ಶನಿವಾರ, ನವೆಂಬರ್ 23, 2019
18 °C

ಬಂಗಾರ ಲೇಪನದಿಂದ ಚಿತ್ರಿಸಿದ ರಾಜ್ ಭಾವಚಿತ್ರ

Published:
Updated:

ಬೆಂಗಳೂರು: `ಬಂಗಾರದ ಮನುಷ್ಯ' ಡಾ.ರಾಜ್‌ಕುಮಾರ್ ಅವರ 85ನೇ ಹುಟ್ಟುಹಬ್ಬಕ್ಕೆ ಹವ್ಯಾಸಿ ಚಿತ್ರ ಕಲಾವಿದೆಯೊಬ್ಬರು `ತಂಜಾವೂರು' ಶೈಲಿಯಲ್ಲಿ ಬಂಗಾರದ ಲೇಪನದಿಂದ ಚಿತ್ರಿಸಿರುವ ಡಾ.ರಾಜ್ ಅವರ ಭಾವಚಿತ್ರವನ್ನು ಅವರ ಕುಟುಂಬಕ್ಕೆ ಉಡುಗೊರೆಯಾಗಿ ನೀಡಿದ್ದಾರೆ. ಜೆ.ಪಿ.ನಗರ ನಿವಾಸಿ ಗಾಯತ್ರಿ ಎಸ್.ನಾಯರ್ ಡಾ.ರಾಜ್‌ಕುಮಾರ್ ಅವರು ಸತ್ಯಹರಿಶ್ಚಂದ್ರನ ವೇಷಭೂಷಣದಲ್ಲಿರುವ ಭಾವ ಚಿತ್ರವನ್ನು `ತಂಜಾವೂರು ಶೈಲಿ'ಯಲ್ಲಿ ಸುಂದರವಾಗಿ ಚಿತ್ರಿಸಿದ್ದಾರೆ. ಚಿತ್ರಕ್ಕೆ 22 ಕ್ಯಾರೆಟ್ ಚಿನ್ನದ ಲೇಪನವನ್ನು ಮಾಡಲಾಗಿದೆ.

ಈ ಅಪೂರ್ವ ಚಿತ್ರವನ್ನು ಬುಧವಾರ ರವೀಂದ್ರ ಕಲಾಕ್ಷೇತ್ರದಲ್ಲಿ ನಡೆದ ಡಾ.ರಾಜ್‌ಕುಮಾರ್ ಅವರ ಜನ್ಮ ದಿನಾಚರಣೆ ಕಾರ್ಯಕ್ರಮದಲ್ಲಿ ರಾಜ್ ಕುಟುಂಬಕ್ಕೆ ಗಾಯತ್ರಿ ಅವರು ಹಸ್ತಾಂತರಿಸಿದರು. ಚಿತ್ರವನ್ನು ನೋಡಿ ಪಾರ್ವತಮ್ಮ ರಾಜ್‌ಕುಮಾರ್ ಅವರು ಅಪಾರ ಸಂತಸ ವ್ಯಕ್ತಪಡಿಸಿದರೆ, ಜತೆಗಿದ್ದ ಸಂಗೀತ ನಿರ್ದೇಶಕ ಹಂಸಲೇಖ ಅವರು `ಚಿನ್ನಕ್ಕೆ ಚಿನ್ನದ ಲೇಪನ ಮಾಡಿದ್ದಿಯಲ್ಲಮ್ಮ' ಎಂದು ಪ್ರತಿಕ್ರಿಯಿಸಿದರು.`ನಾನು ಈ ಹಿಂದೆ ಶ್ರೀಕೃಷ್ಣ, ರಾಧಾಕೃಷ್ಣ, ಗಣೇಶ, ಲಕ್ಷ್ಮಿ ಮುಂತಾದ ದೇವರ ಚಿತ್ರಗಳನ್ನು ತಂಜಾವೂರಿನ ಶೈಲಿಯಲ್ಲಿ ರಚಿಸಿದ್ದೇನೆ. ಅಂತರ್ಜಾಲದಲ್ಲಿ ಶ್ರೀಕೃಷ್ಣನ ಚಿತ್ರ ಹುಡುಕುವಾಗ, ರಾಜ ಸತ್ಯ ಹರಿಶ್ಚಂದ್ರನ ಪಾತ್ರದಲ್ಲಿರುವ ರಾಜ್‌ಕುಮಾರ್ ಅವರ ಚಿತ್ರ ನೋಡಿದೆ. ಅದನ್ನು ಆಧರಿಸಿ ಹತ್ತು ದಿನಗಳಲ್ಲಿ ತಂಜಾವೂರಿನ ಶೈಲಿಯಲ್ಲಿ ರಾಜ್ ಅವರ ಚಿತ್ರವನ್ನು ರಚಿಸಿದ್ದೇನೆ. ಚಿತ್ರವನ್ನು ಪಡೆದು ರಾಜ್ ಕುಟುಂಬ ಸಂತಸ ಪಟ್ಟಿರುವುದರಿಂದ ನನ್ನ ಶ್ರಮ ಸಾರ್ಥಕವಾಗಿದೆ' ಎನ್ನುತ್ತಾರೆ ಗಾಯತ್ರಿ.

ಪ್ರತಿಕ್ರಿಯಿಸಿ (+)