ಭಾನುವಾರ, ಏಪ್ರಿಲ್ 11, 2021
26 °C

ಬಂಜಾರರ ವಲಸೆ ತಡೆಗಟ್ಟಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಜಮಖಂಡಿ: ಬಂಜಾರಾ ಸಮಾಜದವರು ಹೊಟ್ಟೆ ಪಾಡಿಗಾಗಿ ವಲಸೆ ಹೋಗುವುದನ್ನು ತಪ್ಪಿಸುವ, ಮಕ್ಕಳ ಮಾರಾಟದಂತಹ ದಂಧೆಗಳನ್ನು ನಿಲ್ಲಿಸುವ ಮತ್ತು ಮತಾಂತರ ತಡೆಗಟ್ಟುವ ಕೆಲಸಗಳು ತುರ್ತಾಗಿ ನಡೆಯಬೇಕಾಗಿವೆ ಎಂದು ಕರ್ನಾಟಕ ಬಂಜಾರಾ ತಾಂಡಾ ಅಭಿವೃದ್ಧಿ ನಿಗಮದ ಅಧ್ಯಕ್ಷ ಮತ್ತು ದಾವಣಗೆರೆ ಶಾಸಕ ಎಂ.ಬಸವರಾಜ ನಾಯಕ ಹೇಳಿದರು.ತಾಲ್ಲೂಕು ಬಂಜಾರಾ ಕ್ಷೇಮಾಭಿವೃದ್ಧಿ ಸೇವಾ ಸಂಘದ ಆಶ್ರಯದಲ್ಲಿ ಮಧುರಖಂಡಿ ಗ್ರಾಮದ ಹುಲಿಕೋಡಿ ತಾಂಡಾದಲ್ಲಿ ಸೋಮವಾರ ಏರ್ಪಡಿಸಲಾಗಿದ್ದ ಮಾತೆ ಜಗದಂಬಾ ದೇವಿ, ಶ್ರೀಗುರು ಸೇವಾಲಾರ ಮೂರ್ತಿ ಪ್ರತಿಷ್ಠಾಪನೆ ಮತ್ತು ಶ್ರೀಗುರು ಸೇವಾಲಾರ ಜಯಂತ್ಯುತ್ಸವ ಸಮಾರಂಭದ ಮುಖ್ಯ ಅತಿಥಿಯಾಗಿ ಅವರು ಮಾತನಾಡಿದರು.ಲಂಬಾಣಿ ತಾಂಡಾಗಳಿಗೆ ಕುಡಿಯುವ ನೀರು, ರಸ್ತೆ, ಶಿಕ್ಷಣ ಇತ್ಯಾದಿ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸಲು ಬಂಜಾರಾ ತಾಂಡಾ ಅಭಿವೃದ್ಧಿ ನಿಗಮ ಸ್ಥಾಪಿಸಲಾಗಿದೆ. ಅದರ ಅಡಿ ತಾಂಡಾಗಳ ಅಭಿವೃದ್ಧಿಗಾಗಿ ಇದೇ ವರ್ಷ ಈಗಾಗಲೇ ರೂ. 60 ಕೋಟಿ ಖರ್ಚು ಮಾಡಲಾಗಿದೆ. ಪ್ರತಿ ತಾಂಡಾದಲ್ಲಿ ಐವರು ಯುವಕರನ್ನು ಸೇವಾಲಾಲರ ಸೇನಾ ರೂಪದಲ್ಲಿ ಅಭಿವೃದ್ಧಿ ಕಾರ್ಯಕ್ಕಾಗಿ ಗುರುತಿಸುವ ಕಾರ್ಯ ನಡೆಯಬೇಕಾಗಿದೆ ಎಂದರು.ಸಮಾರಂಭ ಉದ್ಘಾಟಿಸಿ ಮಾತನಾಡಿದ ಶಾಸಕ ಶ್ರೀಕಾಂತ ಕುಲಕರ್ಣಿ, ತಾಲ್ಲೂಕಿನ ಲಿಂಗನೂರ ಗ್ರಾಮದ ಹತ್ತಿರ ಇರುವ ಲಂಬಾಣಿ ತಾಂಡಾವನ್ನು ಬಂಜಾರಾ ತಾಂಡಾ ಎಂದು ಘೋಷಿಸಿ ಕಂದಾಯ ಗ್ರಾಮದ ಸ್ಥಾನಮಾನ ನೀಡಬೇಕು ಎಂದು ಬಂಜಾರಾ ತಾಂಡಾ ಅಭಿವೃದ್ಧಿ ನಿಗಮದ ಅಧ್ಯಕ್ಷರಿಗೆ ಮನವಿ ಮಾಡಿದರು.ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ರಾಜ್ಯ ಜವಳಿ ನಿಗಮದ ಅಧ್ಯಕ್ಷ, ತೇರದಾಳ ಶಾಸಕ ಸಿದ್ದು ಸವದಿ, ಸರಕಾರದ ಉನ್ನತ ಹುದ್ದೆಗಳಲ್ಲಿರುವ ಅಧಿಕಾರಿಗಳು ಹಾಗೂ ಅಧಿಕಾರದಲ್ಲಿರುವ ರಾಜಕಾರಣಿಗಳು ತಮ್ಮ ಸಮಾಜ ಬಾಂಧವರನ್ನು ಮೇಲೆತ್ತಲು ಸಹಾಯ ಸಹಕಾರ ನೀಡದಿರುವುದು ದುರದೃಷ್ಟಕರ ಸಂಗತಿ ಎಂದರು.