಡುವ ವರ್ತಕರ ಮೇಲೆ ಗಂಭೀರ ಪರಿಣಾಮ ಬೀರುತ್ತವೆ ಎಂದು ಆಕ್ರೋಶ ವ್ಯಕ್ತಪಡಿಸಿದರು.ಬಂಗಾರದ ಬೆಲೆ ಏರಿಕೆಯಿಂದ ಖರೀದಿ ಪ್ರಮಾಣ ಕಡಿಮೆಯಾಗಿದೆ. ಕೇಂದ್ರ ಸರ್ಕಾರದ ಈ ಕ್ರಮದಿಂದ ಒಂದು ಗ್ರಾಂ ಬಂಗಾರದ ಬೆಲೆಯಲ್ಲಿ ಶೇ.10ರಿಂದ 12ರಷ್ಟು ಹೆಚ್ಚಳವಾಗುತ್ತದೆ. ಗ್ರಾಹಕರ ಮೇಲೆ ನೇರ ಪರಿಣಾಮ ಬೀರುತ್ತದೆ. ಇದರಿಂದ ಪ್ರತಿ 10 ಗ್ರಾಂ ಚಿನ್ನದ ಬೆಲೆ 1,300ರಷ್ಟು ಹೆಚ್ಚಳವಾಗುತ್ತದೆ ಎಂದು ಸಂಘದ ಮುಖಂಡ ವಾಸುದೇವ ರಾಯ್ಕರ್ ದೂರಿದರು.ಹಳೇಪೇಟೆಯ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಆವರಣದಿಂದ ಪ್ರತಿಭಟನಾಕಾರರು ಮೆರವಣಿಗೆ ಹೊರಟು ಪ್ರಮುಖ ರಸ್ತೆಗಳಲ್ಲಿ ಸಾಗಿ ಜಿಲ್ಲಾಧಿಕಾರಿ ಕಚೇರಿ ತಲುಪಿದರು. ನಂತರ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.ಸಂಘದ ಅಧ್ಯಕ್ಷ ಪ್ರಭಾಕರ ವಿ. ಶೇಟ್, ಕಾರ್ಯದರ್ಶಿ ಬದ್ರಿನಾಥ್, ಮುಖಂಡರಾದ ಶಂಕರ್ ವಿಠ್ಠಲ್, ನಲ್ಲೂರು ರಾಘವೇಂದ್ರ, ಕುಮಾರ್, ಸುಬ್ರಾಯ್ ಕುರುಡೇಕರ್, ರಾಮ ಜೈನ್ ಮತ್ತಿತರರು ಪ್ರತಿಭಟನೆಯ ನೇತೃತ್ವ ವಹಿಸಿದ್ದರು.ಹರಪನಹಳ್ಳಿ ವರದಿ

ಸ್ಥಳೀಯ ಚಿನ್ನ-ಬೆಳ್ಳಿ ವರ್ತಕರ ಹಾಗೂ ಕಸಬುದಾರರ ಕ್ಷೇಮಾಭಿವೃದ್ಧಿ ಸಂಘ ಪದಾಧಿಕಾರಿಗಳು ಸೋಮವಾರ ಪಟ್ಟಣದಲ್ಲಿ ಪ್ರತಿಭಟನೆ ನಡೆಸಿದರು.ವ್ಯಾಪಾರ-ವಹಿವಾಟು ಸ್ಥಗಿತ ಗೊಳಿಸುವ ಮೂಲಕ ಕೊಟ್ಟೂರು ರಸ್ತೆಯಲ್ಲಿರುವ ಕಾಳಮ್ಮದೇವಿ ದೇವಸ್ಥಾನದ ಬಳಿ ಜಮಾಯಿಸಿದ ವರ್ತಕರು, ಕೇಂದ್ರ ಸರ್ಕಾರದ ಧೋರಣೆ ಖಂಡಿಸುವ ಧಿಕ್ಕಾರ ಘೋಷಣೆ ಕೂಗುತ್ತಾ, ಹೊಸಪೇಟೆ ರಸ್ತೆಯ ಮುಖಾಂತರ, ಮಿನಿ ವಿಧಾನಸೌಧಕ್ಕೆ ತೆರಳಿದರು. ಬಳಿಕ ಬಹಿರಂಗ ಸಭೆ ನಡೆಸಿದರು.ಪ್ರತಿಭಟನೆಯ ನೇತೃತ್ವವಹಿಸಿದ್ದ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಜನಾರ್ದನ ಮಾತನಾಡಿಕೇಂದ್ರದ ಧೋರಣೆ ಚಿಲ್ಲರೆ ವ್ಯಾಪಾರಿಗಳ ಮೇಲೆ ವ್ಯತಿರಿಕ್ತ ಪರಿಣಾಮ ಬೀರಲಿದೆ. ಕೇಂದ್ರ ಸರ್ಕಾರದ ನಿಲುವು ವ್ಯಾಪಾರಿಗಳನ್ನು ಬೀದಿಗೆ ತಳ್ಳುತ್ತದೆ ಎಂದು ಕಳವಳ ವ್ಯಕ್ತಪಡಿಸಿದರು.ಸಂಘದ ಕಾರ್ಯದರ್ಶಿ ಶಶಿಧರ ಬೆನ್ನೂರು, ಉಪಾಧ್ಯಕ್ಷ ಬೆನ್ನೂರು ವಿಶ್ವನಾಥ, ಅನಿಲ್ ಸೇಠ್, ಕಾಲುರಾಮನ್, ಮಹೇಶಕುಮಾರ್, ಸಂತೋಷ್, ಅಣ್ಣಪ್ಪ ಬೆನ್ನೂರು, ಮಹೇಶಪ್ಪ, ಗಿರೀಶ್, ಪ್ರಭಾಕರ ಇತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.ಹರಿಹರ ವರದಿ


ನಗರದ ಸರಾಫ್ ಮತ್ತು ಗಿರ‌್ವಿ ಲೇವಾದೇವಿ ಸಂಘದ ವತಿಯಿಂದ  ಬಂಗಾರದ ಅಂಗಡಿಗಳನ್ನು ಬಂದ್ ಮಾಡಿ ಪ್ರತಿಭಟನೆ ನಡೆಸಿದರು.ಕೇಂದ್ರ ಸರ್ಕಾರ ಚಿನ್ನದ ಮೇಲೆ ಈಗಾಗಲೇ ಶೇ. 2ರಷ್ಟು ಸುಂಕ ವಿಧಿಸುತ್ತಿದ್ದು, ಪ್ರಸ್ತುತ ಕೇಂದ್ರ ಆಯವ್ಯಯ ಪಟ್ಟಿಯಲ್ಲಿ ಈ ಸುಂಕವನ್ನು ಶೇ. 4ಕ್ಕೆ ಏರಿಸಿದ್ದಾರೆ. ಚಿನ್ನದ ಆಭರಣಗಳ ತಯಾರಿಕೆ ಶೇ. 1 ಎಕ್ಸೈಸ್ ಡ್ಯೂಟಿ ಸೇರ್ಪಡೆ ಮಾಡಿದ್ದಾರೆ. ಇದಲ್ಲದೇ, ರೂ 2 ಲಕ್ಷ ಮೇಲ್ಪಟ್ಟು ನಗದು ವ್ಯವಹಾರದ ಮೇಲೆ ಶೇ. 1ರಷ್ಟು ಟಿಡಿಎಸ್ (ಆದಾಯ ತೆರಿಗೆ) ಸಂಗ್ರಹ ಮಾಡಬೇಕು ಎಂಬ ಆದೇಶ ಹೊರಡಿಸಿದ್ದಾರೆ. ಇದರಿಂದ ಚಿನ್ನದ ವ್ಯಾಪಾರಸ್ತರ ಮೇಲೆ ಗದಾ ಪ್ರಹಾರ ಮಾಡಿದಂತೆ ಆಗಿದೆ ಎಂದು ಸಂಘದ ಅಧ್ಯಕ್ಷ ಬಿ.ಎನ್. ನಾಗರಾಜ್ ಹಾಗೂ ಕಾರ್ಯದರ್ಶಿ ಆರ್.ಟಿ. ಚಂದ್ರಕಾಂತ್ ತಿಳಿಸಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.