ಬಂಗೀ ಗುಂಗು

7

ಬಂಗೀ ಗುಂಗು

Published:
Updated:

ಬೃಹತ್ ಕ್ರೇನ್ ತನ್ನ ಉದ್ದುದ್ದ ಬಾಹುಗಳನ್ನು ಆಕಾಶದೆತ್ತರಕ್ಕೆ ಚಾಚಿತ್ತು. ಅನಾಮತ್ತು ನೂರೈವತ್ತು ಅಡಿ ಎತ್ತರ. ಅಲ್ಲಿ ತೂಗು ಹಾಕಿದ ಒಂದು ತೊಟ್ಟಿಲು. ತೊಟ್ಟಿಲಲ್ಲಿ ಸನ್ನದ್ಧರಾದ ವ್ಯಕ್ತಿಯೊಬ್ಬರು ಕೆಳಗಿದ್ದ ಪ್ರತಿಯೊಬ್ಬರತ್ತಲೂ ಕೈಬೀಸುತ್ತಿದ್ದರು. ಕೆಳಗಿದ್ದವರಿಂದ `ಹೋ...' ಎಂಬ ಉದ್ಗಾರ. ಧುತ್ತನೆ ಆ ವ್ಯಕ್ತಿ ಅಷ್ಟು ಎತ್ತರದಿಂದ ಜಿಗಿದೇಬಿಟ್ಟರು.ತಲೆ ಕೆಳಗಾಗಿ ಶರವೇಗದಲ್ಲಿ ಭೂಮಿಯತ್ತ ಬರುತ್ತಿದ್ದ ಆ ವ್ಯಕ್ತಿಯನ್ನು ನೆಲಮಟ್ಟದಿಂದ ಕೆಲವೇ ಎತ್ತರದಲ್ಲಿ ಕಾಲಿಗೆ ಕಟ್ಟಿದ್ದ ಬಿಳಿಯ ಎಲಾಸ್ಟಿಕ್ ಹಗ್ಗ ಮತ್ತೆ ಮೇಲೆ ಹಿಡಿದೆಳೆಯಿತು. ಗಿರಿಗಿರನೆ ಸುತ್ತುತ್ತ ಮೇಲೆ ಹೋದವರು ಮತ್ತೆ ಅದೇ ರೀತಿಯಲ್ಲಿ ಕೆಳಗೆ ಬಂದರು. ಇದೇ ರೀತಿ ನಾಲ್ಕೈದು ಬಾರಿ ಆದ ನಂತರ ಕ್ರೇನ್ ನಿಧಾನವಾಗಿ ಅವರನ್ನು ಕೆಳಗಿಳಿಸಿತು. ಭೂಮಿ ಮೇಲೆ ಉಸಿರು ಬಿಗಿ ಹಿಡಿದು ನಿಂತಿದ್ದವರೆಲ್ಲರ ಹರ್ಷೋದ್ಗಾರ ಮುಗಿಲುಮುಟ್ಟಿತ್ತು. ಕ್ಯಾಮೆರಾ ಲೆನ್ಸ್‌ಗಳಿಂದ ಬೆಳಕು ಹೊಮ್ಮಿದ್ದೇ ಹೊಮ್ಮಿದ್ದು. ರಕ್ಷಣಾ ಸಿಬ್ಬಂದಿ ಆ ವ್ಯಕ್ತಿಯನ್ನು ಸುರಕ್ಷಿತವಾಗಿ ಕೆಳಗಿಳಿಯಲು ಸಹಕರಿಸಿದರು.ಈ ಎಲ್ಲಾ ಪ್ರಕ್ರಿಯೆ ನಡೆದದ್ದು ವೈಟ್‌ಫೀಲ್ಡ್ ಬಳಿಯ ಫೀನಿಕ್ಸ್ ಮಾರ್ಕೆಟ್ ಸಿಟಿ ಮಾಲ್‌ನಲ್ಲಿ. ಕಿಂಗ್‌ಫಿಷರ್ ಬ್ಲೂ ಆಶ್ರಯದಲ್ಲಿ ಮರ್ಕ್ಯೂರಿಯಲ್ ಸ್ಪೋರ್ಟ್ಸ್ ಆಯೋಜಿಸಿರುವ ಬಂಗೀ ಜಂಪ್‌ನ ಮೊದಲ ರೋಚಕ ಕ್ಷಣಗಳು ಅಲ್ಲಿ ಕಂಡದ್ದು ಹೀಗೆ.

