ಬುಧವಾರ, ಮೇ 12, 2021
18 °C

ಬಂಗಾಳಿ ಬಾಬೂಗಳೂ... ಮತ್ತವರ ಗೊಂಬೆಗಳೂ...

ಪ್ರಜಾವಾಣಿ ವಾರ್ತೆ/ಆನಂದತೀರ್ಥ ಪ್ಯಾಟಿ Updated:

ಅಕ್ಷರ ಗಾತ್ರ : | |

ಬಂಗಾಳಿ ಬಾಬೂಗಳೂ... ಮತ್ತವರ ಗೊಂಬೆಗಳೂ...

ಗುಲ್ಬರ್ಗ: ಒಂದಕ್ಕಿಂತ ಒಂದು ಚೆಂದ... ಭಕ್ತಿಯ ಧಾರೆ ಹರಿಸುವ ದೇವರ ವಿಗ್ರಹಗಳು; ಉದಾತ್ತ ಮೌಲ್ಯ ಪ್ರತಿಪಾದಿಸುವ ಮಹಾತ್ಮರ ಪುತ್ಥಳಿಗಳು... ಇವಾವೂ ಬೇಡ ಎನಿಸಿದರೆ ಹೂಗಳನ್ನು ಇಡಲು ಹೂದಾನಿಗಳು... ಮನೆಯ ಟೇಬಲ್ ಮೇಲಾದರೂ ಇಡಿ; ಗೋಡೆಗಾದರೂ ತೂಗು ಹಾಕಿ. ಎಲ್ಲಿದ್ದರೂ ಮನಸೆಳೆಯುವ ಅಂದದ ಬೊಂಬೆಗಳಿವು. ಅಷ್ಟಕ್ಕೂ ಎಲ್ಲ ತೀರಾ ಹಗುರ.ಪ್ಲಾಸ್ಟರ್ ಆಫ್ ಪ್ಯಾರಿಸ್‌ನಿಂದ ತಯಾರಿಸಿದಂತೆ ಭಾಸವಾಗುತ್ತವೆಯಾದರೂ, ಇವು ಸಿರಾಮಿಕ್ ಬೊಂಬೆಗಳು. ಪಶ್ಚಿಮ ಬಂಗಾಳದಿಂದ ಬಂದಿರುವ ಮಾರಾಟಗಾರರ ತಂಡವೊಂದು ಕಳೆದ ಒಂದು ವಾರದಿಂದ ಸೂರ್ಯನಗರಿಯನ್ನು ಸುತ್ತುತ್ತಿದೆ. ಉರಿಬಿಸಿಲನ್ನೂ ಲೆಕ್ಕಿಸದೇ ತಲೆ ಮೇಲೆ ಬುಟ್ಟಿ ಹೊತ್ತು ಅಥವಾ ತಳ್ಳುಬಂಡಿಯಲ್ಲಿ ಇಟ್ಟುಕೊಂಡು ಬೊಂಬೆ ಮಾರಾಟ ಮಾಡುತ್ತಿರುವ ಇವರ ಶ್ರಮ ಬೆರಗು ಮೂಡಿಸುತ್ತದೆ.ಇವರ ಬಳಿಯಲ್ಲಿರುವ ಗೊಂಬೆಗಳ ವೈವಿಧ್ಯ ಅಪಾರ. ಕೃಷ್ಣ- ರಾಧೆ, ಆಂಜನೇಯ, ಗಣಪತಿ, ನಟರಾಜ, ರಾಮ-ಸೀತೆ, ಲಕ್ಷ್ಮಿಯರ ವಿಗ್ರಹಗಳೊಂದಿಗೆ ಗಾಂಧೀಜಿ, ಅಂಬೇಡ್ಕರ್ ಅವರಂಥ ಮಹಾನ್ ವ್ಯಕ್ತಿಗಳ ಮುಖವಾಡಗಳೂ ಇವೆ.ಸಿರಾಮಿಕ್ ಬಳಕೆ: ಇವಕ್ಕೆಲ್ಲ ಬಳಸುವುದು ಸಿರಾಮಿಕ್ (ಪಿಂಗಾಣಿ) ಪದಾರ್ಥ. ಆಲಂಕಾರಿಕ ವಿಗ್ರಹ ತಯಾರಿಕೆಗೆ ಪೋರ್ಸ್‌ಲೀನ್ ಬಳಕೆ ಹೆಚ್ಚು; ಆದರೆ ನುಣುಪಾದ ಮೇಲ್ಮೈ ಬೇಕೆಂದರೆ ಸಿರಾಮಿಕ್ ಬಳಸಬೇಕು. ಜಿಗುಟು ಮಣ್ಣನ್ನು ಅತ್ಯಧಿಕ ಶಾಖದಲ್ಲಿ ಬೇಯಿಸಿದರೆ ಅದು ಪೋರ್ಸ್‌ಲೀನ್ ಆಗುತ್ತದೆ. ಮಣ್ಣನ್ನು ತುಸು ಕಡಿಮೆ ಶಾಖದಲ್ಲಿ ಬೇಯಿಸಿದರೆ ಸಿರಾಮಿಕ್ ಸಿಗುತ್ತದೆ. ವಿಗ್ರಹದ ಮೇಲೆ ಒಡಮೂಡುವ ಅತ್ಯಂತ ಸೂಕ್ಷ್ಮ ಕುಸುರಿಕಲೆಯು ಸಿರಾಮಿಕ್‌ನ ವೈಶಿಷ್ಟ್ಯ.“ಎಷ್ಟೋ ವ್ಯಾಪಾರಿಗಳು ನಮ್ಮ ಸಿರಾಮಿಕ್ ವಿಗ್ರಹ, ಮುಖವಾಡಗಳನ್ನು ತೆಗೆದುಕೊಂಡು ಹೋಗಿ ಅಚ್ಚು ತಯಾರಿಸಿ, ಅದರಲ್ಲಿ ಪ್ಲಾಸ್ಟರ್ ಆಫ್ ಪ್ಯಾರಿಸ್ ಸುರಿಯುತ್ತಾರೆ. ಆದರೆ ಅವು ನಮ್ಮ ವಿಗ್ರಹ- ಗೊಂಬೆಗಳಷ್ಟು ಚೆಂದ ಇರುವುದಿಲ್ಲ” ಎಂದು ಮುನ್ನಾ ಹೇಳುತ್ತಾರೆ.ಪ್ರತಿ ವರ್ಷವೂ...: ಕೋಲ್ಕತ್ತಾ ಬಳಿಯ ಹೌರಾ ನಗರದಿಂದ ಹತ್ತು ಜನರ ತಂಡವು ಸೂರ್ಯನಗರಿಗೆ ಬಂದಿಳಿದಿದೆ. “ಹೀಗೆ ನಾವು ಬರುತ್ತಿರುವುದು ಇದು ಆರನೇ ವರ್ಷ. ನಾಲ್ಕರಿಂದ ಐದು ವಾರ ಇಲ್ಲಿದ್ದು, ಗೊಂಬೆ ಮಾರಾಟ ಮಾಡಿ ಮುಂದೆ ಲಾತೂರ್‌ಗೆ ತೆರಳುತ್ತೇವೆ” ಎನ್ನುವ ರಾಜೂ ಭಯ್ಯಾ, ಪ್ರತಿ ವರ್ಷವೂ ಇದೇ ಸಮಯದಲ್ಲಿ ಬರುವುದಾಗಿ ತಿಳಿಸುತ್ತಾನೆ.

