ಬಂಗಾರ ಹತ್ತಿರ, ನೀರಿಗೆ ಹಾಹಾಕಾರ!

7
ಗ್ರಾಮಾಯಣ

ಬಂಗಾರ ಹತ್ತಿರ, ನೀರಿಗೆ ಹಾಹಾಕಾರ!

Published:
Updated:

ಟ್ಟಿ ಚಿನ್ನದ ಗಣಿ: ದೇಶಕ್ಕೆ ಚಿನ್ನ ನೀಡುವ ಸುಪ್ರಸಿದ್ಧ ಗಣಿಗೆ ಈ ಗ್ರಾಮದಿಂದ ಕೇವಲ 5 ಕಿ.ಮೀ. ದೂರ. ಆದರೆ ಕುಡಿಯುವ ಹನಿ ನೀರಿಗೂ ನಿತ್ಯ ಹಾಹಾಕಾರ. ಇದು ಲಿಂಗಸುಗೂರು ತಾಲ್ಲೂಕಿನ ಕೋಠಾ ಗ್ರಾಮ ಪಂಚಾ­ಯಿತಿ ವ್ಯಾಪ್ತಿಯ ಮೇದಿನಪುರು ಗ್ರಾಮದ ಜನರ ಬವಣೆ.‘ಇಲ್ಲಿನ ಕೊಳವೆ ಬಾವಿಗಳಲ್ಲಿ ಬರೀ ಉಪ್ಪು ನೀರು ಸಿಗುತ್ತದೆ. ಸುಮಾರು 5 ಕಿ.ಮೀ ದೂರದ ಕೋಠಾ ಗ್ರಾಮದಿಂದ ಇಲ್ಲಿಗೆ ನೀರು ಸರಬರಾಜು ಮಾಡಲು ರಾಯಚೂರು ಜಿಲ್ಲಾ ಪಂಚಾಯಿ­ತಿಯು ಸುಮಾರು 16 ಲಕ್ಷ ರೂಪಾ­ಯಿಯ ಯೋಜನೆ ಹಾಕಿಕೊಂಡಿತ್ತು. ಕಾಮಗಾರಿ ಪೂರ್ಣಗೊಂಡು ಆರು ತಿಂಗಳು ಕಳೆದಿವೆ. ಆದರೆ ಗ್ರಾಮಕ್ಕೆ ಒಂದ ಹನಿ ನೀರು ಬಂದಿಲ್ಲ. ಈ ಕಾಮಗಾರಿ ತೀರ ಕಳಪೆಯಾಗಿದೆ ಜೊತೆಯಲ್ಲಿ ಅವೈಜ್ಞಾನಿಕವಾಗಿದೆ’ ಎಂದು ಸ್ಥಳೀಯರು ಆರೋಪಿಸುತ್ತಾರೆ.ಆರ್ಸೇನಿಕ್ ಅಂಶ ಹೊಂದಿದೆ ಎಂದು ಗ್ರಾಮದ ಎಲ್ಲ ಕೊಳವೆ ಬಾವಿಗಳು ಬಂದ್ ಮಾಡಲಾಗಿದೆ. ಕೇವಲ ಇತರ ಕೆಲಸಕ್ಕೆ ಮಾತ್ರ ಉಪಯೋಗಿಸಲಾಗುತ್ತಿದೆ. ಹೀಗಾಗಿ ಕುಡಿಯುವ ನೀರಿನ ಸಮಸ್ಯೆ ಇನ್ನಷ್ಟು ಬಿಗಡಾಯಿಸಿದೆ. ಬಂಗಾರದ ಸಮೀಪ ಇರುವ ಈ ಊರಿನಲ್ಲಿ ನೀರಿನ ಬವಣೆಗೆ ದಶಕಗಳ ಇತಿಹಾಸವಿದೆ. ಸುಮಾರು 2 ಸಾವಿರ ಜನ ಸಂಖ್ಯೆಯ ಈ ಗ್ರಾಮದಿಂದ ಆರು ಜನ ಗ್ರಾಮ ಪಂಚಾಯಿತಿ ಸದಸ್ಯರಿದ್ದಾರೆ. ಆದರೆ ಸಮಸ್ಯೆ ಬಗೆಹರಿದಿಲ್ಲ.