ಜಿಗಿದ ವ್ಯಕ್ತಿ ಜಗದ್ವಿಖ್ಯಾತ ಬಂಗೀ ಜಂಪ್ ತಜ್ಞ ಜೀನ್ ಪಾಸ್ಕಲ್.2002ರಲ್ಲಿ ಆಯೋಜಿಸಲಾಗಿದ್ದ ಬಂಗೀ ಜಂಪ್‌ನಲ್ಲಿ ನಡೆದ ಅವಘಡದಿಂದ ಸ್ಥಗಿತಗೊಂಡಿದ್ದ ಈ ಸಾಹಸ ಕ್ರೀಡೆ ಹತ್ತು ವರ್ಷಗಳ ನಂತರ ಮತ್ತೆ ಬೆಂಗಳೂರಿಗೆ ಆಗಮಿಸಿದ್ದೇ ಹಲವರ ಕೌತುಕಕ್ಕೆ ಕಾರಣವಾಗಿತ್ತು. ಹೆಚ್ಚು ಮುತುವರ್ಜಿ ಹಾಗೂ ಸುರಕ್ಷತೆ, ಅಗತ್ಯಕ್ಕಿಂತ ಹೆಚ್ಚಿನ ಕಾಳಜಿ ವಹಿಸಲಾಗಿರುವ ಈ ಬಾರಿಯ ಬಂಗೀ ಜಂಪ್‌ನ ಉಸ್ತುವಾರಿಯನ್ನು ಇದುವರೆಗೆ ಮೂರು ಸಾವಿರಕ್ಕೂ ಅಧಿಕ ಬಾರಿ ಜಿಗಿದಿರುವ ಫ್ರಾನ್ಸ್ ಮೂಲದ ಪಾಸ್ಕಲ್ ವಹಿಸಿದ್ದು ವಿಶೇಷ.`ಬೆಂಗಳೂರಿಗೆ ಮೊದಲ ಬಾರಿಗೆ ಬಂಗೀ ಬಂದಿದ್ದು 1999ರಲ್ಲಿ. ಆಗಲೂ ಪಾಸ್ಕಲ್ ಅವರೇ ಅದರ ನೇತೃತ್ವ ವಹಿಸಿದ್ದರು. ನಂತರ 2002ರಲ್ಲಿ ನಗರದಲ್ಲಿ ಮತ್ತೊಮ್ಮೆ ಈ ಸಾಹಸ ಕ್ರೀಡೆ ಆಯೋಜಿಸಲಾಗಿತ್ತು. ಆಗ ವ್ಯಕ್ತಿಯೊಬ್ಬ ಪ್ರಾಣ ಕಳೆದುಕೊಂಡ. ನಂತರ ಈ ಕ್ರೀಡೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿತ್ತು.ಆದರೆ ಬಂಗೀ ಜಂಪ್ ಮಾಡುವವರ ಸುರಕ್ಷತೆಗೆ ಎಲ್ಲಾ ರೀತಿಯ ಅಗತ್ಯ ಕ್ರಮ ಕೈಗೊಂಡಲ್ಲಿ ಹಾಗೂ ಅಲ್ಲಿ ಬಳಸುವ ಸಾಧನಗಳ ಗುಣಮಟ್ಟಕ್ಕೆ ಅಂತರರಾಷ್ಟ್ರೀಯ ಮನ್ನಣೆ ದೊರೆತರೆ ಮಾತ್ರ ಅನುಮತಿ ಎಂಬ ನಿಯಮಾವಳಿಗೆ ಆಯೋಜಕರು ಬದ್ಧರಾಗಿರುವುದರಿಂದ ಈ ಬಾರಿ ಬಂಗೀ ಜಂಪ್ ಆಯೋಜಿಸಲಾಗಿದೆ. ಬೆಂಗಳೂರು, ಕೊಚ್ಚಿ ಸೇರಿದಂತೆ ಹಲವೆಡೆ ಈಗಾಗಲೇ ಆಯೋಜಿಸಲಾಗಿದ್ದ ನಾಲ್ಕು ಬಂಗೀ ಜಂಪ್‌ಗಳಲ್ಲಿ ಒಟ್ಟು ಹನ್ನೆರಡು ಸಾವಿರ ಸುರಕ್ಷಿತ ಜಿಗಿತವನ್ನು ನಮ್ಮ ಸಂಸ್ಥೆ ದಾಖಲಿಸಿದೆ' ಎಂದು ಮರ್ಕ್ಯೂರಿಯಲ್ ಸ್ಪೋರ್ಟ್ಸ್‌ನ ಕಿರಣ್ ತಿಳಿಸಿದರು.ಪಾಸ್ಕಲ್ ಜಿಗಿಯುತ್ತಿದ್ದಂತೆ ಅವರಿಂದ ಉತ್ತೇಜಿತರಾದ ಹಲವರು ಜಿಗಿಯಲು ಮುಂದಾದರು. ಈಗಾಗಲೇ 140ಕ್ಕೂ ಅಧಿಕ ಬಾರಿ ಬಂಗೀ ಜಂಪ್ ಮಾಡಿರುವ ಮೊದಲ ಮಹಿಳೆ ಬೆಂಗಳೂರಿನವರೇ ಆದ ಲತಾ ಜಿಗಿತಕ್ಕೆ ಮುಂದಾದರು. ಸೊಂಟಕ್ಕೆ ಹಾಗೂ ಕಾಲಿಗೆ ಬಲವಾದ ಪಟ್ಟಿ ಕಟ್ಟಿಕೊಂಡು ಸನ್ನದ್ಧರಾಗಿ ಕ್ರೇನ್ ತೊಟ್ಟಿಲನ್ನು ಏರಿದರು. ವಿವಿಧ ಮಾದರಿಯಲ್ಲಿ ಬಂಗೀ ಜಂಪ್ ಮಾಡಿ ಜನರಿಂದ ಚಪ್ಪಾಳೆ ಗಿಟ್ಟಿಸಿದರು. ಇವರ ಈ ಸಾಹಸ ಆವರಣದಲ್ಲಿದ್ದ ಯುವತಿಯರನ್ನು ಉತ್ತೇಜಿಸಿದ್ದು ಸುಳ್ಳಲ್ಲ. ತದನಂತರ ಯುವತಿಯರ ದಂಡಿನಲ್ಲಿದ್ದವರು ನಾಮುಂದು ತಾಮುಂದು ಎಂದು ಜಿಗಿಯಲು ಮುಂದಾದರು.ಕೆಳಗೆ ಧೈರ್ಯ, ಮೇಲೆ ಠುಸ್

ನಂತರ 14 ವರ್ಷದ ಬಾಲಕನೊಬ್ಬ ಜಿಗಿಯಲು ಮುಂದಾದ. ಕ್ರೇನ್ ಏರುವಾಗ ಮೊಗದಲ್ಲಿದ್ದ ನಗು 150 ಅಡಿ ಮೇಲೆ ಹೋದ ಮೇಲೆ ಮಾಯವಾಯಿತು. ಜಿಗಿಯಲು ಯಾರಿಗೂ ಬಲವಂತ ಮಾಡುವಂತಿಲ್ಲ ಎಂಬ ನಿಯಮದಂತೆ ಬಂಗೀ ಜಂಪ್ ಸಿಬ್ಬಂದಿ ಆತನನ್ನು ಕೆಳಗಿಳಿಸಿದರು. ಅದರಂತೆಯೇ ಮೊದಲ ಬಾರಿ ಜಿಗಿಯಲು ಮುಂದಾದ ಮತ್ತೊಬ್ಬ ಯುವತಿಯದ್ದೂ ಅದೇ ಕಥೆ. ತದನಂತರ ಬಂದ ಯುವತಿಯೊಬ್ಬಳು ಧೈರ್ಯ ಮಾಡಿ ಮೇಲೇರಿದಳು. ಕಣ್ಣುಮುಚ್ಚಿ ಜಿಗಿದೇಬಿಟ್ಟಳು.ಕೆಳಗೆ ಬರುವಾಗ ಆಕೆ ಅರಚಿದ ರೀತಿ ಕಂಡು ಕೆಲ ಕಾಲ ಇಡೀ ಆವರಣದಲ್ಲಿ ನಿಶ್ಶಬ್ದ. ಏನಾಯಿತೋ ಎಂಬ ಆತಂಕ ಎಲ್ಲರಲ್ಲಿ. ಕೆಳಗಿದ ಮರುಕ್ಷಣವೇ ಆಕೆ ಜಗತ್ತನ್ನೇ ಗೆದ್ದ ಖುಷಿಯಲ್ಲಿ ಜಿಗಿದಾಡಲು ಆರಂಭಿಸಿದಳು. `ಜಿಗಿಯುವ ಮೊದಲು ಕೆಲವರು ಆತ್ಮಹತ್ಯೆ ಹೇಗೆ ಮಾಡಿಕೊಳ್ಳುತ್ತಾರೆ ಎಂಬ ಪ್ರಶ್ನೆ ನನ್ನ ಮನಸ್ಸಿನಲ್ಲಿ ಮೂಡಿದ್ದು ಸುಳ್ಳಲ್ಲ. ಎಲ್ಲರನ್ನೂ ನೆನಪಿಸಿಕೊಂಡೆ. ಜಿಗಿದ ನಂತರ ನನಗೆ ಧೈರ್ಯ ಬಂತು' ಎಂದಳು ಆಕೆ.ಜಿಗಿಯುವ ಮೊದಲು

`ಜಿಗಿಯುವ ಮೊದಲು ವ್ಯಕ್ತಿಯ ತೂಕವನ್ನು ನೋಡಲಾಗುತ್ತದೆ. ಅದರ ಆಧಾರದ ಮೇಲೆ ಯಾವ ಬಗೆಯ ಹಗ್ಗವನ್ನು ಬಳಸಬೇಕೆಂಬುದನ್ನು ನಿರ್ಧರಿಸುತ್ತಾರೆ. 40-65 ಕೆ.ಜಿ. ತೂಕದವರಿಗೆ 720 ಹುರಿ ಇರುವ ಹಗ್ಗ, 65-85 ಕೆ.ಜಿ. ತೂಕದವರಿಗೆ 980 ಹುರಿ ಹೊಂದಿರುವ ಹಗ್ಗ, 85-120 ಕೆ.ಜಿಗಿಂತ ಮೇಲ್ಪಟ್ಟವರಿಗೆ 1240 ಹುರಿಯ ಹಗ್ಗವನ್ನು ಬಳಸಲಾಗುತ್ತದೆ. ಪ್ರತಿಯೊಂದು ಹಗ್ಗವನ್ನೂ ಪಾಸ್ಕಲ್ ಅಭಿವೃದ್ಧಿಪಡಿಸಿದ್ದಾರೆ. ಇವುಗಳ ಗುಣಮಟ್ಟಕ್ಕೆ ಯುರೋಪ್‌ನ ಟಿಯುವಿ ಮಾನ್ಯತೆಯೂ ದೊರೆತಿದೆ. ಒಂದು ಹಗ್ಗವನ್ನು 300 ಜಿಗಿತಕ್ಕೆ ಬಳಸಬಹುದಾಗಿದೆ. ಆದರೆ ಅದಕ್ಕಿಂತ ಮುಂಚೆಯೇ ಹಗ್ಗವನ್ನು ಕತ್ತರಿಸಿ ಮತ್ತೊಮ್ಮೆ ಬಳಸದಂತೆ ಮಾಡಲಾಗುತ್ತದೆ' ಎಂದು ಕಿರಣ್ ವಿವರಿಸಿದರು.ಜಿಗಿಯಲು ಮುಂದಾಗುವವರು ತಮ್ಮ ಸ್ವವಿವರ, ರಕ್ತದ ಗುಂಪು, ರಕ್ತದೊತ್ತಡ, ಹೃದಯ ಸಂಬಂಧಿ ರೋಗ, ಬೆನ್ನು ಹುರಿ ಸಮಸ್ಯೆ ಇತ್ಯಾದಿ ಇಲ್ಲ ಎಂಬುದನ್ನು ಖಾತರಿ ಪಡಿಸುವ ವಿವರಗಳನ್ನು ನೀಡಬೇಕು. ತುರ್ತು ಸಂದರ್ಭದಲ್ಲಿ ಸಂಪರ್ಕಿಸಬೇಕಾದ ವ್ಯಕ್ತಿಗಳ ವಿವರವುಳ್ಳ ಅರ್ಜಿಯನ್ನು ತುಂಬಬೇಕು. ಯಾವುದೇ ಅವಘಡ ಸಂಭವಿಸಿದಲ್ಲಿ ಅದಕ್ಕೆ ತಾವೇ ಹೊಣೆ ಎಂಬ ಒಕ್ಕಣೆಯ ಪತ್ರಕ್ಕೆ ಸಹಿ ಹಾಕುವುದು ಕಡ್ಡಾಯ. ಅಗತ್ಯವೆನಿಸಿದಲ್ಲಿ ಸ್ಥಳದಲ್ಲೇ ವೈದ್ಯಕೀಯ ಸಿಬ್ಬಂದಿಯೂ ಇರುತ್ತಾರೆ.ಇವೆಲ್ಲವನ್ನೂ ಮಾಡಿದ `ಧೀರ'ರು ಬಂಗೀ ಜಂಪ್‌ಗೆ ಅನುಮತಿ ಪಡೆಯುತ್ತಾರೆ. ಜನವರಿ 18ವರೆಗೆ ನಡೆಯಲಿರುವ ಬಂಗೀ ಜಂಪ್‌ನಲ್ಲಿ ಪಾಲ್ಗೊಳ್ಳಲು ವಾರಾಂತ್ಯದಲ್ಲಿ ತಲಾ 1,500 ರೂಪಾಯಿ ಹಾಗೂ ವಾರದ ದಿನಗಳಲ್ಲಿ 1,200 ರೂಪಾಯಿ ನಿಗದಿಪಡಿಸಲಾಗಿದೆ.ಶಾಶ್ವತ ತಾಣವಿಲ್ಲ

`ಬಂಗೀ ಜಂಪ್‌ಗೆ ನಗರದಲ್ಲಿ ಇಷ್ಟೊಂದು ಬೇಡಿಕೆ ಇದೆ ಎಂದರೆ ನಗರದಲ್ಲಿ ಇದಕ್ಕಾಗಿಯೇ ಒಂದು ಶಾಶ್ವತ ಕೇಂದ್ರವನ್ನೇಕೆ ನಿರ್ಮಿಸಬಾರದು' ಹೀಗೆಂದವರು ನಗರ ಪೊಲೀಸ್ ಆಯುಕ್ತ ಜ್ಯೋತಿಪ್ರಕಾಶ್ ಮಿರ್ಜಿ ಅವರಂತೆ. ಬಂಗೀ ಜಂಪ್ ಆಯೋಜಿಸಲು ಅನುಮತಿ ಕೋರಲು ಹೋದ ಮರ್ಕ್ಯೂರಿಯಲ್ ಸ್ಪೋಟ್ಸ್‌ನ ಸದಸ್ಯರ ಎದುರು ಆಯುಕ್ತರು ಈ ಪ್ರಶ್ನೆ ಮುಂದಿಟ್ಟರು ಎಂದು ಸಂಸ್ಥೆಯ ಕಿರಣ್ ಸ್ಪಷ್ಟ ಪಡಿಸಿದರು.ಜೀನ್ ಪಾಸ್ಕಲ್ ಹೀಗಂತಾರೆ