 

`ಗುಲ್ಬರ್ಗದಲ್ಲಿ ಬೇಸಿಗೆ ಸಮಯ ಬಿಸಿಲು ಹೆಚ್ಚಲ್ಲವೇ? ವ್ಯಾಪಾರ ಆದೀತೆ?~ ಎಂಬ ಪ್ರಶ್ನೆಗೆ, “ನಾವು ಬರುವುದೇ ಹೊಟ್ಟೆಪಾಡಿಗೆ ಬೊಂಬೆ ಮಾರಾಟ ಮಾಡಲು. ಊರೆಲ್ಲ ತಿರುಗಾಡಿದರೆ ಖರೀದಿ ಮಾಡುವವರು ಖಂಡಿತ ತೆಗೆದುಕೊಳ್ಳುತ್ತಾರೆ. ಬಿಸಿಲು- ಮಳೆ ಅಂತೆಲ್ಲ ಸುಮ್ಮನೇ ಕುಳಿತರೆ ಆದೀತೆ?” ಎಂಬ ಮರುಪ್ರಶ್ನೆ ಹಾಕುತ್ತಾನೆ!ಗುಲ್ಬರ್ಗದಂಥ ಪಟ್ಟಣಗಳಲ್ಲಿ ಹೆಚ್ಚು ಮಾರಾಟವಾಗುವುದು ಹೂದಾನಿ ಹಾಗೂ ದೇವರ ಸಣ್ಣ ವಿಗ್ರಹಗಳು ಮಾತ್ರ. ಇವುಗಳ ಬೆಲೆ 50ರಿಂದ 100 ರೂಪಾಯಿವರೆಗೆ ಇದ್ದು, ದಿನಕ್ಕೆ 10ರಿಂದ 15ರಷ್ಟು ಮಾರಾಟವಾಗುತ್ತವೆ. ಇವುಗಳಿಗೆ ಹೋಲಿಸಿದರೆ 200 ರೂಪಾಯಿಗೂ ಹೆಚ್ಚಿರುವ ದೊಡ್ಡ ವಿಗ್ರಹಗಳು ದಿನಕ್ಕೆ ನಾಲ್ಕೈದು ಸಹ ಮಾರಾಟವಾಗುವುದಿಲ್ಲ.

 

“ಮಾರಾಟ ಮಾಡುವುದೂ ಒಂದು ಟ್ರಿಕ್. ಆಲಂಕಾರಿಕ ಗೊಂಬೆ, ಹಂಸ, ಹೂದಾನಿ ಹಾಗೂ ಗಾಳಿ ಬೀಸಿ ಅಲುಗಾಡಿದಾಗ ಮಧುರ ಸದ್ದು ಹೊರಡಿಸುವ ಮಂಗಲಗಂಟಿ ಖರೀದಿಸುವವರು ಪಾಶ್ ಬಡಾವಣೆಗಳಲ್ಲಿ ಹೆಚ್ಚು. ಅದನ್ನು ಬಿಟ್ಟರೆ ಸಾಮಾನ್ಯ ಜನರು ಇರುವ ಬಡಾವಣೆಗಳಲ್ಲಿ ದೇವರ ವಿಗ್ರಹ ಮಾರಾಟ ಹೆಚ್ಚು. ಇನ್ನು ಹೊಸ ಬಡಾವಣೆಗಳಲ್ಲಿ ಮನೆ ನಿರ್ಮಿಸಿಕೊಂಡವರು ಹಾಗೂ ಇನ್ನೂ ಮನೆ ಕಟ್ಟುತ್ತಿರುವವರು ಕೆಟ್ಟದೃಷ್ಟಿ ಬೀಳದಂತೆ ಮಾಳಿಗೆ ತುದಿಗೆ ನೇತು ರಕ್ಕಸನ ಮುಖವಾಡ ಹಾಕುತ್ತಾರೆ.ಇವುಗಳನ್ನು ನಾವು ಹೇಳಿದ ದರಕ್ಕೆ ಖರೀದಿಸುವ ಜನರು, ಗೊಂಬೆಗಳ ದರಕ್ಕೆ ಮಾತ್ರ ಕಂಜೂಸ್ ಆಗಿ ಬಿಡುತ್ತಾರೆ” ಎಂದು ಮುನ್ನಾ ಹೇಳುತ್ತಾರೆ.ಲಕ್ಷಗಟ್ಟಲೇ ಖರೀದಿ: ದಿನಕ್ಕೆ ಕನಿಷ್ಠ 1,000ದಿಂದ 2,000 ರೂಪಾಯಿವರೆಗೆ ವ್ಯಾಪಾರವಾಗುತ್ತದೆ ಎಂದು ವ್ಯಾಪಾರಿ ಕೌಶಿಕ್ ಹೇಳಿದ. `ಹಾಗಿದ್ದರೆ ಎಷ್ಟು ಪ್ರಮಾಣದ ಬೊಂಬೆಗಳನ್ನು ತರಿಸುತ್ತೀರಿ?~ ಎಂದು ಕೇಳಿದಾಗ, “ಮೊದಲು ಆರೆಂಟು ಜನ ಸೇರುತ್ತೇವೆ.ಎಲ್ಲರೂ ಒಗ್ಗೂಡಿಕೊಂಡು ಮೂರರಿಂದ ಐದು ಲಕ್ಷ ರೂಪಾಯಿ ಮೊತ್ತದ ಬೊಂಬೆಗಳನ್ನು ಅಲ್ಲಿಂದ ಹಾಕಿಕೊಂಡೇ ಈ ಕಡೆ ಬರುತ್ತೇವೆ” ಎಂದು ಹೇಳಿದ. `ಹಾಗಿದ್ದರೆ ಒಳ್ಳೇ ಲಾಭ ಇದೆಯಲ್ಲ?~ ಎಂಬ ಪ್ರಶ್ನೆಗೆ, “ಅದೇನೋ ಸರಿ. ಆದರೆ ಒಮ್ಮೆ ಹೊರಟರೆ ಮತ್ತೆ ಊರು ಸೇರುವುದು ನಾಲ್ಕೈದು ತಿಂಗಳ ಬಳಿಕವೇ. ಪತ್ನಿ- ಮಕ್ಕಳು, ಬಂಧು-ಗೆಳೆಯರನ್ನೆಲ್ಲ ಬಿಟ್ಟು ಹೊಟ್ಟೆಪಾಡಿಗಾಗಿ ಎಲ್ಲೆಲ್ಲೋ ಅಲೆಯುವ ನಮ್ಮ ಸ್ಥಿತಿ ಯಾರಿಗೂ ಬರಬಾರದು” ಎನ್ನುತ್ತ ಕೌಶಿಕ್ ಮುಂದೆ ಸಾಗಿದ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.