ಬಳ್ಳೊಳ್ಳಿ ಮತಕ್ಷೇತ್ರದ ಮಾಜಿ ಶಾಸಕ ಮನೋಹರ ಐನಾಪೂರ, ಜಮಖಂಡಿಯ ಮಾಜಿ ಶಾಸಕ ಆರ್.ಎಂ.ಕಲೂತಿ, ವಿಜಾಪುರ ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಅರ್ಜುನ ರಾಠೋಡ ಮಾತನಾಡಿದರು. ಓಲೆಮಠದ ಡಾ.ಚನ್ನಬಸವ ಶ್ರೀಗಳು, ಲಿಂಗಸೂರಿನ ಸಿದ್ಧಲಿಂಗ ಶ್ರೀಗಳು, ವಿಜಾಪುರ ತಾಲ್ಲೂಕಿನ ಸೋಮದೇವರಹಟ್ಟಿ ಲಂಬಾಣಿ ತಾಂಡಾ ನಂ.1 ರ ಜಗನು ಮಹಾರಾಜರು ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು.ಜಿ.ಪಂ. ಉಪಾಧ್ಯಕ್ಷ ಹೂವಪ್ಪ ರಾಠೋಡ, ಜಿ.ಪಂ. ಸದಸ್ಯೆ ಮಹಾದೇವಿ ಮೂಲಿಮನಿ, ವಿಜಾಪುರ ಜಿ.ಪಂ. ಸದಸ್ಯರಾದ ದೇವಾನಂದ ಚವ್ಹಾಣ, ಅನಸೂಯಾ ಜಾಧವ, ತಾ.ಪಂ.ಅಧ್ಯಕ್ಷೆ ಮಹಾದೇವಿ ಹುಕ್ಕೇರಿ, ತಾ.ಪಂ.ಸದಸ್ಯ ಕರಿಯಪ್ಪ ಜೊಂಗನವರ, ಮಧುರಖಂಡಿ ಗ್ರಾ.ಪಂ. ಅಧ್ಯಕ್ಷ ರಾಮಪ್ಪ ಜೊಂಗನವರ, ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಮಾಧವಿ ರಾಠೋಡ, ಎಪಿಎಂಸಿ ಮಾಜಿ ಅಧ್ಯಕ್ಷ ಮುತ್ತಣ್ಣ ಹಿಪ್ಪರಗಿ, ಪ್ರಾಧ್ಯಾಪಕ ಡಾ.ಟಿ.ಪಿ. ಗಿರಡ್ಡಿ, ವಕೀಲ ರವಿ ಯಡಹಳ್ಳಿ, ತಾಲ್ಲೂಕು ಸಮಾಜ ಕಲ್ಯಾಣಾಧಿಕಾರಿ ಮನೋಹರ ಅರಳಿಗಿಡದ ವೇದಿಕೆಯಲ್ಲಿದ್ದರು.ಬಸಲಿಂಗಯ್ಯ ಹಿಡಕಲ್, ಶಂಕ್ರಯ್ಯ ಹಿಡಕಲ್ ಪ್ರಾರ್ಥನಾ ಗೀತೆ ಹಾಡಿದರು. ತಾಲ್ಲೂಕು ಬಂಜಾರಾ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಟೋಪು ನಾಯಿಕ ಸ್ವಾಗತಿಸಿದರು.ಶಿಕ್ಷಕ ಎಸ್.ಎಂ.ನಾಯಿಕ ಪ್ರಾಸ್ತಾವಿಕವಾಗಿ ಮಾತನಾಡಿದರು. ನಾಯಿಕ, ಸಂಘದ ಉಪಾಧ್ಯಕ್ಷ ವಿನಾಸ ರಜಪೂತ ನಿರೂಪಿಸಿದರು. ಸಂಘದ ಕಾರ್ಯದರ್ಶಿ ಶಶಿಧರ ರಾಠೋಡ ವಂದಿಸಿದರು.ಮನವಿ: ಮಧುರಖಂಡಿ ಹುಲಿಕೋಡಿ ತಾಂಡಾ ರಸ್ತೆಯ ನಿರ್ಮಾಣ ಮಾಡಬೇಕು. ಸೇವಾಲಾಲರ ಸಮುದಾಯ ಭವನ ನಿರ್ಮಿಸಬೇಕು. ನಿವೇಶನ ರಹಿತ ಬಂಜಾರಾ ಸಮಾಜ ಬಾಂಧವರಿಗೆ ಆಶ್ರಯ ಯೋಜನೆ ಅಡಿಯಲ್ಲಿ ನಿವೇಶನ ವಿತರಿಸಬೇಕು ಎಂಬ ಬೇಡಿಕೆಗಳ ಈಡೇರಿಕೆಗಾಗಿ ವೇದಿಕೆಯಲ್ಲಿದ್ದ ಜನಪ್ರತಿನಿಧಿಗಳಿಗೆ ಸಂಘದ ಪರವಾಗಿ ಮನವಿ ಸಲ್ಲಿಸಲಾಯಿತು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.