ಸಾಧಾರಣ ಎತ್ತರ, ತೆಳ್ಳಗಿನ ಮೈಕಟ್ಟು, ಕಣ್ಣಿಗೆ ಕಡುಗಪ್ಪು ತಂಪುಕನ್ನಡಕ, ಬಂಗೀ ಜಂಪ್‌ನ ಸಮವಸ್ತ್ರವೇ ಪಾಸ್ಕಲ್ ಪೋಷಾಕು. ಈವರೆಗೂ 18 ಬಾರಿ ಬೆಂಗಳೂರಿಗೆ ಭೇಟಿ ನೀಡಿರುವ ಪಾಸ್ಕಲ್‌ಗೆ ಬೆಂಗಳೂರು ಮರುಹುಟ್ಟು ನೀಡಿದ ನಗರವಂತೆ. ಕನ್ನಡ ಎಂದರೆ `ಸ್ವಲ್ಪ' ಎಂದು ಉಚ್ಚರಿಸಲು ಬರುವಷ್ಟು ಕನ್ನಡದ ಪರಿಚಯ. ಪಾಸ್ಕಲ್‌ಗೂ ಬಂಗೀ ಜಂಪ್‌ಗೂ ಇರುವ ನಂಟಿನ ಕುರಿತು ಪ್ರಶ್ನಿಸಿದರೆ...

ಬಂಗೀ ಜಂಪ್ ಎನ್ನುವುದು ಒಂದು ಮನಸ್ಸಿನ ಒಳಗೆ ನಡೆಯುವ ಆಟ. ನೂರಾರು ಅಡಿ ಎತ್ತರದಲ್ಲಿ ನಿಂತಾಗ ಮನಸ್ಸಿನಲ್ಲಿ ಹಾದು ಹೋಗುವ ಹಲವಾರು ವಿಚಾರಗಳು, ಭಯ, ದುಗುಡ, ಹಿಂಜರಿಕೆ, ಕಡೆಯದಾಗಿ ಧೈರ್ಯ ಇವೆಲ್ಲವನ್ನೂ ಕೆಲವೇ ಕ್ಷಣಗಳಲ್ಲಿ ಅನುಭವಿಸಬಹುದು. ಕಾಲಿಗೆ ಹಗ್ಗ ಕಟ್ಟಿದೆ ಎಂದು ತಿಳಿದಿದ್ದರೂ ಅಳುಕು ಎನ್ನುವುದು ನಮ್ಮ ಬೆನ್ನು ಬಿಡದು. ಅದನ್ನು ಮೀರಿ ಜಿಗಿದರೆ ಧೈರ್ಯ ನಮ್ಮ ಪಾಲಾಗುತ್ತದೆ.ಬಾಲ್ಯದಲ್ಲಿ ನನ್ನ ಪೋಷಕರು ನನ್ನನ್ನು ಈಜಲು ಬಿಡುತ್ತಿದ್ದರು. ನಾನು ಈಜು ಕಲಿತ ನಂತರ ಎತ್ತರದಿಂದ ಜಿಗಿಯಲು ಆರಂಭಿಸಿದೆ. ಇದು ನನಗೆ ಗೀಳಾಯಿತು. ಜತಗೆ ಕಡಿದಾದ ಬೆಟ್ಟ ಹತ್ತುವುದು ನನ್ನ ಅಚ್ಚುಮೆಚ್ಚಿನ ಕ್ರೀಡೆ. ಹೀಗೆಯೇ ಬಂಗೀ ಜಂಪ್‌ನ ಪರಿಚಯವಾದ ನಂತರ ಅದರ ಪ್ರಯತ್ನಕ್ಕೆ ಕೈಹಾಕಿದೆ. ಸಫಲನೂ ಆದೆ. ಅದರಲ್ಲಿ ವಿವಿಧ ಬಗೆಯಲ್ಲಿ ಸಾಹಸ ಮಾಡುವುದನ್ನು