ಹಟ್ಟಿ ಚಿನ್ನದ ಗಣಿಯಿಂದ ದಿನಕ್ಕೆ ನಾಲ್ಕು ಟ್ರಿಪ್ ಟ್ಯಾಂಕರ್ ಮೂಲಕ ಕುಡಿಯುವ ನೀರು ಸರಬರಾಜು ವ್ಯವಸ್ಥೆ ಮಾಡಲಾಗಿತ್ತು. ಗುತ್ತಿಗೆ ಪಡೆದವರು ದಿನಕ್ಕೆ ಕೇವಲ 2 ಬಾರಿ ನೀರು ಪೂರೈಸುತ್ತಿದ್ದಾರೆಂದು ತಾಲ್ಲೂಕು ಪಂಚಾಯಿತಿ ಮುಖ್ಯ ಅಧಿಕಾರಿಗೆ ದೂರು ಹೋಗಿತ್ತು. ಹೀಗಾಗಿ ಅದೂ ನಿಂತು ಹೋಗಿದೆ.  ‘ಗುಡದನಾಳ ಗ್ರಾಮದ ಶುದ್ಧ ನೀರಿನ ಘಟಕಕ್ಕೆ ಸರಬರಾಜು ಮಾಡುವ ಕೊಳವೆ ಬಾವಿಯಿಂದ ನೀರು ಪೂರೈಸಲು ಗ್ರಾಮ ಪಂಚಾಯಿತಿ ಸದಸ್ಯರು ಮತ್ತು ಪಿಡಿಒ ಪ್ರಯತ್ನಿಸುತ್ತಿದ್ದಾರೆ. ಈ ನೀರು ಕುಡಿಯಲು ಯೋಗ್ಯ ಇಲ್ಲ. ಈ ಕಾಮಗಾರಿಯು ವಿಫಲವಾಗುವ ಸಾಧ್ಯತೆ ಇದೆ’ ಎಂದು ಸ್ಥಳೀಯರು ಹೇಳುತ್ತಾರೆ.ಚರಂಡಿ–ರಸ್ತೆ: ‘ಗ್ರಾಮದಲ್ಲಿ ಸಮರ್ಪಕ ಚರಂಡಿ ವ್ಯವಸ್ಥೆ ಇಲ್ಲ. ಕೊಳಚೆ ನೀರು ಅಲ್ಲಲ್ಲಿ ನಿಂತು ಗಬ್ಬು ನಾರುತ್ತಿದೆ.  ಸುವರ್ಣ ಗ್ರಾಮ ಯೋಜನೆಯಡಿಯಲ್ಲಿ ಕೈಗೊಳ್ಳ­ಬೇಕಾದ ರಸ್ತೆ, ಚರಂಡಿ ಮತ್ತು ಮಹಿಳೆ­ಯರಿಗೆ ಶೌಚಾಲಯ ನಿರ್ಮಿಸಿಲ್ಲ. ಗ್ರಾಮ ಪಂಚಾಯಿತಿ ಆಡಳಿತದ ನಿರ್ಲಕ್ಷ್ಯದಿಂದ ನಮ್ಮ ಗ್ರಾಮದಲ್ಲಿ ಅಭಿವೃದ್ಧಿ ಕಾಮಗಾರಿಗಳು ಸರಿಯಾಗಿ ನಡೆದಿಲ್ಲ’ ಎಂದು ಹುಲಗಪ್ಪ, ಸಂಗನಗೌಡ, ರಸೂಲ್ ಸಾಬ್, ಹನುಮಂತ ಸೇರಿದಂತೆ ಸ್ಥಳೀಯರು ಆರೋಪಿಸುತ್ತಾರೆ. ಕೂಡಲೇ ಕುಡಿಯುವ ನೀರು ಮತ್ತು ಇನ್ನಿತರ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳಬೇಕೆಂದು ಒತ್ತಾಯಿಸುತ್ತಾರೆ.

-–ಎಂ. ಖಾಸಿಂ ಅಲಿ ಹಟ್ಟಿ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry