ಗುರುವಾರ , ನವೆಂಬರ್ 14, 2019
19 °C

ಬಂಗಾರ ಭಾರ; ಮತ್ತೆ ರೂ.445 ಏರಿಕೆ

Published:
Updated:

ಮುಂಬೈ(ಪಿಟಿಐ): ಇಳಿಜಾರಿನ ಹಾದಿಯ ಪಯಣ ಮುಗಿಯಿತು, ಇನ್ನೇನಿದ್ದರೂ ಏರುಗತಿ ನಡಿಗೆ ಎನ್ನುತ್ತಿರುವ ಬಂಗಾರದ ಧಾರಣೆ, ಸೋಮವಾರ ಮತ್ತೆ ಇಲ್ಲಿನ ಚಿನಿವಾರ ಪೇಟೆಯಲ್ಲಿ ರೂ. 445ರಷ್ಟು ದುಬಾರಿಯಾಯಿತು. ಜತೆಗೆ ಬೆಳ್ಳಿಯೂ ರೂ. 515ರಷ್ಟು ಮೌಲ್ಯ ಹೆಚ್ಚಿಸಿಕೊಂಡಿತು.ಮುಂಬೈನಲ್ಲಿ ಶನಿವಾರ ರೂ. 26,395ರಲ್ಲಿ ವಹಿವಾಟು ನಡೆಸಿದ್ದ 10 ಗ್ರಾಂ ಅಪರಂಜಿ ಚಿನ್ನ ಸೋಮವಾರ ರೂ. 445ರಷ್ಟು ಹೆಚ್ಚು ಮೌಲ್ಯ ಪಡೆಯಿತು. ಪರಿಣಾಮ ರೂ. 26,840ರಲ್ಲಿ ಮಾರಾಟವಾಯಿತು.ರೂ. 26,260ರಲ್ಲಿ ಮಾರಾಟವಾಗಿದ್ದ ಸ್ಟ್ಯಾಂಡರ್ಡ್ ಚಿನ್ನವೂ ಸೋಮವಾರ  ರೂ. 440ರಷ್ಟು ಏರಿಕೆ ಕಂಡು ರೂ. 26,700ರಲ್ಲಿ ಮಾರಾಟವಾಯಿತು.

ನವದೆಹಲಿಯಲ್ಲಿಯೂ ಸೋಮ ವಾರದ ವಹಿವಾಟಿನಲ್ಲಿ ಬಂಗಾರದ ಬೆಲೆ 300ರಷ್ಟು ಏರಿಕೆಯಾಯಿತು.ಇಲ್ಲಿ ಶನಿವಾರ ರೂ. 27,100ಕ್ಕೆ ಮಾರಾಟವಾಗಿದ್ದ 10 ಗ್ರಾಂ ಅಪರಂಜಿ ಚಿನ್ನ, ಸೋಮವಾರ ರೂ. 27,400ಕ್ಕೇ ಏರಿತು. ಸ್ಟ್ಯಾಂಡರ್ಡ್ ಚಿನ್ನವೂ ರೂ. 26,900ರಲ್ಲಿದ್ದುದು ರೂ. 27,200ಕ್ಕೇರಿತು. ಸಿದ್ಧ ಬೆಳ್ಳಿಯೂ ಶನಿವಾರ ಕೆ.ಜಿ.ಗೆ ರೂ. 45,300 ಇದ್ದುದು, ಸೋಮವಾರ ರೂ. 45,800ಕ್ಕೆ ಮುಟ್ಟಿತು. ಚೆನ್ನೈನಲ್ಲಿ ಸ್ಟ್ಯಾಂಡರ್ಡ್ ಚಿನ್ನ ರೂ. 26,930ರಲ್ಲೂ ಮತ್ತು  22 ಕ್ಯಾರಟ್ ಆಭರಣ ಚಿನ್ನ 1 ಗ್ರಾಂಗೆ ರೂ. 2518ರಲ್ಲೂ ಮಾರಾಟವಾಯಿತು.ಏರಿಳಿತ

ಏ. 13ರಿಂದ 17ರವರೆಗಿನ ಅವಧಿಯಲ್ಲಿ 10 ಗ್ರಾಂ ಚಿನ್ನ ಒಟ್ಟು ರೂ. 3250ರಷ್ಟು ಕುಸಿತ ಕಂಡಿತ್ತು. ಬೆಲೆ ತಗ್ಗಿರುವ ಈ ಸಮಯವೇ ಖರೀದಿಗೆ ಸೂಕ್ತ ಎಂದು ಬಂಗಾರದ ಆಭರಣ ಖರೀದಿಗೆ ಜನ ಮುಗಿಬಿದ್ದಿರುವುದರಿಂದ ಏ. 18ರಿಂದಲೇ ಧಾರಣೆ ಮತ್ತೆ ಏರುಮುಖವಾಗಿದೆ. ಜತೆಗೆ ಚಿನ್ನ ಖರೀದಿಗೆ ಶುಭ ಗಳಿಗೆ ಎನಿಸಿದ `ಅಕ್ಷಯ ತೃತೀಯ' ದಿನವೂ ಹತ್ತಿರವಾಗಿರುವುದು ಗ್ರಾಹಕರು ಚಿನ್ನಾಭರಣ ಮಳಿಗೆಗಳಲ್ಲಿ ಸಾಲುಗಟ್ಟಿದ್ದಾರೆ. ಇದೂ ಸಹ ಬಂಗಾರದ ಬೆಲೆ ಹೆಚ್ಚಳಕ್ಕೆ ಕಾರಣವಾಗಿದೆ.ಜಾಗತಿಕ ಮಾರುಕಟ್ಟೆ

ಲಂಡನ್(ಬ್ಲೂಮ್‌ಬರ್ಗ್):
ಇಲ್ಲಿನ ಚಿನಿವಾರ ಪೇಟೆಯಲ್ಲಿ ಚಿನ್ನ ಮತ್ತೆ ಶೇ 2.01ರಷ್ಟು ಏರಿಕೆ ಕಂಡಿದೆ. ಸೋಮವಾರದ ವಹಿವಾಟಿನಲ್ಲಿ ಔನ್ಸ್ ಚಿನ್ನದ ಬೆಲೆ 1434.80 ಡಾಲರ್(ರೂ.77,479)ಗೆ ಹೆಚ್ಚಿತು.ಇದು ಸತತ ಐದನೇ ದಿನದ ಏರಿಕೆ. ಹೀಗೆ ಸತತ ಐದು ದಿನಗಳ ಕಾಲ ಬೆಲೆ ಹೆಚ್ಚುತ್ತಿರುವುದು 2012ರ ಡಿಸೆಂಬರ್ 27ರ ನಂತರ ಇದೇ ಮೊದಲು.ಭಾರತ ಆಮದು ಹೆಚ್ಚಳ

ಬೆಲೆ ತಗ್ಗಿರುವ ಕಾರಣ ಭಾರತದಲ್ಲಿ ಬಂಗಾರ ಖರೀದಿಸಲು ಗ್ರಾಹಕರು ಮುಗಿಬಿದ್ದಿದ್ದಾರೆ. ಇದರಿಂದಾಗಿ ಮುಂದಿನ ಮೂರು ತಿಂಗಳಲ್ಲಿ ಭಾರತದ ಚಿನ್ನದ ಆಮದು ಶೇ 36ರಷ್ಟು ಹೆಚ್ಚುವ ಸಂಭವವಿದೆ ಎಂದು ಲಂಡನ್ ಚಿನಿವಾರ ಪೇಟೆ ವರ್ತಕರು ಅಂದಾಜು ಮಾಡಿದ್ದಾರೆ.

ಪ್ರತಿಕ್ರಿಯಿಸಿ (+)