ಅಭ್ಯಾಸ ಮಾಡಿಕೊಂಡೆ. ನಾನು ಮಾಡಿದ ಪ್ರತಿಯೊಂದು ಜಿಗಿತವನ್ನೂ ಸಂಭ್ರಮಿಸಿದೆ. ಗರಿಷ್ಠ 750 ಅಡಿ ಎತ್ತರದಿಂದ ಜಿಗಿದಿದ್ದೇನೆ. ನನಗೆ ರೋಚಕವೆನಿಸಿದ್ದು ಸ್ವಿಟ್ಜರ್ಲೆಂಡ್‌ನಲ್ಲಿ ಆಯೋಜಿಸಿದ್ದ 007 ಜಂಪ್. ಆಣೆಕಟ್ಟೆಯ ಮೇಲಿನಿಂದ ನೀರಿಗೆ ಜಿಗಿಯುವ ಆ ಸಾಹಸವನ್ನು ನೆನಪಿಸಿಕೊಂಡರೆ ಇನ್ನೂ ನನ್ನ ಮೈ ಜುಂ ಎನಿಸುತ್ತದೆ.ಬಂಗೀ ಜಂಪ್‌ನ ಹಲವಾರು ಬದಲಾವಣೆಗೆ ನಾನು ಸಾಕ್ಷಿಯಾಗಿದ್ದೇನೆ. ಮೊದಲು ಸ್ಥಿರ ಕಟ್ಟಡದಿಂದ ಜಿಗಿಯುತ್ತಿದ್ದೆವು. ಆದರೆ ಈಗ ಬೃಹತ್ ಕ್ರೇನ್‌ಗಳು ಲಭ್ಯ. ಸೊಂಟಕ್ಕೆ ಕಟ್ಟುತ್ತಿದ್ದ ಹಗ್ಗವನ್ನು ಈಗ ಕಾಲಿಗೆ ಕಟ್ಟಲಾಗುತ್ತಿದೆ. ಇದರೊಂದಿಗೆ ಬಂಗೀ ಜಂಪ್‌ಗಾಗಿ ಯುರೋಪ್‌ನಲ್ಲಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗಿದೆ. ಸುರಕ್ಷತೆಯ ಪ್ರಮಾಣ ಪತ್ರ ಪಡೆದವರು ಮಾತ್ರ ಇದನ್ನು ಆಯೋಜಿಸಲು ಅರ್ಹರು. ಹೀಗಾಗಿ ಕೇವಲ ಯುರೋಪ್‌ನಲ್ಲಿ ಮಾತ್ರವಲ್ಲ ನಾನು ಹೋಗುವ ಪ್ರಪಂಚದ ಎಲ್ಲಾ ಪ್ರದೇಶಗಳಲ್ಲೂ ಸುರಕ್ಷತೆಗೆ ಆದ್ಯತೆ ಕೊಡುತ್ತೇನೆ.ಬೆಂಗಳೂರು ಈಗ ನನ್ನೂರಿನಷ್ಟೇ ಪರಿಚಿತ. ಕಳೆದ ಬಾರಿ ಅರಮನೆ ಮೈದಾನದಲ್ಲಿ ನಡೆದ ಬಂಗೀ ಜಂಪ್ ಅವಿಸ್ಮರಣೀಯ. ಇಲ್ಲಿನ ಚಟ್ನಿ ಹಾಗೂ ಸಾಂಬಾರ್ ನೆನೆಸಿಕೊಂಡರೆ ಬಾಯಲ್ಲಿ ನೀರೂರುತ್ತದೆ. 

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry